ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ
ನಿರ್ದೇಶಕ: ವಿಕಾಸ್ ಪುಷ್ಪಗಿರಿ
ನಿರ್ಮಾಪಕ: ದೇವರಾಜ್
ತಾರಾಗಣ: ರಂಜನ್, ನಿಶ್ಚಿತ, ಬಿ.ಸುರೇಶ, ರಘುಶಿವಮೊಗ್ಗ, ಹರಿಣಿ, ಪ್ರಶಾಂತ್, ಸಂದೀಪ್ ಇತರರು.
‘ಈ ಪ್ರಪಂಚದಲ್ಲಿ ಹೊಗಳೋರು ಇರ್ತಾರೆ. ತೆಗಳೋರು ಇರ್ತಾರೆ.
ನಮಗೆ ಸೀದಾ ಕಾಣಿಸೋದು, ಅವರಿಗೆ ಉಲ್ಟಾ ಕಾಣಿಸುತ್ತೆ…’
ಈ ಸಿನಿಮಾದ ಹೈಲೆಟ್ ಆಗಿರುವ ಟಿ ಅಲಿಯಾಸ್ ತಿಮ್ಮೇಗೌಡ (ಹೀರೋ ರಂಜನ್) ಈ ಡೈಲಾಗ್ ಹೇಳುವ ಹೊತ್ತಿಗೆ , ಅವನು ಎನ್ಇಇಟಿ ಎಕ್ಸಾಮ್ ಬರೆದು ಇಷ್ಟಪಟ್ಟ ಕಾಲೇಜಿನಲ್ಲಿ ಮೆಡಿಕಲ್ ಸೀಟು ಪಡೆದು ತಾನೊಬ್ಬ ಡಾಕ್ಟರ್ ಆಗಿ ಇದ್ದೂರಲ್ಲೇ ಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುತ್ತಾನೆ. ಆದರೆ ಅವನ ಕನಸುಗಳೆಲ್ಲಾ ನನಸಾಗುತ್ತ, ಇಲ್ಲವೋ ಅನ್ನೋದೇ ಈ ಸ್ಕ್ಯಾಮ್ 1770 ಸಿನಿಮಾದ ಸಾರಾಂಶ.
ವಂಚನೆ ಪ್ರಕರಣಗಳು ದಿನ ನಿತ್ಯ ನಮ್ಮ ಬದುಕಲ್ಲಿ ನಡೆಯುತ್ತಲೇ ಇವೆ. ವಂಚನೆಗೊಳಗಾಗುತ್ತಿದ್ದರೂ ಎಷ್ಟೋ ಸಲ ಗೊತ್ತಾಗೋದೇ ಇಲ್ಲ. ಅಂಥದ್ದೊಂದು ಗಂಭೀರ ವಿಷಯ ಇಟ್ಟುಕೊಂಡು ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರು ಚಂದದ ಕಥೆ ಇಟ್ಟುಕೊಂಡು ಅಂದವಾಗಿ ನಿರೂಪಿಸಿದ್ದಾರೆ. ಇದು ಸ್ಟಾರ್ ಸಿನಿಮಾ ಅಲ್ಲದಿದ್ದರೂ ಸ್ಟಾರ್ ವ್ಯಾಲ್ಯು ಇರುವ ಸ್ಟೋರಿ ಸಿನಿಮಾ. ಹಾಗಾಗಿ ಇದು ಎಲ್ಲಾ ವರ್ಗದವರಿಗೂ ರುಚಿಸುವ, ಎಚ್ಚೆತ್ತುಕೊಳ್ಳುವ ಚಿತ್ರ ಅನ್ನೋದನ್ನು ಮುಲಾಜಿಲ್ಲದೆ ಹೇಳಬಹುದು.
ಶಿಕ್ಷಣ ಅನ್ನೋದು ಈಗ ಗಗನ ಕುಸುಮ. ಅದರಲ್ಲೂ ಬಡವರಿಗೆ ಮಧ್ಯಮ ವರ್ಗದವರಿಗೆ ಬಲು ಕಷ್ಟ. ಎಷ್ಟೇ ಬುದ್ಧಿವಂತರಿದ್ದರೂ, ನೀಟ್ ಎಕ್ಸಾಮ್ ಪಾಸ್ ಆದರೂ ಪ್ರತಿಷ್ಟಿತ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ಪಡೆಯೋದು ಕಷ್ಟ. ಸಿಕ್ಕರೂ ಒಂದಷ್ಟು ಸಮಸ್ಯೆ ಮೂಲಕ ಕೈ ತಪ್ಪುವ ಉದಾಹರಣೆ ಹೆಚ್ಚು. ಅಂತಹ ವಂಚನೆ ಹೇಗೆಲ್ಲಾ ನಡೆಯುತ್ತೆ ಅನ್ನೋದು ಸಿನಿಮಾದ ಥಾಟ್. ಅದನ್ನೇ ಇಲ್ಲಿ ನಿರ್ದೇಶಕರು ಮನ ಮುಟ್ಟುವಂತೆ ನಿರೂಪಿಸಿದ್ದಾರೆ. ಮುಖ್ಯವಾಗಿ ಇದು ಸ್ಟುಡೆಂಟ್ಸ್ ಜೊತೆಗೆ ಪೋಷಕರು ನೋಡಲೇಬೇಕಾದ ಸಿನಿಮಾ. ವಾಸ್ತವ ಅಂಶ ಇಲ್ಲಿ ಸತ್ಯವನ್ನು ಬಿಚ್ಚಿಟ್ಟಿದೆ.
ಸಮಾಜದಲ್ಲಿ ಈಗ ನಡೆಯುವ ವಸ್ತುಸ್ಥಿತಿಯನ್ನು ನಿರ್ದೇಶಕರು ಬಿಂಬಿಸಿದ್ದಾರೆ. ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜುಗಳ ವಂಚನೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಚಿತ್ರ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಇದೆಲ್ಲವೂ ಹೀಗಿದೆಯಾ ಅನ್ನುವಷ್ಟರ ಮಟ್ಟಿಗೆ ಕಾಡುತ್ತೆ. ಅಷ್ಟೇ ಅಲ್ಲ, ಎಚ್ಚೆತ್ತುಕೊಳ್ಳುವಂತೆಯೂ ಮಾಡುತ್ತೆ.
ಸಿನಿಮಾದ ಕಥೆಯ ಎಳೆ ಚೆನ್ನಾಗಿದೆ. ಎಲ್ಲೂ ನೀರಸವಾಗದ ನಿರೂಪಣೆ ಇಷ್ಟವಾಗುತ್ತೆ. ಕಮರ್ಷಿಯಲ್ ರೂಪ ಕೊಟ್ಟು, ನೋಡಿಸಿಕೊಂಡು ಹೋಗುವಂತೆ ಮಾಡಿರುವ ನಿರ್ದೇಶಕರ ಜಾಣತನ ಒಪ್ಪಬೇಕು.
ಕಥೆ ಇಷ್ಟು…
ಟಿ (ರಂಜನ್) ನೀಟ್ ಬರೆದು ಮೆಡಿಕಲ್ ಸೀಟು ಪಡೆಯಬೇಕೆಂಬ ಹಂಬಲದವನು. ಆದರೆ, ತಾನು ಇಷ್ಟ ಪಡುವ ಕಾಲೇಜಿನಲ್ಲೇ ಸೀಟು ಪಡೆಯಬೇಕೆಂಬ ಆಸೆ ನಿರಾಸೆಯಾಗುತ್ತೆ. ಮೆಡಿಕಲ್ ಸೀಟು ಕೋಟಾದಡಿ ಸಿಗುತ್ತೆ ಎಂಬ ಆಸೆ ಕೈ ತಪ್ಪುತ್ತೆ. ಅದು ತಪ್ಪಿದ್ದಲ್ಲ. ತಪ್ಪಿಸಿದ್ದು. ಅನ್ನೋ ಸತ್ಯ ಗೊತ್ತಾಗುತ್ತೆ. ಅವನಂತೆಯೇ ಒಂದಷ್ಟು ಪ್ರತಿಭಾವಂತರಿಗೂ ಇದೇ ಸಮಸ್ಯೆ ಎದುರಾಗುತ್ತೆ. ಸೀಟು ಅವರಿಂದ ಹೇಗೆ ತಪ್ಪುತ್ತೆ ಆ ನೋವು ಹೇಗೆ ಬಲಿ ಪಡೆಯುತ್ತೆ ಅನ್ನೋದೇ ಇಂಟ್ರೆಸ್ಟಿಂಗ್ ಕಥೆ.
ಖಾಸಗಿ ಶಾಲೆಗಳ ವಂಚನೆ ಬಯಲಿಗೆಳೆಯೋ ಕಥೆ ನೋಡುಗರಲ್ಲಿ ಹೀಗೂ ಉಂಟಾ ಎನಿಸದೇ ಇರದು. ಎಷ್ಟೋ ಪೋಷಕರು ಮಕ್ಕಳ ಭವಿಷ್ಯ ರೂಪಿಸಲು ಸಾಲ ಮಾಡಿ ಮೆಡಿಕಲ್ ಓದಿಸಿ ಡಾಕ್ಟರ್ ಮಾಡುವ ಆಸೆ ಇಟ್ಟುಕೊಂಡೇ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದನ್ನು ಇಲ್ಲಿ ನೀಟ್ ಆಗಿ ಪ್ರೆಸೆಂಟ್ ಮಾಡಲಾಗಿದೆ. ಒಟ್ಟಾರೆ, ಶಿಕ್ಷಣ ದಂಧೆ ಅಂಶ ಇಲ್ಲಿ ಹೈಲೆಟ್.
ಯಾರು ಹೇಗೆ?
ಇಲ್ಲಿ ಟಿ ಪಾತ್ರದ ಮೂಲಕ ರಂಜನ್ ಗಮನ ಸೆಳೆಯುವುದರ ಜೊತೆ ಇಷ್ಟವಾಗುತ್ತಾರೆ. ಅಷ್ಟೇ ಅಲ್ಲ, ಡ್ಯಾನ್ಸ್ ಫೈಟಲ್ಲೂ ಓಕೆ ಎನಿಸುತ್ತಾರೆ. ಬಾಡಿ ಲಾಂಗ್ವೇಜ್ ಇನ್ನಷ್ಟು ತಿದ್ದಿಕೊಳ್ಳಬೇಕು. ಉಳಿದಂತೆ ಓಕೆ.
ನಿಶ್ಚಿತ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ.
ರಿಪೋರ್ಟರ್ ಆಗಿ ರಂಜನ್ ಅಣ್ಣನಾಗಿ ರಘು ಶಿವಮೊಗ್ಗ ಫೋಕಸ್ ಆಗಿದ್ದಾರೆ. ಅತ್ತಿಗೆಯಾಗಿ ಹರಿಣಿ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಬಿ.ಸುರೇಶ ಖಾಸಗಿ ಕಾಲೇಜಿನ ವಂಚಕರಾಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಪ್ರಶಾಂತ್, ಸಂದೀಪ್, ನಾರಾಯಣ ಸ್ವಾಮಿ ನ್ಯಾಯ ಸಲ್ಲಿಸಿದ್ದಾರೆ.
ಒಟ್ಟಾರೆ ಈ ಸ್ಕ್ಯಾಮ್ ನಮ್ಮ ನಡುವೆಯೇ ಹೇಗೆಲ್ಲಾ ನಡೆಯುತ್ತೆ ಎಂಬುದು ಅಚ್ಚುಕಟ್ಟಾಗಿ ಮೂಡಿಬಂದಿದೆ.