Categories
ಸಿನಿ ಸುದ್ದಿ

ಇದು ಒಂದು ಲಂಗೋಟಿ ಕಥೆ: ಲಂಗೋಟಿ ಹುಡುಗನಿಗೆ ಸಾಥ್ ಕೊಟ್ಟ ಶರಣ್

ಸಂಜೋತ ಭಂಡಾರಿ ನಿರ್ದೇಶನದ “ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತನು ಟಾಕೀಸ್ ನಿರ್ಮಾಣದ ಈ ಚಿತ್ರದ ಟೀಸರ್ ಅನ್ನು ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಹತ್ತು ವರ್ಷಗಳ ಹಿಂದೆ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕಿ ಸಂಜೋತ ಭಂಡಾರಿ, ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು‌. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ “ಲಂಗೋಟಿ ಮ್ಯಾನ್” ಸಿನಿಮಾ ಸ್ವರೂಪ ಪಡೆದುಕೊಂಡಿತು.

ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ “ಲಂಗೋಟಿ” ನೇ. ಆಕಾಶ್ ರಾಂಬೊ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಗಿಲ್ಲಿ ನಟ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌.

ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ. ಚಿತ್ರ ಗೆಲುವ ವಿಶ್ವಾಸ ನನಗಂತೂ ಇದೆ‌. ಟೀಸರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ ಎಂದರು‌.

ಈ ಸಮಾರಂಭಕ್ಕೆ ಬಂದು ನಿರ್ದೇಶಕರ ಮಾತು ಕೇಳಿದ ಮೇಲೆ ಅವರಿಗೆ ಚಿತ್ರದ ಮೇಲಿರುವ ಭರವಸೆ ಹಾಗೂ ತಾವೊಬ್ಬರೆ ಕ್ರೆಡಿಟ್ ತೆಗೆದುಕೊಳ್ಳದೆ, ಚಿತ್ರತಂಡದ ಪ್ರತಿಯೊಬ್ಬರನ್ನು ಪರಿಚಯಿಸಿದ ರೀತಿ ಕಂಡು ಸಂತೋಷವಾಯಿತು. ಈಗಂತೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನೇ ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಲಂಗೋಟಿ ಮ್ಯಾನ್” ಸಹ ಸೇರಲಿ ಎಂದು ಶರಣ್ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೌತ್ ಡಿಸಿಸಿ ಪ್ರೆಸಿಡೆಂಟ್ ಓ ಮಂಜುನಾಥ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ನಟಿಸಿರುವ ಆಕಾಶ್ ರಾಂಬೊ, ಧೀರೇಂದ್ರ, ಸಂಹಿತ ವಿನ್ಯ ಮುಂತಾದ ಕಾಲವಿದರು ಚಿತ್ರದ ಕುರಿತು ಮಾತನಾಡಿದರು.

“ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ‌ಹಾಗೂ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ
ಟೀಸರ್ ನೋಡಿದಾಗ ಮನೋರಂಜನಾ ಪ್ರಧಾನ ಚಿತ್ರ ಎನಿಸಿದರೂ, ಚಿತ್ರದ ಮೂಲಕ‌‌ ಬೇರೊಂದು ವಿಷಯವನ್ನು ಹೇಳ ಹೊರಟಿರುವುದು ತಿಳಿಯುತ್ತದೆ.‌

Categories
ಸಿನಿ ಸುದ್ದಿ

ಗೆಲುವಿಗೆ ಚಾಮುಂಡಿ ಮೊರೆ ಹೋದ ಪೌಡರ್ ಟೀಮ್

ಸಿನಿಮಾ ರಿಲೀಸ್ ಗೂ ಮೊದಲೇ ನಿರ್ಮಾಪಕದ್ವಯರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ನಾಯಕ ದಿಗಂತ್ ಹಾಗೂ ಇಡೀ ತಂಡದಿಂದ ಟೆಂಪಲ್ ರನ್ ಮಾಡಿದೆ.

ಮೈಸೂರಿನ ಚಾಮುಂಡಿ ದೇವಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದು ಗೆಲುವಿಗಾಗಿ ಆಶೀರ್ಚಿವಾದ ಪಡೆದಿದೆ ಚಿತ್ರತಂಡ.

ಆಗಸ್ಟ್ 23ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿಂದೆ ಗುಲ್ಟು ನಿರ್ದೇಶಿಸಿದ್ದ ಜನಾರ್ದನ್ ಚಿಕ್ಕಣ್ಣ ಈ ಸಿನಿಮಾದ ನಿರ್ದೇಶಕ. ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ವಿಜಯ್ ಸುಬ್ರಹ್ಮಣ್ಯಂ ನಿರ್ಮಾಣದ ಸಿನಿಮಾವಿದು.

ಸದ್ಯ ದೇವರ ಮೊರೆ ಹೋಗಿರುವ ಸಿನಿಮಾ ತಂಡ ಗೆಲುವಿಗೆ ಬಲವಾಗಿ ಪ್ರಾರ್ಥಿಸಿದೆ. ಚಿತ್ರಮಂದಿರಕ್ಕೆ ಜನರೇ ಬರುತ್ತಿಲ್ಲ ಎಂಬ ಕೂಗು ಇತ್ತು. ಈಗ ಒಂದಷ್ಟು ಸಿನಿಮಾ ಮಂದಿ ಮೊಗದಲ್ಲಿ ಮಂದಹಾಸ ಮೂಡಿದೆ. ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಖಂಡಿತ ಜನ ಚಿತ್ರಮಂದಿರದತ್ತ ಮುಖ ಮಾಡುತ್ತಾರೆ ಎಂಬುದಕ್ಕೆ ಕೃ಼ಷ್ಣಂ ಪ್ರಣಯ ಸಖಿ ಹಾಗು ಭೀಮ ಸಿನಿಮಾಗಳು ಸಾಬೀತುಪಡಿಸಿವೆ.

Categories
ಸಿನಿ ಸುದ್ದಿ

ಚಿತ್ರರಂಗದ ಚಿನ್ನದ ಗಣಿ! ಗಾಂಧಿನಗರಕ್ಕೆ ಭೀಮ ಬಲ

ವಿಜಯ್ ಭರಮಸಾಗರ

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಹೌದು, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ಸ್ಥಿತಿಗತಿ ಡೋಲಾಯಮಾನದಲ್ಲಿದೆ. ಹೀಗೆ ಅಂತೆ-ಕಂತೆಗಳ ಮಾತುಗಳೇ ಕೇಳಿ ಬರುತ್ತಿದ್ದವು. ನಿಜ, ಕನ್ನಡ ಚಿತ್ರರಂಗಕ್ಕೂ ಗರಬಡಿದಿತ್ತು. ಒಳ್ಳೆಯ ಸಿನಿಮಾ ಇಲ್ಲದೆ ನೋಡುಗನಿಗೂ ತೀವ್ರ ಬೇಸರವಾಗಿತ್ತು. ಆದರೆ, ಜನರೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಅನ್ನುವ ದೂರು ಮಾತ್ರ ನಿರಂತರವಾಗಿತ್ತು. ಆದರೆ, ಅದು ಸುಳ್ಳು. ಸಿನಿಮಾ ಪ್ರೇಮಿ ಯಾವತ್ತಿಗೂ ಒಳ್ಳೆಯ ಸಿನಿಮಾವನ್ನು ಬಿಟ್ಟುಕೊಟ್ಟಿಲ್ಲ. ನೋಡುಗನಿಗೆ ಒಳ್ಳೆಯ ಸಿನಿಮಾ ಬೇಕಿತ್ತು. ಅದನ್ನು ಎದುರು ನೋಡುತ್ತಿದ್ದ. ಈಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಪ್ರೇಕ್ಷಕನ ಸಿನಿಮಾ ದಾಹ ನೀಗಿಸಿದೆ.

ಯೆಸ್, ಕನ್ನಡ ಚಿತ್ರರಂಗದಲ್ಲೀಗ ಪರ್ವ ಕಾಲ. ಒಂದೆಡೆ ದುನಿಯಾ ವಿಜಯ್ ಅಭಿನಯದ ಭೀಮ ಒಂದು ಕಡೆ ವಿಜೃಂಭಿಸುತ್ತಿದ್ದರೆ, ಇನ್ನೊಂದು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಕೂಡ ರಾರಾಜಿಸುತ್ತಿದೆ. ಈ ಎರಡೂ ಸಿನಿಮಾಗಳು ದೊಡ್ಡ ಗೆಲುವು ಕೊಡುವುದರ ಮೂಲಕ ಗಾಂಧಿನಗರದಲ್ಲಿ ವಿಜಯ ಪತಾಕೆ ಹಾರಿಸಿವೆ.

ಸರಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ಗಾಳಿ ಎಬ್ಬಿಸಿದ್ದು ಮುಂಗಾರು ಮಳೆ ಮತ್ತು ದುನಿಯಾ ಚಿತ್ರಗಳು. ಆ ಸಿನಿಮಾಗಳ ಮೂಲಕ ಗಾಂಧಿನಗರದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದು ಇದೇ ಗಣೇಶ್ ಮತ್ತು ವಿಜಯ್. ಆಗ ಕನ್ನಡ ಚಿತ್ರರಂಗದಲ್ಲಿ ಅತೀವೃಷ್ಠಿ ಆಗಿದ್ದಂತೂ ಸುಳ್ಳಲ್ಲ ಬಿಡಿ. ಹಾಗಂತ, ಅದೇ ಸಕ್ಸಸ್ ರೇಷಿಯೋ ಕಾಪಾಡಿಕೊಳ್ಳಲು ಈ ಇಬ್ಬರು ಹೀರೋಗಳು ಒದ್ದಾಡಿದ್ದು ಮಾತ್ರ ಸುಳ್ಳಲ್ಲ. ಕಾಲ ಕ್ರಮೇಣ ಚಂದನವನ ಚೆನ್ನಾಗಿಯೇ ಇತ್ತು. ಅದು ಯಾರ ದೃಷ್ಠಿ ತಾಕಿತೋ ಏನೋ, ಕೊರೊನೊ ಸಂದರ್ಭದಲ್ಲಿ ತತ್ತರಿಸಿದ್ದ ಚಿತ್ರರಂಗ ಸುಧಾರಿಸಿಕೊಳ್ಳೋಕೆ ವರ್ಷಗಳೇ ಬೇಕಾಯ್ತು.

ಈ ಮಧ್ಯೆ ವರ್ಷಕ್ಕೆ ಇನ್ನೂರು ಪ್ಲಸ್ ಸಿನಿಮಾಗಳೂ ತೆರೆಗೆ ಬಂದರೂ, ಥಿಯೇಟರ್ ನಲ್ಲಿ ಗಟ್ಟಿಯಾಗಿ ನಿಲ್ಲೋಕೆ ಪರದಾಡುವಂತಹ ಸ್ಥಿತಿ ಇತ್ತು. ಕೋಟಿ ಕೋಟಿ ಹಣ ಸುರಿದ ನಿರ್ಮಾಪಕರು ಕೂಡ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸುಳ್ಳಲ್ಲ. ಇದರಿಂದ ಕನ್ನಡ ಚಿತ್ರರಂಗ ಸೊರಗಿ ಹೋಯ್ತ ಅನ್ನೋ ಅನುಮಾನ ಕೂಡ ಹರಡಿದ್ದು ನಿಜ.

ಆದರೆ, ಒಂದೇ ಒಂದು ಗೆಲುವಿಗಾಗಿ ಇಡೀ ಚಿತ್ರರಂಗ ಹಪಾಹಪಿಸುತ್ತಿತ್ತು. ಈ ಸಿನಿಮಾ ಹಿಟ್ ಆಗಬಹುದಾ? ಆ ಸಿನಿಮಾ ಗೆಲ್ಲಬಹುದಾ? ಎಂಬ ಆಸೆಕಂಗಳಲ್ಲೇ ದಿನ ಸವೆಸುತ್ತಿತ್ತು. ಕೊರೊನಾ ವೇಳೆ ಸೊರಗಿ ಕೂತಿದ್ದ ಚಿತ್ರರಂಗಕ್ಕೆ ಸಲಗ ಆನೆಬಲ ತಂದುಕೊಟ್ಟಿದ್ದು ಎಷ್ಟು ನಿಜಾನೋ, ಈಗ ಭೀಮ ಕೂಡ ಚಿತ್ರರಂಗಕ್ಕೆ ಭೀಮಬಲ ತಂದುಕೊಟ್ಟಿದ್ದು ಅಷ್ಟೇ ನಿಜ.

ಇನ್ನು, ಚಂದನವದ ಚಿನ್ನದ ಗಣಿ ಮೇಲೆ ಕೂಡ ಭರವಸೆ ಇತ್ತು. ಆ ಭರವಸೆ ನಿಜಕ್ಕೂ ಸುಳ್ಳಾಗಲಿಲ್ಲ. ಭೂಮಿ ಮೇಲಿನ ಗೋಲ್ಡ್ ರೇಟ್ ಏರಿಳಿಕೆ ಕಂಡಂತೆ, ಚಿತ್ರರಂಗದಲ್ಲೂ ಗಣೇಶ್ ನಟನೆಯ ಸಿನಿಮಾಗಳು ಕೂಡ ಗೆಲುವು-ಸೋಲಿನ ಲೆಕ್ಕಾಚಾರದಲ್ಲಿದ್ದವು. ಒಂದು ಸಕ್ಸಸ್ ಸಿನಿಮಾಗಾಗಿ ಎದುರು ನೋಡುತ್ತಿದ್ದವರಿಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕಣ್ಮುಂದೆ ಬಂತು. ನಿಜಕ್ಕೂ ಆ ದಿನಗಳ ವೈಭವ ಕಣ್ಣೆದುರಿಗೆ ಕಾಣುತ್ತಿದೆ. ರಾಜ್ಯದ ಎಲ್ಲಾ ಥಿಯೇಟರ್ ಗಳ ಮುಂದೆ ಕಂಡ ಜನಜಂಗುಳಿ ಮನರಂಜನೆ ಯಾವತ್ತೂ ಸಾಯೋದಿಲ್ಲ ಅನ್ನುವುದನ್ನು ಸಾರಿ ಹೇಳಿದಂತಿತ್ತು.

ಪುನೀತ್ ರಾಜಕುಮಾರ್ ಅವರು ಪಕ್ಕಾ ಫ್ಯಾಮಿಲಿ ಹೀರೋ. ಅವರು ಮಾಸ್ ಮತ್ತು ಕ್ಲಾಸ್ ಹೀರೋ ಎನಿಸಿಕೊಂಡವರು. ಅವರ ಬಳಿಕ ಫ್ಯಾಮಿಲಿ ಆಡಿಯನ್ಸ್​ ಅನ್ನು ಥಿಯೇಟರ್ ಗೆ ಕರೆಸಿಕೊಳ್ಳುವ ತಾಕತ್ತು ಯಾರಿಗೆ ಇದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತಲೇ ಇತ್ತು. ಇದೀಗ ಗಣೇಶ್ ಅದನ್ನು ಸಾಬೀತುಪಡಿಸಿದ್ದಾರೆ. ಮೊದಲಿನಿಂದಲೂ ಫ್ಯಾಮಿಲಿ ಅಷ್ಟೇ ಅಲ್ಲ, ಅತೀ ಹೆಚ್ಚು ಹುಡುಗಿಯರೂ ಕೂಡ ಗಣಿ ಅವರ ಸಿನಿಮಾಗಳನ್ನು ಪ್ರೀತಿಯಿಂದ ಅಪ್ಪಿಕೊಂಡವರು. ಈಗ ಫ್ಯಾಮಿಲಿ ಆಡಿಯನ್ಸ್ ಗೂ ಹೆಚ್ಚು ಕನೆಕ್ಟ್ ಆಗುವ ನಟ ಅಂತ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಗಣೇಶ್.

ಇನ್ನು, ಈ ಮಾತು ಅತಿಶಯೋಕ್ತಿಯಲ್ಲ. ರಾಜ್ಯದ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳೂ ಕೃಷ್ಣಂ ಪ್ರಣಯ ಸಖಿ ಹೌಸ್ ಫುಲ್ ಅಂದರೆ ನಂಬಲೇಬೇಕು. ಅಷ್ಟೇ ಅಲ್ಲ, ಬ್ಲಾಕ್ ನಲ್ಲಿ ಟಿಕೆಟ್ ಓಡುತ್ತಿವೆ ಅನ್ನೋದು ಕೂಡ ಖುಷಿಯ ವಿಷಯವಲ್ಲದೆ ಮತ್ತೇನು? ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ ಎಂದು ದೂರುತ್ತಿದ್ದವರಿಗೆ ಇದೊಂದು ಅದ್ಭುತ ಚಿತ್ರವಾಗಿ ಹೊರಹೊಮ್ಮಿದೆ. ಕನ್ನಡದಲ್ಲಿ ಮತ್ತೆ ಗೆಲ್ಲುವ ಸಿನಿಮಾಗಳ ಓಟ ಶುರುವಾಗಿದೆ ಎಂಬುದಕ್ಕೆ ಈ ಸಿನಿಮಾಗಳು ಕಣ್ಣೆದುರಿಗಿನ ಸಾಕ್ಷಿ.

ಸದ್ಯದ ಮಟ್ಟಿಗೆ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಚೈತನ್ಯ ತಂದಿರೋದಂತೂ ಸತ್ಯ. ಯಾರು ಏನೇ ಅಂದುಕೊಂಡರೂ, ಗಣೇಶ್ ಈಗ ಪಕ್ಕಾ ಫ್ಯಾಮಿಲಿ ಆಡಿಯನ್ಸ್ ಹೀರೋ ಅನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗ ಈಗ ಗೆಲುವಿನ ನಗೆ ಬೀರಿದೆ. ಅದೇ ಮೂಡ್ ನಲ್ಲಿ ಒಂದಷ್ಟು ಸಿನಿಮಾಗಳು ನೋಡುಗರನ್ನು ಗೆಲ್ಲೋದ್ದಕ್ಕೆ ಬರಲು ಸಜ್ಜಾಗಿವೆ. ಇದು ಬರೀ ಟ್ರೇಲರ್ ಅಷ್ಟೇ…. ಮುಂದೆ ಇನ್ನೂ ಸಾಲು ಸಾಲು ನಿರೀಕ್ಷೆಯ ಸಿನಿಮಾಗಳಿವೆ. ಅವೆಲ್ಲವೂ ಕನ್ನಡ ಚಿತ್ರರಂಗದ ಹೊಸ ಮಜಲಿಗೆ ಸಾಕ್ಷಿಯಾಗುವುದಂತೂ ನಿಜ.

Categories
ಸಿನಿ ಸುದ್ದಿ

ಮಂಸೋರೆ ಹೊಸ ಯಾನ: ಪ್ರೀತಿಯ ಹೊಸ ದಾರಿ

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್ ನಿರ್ಮಾಣದ ಹಾಗೂ “ಹರಿವು”, ” ನಾತಿಚರಾಮಿ”, “ಆಕ್ಟ್ 1978”, “19.20.21” ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕ ಮಂಸೋರೆ ನಿರ್ದೇಶಿಸುತ್ತಿರುವ ಮುಂದಿನ ಚಿತ್ರ “ದೂರ ತೀರ ಯಾನ”. ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಅನಾವರಣಗೊಂಡಿದೆ.

ನನ್ನ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದೀರಾ. ಅದನ್ನು ಮೀರಿಸುವ ಪ್ರಯತ್ನ “ದೂರ ತೀರ ಯಾನ” ಎಂದು ಮಾತನಾಡಿದ ನಿರ್ದೇಶಕ ಮಂಸೋರೆ, ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ನಿರೀಕ್ಷೆಗಳು ಸಾಕಷ್ಟಿದೆ. ಹೀಗೆ ನಾವು ಬದಲಾದ ಪರಿಸ್ಥಿತಿಗೆ ಹೊಂದುಕೊಂಡು‌,‌ ಅವರಿಗೆ ಬೇಕಾದ ರೀತಿಯ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ‌ ಈಗ ನಾನು ಮಾಡಲು ಹೊರಟಿರುವ ಸಿನಿಮಾ “ದೂರ ತೀರ ಯಾನ”. ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ.

ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ – ಹುಡುಗಿ ಹೊಸರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆಯೂ ಹೌದು. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್ ಸಿರೀಸ್ ಗಳಲ್ಲಿ ಹಾಗೂ ನನ್ನ ನಿರ್ದೇಶನದ ” ಆಕ್ಟ್ 1978″ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, “ರುದ್ರ ಗರುಡ ಪುರಾಣ” ಚಿತ್ರದ ಖ್ಯಾತಿಯ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಪಾತ್ರಗಳು ಇರುತ್ತದೆ. ಮುಂದೆ ಅದರ ಬಗ್ಗೆ ತಿಳಿಸುತ್ತೇನೆ.

“ದೂರ ತೀರ ಯಾನ” ದಲ್ಲಿ ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜಿಸುತ್ತಿರುವ ಆರು ಹಾಡುಗಳಿರುತ್ತದೆ‌. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನವಿರುವ ಈ ಚಿತ್ರಕ್ಕೆ ಚೇತನ ತೀರ್ಥಹಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭವಾಗಲಿದೆ. ಟೈಟಲ್ ಟೀಸರ್ ಗೆ ಡಾಲಿ ಧನಂಜಯ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು.

ತುಂಬಾ ದಿನಗಳಿಂದ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಗೆಳೆಯ ಮಂಸೋರೆ ಒಂದೊಳ್ಳೆ ಕಥೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕ ವಿಜಯಕೃಷ್ಣ.

“ರುದ್ರ ಗರುಡ ಪುರಾಣ” ದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಚಿತ್ರದಲ್ಲಿ ಆ ಪಾತ್ರ ಸಿಕ್ಕಿದೆ ಎಂದರು ನಾಯಕಿ ಪ್ರಿಯಾಂಕ ಕುಮಾರ್.

ನಿರ್ಮಾಪಕ ದೇವರಾಜ್, ಸಂಗೀತ ನಿರ್ದೇಶಕರಾದ ಬಕೇಶ್ – ಕಾರ್ತಿಕ್, ಛಾಯಾಗ್ರಾಹಕ ಶೇಖರ್ ಚಂದ್ರ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ಸತ್ಯ ಹೆಗಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ರಕ್ಕಸಪುರದೊಳಗೆ ಶೆಟ್ಟರ ಹವಾ! ರಾಜ್ ಬಿ ಶೆಟ್ಟಿ ಹೊಸ ಸಿನಿಮಾಗೆ ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ಮಾಪಕ

ಸಾಹಸ ನಿರ್ದೇಶಕ ಕೆ.ರವಿವರ್ಮ ಅವರ ಮೊದಲ ನಿರ್ಮಾಣದ, ರವಿ ಸಾರಂಗ ಚೊಚ್ಚಲ ನಿರ್ದೇಶನದ ಹಾಗು ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಮುಹೂರ್ತ ನಡೆದಿದೆ. ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿದರು. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಇದ್ದರು.

ಸಾಹಸ ನಿರ್ದೇಶಕರಾಗಿ ಜನಪ್ರಿರಾಗಿರುವ ರವಿವರ್ಮ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ದಿ ವಿಲನ್”, “ಏಕ್ ಲವ್ ಯಾ” ,‌ “ಕೆಡಿ” ಮುಂತಾದ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ರವಿ ಸಾರಂಗ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಜನಪ್ರಿಯ ನಟ ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. “ರಕ್ಕಸಪುರದೋಳ್” ಚಿತ್ರ ಚಂದನವನದಲ್ಲಿ ಭರ್ಜರಿ ಯಶಸ್ಸು ಕಾಣಲಿ ಎಂದು ರಕ್ಷಿತ – ಪ್ರೇಮ್ ದಂಪತಿ ಹಾರೈಸಿದರು.

“ರಕ್ಕಸಪುರದೋಳ್” ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎಂದರು ರಾಜ್ ಬಿ ಶೆಟ್ಟಿ.

ಕಳೆದ ಹತ್ತು ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಹಕಾರ ನನಗೆ ಎಂದಿಗೂ ಇರುತ್ತದೆ. ಪ್ರೇಮ್ ಮತ್ತು ರಕ್ಷಿತ ಅವರಿಗೆ ಧನ್ಯವಾದ. “ರಕ್ಕಸ” ಎಂದರೆ ರಾಕ್ಷಸ. “ಪುರ” ಎಂದರೆ ಊರು. ರಾಕ್ಷಸರೆ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು “ರಕ್ಕಸ” ಎನ್ನಬಹುದು. ನಿರ್ಮಾಪಕ ರವಿವರ್ಮ ಹಾಗೂ ನಾಯಕ ರಾಜ್ ಬಿ ಶೆಟ್ಟಿ ಅವರು ಕಥೆ ಮೆಚ್ಚಿಕೊಂಡದ್ದು ಸಂತೋಷವಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದ‌ರು‌ ನಿರ್ದೇಶಕ ರವಿ ಸಾರಂಗ.

ರವಿ ಸಾರಂಗ ಅವರು ನನಗೆ ಎರಡು ವರ್ಷಗಳ ಪರಿಚಯ ಎಂದು‌ ಮಾತು ಆರಂಭಿಸಿದ ನಿರ್ಮಾಪಕ ಕೆ.ರವಿವರ್ಮ, ಸಾಹಸ ನಿರ್ದೇಶಕನಾಗಿ ನನಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ರವಿ ಸಾರಂಗ ಒಳ್ಳೆಯ ಕಥೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ.

ಅರ್ಜುನ್ ಜನ್ಯ‌ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಹಾಗೂ ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಕ್ರಾಂತಿ ಕುಮಾರ್ ಸಂಭಾಷಣೆ ಬರೆಯತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ರಕ್ಷಿತ – ಪ್ರೇಮ್ ಅವರು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ ಎಂದರು.

ರವಿವರ್ಮ ಅವರು ಸಾಹಸ ನಿರ್ದೇಶಕರಾಗಿ ನನ್ನ ನಿರ್ದೇಶನದ ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ನಟನೆಯನ್ನು ಹತ್ತಿರದಿಂದ ನೋಡಿದ್ದೇನೆ.

ಅವರೊಬ್ಬ ಉತ್ತಮ ಕಲಾವಿದ. ಇನ್ನು ರವಿ ಸಾರಂಗ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ಕನ್ನಡದ “ಆರ್ ಆರ್ ಆರ್” ಚಿತ್ರ. ತ್ರಿಬಲ್ ಆರ್ ತರಹ‌ ಈ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾರೈಸಿದರು.

ನಾಯಕಿ ಸ್ವಾತಿಷ್ಟ ಕೃಷ್ಣ, ನಟ ಬಿ.ಸುರೇಶ್, ನಟಿ ಅರ್ಚನಾ ಕೊಟ್ಟಿಗೆ, ಚಿತ್ರದಲ್ಲಿ ಅಭಿನಯಿಸುತ್ತಿರುವ ಗೌರವ್ ಶೆಟ್ಟಿ, ಸಿದ್ದಣ್ಣ, ಸುಮ, ಅನಿರುದ್ದ್ ಭಟ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಭಾಷಣೆಕಾರ ಕ್ರಾಂತಿ ಕುಮಾರ್ ಹಾಗೂ ನರಸಿಂಹ ಜಾಲಹಳ್ಳಿ ಮುಂತಾದವರು “ರಕ್ಕಸಪುರದೋಳ್” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ವರಮಹಾಲಕ್ಷ್ಮೀ ಹಬ್ಬಕ್ಕೆ ಶಿವಣ್ಣ 131 ನೇ ಸಿನಿಮಾಗೆ ಚಾಲನೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ಬಿಡುಗಡೆಗೆ ಸಜ್ಜಾಗಿದ್ದು, ಇದೀಗ ಶಿವಣ್ಣನ 131ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಬೆಂಗಳೂರಿನ‌ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಪಕ ಎಸ್ ಎನ್ ರೆಡ್ಡಿ ಕ್ಲ್ಯಾಪ್ ಮಾಡಿದರು. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿರುವ ಚಿತ್ರತಂಡ ನಾಳೆಯಿಂದ ಶೂಟಿಂಗ್ ಅಖಾಡಕ್ಕೆ‌ ಇಳಿಯುತ್ತಿದೆ.

ಮುಹೂರ್ತದ ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, 2 ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರೀಪ್ಟ್ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟ್ರೆಸ್ಟಿಂಗ್ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾ ಮೆನ್ ಗೆ ತುಂಬಾ ಕೆಲಸವಿದೆ.

ಮ್ಯೂಸಿಕ್ ಡೈರೆಕ್ಟರ್ ಗೂ ತುಂಬ ತುಂಬ ಕೆಲಸವಿದೆ. ಎಲ್ಲಾ ಆರ್ಟಿಸ್ಟ್ ಗೂ ಕೆಲಸವಿದೆ. ಒಂದು ಸಿನಿಮಾವೆಂದರೆ ಟೆಕ್ನಿಕಲ್ ಅಂತಾರೆ ಇಲ್ಲ ಆಕ್ಟರ್ಸ್ ಸಿನಿಮಾ ಎಂದು ಕರೆಯುತ್ತಾರೆ. ಇದು ಎಲ್ಲರ ಸಿನಿಮಾ. ಕಲಾವಿದರು, ತಂತ್ರಜ್ಞನರ ಸಿನಿಮಾ. ಜನ ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ಇನ್ನೊಂದು ಸರ್ ಪ್ರೈಸ್ ಕ್ಯಾರೆಕ್ಟರ್ ಇದೆ. ಪ್ರತಿಯೊಂದು ಕೆಲಸದಲ್ಲಿ ದೇವರು ನಂಬುತ್ತೇವೆ. ಆದರೆ ಮನುಷ್ಯರೇ ದೇವರನ್ನು ನಂಬುತ್ತಾರೆ. ಇದು ಚಿತ್ರದ ಕಥೆಯ ಎಳೆ ಎಂದರು.

ನಿರ್ದೇಶಕ ಕಾರ್ತಿಕ್ ಅದ್ವೈತ್ ಮಾತನಾಡಿ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ಶಿವಣ್ಣ ಕಥೆ, ಕ್ಯಾರೆಕ್ಟರ್ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನನ್ನ ಇಬ್ಬರು ನಿರ್ಮಾಪಕರು ಚಿತ್ರದ ಮುಖ್ಯ ಪಿಲ್ಲರ್ ಎಂದು ತಿಳಿಸಿದರು.

ಶಿವಣ್ಣನ 131ನೇ ಚಿತ್ರಕ್ಕೆ ಕಾರ್ತಿಕ್ ಅದ್ವೈತ್ ಹೇಳುತ್ತಿದ್ದಾರೆ. ತಮಿಳು ಚಿತ್ರವೊಂದನ್ನು ನಿರ್ಮಿಸಿರುವ ಅವರೀಗ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶಿವಣ್ಣನ 131ನೇ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ.

ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ. ವಿಕ್ರಂ ವೇದ, ಆರ್ ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ.

ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸಹ ನಿರ್ಮಾಪಕರಾಗಿ ಸುಮನ್ ಬಿ, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ: ಕೆಜಿಎಫ್ 2ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಕನ್ನಡದ ಕಾಂತಾರ ಸಿನಿಮಾದ ನಟನೆಗಾಗಿ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ, ಅತ್ತ್ಯುತ್ತಮ ಚಿತ್ರ ಪ್ರಶಸ್ತಿಗೆ ಕೆಜಿಎಫ್ 2 ಭಾಜನವಾಗಿದೆ.

90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಲ್ಲಿಯವರೆಗೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡದ ನಟರು ಮೂರೇ ಜನ. ಎಂ ವಿ ವಾಸುದೇವ ರಾವ್ (ಚೋಮನದುಡಿ- 23ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ), ಸಂಚಾರಿ ವಿಜಯ್ (ನಾನು ಅವನಲ್ಲ ಅವಳು-62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ಹಾಗೂ ರಿಷಭ್ ಶೆಟ್ಟಿ (ಕಾಂತಾರ-70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ).
ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡ ಕಹಳೆ ಮೊಳಗಿಸಿದೆ. ಕನ್ನಡ ಚಿತ್ರರಂಗಕ್ಕೆ 7 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.


ಕಾಂತಾರ, ಕೆಜಿಎಫ್​ ಸಿನಿಮಾಗಳಿಗೆ ಎರಡು ಪ್ರಶ್ರಿಗಳು ಸಿಕ್ಕಿವೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿಅತ್ಯುತ್ತಮ ಮನರಂಜನಾ ಸಿನಿಮಾ ಆಗಿ ಕಾಂತಾರ ಹೊರಹೊಮ್ಮಿದರೆ
ಅತ್ಯುತ್ತಮ ನಟ ಪ್ರಶಸ್ತಿಗೆ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ.


ಅತ್ಯುತ್ತಮ ಕನ್ನಡ ಸಿನಿಮಾ ಆ್ಇ ಕೆಜಿಎಫ್ 2 ಹೊರಹೊಮ್ಮಿದೆ.
ಸಾಹಸ ನಿರ್ದೇಶನ ವಿಭಾಗದಲ್ಲೂ ಕೆಜಿಎಫ್ 2 ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಹೊಂಬಾಳೆ ಪ್ರೊಡಕ್ಷನ್ ಮೂಲಕ ಕಾಂತಾರ ಹಾಗು ಕೆಜಿಎಫ್ 2 ಸಿನಿಮಾಗಳು ನಿರ್ಮಾಣಗೊಂಡಿದ್ದು ನಿರ್ಮಾಪಕ‌ ವಿಜಯ ಕಿರಗಂದೂರು ಸಂತಸಗೊಂಡಿದ್ದಾರೆ.

Categories
ಸಿನಿ ಸುದ್ದಿ

ಪೌಡರ್ ಹಬ್ಬದಲ್ಲಿ ತಾರಾಮೇಳ: ಆ.23ಕ್ಕೆ ಗ್ರ್ಯಾಂಡ್ ರಿಲೀಸ್

ಬಹು ನಿರೀಕ್ಷಿತ ಹಾಸ್ಯ ಚಟಾಕಿ ಚಿತ್ರ “ಪೌಡರ್” ತನ್ನ ಪ್ರೀ ರಿಲೀಸ್ ಕಾರ್ಯಕ್ರಮವಾದ “ಪೌಡರ್ ಹಬ್ಬ”ದಿಂದ ಮತ್ತೊಮ್ಮೆ ಸುದ್ದಿಯಾಗಿದೆ‌. ಇತ್ತೀಚೆಗೆ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ನಡೆದ “ಪೌಡರ್ ಹಬ್ಬ” ಕನ್ನಡ ಚಿತ್ರರಂಗದ ತಾರಾ ಸಮಾಗಮವೇ ಆಗಿತ್ತು‌.

ಪೌಡರ್ ಹಬ್ಬದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ದಾನಿಷ್ ಸೇಠ್, ಖ್ಯಾತ ನಟಿ ಐಂದ್ರಿತಾ ರೈ, ಹೆಸರಾಂತ ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಪೌಡರ್ ತಾರಾಬಳಗ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್

ಅನಿರುದ್ಧ್ ಆಚಾರ್ಯ,ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ ಎಲ್ಲರೂ ವೀಕ್ಷಕರ ಗಮನ ಸೆಳೆದರು. ವಾಸುಕಿ ವೈಭವ್ ಮತ್ತು ಎಂ ಸಿ ಬಿಜ್ಜುವಿನ ಸಂಗೀತ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.

“ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ‌‌. ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ.

ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. “ಪೌಡರ್” ಚಿತ್ರ ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ.

Categories
ಸಿನಿ ಸುದ್ದಿ

ಗೌರಿ ಕನ್ನಡದ ಹೊಸ ಬೆಳಕು: ಇಂದ್ರಜಿತ್ ಪುತ್ರನಿಗೆ ಒಳ್ಳೆ ಟೈಮ್ ಬಂತು…

ಚಿತ್ರ ವಿಮರ್ಶೆ
ವಿಜಯ್ ಭರಮಸಾಗರ
ರೇಟಿಂಗ್: 3.5/5

ಚಿತ್ರ: ಗೌರಿ
ನಿರ್ಮಾಣ, ನಿರ್ದೇಶನ: ಇಂದ್ರಜಿತ್ ಲಂಕೇಶ್
ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್, ಮಾನಸಿ ಸುಧೀರ್, ಸಂಪತ್ ಕುಮಾರ್, ಸಿಹಿಕಹಿ ಚಂದ್ರು ಇತರರು.

ಹೆಸರು ಗೌರಿ. ಅವನದು ಊರೂರು ಅಲೆದು ಹೊಟ್ಟೆಪಾಡಿಗೆ ಜನಪದ ಹಾಡಿ ಸಾರುವ ಜೋಗಿ ಕುಟುಂಬ. ಅಪ್ಪ ಜೋಳಿಗೆ ಹಿಡಿದು ಅಲೆದಾಡುವ ಜೋಗಯ್ಯ. ಹಾಸು ಹೊಕ್ಕಾಗಿರುವ ಬಡತನ. ಅಮ್ಮನಿಗೆ ಅರೆ ಕಿವುಡು. ಅವನಿಗೂ ಅಂಥದ್ದೇ ಸಮಸ್ಯೆ. ಅಪ್ಪನ ಕೋಪಕ್ಕೆ ಮಠ ಸೇರುವ ಗೌರಿ, ರಾಗವಾಗಿ ಹಾಡುವುದನ್ನು ಕಲಿಯುತ್ತಾನೆ. ಮುಂದಾ? ಕಥೆ ಹೇಳಿದರೆ ಮಜ ಇರಲ್ಲ ಒಂದೊಮ್ಮೆ ಗೌರಿ ದರ್ಶನ ಮಾಡಿದರೆ ಆಪ್ತ ಸಿನಿಮಾ ನೋಡಿದ ಭಾವ ನಿಮ್ಮದಾಗುತ್ತೆ.

ಇದೊಂದು ಸಂಗೀತ ಪ್ರಧಾನ ಸಿನಿಮಾ. ಆದರೂ ಇಲ್ಲಿ ಪ್ರೀತಿ, ಗೆಳೆತನ, ಮೋಸ, ದ್ವೇಷ, ತಾಯಿ ಮಮತೆ, ಸಾಧಿಸೋ ಛಲ, ಪಶ್ಚಾತ್ತಾಪ, ಕರುಣೆ, ಮರುಕ ಎಲ್ಲವೂ ಇದೆ. ಇವೆಲ್ಲವನ್ನೂ ಅಷ್ಟೇ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.

ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎನಿಸಿದರೂ ಅಲ್ಲೊಂದು ಮನಸಿಗೆ ನಾಟುವ ಅಂಶವಿದೆ. ಅದನ್ನು ಅಚ್ಚುಕಟ್ಟಾಗಿ ನಿರೂಪಿಸುವುದರ ಜತೆಗೆ ಎಲ್ಲೂ ಗೊಂದಲವಿಲ್ಲದ ರೀತಿ ತೆರೆ ಮೇಲೆ ತಂದಿದ್ದಾರೆ.

ಮೊದಲರ್ಧ ಸಿನಿಮಾ ಸಾಗುವುದೇ ಗೊತ್ತಾಗಲ್ಲ. ಅಷ್ಟು ನೀಟ್ ಆಗಿ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಒಂದಷ್ಟು ಹೊಸ ಟ್ವಿಸ್ಟ್ ಗಳಿವೆ. ಸಣ್ಣ ಸಸ್ಪೆನ್ಸ್ ಕೂಡ ಇದೆ. ಅದೇ ಸಿನಿಮಾದ ಕುತೂಹಲ ಕೆರಳಿಸುತ್ತಾ ಹೋಗುತ್ತೆ.

ಇಲ್ಲಿ ತಾಯಿ ಸೆಂಟಿಮೆಂಟ್ ವರ್ಕೌಟ್ ಆಗಿದೆ. ಕಥೆಯಲ್ಲಿ ಗ್ರಾಮೀಣ ಭಾಗದ ಸ್ಪರ್ಶವಿದ್ದರೂ ಈಗಿನ ಟ್ರೆಂಡ್ ಗೆ ಬೇಕಾದ ಎಲಿಮೆಂಟ್ಸ್ ಹೇರಳವಾಗಿದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು.

ಇನ್ನು ಕೆಲವು ಕಡೆ ಬೇಡದ ಸನ್ನಿವೇಶಗಳಿವೆ. ಗೆಳೆಯರ ಬಳಗದಲ್ಲಿ ಒಂದು ಪಾತ್ರ ಏನೇನೋ ಡೈಲಾಗ್ ಹೇಳಿ ವಿನಾಕಾರಣ ಕಿರಿಕಿರಿ ಎನಿಸುತ್ತೆ. ಅದು ಬಿಟ್ಟರೆ, ಸಿನಿಮಾದಲ್ಲಿ ಅಷ್ಟೇನು ತಪ್ಪು ಕಾಣಿಸಲ್ಲ.

ಇಲ್ಲಿ ಹಾಡು ಮತ್ತು ಫೈಟ್ ಪ್ಲಸ್. ಚಿತ್ರದ ಮೂರು ಹಾಡುಗಳು ಗುನುಗುವಂತಿವೆ. ಜಬರ್ದಸ್ತ್ ಫೈಟ್ಚಕೂಡ ಖುಷಿ ಕೊಡುತ್ತೆ. ಸೆಕೆಂಡ್ ಹಾಫ್ ಸ್ವಲ್ಪ ಭಾವುಕತೆಗೆ ದೂಡುತ್ತೆ. ಉಳಿದಂತೆ ಒಂದೊಳ್ಳೆಯ ಫೀಲ್ ಕೊಡುವ ಸಿನಿಮಾ ಇದು.

ಯಾರು ಹೇಗೆ?

ಮೊದಲ ಬಾಲ್ ನಲ್ಲೇ ನಾಯಕ ಸಮರ್ಜಿತ್ ಲಂಕೇಶ್ ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಪ್ರತಿಭಾವಂತ ಯುವ ನಟನ ಆಗಮನವಾದಂತಾಗಿದೆ. ಮೊದಲ ಸಿನಿಮಾವಾದರೂ ಅನುಭವಿಯಂತೆ ಕಾಣುತ್ತಾರೆ. ಡ್ಯಾನ್ಸು, ಫೈಟು, ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪಕ್ಕಾ ಲವರ್ ಬಾಯ್ ಆಗಿ ನೆಲೆ ಕಾಣುವ ಲಕ್ಷಣಗಳಿವೆ.
ಸಾನ್ಯಾ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಾನಸಿ ಸುಧೀರ್, ಸಂಪತ್ ಕುಮಾರ್ ಇರುವಷ್ಟು ಕಾಲ ಕಾಡುತ್ತಾರೆ. ಮಾನಸಿ ಅವರ ನಟನೆ ಭಾವುಕತೆ ಹೆಚ್ಚಿಸುತ್ತದೆ.

ಇನ್ನು ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್ ಕೈಚಳಕದಲ್ಲಿ ಗೌರಿ ಅಂದವಾಗಿ ಮೂಡಿಬಂದಿದೆ.
ಹಾಡುಗಳ ವಿಚಾರಕ್ಕೆ ಬಂದರೆ, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೇರಗಿ, ಅನಿರುದ್ ಶಾಸ್ತ್ರಿ ಇವರ ಕೆಲಸ‌ ಎದ್ದು ಕಾಣುತ್ತೆ.

ಒಂದು ಗಮನಿಸಬೇಕಾದ ವಿಷಯ ಅಂದರೆ, ಇಲ್ಲಿ ಅನಗತ್ಯ ದೃಶ್ಯವಿಲ್ಲ. ವಿನಾಕಾರಣ ಮಾತಿಲ್ಲ, ಕಥೆಯ ಚೌಕಟ್ಟು ಮೀರಿ ಏನೂ ಇಲ್ಲ. ಸದ್ಯ ಕನ್ನಡಕ್ಕೊಬ್ಬ ನಾಯಕ ನಟನ ಆಗಮನವಾಗಿದೆ ಅನ್ನೋದಂತೂ ಪಕ್ಕಾ.

Categories
ಸಿನಿ ಸುದ್ದಿ

ಜಿಎಸ್ ಟಿ ಇದು ಮೂರು ತಲೆಮಾರಿನ ಚಿತ್ರ: ಅಜ್ಜಿ ಮಗ ಮೊಮ್ಮಗನ ಸಿನಿಮಾ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ಮಾಡಿರುವ “GST” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕಬಿನಿ ಬಳಿಯ ಸಂದೇಶ್ ಅವರ ಹೊಸ ರೆಸಾರ್ಟ್ ನಲ್ಲಿ ನಾಯಕ ಸೃಜನ್ ಹಾಗೂ ನಾಯಕಿ ರಜನಿ ಭಾರದ್ವಾಜ್ ನಟಿಸಿದ ಹಾಡೊಂದರ ಚಿತ್ರೀಕರಣ ಹಾಗೂ ಮೈಸೂರಿನಲ್ಲಿ ಸೃಜನ್ ಲೋಕೇಶ್, ಸಂಹಿತ ವಿನ್ಯ, ತಬಲನಾಣಿ, ಗಿರೀಶ್ ಶಿವಣ್ಣ, ವಿನೋದ್ ಗೊಬ್ಬರಗಾಲ ಮುಂತಾದವರು ಅಭಿನಯಿಸಿದ ಮತ್ತೊಂದು ಹಾಡಿನ ಚಿತ್ರೀಕರಣ ನಡೆದಿದೆ.

ಸೃಜನ್ ಲೋಕೇಶ್ ಹಾಗೂ ಚಂದನ್ ಶೆಟ್ಟಿ ಹಾಡುಗಳನ್ನು ಬರೆದಿದ್ದಾರೆ. ಮುರುಗಾನಂದ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಎರಡು ಹಾಡುಗಳ ಚಿತ್ರೀಕರಣದೊಂದಿಗೆ “ಜಿ ಎಸ್ ಟಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಎರಡು ಹಾಡುಗಳಿಗೂ ಮುರುಗಾನಂದ ಅವರು ಹಾರಾರ್ ಕಾಮಿಡಿ ಜಾನರ್ ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಿಜಿ ಕಾರ್ಯ ನಡೆಯುತ್ತಿದೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

“GST” ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಅವರು ಪ್ರಮುಖಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದ್ದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸಿದ್ದಾರೆ.

ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ “GST” ಚಿತ್ರಕ್ಕೆ “ಘೋಸ್ಟ್ ಇನ್ ಟ್ರಬಲ್” ಎಂಬ ಅಡಿಬರಹವಿದೆ.

ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು.

error: Content is protected !!