Categories
ಸಿನಿ ಸುದ್ದಿ

ಫೈರ್ ಫ್ಲೈ ಆಡಿಯೋ ಹಕ್ಕು ದಾಖಲೆ ಮೊತ್ತ!

ಫೈರ್ ಫ್ಲೈ’ ಮ್ಯೂಸಿಕಲ್ ಪಯಣಕ್ಕೆ ರೆಡಿನಾ..? ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರದ ಆಡಿಯೋ ಹಕ್ಕು

ಕನ್ನಡದ ಬಹುನಿರೀಕ್ಷಿತ ಸಿನಿಮಾ ಫೈರ್ ಫ್ಲೈ ಬಹಳ ವಿಶೇಷವಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜೊತೆಗೆ ಹೆಸರಾಂತ ತಾರೆಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವ ನಾಯಕ ಮತ್ತು ನಿರ್ದೇಶಕ ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಫೈರ್ ಫ್ಲೈ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ಫೈರ್ ಫ್ಲೈ ಸಿನಿಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಶುರುವಾಗಲಿದೆ. ಆನಂದ್ ಆಡಿಯೋ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ಫೈರ್ ಫ್ಲೈ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರರ ಮುಂದೆ ಬರಲಿದ್ದಾರೆ.

ಈ ಚಿತ್ರಕ್ಕೆ ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.

Categories
ಸಿನಿ ಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ದ್ವಾಪರ‌ ದಾಟುತ ಹಾಡು ದಾಖಲೆ:

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್”, “ಚಿನ್ನಮ್ಮ” ಹಾಗೂ “ದ್ವಾಪರ ದಾಟುತ” ಮೂರು ಹಾಡುಗಳು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದು, “ಸರಿಗಮಪ” ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ “ದ್ವಾಪರ ದಾಟುತ” ಹಾಡು ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿ ಭಾರಿ ಟ್ರೆಂಡ್ ಹುಟ್ಟುಹಾಕಿದೆ.

ಯೂಟ್ಯೂಬ್ ನಲ್ಲಿ ಎಂಟು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿರುವ ಈ ಹಾಡು ಇನ್ಸ್ಟಾ ರೀಲ್ಸ್ ನಲ್ಲಿ 2 ನೇ ಸ್ಥಾನದಲ್ಲಿದೆ. ಟ್ವಿಟರ್ ನಲ್ಲೂ ಹೊಸ ದಾಖಲೆ ಬರೆದಿದೆ. ಟ್ವಿಟರ್ ಹಾಗೂ ಇನ್ಸ್ಟಾ ರೀಲ್ಸ್ ನಲ್ಲಿ ಈ ರೀತಿಯ ಜನಪ್ರಿಯತೆ ಸಿಗುತ್ತಿರುವ ಕನ್ನಡದ ಮೊದಲ ಹಾಡು ಇದಾಗಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಸಹ ಈವರೆಗೂ ನಾನು ಬರೆದಿರುವ ಹಾಡುಗಳಲ್ಲಿ ಇದು ನನ್ನ ಮೆಚ್ಚುಗೆಯ ಹಾಡು ಎನ್ನುತ್ತಾರೆ.

“ಮುಂಗಾರು ಮಳೆ” ಯ ನಂತರ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಜನಪ್ರಿಯತೆಗೆ ಮನ ತುಂಬಿ ಬಂದಿದೆ ಎಂದು ನಾಯಕ ಗಣೇಶ್ ತಿಳಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು‌ ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ‌. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Categories
ಸಿನಿ ಸುದ್ದಿ

ಪೆಪೆ ಸಿನಿಮಾಗೆ ಎ ಸರ್ಟಿಫಿಕೇಟ್: ಇದು ವಿನಯ್ ರಾಜಕುಮಾರ್ ಚಿತ್ರ

ಒಂದು ಸರಳ ಪ್ರೇಮಕಥೆ ಅಭೂತಪೂರ್ವ ಯಶಸ್ಸಿನ ಬಳಿಕ ವಿನಯ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪೆಪೆ. ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ವಿನಯ್ ರಗಡ್‌ ಲುಕ್‌ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಈ ರೀತಿಯ ಪಾತ್ರದಲ್ಲಿ ವಿನಯ್ ಕಾಣಿಸಿಕೊಂಡಿಲ್ಲ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Categories
ಸಿನಿ ಸುದ್ದಿ

ಅಂದು ಚಿನ್ನಾರಿ ಮುತ್ತ ಇಂದು ಜೀನಿಯಸ್ ಮುತ್ತ: ಇದು ನಾಗಿಣಿ ಭರಣ ಚಿತ್ರ

ಅದು ಪತಿ ಸಿನಿಮಾ. ಹೆಸರು ಚಿನ್ನಾರಿ ಮುತ್ತ. ಇದು ಪತ್ನಿ ಸಿನಿಮಾ ಹೆಸರು ಜೀನಿಯಸ್ ಮುತ್ತ. ಆ ಚಿನ್ನಾರಿ ಮುತ್ತನಿಗೆ 31 ವರ್ಷ. ಈ ಜೀನಿಯಸ್ ಮುತ್ತನಿಗೆ ಬಿಡುಗಡೆಯ ಹರ್ಷ. ಹೌದು ಇದು ಹೊಸ ಸಿನಿಮಾ. ನಾಗಿಣಿ ಭರಣ ಅವರ ಮೊದಲ ಪ್ರಯತ್ನ ಇದು.

ಅಂತೂ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಮೊದಲ ಚಿತ್ರ “ಜೀನಿಯಸ್ ಮುತ್ತ” ತೆರೆಗೆ ಬರಲು ಸಿದ್ದವಾಗಿದೆ. ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಜಿ.ಎಸ್ ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ “ಜೀನಿಯಸ್ ಮುತ್ತ” ನಾಗಿ ಮಾಸ್ಟರ್ ಶ್ರೇಯಸ್ಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ “ಚಿನ್ನಾರಿಮುತ್ತ”ನಾಗಿ ಮೆಚ್ಚುಗೆ ಪಡೆದಿರುವ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.

ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಆಗಿರಲಿಲ್ಲ. ಆದರೆ ಲತಾ ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರವೇಶಿಸಬೇಕೆಂದುಕೊಂಡಿದ್ದೇನೆ. ಆ ಚಿತ್ರವನ್ನು ನೀವೇ ನಿರ್ದೇಶಿಸಬೇಕೆಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಸೇರಿ ಈ ಚಿತ್ರದ ಕಥೆ ಸಿದ್ದ ಮಾಡಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಮಾಸ್ಟರ್ ಶ್ರೇಯಸ್ಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್,ಸುಂದರರಾಜ್, ಪನ್ನಗಾಭರಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ನೋಡಿದವರು ಮೆಚ್ಚುಗೆ ಮಾತುಗಳಾಡಿದ್ದಾರೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕಿ ನಾಗಿಣಿ ಭರಣ ತಿಳಿಸಿದರು.

ನಾಗಿಣಿ ಅವರು ಈಗ ಸ್ವತಂತ್ರ ನಿರ್ದೇಶನ ಮಾಡಿದರಷ್ಟೇ. ಆದರೆ ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಹಿಂದಿನಿಂದ ಸಹಕಾರ ನೀಡುತ್ತಿದ್ದರು. ಈಗ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ.ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದೇನೆ ಎಂದರು ಟಿ.ಎಸ್ ನಾಗಾಭರಣ.

ನಾನು ಭರಣ ಸರ್ ಅವರ ಬಳಿ ನಟನೆ ಕಲಿತಿದ್ದೇನೆ. ಆನಂತರ ಅಮ್ಮನಿಗೆ ನಾನು ನಟಿಸಬೇಕೆಂದು ಆಸೆಯಾಯಿತು. ಈ ಚಿತ್ರದಲ್ಲಿ “ಜೀನಿಯಸ್ ಮುತ್ತ”ನಾಗಿ ಅಭಿನಯಿಸಿದ್ದೇನೆ. ಅವಕಾಶ ನೀಡಿದ ಅಮ್ಮನಿಗೆ ಹಾಗೂ ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ಮಾಸ್ಟರ್ ಶ್ರೇಯಸ್.

ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಬಾರಿ. ಏಕೆಂದರೆ ನನ್ನನ್ನು ಎಲ್ಲರು ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ ಎಂದು ವಿಜಯ ರಾಘವೇಂದ್ರ ತಿಳಿಸಿದರು.

ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ ನೀವೇ ನಿರ್ದೇಶನ ಮಾಡಬೇಕೆಂದು ನಾಗಿಣಿ ಭರಣ ಅವರ ಬಳಿ ಹೇಳಿದೆ. ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ನನಗೆ ಕಥೆ ಹೇಳಿದರು. ನಂತರ “ಜೀನಿಯಸ್ ಮುತ್ತ” ಚಿತ್ರ ಆರಂಭವಾಯಿತು. ಈಗ ಬಿಡುಗಡೆ ಹಂತ ತಲುಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಲತಾ ಜೈಪ್ರಕಾಶ್.

ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಪನ್ನಗಾಭರಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತದ ಬಗ್ಗೆ ಬಾಪು ಪದ್ಮನಾಭ ಮಾಹಿತಿ ನೀಡಿದರು.ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಗುಂಮ್ಟಿ ಎಂಬ ಕುಡುಬಿ ಜನ ಜೀವನದ ವಿಶೇಷ ಚಿತ್ರ : ಹೊರಬಂತು ಅರ್ಥಪೂರ್ಣ ಗೀತೆ

ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರ ಮೂಲಕ ಸಿನಿ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಸುಮಧುರ ಗೀತೆಯೊಂದನ್ನು ಬಿಡುಗಡೆ ಮಾಡಿದೆ.

‘ಹಾಡುವ ಹಕ್ಕಿ ಹಾಡುತೈತಿ ಮನುಸಾ… ಕಾಯಕ ಮಾಡಿ ಕಾಣೋ ನೀನು ಕನಸಾ…’ ಎಂಬ ಸಾಲುಗಳಿಂದ ಆರಂಭವಾಗುವ ‘ಗುಂಮ್ಟಿ’ ಚಿತ್ರದ ಈ ಗೀತೆಗೆ ಮೆಹಬೂಬ್ ಸಾಬ್ ಧ್ವನಿಯಾಗಿದ್ದು, ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಗುಂಮ್ಟಿ’ ಹಾಡಿನ ಬಗ್ಗೆ ಮತ್ತು ‘ಗುಂಮ್ಟಿ’ ಚಿತ್ರದ ಬಗ್ಗೆ ತಂಡ ಹೇಳಿದ್ದಿಷ್ಟು.
ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ‘ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆೆ.

‘ಗುಂಮ್ಟಿ’ ಎಂಬುದು ಕುಡುಬಿ ಸಮುದಾಯಕ ಕಲಾಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂದು ವಿವರಣೆ ನೀಡಿದರು.

‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ.

‘ಗುಂಮ್ಟಿ’ ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಅನುಭವಗಳನ್ನು ಹಂಚಿಕೊಂಡರು.

ಇನ್ನು ‘ಗುಂಮ್ಟಿ’ ಸಿನೆಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಸದ್ಯ ಯಶಸ್ವಿಯಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗುಂಮ್ಟಿ’ ಸೆನ್ಸಾರ್ ಮುಂದಿದೆ. ಇದೀಗ ಹಾಡಿನ ಬಿಡುಗಡೆ ಮೂಲಕ ‘ಗುಂಮ್ಟಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಶೀಘ್ರದಲ್ಲಿಯೇ ‘ಗುಂಮ್ಟಿ’ಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Categories
ಸಿನಿ ಸುದ್ದಿ

ಚಿತ್ರಮಂದಿರಕ್ಕೆ ಭೀಮ ಬಲ! ಆಗಸ್ಟ್ 9ಕ್ಕೆ ರಿಲೀಸ್

ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ “ಭೀಮ” ಚಿತ್ರವು ಸೆನ್ಸರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಗಿದೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು ಸೇರಿದಂತೆ ಮತ್ತಷ್ಟು ಜಾನಪದ ಶೈಲಿಯ ಬೇರೆ ಬೇರೆ ಹಾಡುಗಳನ್ನು ಆ ಜನಾಂಗದ ಪ್ರತಿಭೆಗಳನ್ನ ಕರೆಸಿ ವೇದಿಕೆಯ ಮೇಲೆ ಹಾಡಿಸಿದ್ದು ವಿಶೇಷವಾಗಿತ್ತು. ಪ್ರಸ್ತುತ ಚಿತ್ರೋದ್ಯಮದ ಪರಿಸ್ಥಿತಿ, ಸಕ್ಸಸ್ ಕಾಣದ ಚಿತ್ರಗಳ ನಡುವೆ ಹೊಸ ಚೈತನ್ಯ ನೀಡಲು ಬಲ ಭೀಮನಾಗಿ ಬರಲು ಸಿದ್ಧವಾಗಿರುವ ಚಿತ್ರ ಇದಾಗಿದೆ.

ಈ ಚಿತ್ರದ ನಿರ್ದೇಶಕ , ನಟ , ವಿಜಯ್ ಕುಮಾರ್ (ದುನಿಯಾ ವಿಜಯ್) ಮಾತನಾಡಿ, ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ , ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ಈಗ ಚಿತ್ರ ಸೆನ್ಸರ್ನಿಂದ ಹೊರ ಬಂದಿದೆ, ನಾನು ಶಾಲಾ ದಿನಗಳಿಂದಲೂ ಬಿ ಪ್ಲಸ್ , ಸಿ ಪ್ಲಸ್ , ಪಡೆಯುತ್ತಿದೆ. ಈಗ ನನ್ನ ಸಿನಿಮಾ ಮೂಲಕ ಸೆನ್ಸರ್ನಿಂದ ಎ ಪ್ಲಸ್ ಸಿಕ್ಕಂತಾಗಿದೆ ಎನ್ನುತ್ತಾ ಎ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಸಮರ್ಥಿಸಿಕೊಂಡರು.

ಚಿತ್ರದ ಸಂಭಾಷಣೆ ವಿಚಾರವಾಗಿ ಒಂದಷ್ಟು ಕಟ್ಸ್ , ಮ್ಯೂಟ್ಸ್ ಮಾಡಲು ಹೇಳಿದ್ದಾರೆ, ಅದರಂತೆ ಎಲ್ಲವನ್ನ ಮಾಡುತ್ತೇವೆ. ವಿದ್ಯಾರ್ಥಿಗಳು , ಹರಿಹರಿಯದವರ ಬದುಕಿನ ದು ಸ್ಥಿತಿಯ ವಿಚಾರವು ಸೇರಿದಂತೆ ಒಂದಷ್ಟು ನಾ ಕಂಡು ಕೇಳಿದಂತ ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ. ಹಾಗೂ ನನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ತುಂಬಾ ಸಾತ್ ನೀಡಿದ್ದಾರೆ. ನನ್ನ ಎಲ್ಲಾ ವಿಚಾರಕ್ಕೂ ಸೈ ಎಂದಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈಗಾಗಲೇ ಹಾಡುಗಳ ಮೂಲಕ ಸಕ್ಸಸ್ ತಂದು ಕೊಟ್ಟಿದ್ದಾರೆ. ರೀ-ರೆಕಾರ್ಡಿಂಗ್ ಕೂಡ ಅದ್ಭುತವಾಗಿ ಮಾಡಿದ್ದಾರೆ. ಇನ್ನು ಛಾಯಾಗ್ರಹಕ ಶಿವಸೇನಾ, ಸಂಕಲನ ದೀಪು. ಎಸ್. ಕುಮಾರ್ , ಸಂಭಾಷಣೆ ಮಾಸ್ತಿ , ಫೈಟ್ಸ್ಗಳನ್ನ ವಿನೋದ್ , ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ , ರಾಜು ಸೇರಿದಂತೆ ಇಡೀ ನಮ್ಮ ಚಿತ್ರಕ್ಕೆ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಬಹಳಷ್ಟು ಶ್ರಮವಿಸಿ ಕೆಲಸ ಮಾಡಿದ್ದೇವೆ. ಬುಡಕಟ್ಟು ಜನಾಂಗದವರು ಸೇರಿದಂತೆ ಒಂದಷ್ಟು ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ನೀವೆಲ್ಲರೂ ಆಗಸ್ಟ್ 9ಕ್ಕೆ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮಾತನಾಡಿ, ನಮ್ಮ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ, ಸೆನ್ಸರ್ ಹಂತದಲ್ಲಿ ಹೋದಾಗ ಕೊಂಚ ಭಯ ಇತ್ತು, ಆದರೆ ನಿರ್ದೇಶಕ ವಿಜಯ್ ಸರ್ ಸೆನ್ಸರ್ ಅಧಿಕಾರಿಗಳಿಗೆ ನಮ್ಮ ಸಿನಿಮಾದ ಕಂಟೆಂಟ್ ಬಗ್ಗೆ ಕನ್ವಿನ್ಸ್ ಮಾಡಿದ ರೀತಿ ಅದ್ಭುತ.
ಈಗಾಗಲೇ ಸಿನಿಮಾದ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.

ನಿರ್ಮಾಪಕ ಜಗದೀಶ್ ಗೌಡ ಮಾತನಾಡುತ್ತಾ ನಾನು ಒಬ್ಬ ವಿತರಕ , ಈ ಚಿತ್ರವನ್ನು ನಿರ್ಮಿಸಿದಾಗ ಒಂದಷ್ಟು ವಿಚಾರ ನನಗೂ ತಿಳಿಯಿತು. ಬಹಳ ಶ್ರಮವಹಿಸಿ ಒಂದು ಉತ್ತಮ ಸಂದೇಶವಿರುವ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಸದ್ಯ ಚಿತ್ರಮಂದಿರಗಳ ಪರಿಸ್ಥಿತಿ ನಮಗೂ ತಿಳಿದಿದೆ. ಮುಚ್ಚು ಹೋಗುತ್ತಿರುವ 18 ಚಿತ್ರಮಂದಿರಗಳು ನಮ್ಮ ಭೀಮ ಚಿತ್ರದ ಮೂಲಕ ಮತ್ತೆ ಓಪನ್ ಆಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಲ್ಲಿ ನಮ್ಮ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ನಮ್ಮ ಚಿತ್ರ ನೇರವಾಗಿ ರಿಲೀಸ್ ಆಗುತ್ತಿದ್ದು, ವಿದೇಶದಲ್ಲಿ ಕೂಡ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಚಿತ್ರದ ಎಲ್ಲಾ ಏರಿಯ ಸೋಲ್ಡ್ ಔಟ್ ಆಗಿದ್ದು , ಬಿಕೆಟಿಯನ್ನು ನಾನೇ ಉಳಿಸಿಕೊಂಡಿದ್ದೇನೆ. ಸದ್ಯ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ನಮ್ಮ ಚಿತ್ರದ ಮೂಲಕ ಒಂದಷ್ಟು ಚೈತನ್ಯ ಸಿಗುವಂತಾಗಲಿ, ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಬಂದು ನೋಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದಲ್ಲಿ ಅಭಿನಯಿಸಿದಂತ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು. ಈ ಭೀಮ ಚಿತ್ರದಲ್ಲಿ ಸಮಾಜಿ ಕಳಕಳಿ ಸಂದೇಶ ಒಳಗೊಂಡಿದೆಯಂತೆ.
ಈ ಚಿತ್ರ ಬಿಡುಗಡೆ ನಂತರ ಒಂದಷ್ಟು ಚರ್ಚೆಗೆ ದಾರಿ ಮಾಡಿಕೊಳ್ಳುತ್ತದೆ ಎಂಬ ಅಭಿಪ್ರಾಯ ಚಿತ್ರ ತಂಡದ್ದು,
ಬಹಳ ನೈಜಕ್ಕೆ ಒತ್ತುಕೊಟ್ಟು ಸೂಕ್ಷ್ಮ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಇನ್ನು ನಟ , ನಿರ್ದೇಶಕ ವಿಜಯ್ ಕುಮಾರ್ ಅಲಿಯಾಸ್ (ದುನಿಯಾ ವಿಜಯ್) ತಮ್ಮ ಪಾತ್ರದ ಕುರಿತು ಹೆಚ್ಚು ಮಾತನಾಡದೆ , ನನ್ನ ಈ ನಿರ್ದೇಶನದ ಚಿತ್ರ ಖಂಡಿತ ಇಷ್ಟವಾಗುತ್ತೆ ಎಂಬ ಅಭಿಪ್ರಾಯವಿದೆ. ದಯವಿಟ್ಟು ಎಲ್ಲರೂ ಆಗಸ್ಟ್ 9ಕ್ಕೆ ಬಂದು ಚಿತ್ರವನ್ನು ನೋಡಿ ಎಂದು ವಿನಂತಿಸಿದರು.

Categories
ಸಿನಿ ಸುದ್ದಿ

ಗೌರಿಯ ಮುದ್ದಾದ” ಹಾಡಿಗೆ ಸಖತ್ ರೆಸ್ಪಾನ್ಸ್ : ಇಂದ್ರಜಿತ್ ಲಂಕೇಶ್ ಪುತ್ರನ ಭರ್ಜರಿ ತಯಾರಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಆಗಸ್ಟ್ 15ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ ಶೀರ್ಷಿಕೆ ಅಷ್ಟೇ ಅಲ್ಲ, ಸಿನಿಮಾದ ಹಾಡುಗಳ ಮೂಲಕ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗೆ “ಗೌರಿ” ಚಿತ್ರದ “ಮುದ್ದಾದ” ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾಗಿದ್ದು ಎಲ್ಲೆಡೆ ಜೋರು ಸದ್ದು ಮಾಡಿದೆ. ಅಂದಹಾಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ “ಗೌರಿ” ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ವೇಳೆ ಮೊನಾಲಿಸ ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ”ಗೌರಿ” ಚಿತ್ರದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಇದ್ದರು.

ಆ ಹಾಡಿಗೆ ಸಿಕ್ಕಾ ಪಟ್ಟೆ ಕಾಮೆಂಟ್ಸ್ ಬರುತ್ತಿದೆ. ಅಷ್ಟೇ ಅಲ್ಲ, ಮುದ್ದಾದ ಹಾಡಿನ ರೀಲ್ಸ್ ಕೂಡ ಶುರುವಾಗಿದೆ. ಈಗಾಗಲೇ ಟೈಮ್ ಬರುತ್ತೆ ಎಂಬ ಸಾಂಗ್ ವೈರಲ್ ಆಗಿದ್ದು, ಪಡ್ಡೆ ಹುಡುಗರ ಹಾಟ್ ಫೇವರ್ ಎನಿಸಿಕೊಂಡಿದೆ.

“ಗೌರಿ” ಹಾಡಿಗೆ ಕೆ.ಕಲ್ಯಾಣ್ ಹಾಗೂ “ಮುದ್ದಾದ” ಹಾಡಿಗೆ ಕವಿರಾಜ್ ಸಾಹಿತ್ಯವಿದೆ.

ಇನ್ನು “ಗೌರಿ” ಚಿತ್ರದಲ್ಲಿ ಏಳು ಹಾಡುಗಳಿದ್ದು,. ಸಂಗೀತ ಪ್ರಧಾನ ಸಿನಿಮಾ ಇದು. ಕವಿರಾಜ್ ಅವರ ಮುದ್ದಾದ ಹಾಡಿಗೆ, ನಿಹಾಲ್ ತವ್ರು ಧ್ವನಿ ಇದೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.
ಕೆ.ಕಲ್ಯಾಣ್ ಅವರು ಬರೆದ ಹಾಡನ್ನು, ಇಂದ್ರಜಿತ್ ಅವರ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. ಚಿತ್ರಕ್ಕೆ “ಯು” ಸರ್ಟಿಫಿಕೇಟ್ ಸಿಕ್ಕಿದೆ.

Categories
ಸಿನಿ ಸುದ್ದಿ

ಭಗವತಿ ಇದು ಮಕ್ಕಳ ಸಾಹಸದ ಕಥೆ

ಬಂಗಾರಿ, ಶಿವನಪಾದ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ ಮಾಚಂದ್ರು ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮಕ್ಕಳ ಸಾಹಸದ ಕಥೆ ಇರುವ ಮತ್ತೊಂದು ಚಿತ್ರ ಭಗವತಿ. ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ವಿಜಯ ನಗರದ ಮಾರುತಿ ಮಂದಿರದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ವಿದ್ಯಾಧರೆ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದೆ.

ಈ ಹಿಂದೆ ಲೂಸ್ ಮಾದ ಯೋಗಿ, ರಾಗಿಣಿ ಅಭಿನಯದ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಈ ಸಲ ಮಕ್ಕಳ ಸಾಹಸದ ಕಥಾನಕ‌ ಒಳಗೊಂಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವಂಥ ಮಕ್ಕಳ ಸಾಹಸಮಯ ಕಾಥಾಹಂದರ ಈ ಚಿತ್ರದಲ್ಲಿದೆ. ಈಗಿನ ಜನರೇಶನ್ ಕುರಿತಾದ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರದಲ್ಲಿ ಮಕ್ಕಳು ಹೇಗೆ ಹೋರಾಡಿ ಗೆಲ್ಲುತ್ತಾರೆ ಎಂಬುದನ್ನು ನಿರ್ದೇಶಕರು ರೋಚಕ ಕಥೆಯೊಂದಿಗೆ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ರಾಜೇಶ್ ಗೌಡ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.

ಆಗಸ್ಟ್ 5ರಿಂದ ಆರಂಭಿಸಿ ಬೆಂಗಳೂರು, ಕನಕಪುರ ಹಾಗೂ ಮಡಿಕೇರಿಯ ಸುತ್ತಮುತ್ತ ಭಗವತಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಈ ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ದೀಪಕ್ ಪಿ.ಕೆ, ಅದ್ವೈತ್ ಪ್ರೇರಣ್, ಅದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ.ಡಿ. ಹೇರಂಭ , ಭಾನು, ಮೋಹನ್ ಕುಮಾರ್ ಡಿ.ಕೆ. ಸತೀಶ್, ಶರತ್, ಹರ್ಷ. ಮುಂತಾದವರು ಅಭಿನಯಿಸುತ್ತಿದ್ದಾರೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತಿದೆ.

Categories
ಸಿನಿ ಸುದ್ದಿ

ಇದು ಜವಾರಿ ಹುಡುಗನ ಕನಸು: ಜುಲೈ 26ಕ್ಕೆ ರಕ್ತಾಕ್ಷ ರಿಲೀಸ್

ಶಾಲೆಯ ದಿನಗಳಲ್ಲೇ ಸಿನಿಮಾ ಕನಸು ಕಂಡಿದ್ದ ರೋಹಿತ್ ಕೊನೆಗೂ ಕಷ್ಟ ಪಟ್ಟ ತಾನೇ ದುಡಿದು ಹಾಕಿ ನಿರ್ಮಾಣ‌ ಮಾಡಿದ ಸಿನಿಮಾ ರಕ್ತಾಕ್ಷ. ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿರುವ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಅಗಮನವಾಗುತ್ತಲೇ ಇದೆ. ಆ ಸಾಲಿಗೆ ರಕ್ತಾಕ್ಷ ಸಿನಿಮಾದ ಹೀರೋ ರೋಹಿತ್ ಕೂಡ ಒಬ್ಬರು, ಹೌದು ರೋಹಿತ್ ಉತ್ತರ ಕರ್ನಾಟಕ ಮೂಲದ ಜವಾರಿ ಹುಡುಗ.

ರಕ್ತಾಕ್ಷ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕರಾಗಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರೋಹಿತ್ ಅವರ ಕನಸಿನ ರಕ್ತಾಕ್ಷ ಚಿತ್ರ ಜುಲೈ 26 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

ಅಂದಹಾಗೆ, ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ವಾಸುದೇವ ಎಸ್.ಎನ್. ಈ ಸಿನಿಮಾದ ನಿರ್ದೇಶಕರು. ಇವರಿಗೂ ಇದು ಚೊಚ್ಚಲ ಚಿತ್ರ.

ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಹೊಸಬರ ವಿಭಿನ್ನ ಪ್ರಯತ್ನ ಇದಾಗಿದ್ದು, ಚಿತ್ರಕಥೆ ಹಾಗು ನಿರೂಪಣಾ ಶೈಲಿ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ಹೀರೋ ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ನಡುವಿನ ಆಕ್ಷನ್ ಸನ್ನಿವೇಶ ಚಿತ್ರದ ಹೈಲೆಟ್. ಚಿತ್ರದ ಮತ್ತೊಂದು ವಿಶೇಷ ಅಂದರೆ, ನಟ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಟ್ರೇಲರ್ ಕೂಡ ಭರ್ಜರಿ ಮೆಚ್ಚುಗೆ ಗಳಿಸಿದೆ.

ಚಿತ್ರದಲ್ಲಿ ರೋಹಿತ್, ಪ್ರಮೋದ್ ಶೆಟ್ಟಿ, ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ,ರಚನಾ ದಶರಥ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಇತರರು ಇದ್ದಾರೆ.

ಇನ್ನು, ಚಿತ್ರಕ್ಕೆ ದಾಸ್ ಮೋಡ್ ಅವರ ಸಂಗೀತವಿದೆ. ಸುಜಿತ್ ಹಾಗು ವೆಂಕಟರಾಮಯ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. ವಸಿಷ್ಠ ಸಿಂಹ, ಸುಪ್ರಿಯಾ ರಾಮ್ ಹಾಡಿದ್ದಾರೆ. ಆದರ್ಶ್ ಶಿರಾಸ್ ಅವರ ಛಾಯಾಗ್ರಹಣವಿದೆ. ಸತೀಶ್ ಚಂದ್ರಯ್ಯ ಸಂಕಲನ ಮಾಡಿದರೆ, ಸ್ಟಂಟ್ ಶಿವ ಅವರ ಸಾಹಸವಿದೆ.

ರೋಹಿತ್ ಉತ್ತರ ಕರ್ನಾಟಕದ ಹುಡುಗ. ಹಾಗಾಗಿ ಹುಬ್ಬಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಅಪ್ಪು ಹುಟ್ಟುಹಬ್ಬ ಸಂದರ್ಭದಲ್ಲಿ ರಕ್ತಾಕ್ಷ ಚಿತ್ರತಂಡದಿಂದ ‘ಅಪ್ಪು’ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿತ್ತು. ಸಾವರ್ಜನಿಕ ಕಾರ್ಯಕ್ರಮದಲ್ಲಿ ರಕ್ತಾಕ್ಷ ತಂಡದ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.

ರೋಹಿತ್ ತೆರೆ ಮೇಲೆ ಹೀರೋ ಮಾತ್ರವಲ್ಲ, ತೆರೆ ಹಿಂದೆಯೂ ಮೆಚ್ಚುಗೆ ಕೆಲಸ ಮಾಡುತ್ತಿದ್ದಾರೆ. ಸದ್ದಿಲ್ಲದೆಯೇ ಒಂದಷ್ಟು ಸಾಮಾಜಿಕ‌ಕಾರ್ಯದಲ್ಲಿ ನಿರತರಾದವರು. ಹುಬ್ಬಳ್ಳಿಯ ಅನಾಥಾಶ್ರಮದ ಸುಮಾರು 200 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಮಾಡಿದ್ದಾರೆ. ಅನಾಥಾಶ್ರಮ ಹಾಗು ವೃದ್ಧಾಶ್ರಮಗಳಿಗೆ ಪ್ರತಿ ತಿಂಗಳು ಅಪ್ಪು ಹೆಸರಲ್ಲಿ ಕೈಲಾದಷ್ಟು ಆಹಾರ ಧಾನ್ಯದ ಕಿಟ್ ವಿತರಿಸುತ್ತ ಬಂದಿದ್ದಾರೆ‌ ಎಂಬುದು ವಿಶೇಷ.

ಸದ್ಯ ರಕ್ತಾಕ್ಷ ಸಿನಿಮಾ ಜುಲೈ 26 ಕ್ಕೆ ಬರುತ್ತಿದೆ. ರಿಲೀಸ್ ಮುನ್ನವೇ ಕ್ರೇಜ್ ಹುಟ್ಟಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಲಾವಿದರಿದ್ದರೂ ಹೀರೋಗಳ ಸಂಖ್ಯೆ ಇಲ್ಲ. ಆ ಸಾಲಿಗೆ ಈಗ ರೋಹಿತ್ ಮೊದಲ ಸಾಲಲಲ್ಲಿ ಕಾಣುತ್ತಿದ್ದಾರೆ. ಆ ಭಾಗದಲ್ಲಿ ಈಗಾಗಲೇ ಸಿನಿಮಾಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಕನಸು ಕಂಗಳ ಹುಡುಗನ ಕನಸಿನ ಸಿನಿಮಾ ಇದು.

Categories
ಸಿನಿ ಸುದ್ದಿ

ಶಿವಣ್ಣನ 131 ನೇ ಸಿನಿಮಾ ಯಾವುದು ಗೊತ್ತಾ? ಫ್ಯಾನ್ಸ್ ಗೆ ಗುಡ್ ನ್ಯೂಸ್

ಕರುನಾಡ ಕಿಂಗ್ ಶಿವರಾಜ್ ಕುಮಾರ್ 131ನೇ ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಶಿವಣ್ಣನ ಜನ್ಮದಿನಕ್ಕೆ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಿ ಶಿವಸೈನ್ಯವನ್ನು ಒಂಟಿಗಾಲಲ್ಲಿ ನಿಲ್ಲಿಸಿದ್ದ ಚಿತ್ರತಂಡವೀಗ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಶೀಘ್ರದಲ್ಲಿಯೇ ಶಿವಣ್ಣನ 131ನೇ ಸಿನಿಮಾದ ಮುಹೂರ್ತ ನೆರವೇರಲಿದೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 131ನೇ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಸಜ್ಜಾಗಿದೆ. ಆದಷ್ಟು ಬೇಗ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣ ನಡೆಸಲು ಇಡೀ ಬಳಗ ಸಜ್ಜಾಗಿದೆ. ಅದಕ್ಕಾಗಿ ಇಂದು ಇಡೀ ತಂಡ ಶಿವಣ್ಣನನ್ನು ಭೇಟಿಯಾಗಿದೆ. ಕರುನಾಡ ಕಿಂಗ್ ನಾಗವಾರ ನಿವಾಸಕ್ಕೆ ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್ ಎಸ್ ರೆಡ್ಡಿ ಹಾಗೂ ಸುಧೀರ್, ಛಾಯಾಗ್ರಹಕ ಎಜೆ ಶೆಟ್ಟಿ, ಸಂಕಲನಕಾರ ದೀಪು ಎಸ್ ಕುಮಾರ್ ಭೇಟಿ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ,.
ವಿಕ್ರಂ ವೇದ, ಆರ್ ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ.

ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

error: Content is protected !!