Categories
ಸಿನಿ ಸುದ್ದಿ

ವಾಮನ ಟ್ರೇಲರ್ ರಿಲೀಸ್ ಮಾಡಿದ ದರ್ಶನ್: ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ

ಚೇತನ್ ಗೌಡ ಅವರು ನಿರ್ಮಿಸಿರುವ, ಶಂಕರ್ ರಾಮನ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ “ವಾಮನ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಡಿಯೋ ಮೂಲಕ “ವಾಮನ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಪ್ರಸನ್ನ ಚಿತ್ರಮಂದಿರದಲ್ಲಿ ಸಹಸ್ರಾರು ದರ್ಶನ್ ಅವರ ಅಭಿಮಾನಿಗಳು ಈ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾದರು.

ಧನ್ವೀರ್ ಅಭಿನಯದ ನಾಲ್ಕನೇ ಚಿತ್ರ “ವಾಮನ”. ಧನ್ವೀರ್ ಅವರ ಹಿಂದಿನ ಮೂರು ಚಿತ್ರಗಳೂ ವಿಭಿನ್ನವಾಗಿತ್ತು. ಅದರಲ್ಲೂ ” ಕೈವಾ” ನನ್ನಿಷ್ಟದ ಚಿತ್ರ. “ವಾಮನ” ಚಿತ್ರ ಕೂಡ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಈ ಚಿತ್ರದ “ಮುದ್ದು ರಾಕ್ಷಸಿ” ಹಾಡು ನನಗೆ ಬಹಳ ಇಷ್ಟ. ಇಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 10ರಂದು ತೆರೆಗೆ ಬರುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ‌. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. ನಾನು ಕೂಡ “ವಾಮನ” ಚಿತ್ರವನ್ನು ಧನ್ವೀರ್ ಜೊತೆಗೆ ನೋಡುತ್ತೇನೆ ಎಂದು ದರ್ಶನ್ ತಿಳಿಸಿದರು.

ನಾನು ಮೊದಲಿಗೆ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ನಮ್ಮ ಚಿತ್ರದ ತಾಯಿ – ಮಗನ ಬಾಂಧವ್ಯ ಸಾರುವ ಹಾಡನ್ನು ಅನಾವರಣ ಮಾಡಿದ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ದರ್ಶನ್ ಅವರು ಇಂದಿನ ಸಮಾರಂಭಕ್ಕೆ ಬರಬೇಕಿತ್ತು. ಆದರೆ ಅವರು ದೂರದ ಊರಿನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನನ್ನಿಂದ ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ಅವರದು.

ಹಾಗಾಗಿ ನನ್ನನ್ನು ಅವರಿರುವ ಕಡೆಗೆ ಕರೆಸಿಕೊಂಡು ಟ್ರೇಲರ್ ವೀಕ್ಷಿಸಿ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳಾಡಿದ್ದಾರೆ. ಚಿತ್ರಮಂದಿರದಲ್ಲೇ “ವಾಮನ” ಚಿತ್ರವನ್ನು ನೋಡುವುದಾಗಿ ಹೇಳಿದ್ದಾರೆ. ಇಷ್ಟು ಜನರು ನಮ್ಮ ಚಿತ್ರದ ಸಮಾರಂಭಕ್ಕೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ನಮ್ಮ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ. ತಂತ್ರಜ್ಞರ ಸಹಕಾರ ಕೂಡ ಅಪಾರವಾಗಿದೆ ಎಂದು ನಾಯಕ ಧನ್ವೀರ್ ತಿಳಿಸಿದರು.

ನಮ್ಮ ಚಿತ್ರದ ಟ್ರೇಲರ್ ಹಾಗೂ ಹಾಡನ್ನು ಬಿಡುಗಡೆ ಮಾಡಿಕೊಟ್ಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ವಿಶೇಷ ಧನ್ಯವಾದ. “ವಾಮನ” ನಮ್ಮ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರ. ನಿರ್ದೇಶಕರು ಒಂದೊಳ್ಳೆ‌ ಚಿತ್ರ ಮಾಡಿಕೊಟ್ಟಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರು ನೋಡಿ.‌ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಚೇತನ್ ಗೌಡ.
ಸಹ ನಿರ್ಮಾಪಕಿ ರೂಪ ಚೇತನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ವಾಮನ” ತಾಯಿ – ಮಗನ‌ ಬಾಂಧವ್ಯದ ಕಥೆ. ಇದರೆ ಜೊತೆಗೆ ನೋಡುಗರಿಗೆ ಬೇಕಾದ‌ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರ ‌ಉತ್ತಮವಾಗಿ ಮೂಡಿ ಬರಲು ಇಡೀ ತಂಡದ ಸಹಕರವೇ ಕಾರಣ ಎಂದು ನಿರ್ದೇಶಕ ಶಂಕರ್ ರಾಮನ್ ತಿಳಿಸಿದರು.

ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಂದು ನಮ್ಮ‌ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಇಷ್ಟು ಜನ ಬಂದು ಹಾರೈಸಿದ್ದಾರೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಾಯಕಿ ರೀಷ್ಮಾ ನಾಣಯ್ಯ ಹೇಳಿದರು.

ಚಿತ್ರದಲ್ಲಿ ನಟಿಸಿರುವ ತಾರಾ ಅನುರಾಧ, ಬಹುಭಾಷಾ ನಟ ಸಂಪತ್ ರಾಜ್, ಚಿತ್ಕಲಾ ಬಿರಾದಾರ್, ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕಾಕ್ರೋಜ್ ಸುಧೀ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ ಹಾಗೂ ಗೀತರಚನೆಕಾರರಾದ ಡಾ||ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಗೂ ನೃತ್ಯ ನಿರ್ದೇಶಕ ಭೂಷಣ್ ಮುಂತಾದವರು “ವಾಮನ” ಚಿತ್ರದ ಕುರಿತು ಮಾತನಾಡಿದರು.
.

Categories
ಸಿನಿ ಸುದ್ದಿ

ʼಅಜ್ಞಾತವಾಸಿʼ ಹೊಸ ಹಾಡು ಬಂತು: ಸಿದ್ದು ಮೂಲಿಮನಿ ಥೈ ತಕ

ಅಜ್ಞಾತವಾಸಿ ಏಪ್ರಿಲ್‌ 11ರಂದು ತೆರೆಗೆ ಬರ್ತಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ. ಗುಲ್ಟು ಸೂತ್ರಧಾರ ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ಈ ಚಿತ್ರ ಈಗಾಗಲೇ ನಾನಾ ಆಂಗಲ್‌ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಟೀಸರ್‌, ಕಲರ್‌ ಫುಲ್‌ ಹಾಡುಗಳ ಮೂಲಕ ಚಿತ್ರತಂಡ ಸಿನಿಮಾಪ್ರೇಮಿಗಳಿಗೆ ಆಹ್ವಾನ ಕೊಟ್ಟಿದೆ. ಇದೀಗ ಅಜ್ಞಾತವಾಸಿ ಅಂಗಳದಿಂದ ಮತ್ತೊಂದು ಸೊಗಸಾದ ಗೀತೆ ಬಿಡುಗಡೆಯಾಗಿದೆ.

ನೂರು ಕನಸು ಕಾಣಲು ಎಂಬ ಹಾಡು ಸರಿಗಮ ಕನ್ನಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ ಧ್ವನಿಯಾಗಿದ್ದು, ಚರಣ್ ರಾಜ್ ಟ್ಯೂನ್ ಹಾಕಿರುವ ನೂರು ಕನಸನು ಕಾಣಲು ಹಾಡಿಗೆ ಸಿದ್ದು ಮೂಲಿಮನಿ ಹೆಜ್ಜೆ ಹಾಕಿದ್ದಾರೆ.

ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಜ್ಞಾತವಾಸಿಯಲ್ಲಿ ಪಾವನಾ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ಅವರು ಅಜ್ಞಾತವಾಸಿ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ.

ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ನಿರೀಕ್ಷೆ ಮನೆಮಾಡಿದೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಸಪ್ತ ಸಾಗರದಾಚೆ ಎಲ್ಲೋ ಸರಣಿ ಚಿತ್ರಗಳ ಸಾರಥಿ ಹೇಮಂತ್ ಎಂ ರಾವ್ ತಾಯಿ ನೆನಪಿನಲ್ಲಿ ಪ್ರಾರಂಭಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ಅಜ್ಞಾತವಾಸಿ ಚಿತ್ರ ನಿರ್ಮಾಣವಾಗಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಒಳ್ಳೇ ಹುಡುಗನ ಗುಡ್ ಸ್ಟೋರಿ ಬ್ಯಾಡ್ ಚಿತ್ರ!

ರೇಟಿಂಗ್: 3/5

ಚಿತ್ರ: ಬ್ಯಾಡ್
ನಿರ್ದೇಶನ: ಪಿ.ಸಿ.ಶೇಖರ್
ನಿರ್ಮಾಣ: ಎಸ್ .ಆರ್. ವೆಂಕಟೇಶ್ ಗೌಡ
ತಾರಾಗಣ: ನಕುಲ್ ಗೌಡ, ಮಾನ್ವಿತ ಹರೀಶ್, ಅಪೂರ್ವ ಭಾರಧ್ವಾಜ್, ಕಡ್ಡಿಪುಡಿ ಚಂದ್ರು ಸಾಯಿ ಕೃಷ್ಣ, ಅಶ್ವಿನಿ ,, ಮಂಜುನಾಥ್ ಕೊಕಟೆ ಇತರರು
.

ಅವನು ವೇದ. ಒಮ್ಮೊಮ್ಮೆ ಅವನು ಹೇಳಿದ್ದೇ ವೇದವಾಕ್ಯ. ಕಷ್ಟ ಅನಿಸಿದರೆ ಅವನು ಮಾಡೋಕ್ಕಾಗಲ್ಲ. ಆದರೆ ಅವನಿಗೆ ಯಾವುದೂ ಕಷ್ಟ ಅನಿಸಲ್ಲ. ಅವನು ಒಳ್ಳೆಯವನು. ಆದರೆ ಬ್ಯಾಡ್ ಬಾಯ್. ಇದಿಷ್ಟು ಹೇಳಿದ ಮೇಲೆ ‘ಬ್ಯಾಡ್’ ಸಿನಿಮಾದ ಕಥೆ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಕಥೆ ಅದ್ಭುತ ಅಲ್ಲ. ತೀರ ಸಿಂಪಲ್ ಸ್ಟೋರಿ. ನಿರ್ದೇಶಕರು ಇನ್ನಷ್ಟು ಗಂಭೀರವಾಗಿ ಆಲೋಚಿಸಿದ್ದರೆ ಬ್ಯಾಡ್ ಹೆಸರಿನ ಸಿನಿಮಾ ಇನ್ನೂ ಒಳ್ಳೇತನದಿಂದ ಕೂಡಿರುತ್ತಿತ್ತು. ಹಾಗಂತ ಇದೇನು ಬ್ಯಾಡ್ ಸಿನಿಮಾವೇನಲ್ಲ. ಒಂದು ಚಿಕ್ಕ, ಚೊಕ್ಕ ಮಾಸ್ ಸಿನಿಮಾ ಎನ್ನಬಹುದು.

ಇದೊಂದು ಗ್ರಾಮೀಣ ಸೊಗಡಿನ ಚಿತ್ರ. ಅತ್ತ ನಗರ ಚುತ್ರಣವೂ ಇದೆ. ಮೊದಲರ್ಧ ಕಥೆಯಲ್ಲಿ ಗೊಂದಲ ಎನಿಸುತ್ತದೆ. ದ್ವಿತಿಯಾರ್ಧ ಸಿನಿಮಾದ ವೇಗ ಮತ್ತು ಹಿಡಿತ ನೋಡಿಸಿಕೊಂಡು ಹೋಗುತ್ತೆ. ಆದರೂ ಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳ ಹಾವಳಿ. ಇರುವ ಕಥೆಯನ್ನೇ ಮತ್ತಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಬಹುದಿತ್ತು. ಸಿನಿಮಾ ನೋಡುವಾಗ ಅಲ್ಲಲ್ಲಿ ಬರುವ ಫ್ರೇಮ್ ನಲ್ಲ ಕಾಂಪ್ರಮೈಸ್ ಮಾಡಿಕೊಂಡಂತಿದೆ. ಕೊನೆಯ ಇಪ್ಪತ್ತು ನಿಮಿಷ ಮಾತ್ರ ಬ್ಯಾಡ್ ಸಿನಿಮಾ ಗಟ್ಟಿಯಾಗಿ ಕೂರಿಸುತ್ತೆ.

ನಿರ್ದೇಶಕರು ಏನು ಹೇಳಬೇಕು ಅಂತ ಹೊರಟಿದ್ದಾರೋ ಅದು ಕೆಲವೆಡೆ ಗೊಂದಲ ಅನಿಸುತ್ತೆ. ಅದು ಬಿಟ್ಟರೆ ಉಳಿದಂತೆ ಸಿನಿಮಾ ನೋಡಲು ಅಡ್ಡಿಯಿಲ್ಲ.

ಆರಂಭದಿಂದಲೂ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಹಾಡು ಮತ್ತು ಫೈಟು ವೇಗದ ಟ್ರ್ಯಾಕ್ ಗೆ ಕರೆದುಕೊಂಡು ಬರುತ್ತೆ. ಸಿನಿಮಾದಲ್ಲಿ ಪ್ಲಸ್ ಮತ್ತು ಮೈನಸ್ ಎರಡೂ ಇದೆ. ಮೈನಸ್ ಪಕ್ಕಕ್ಕಿಟ್ಟು ನೋಡುವುದಾದರೆ ಬ್ಯಾಡ್ ಇಷ್ಟವಾಗುತ್ತೆ.

ಕಥೆ ಏನು?

ವೇದ ಪಕ್ಕಾ ಮಾಸ್. ಹಣ ಕೊಟ್ಟರೆ ಏನ್ ಬೇಕಾದ್ರೂ ಮಾಡ್ತಾನೆ. ಕೆಟ್ಟವರ ಪಾಲಿಗೆ ಅವನು ಪೊರ್ಕಿ. ಡೀಲ್ ಪಡೆದು ಕೆಲಸ ಮಾಡೋದೇ ಅವನ ಕಾಯಕ. ಒಂದು ಡೀಲ್ ಇಡೀ ಸಿನಿಮಾ ಮುಗಿಯೋ ತನಕ ಆಗುತ್ತೆ. ಅಲ್ಲೊಂದಷ್ಟು ಟ್ವಿಸ್ಟು ಟೆಸ್ಟುಗಳಿವೆ.

ಇಡೀ ಸಿನಿಮಾದ ಅರ್ಧ ಕಥೆ ಒಂದು ಪಾಳು ಬಿದ್ದ ಮನೇಲಿ ನಡೆಯುತ್ತೆ. ಶಾಸಕನೊಬ್ಬನ ಮಗಳು, ಅವಳ ಪ್ರಿಯಕರ, ಮತ್ತಿಬ್ಬರನ್ನು ಕೂಡಿ ಹಾಕಿ ಒಬ್ಬೊಬ್ಬರನ್ನೇ ಸತಾಯಿಸುವ ನಾಯಕ ಅವರನ್ನು ಯಾಕೆ ಕಿಡ್ನಾಪ್ ಮಾಡ್ತಾನೆ? ಆ ಡೀಲ್ ಕೊಟ್ಟವರು ಯಾರು? ಯಾಕೆ ಅನ್ನೋದೇ ಸಸ್ಪೆನ್ಸ್. ಆ ಕುತೂಹಲ ಇದ್ದರೆ ಬ್ಯಾಡ್ ನೋಡಲ್ಲಡ್ಡಿಯಿಲ್ಲ.

ಸಿನಿಮಾದಲ್ಲಿ ಕೆಲವು ಟ್ವಿಸ್ಟ್ ಗಳು ಇಂಟ್ರೆಸ್ಟಿಂಗ್ ಎನಿಸುತ್ತವೆ. ಒಂದು ಕೊಲೆ ನಡೆಯುತ್ತೆ. ಶಾಸಕನ ಮಗಳು ಮಾಡಿದ್ದೇನು? ಮಣಿ ಶರ್ಮ ಯಾರು? ನಾಗ ಅನ್ನುವವನ ವ್ಯಥೆ ಏನು ಎಂಬ ಪ್ರೆಶ್ನೆ ಸಿನಿಮಾದುದ್ದಕ್ಕೂ ಕಾಡುತ್ತೆ. ಉತ್ತರ ಬೇಕಿದ್ದರೆ ಸಿನಿಮಾ ನೋಡಬಹುದು.

ಯಾರು ಹೇಗೆ?

ನಕುಲ್ ಗೌಡ ಅವರ ಆ ಪಾತ್ರಕ್ಕೆ ಇನ್ನಷ್ಟು ತಯಾರಿ ಬೇಕಿತ್ತು ಅಬಿಸುತ್ತೆ. ಡೈಲಾಗ್ ಡಿಲವರಿ ಬಗ್ಗೆಯೂ ಅವರು ಗಮನ ಕೊಡಬೇಕು. ಉಳಿದಂತೆ ಹಾಡು ಫೈಟಲ್ಲಿ ಓಕೆ.

ಮಾನ್ವಿತಾ ಹರೀಶ್ ಇರುವಷ್ಟು ಕಾಲ ಇಷ್ಟ ಆಗ್ತಾರೆ. ಅವರಿಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಯಿ ಕೃಷ್ಣ, ಕಡ್ಡಿಪುಡಿ ಚಂದ್ರು, ಅಶ್ವಿನಿ, ಮಂಜು ಇತರರು ಗಮನ ಸೆಳೆಯುತ್ತಾರೆ.

ಇದು ಅರ್ಜುನ್ ಜನ್ಯ ಸಂಗೀತದ ಚಿತ್ರ. ಮೂರು ಹಾಡಿದ್ದರೂ ಜನ್ಯ ಅವರ ಛಾಯೆ ಎಲ್ಲೂ ಇಲ್ಲ. ಹಿನ್ನೆಲೆ ಸಂಗೀತ ಕೂಡ ಬ್ಯಾಡ್ ಆಗಿದೆ. ಡಿ. ಶಕ್ತಿ ಶೇಖರ್ ಛಾಯಾಗ್ರಹಣ ಅಷ್ಟೇನೂ ಬ್ಯಾಡ್ ಅನಿಸಿಲ್ಲ. ಇನ್ನು ಸಿನಿಮಾದ ಸಂಕಲನ ಕೂಡ ಚಿತ್ರದ ವೇಗ ಮಿತಿಗೆ ಕಾರಣವಾಗಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಕಡಲೊಳು ಮೂವರ ಪ್ರೇಮಾಯಣ

ರೇಟಿಂಗ್: 3.5/5

ಚಿತ್ರ: ಮನದ ಕಡಲು
ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಪಕ: ಈ. ಕೃಷ್ಣಪ್ಪ
ತಾರಾಗಣ: ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಇತರರು.

ಹುಡುಗಿಯರು ಗೊತ್ತಾಗಲ್ಲ. ಐ ಮೀನ್ ಅರ್ಥ ಆಗಲ್ಲ… ‘ ಸಿನಿಮಾದ ನಾಯಕ ಸುಮುಖ ಆ ಹುಡುಗಿಯ ಮುಂದೆ ಹೀಗೆ ಹೇಳುವ ಹೊತ್ತಿಗೆ, ಅವನು ಒಬ್ಬಳನ್ನು ಲವ್ ಮಾಡೋಕೆ ಶುರು ಮಾಡಿರುತ್ತಾನೆ. ಮತ್ತೊಬ್ಬಳು ಅವನನ್ನು ಇಷ್ಟ ಪಡೋಕೆ ಶುರು ಮಾಡಿರುತ್ತಾಳೆ. ಹಾಗಂತ ಇದು ತ್ರಿಕೋನ ಪ್ರೇಮ ಕಥೆಯಲ್ಲ. ಭಟ್ಟರ ಎಂದಿನ ಮಾತಿನ ಶೈಲಿಯ ಸಿನಿಮಾ ಇದು. ಅಲ್ಲಲ್ಲಿ ಬರುವ ಕಚಗುಳಿ ಮಾತು, ತುಂಟಾಟ, ಹುಚ್ಚಾಟ, ತಿಕ್ಕಲುತನ ಎಲ್ಲವೂ ಇಲ್ಲಿ ಮೇಳೈಸಿದೆ. ಆ ಕಾರಣಕ್ಕೆ ಕಡಲು ಮನತಟ್ಟುತ್ತೆ.

ಇಡೀ ಸಿನಿಮಾ ಆಹ್ಲಾದಕರ ಎನಿಸುತ್ತಾದರೂ ಅಲ್ಲಲ್ಲಿ ಕಡಲ್ಕೊರೆತವೂ ಇದೆ. ಅದು ಮಾತಿನ ಕೊರೆತ. ಆಗಾಗ ಅರಗಿಸಿಕೊಳ್ಳುವ ಅನಿವಾರ್ಯತೆ ಬರುತ್ತೆ. ಹೊರತುಪಡಿಸಿದರೆ ಇದೊಂದು ಆಪ್ತವೆನಿಸೋ ಚಿತ್ರ. ತೆರೆ ಮೇಲೆ ಪಾತ್ರಗಳು ಸುರಿಯೋ ಮಳೆಗೆ ಮೈಯೊಡ್ಡಿದರೆ, ನೋಡುಗರು ಕಣ್ಣು ಒದ್ದೆಯಾಗಿಸಿಕೊಂಡು ಹೊರಬರುವಷ್ಟು ವಿಷಯವಿದೆ.

ಸಿನಿಮಾದ ಮೊದಲರ್ಧ ಜಾಲಿ ಜಾಲಿ. ದ್ವಿತಿಯಾರ್ಧ ಕೊಂಚ ಭಾವುಕತೆಗೆ ದೂಡುತ್ತೆ. ಸಿನಿಮಾದಲ್ಲಿ ಪ್ಲಸ್ಸು – ಮೈನಸ್ಸು ಎರಡೂ ಇವೆ. ಒಂದೊಳ್ಳೆಯ ಸಂದೇಶವೂ ಇದೆ. ಕೆಲವು ಕಡೆ ಕಂಟಿನ್ಯುಟಿ ಮಿಸ್ಟೇಕ್ಸ್ ಕೂಡ ಎದ್ದು ಕಾಣುತ್ತೆ. ಇನ್ನು ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತೆ. ಆದರೆ, ಚಿತ್ರದ ಅವಧಿ ಕೊಂಚ ಕಡಿಮೆ ಆಗಿದ್ದರೆ, ಮನಸ್ಸಿಗೆ ಭಟ್ಟರ ಕಡಲು ಇನ್ನಷ್ಟು ಹತ್ತಿರವಾಗುತ್ತಿತ್ತು. ಆದರೂ ಒಂದೊಮ್ಮೆ ನೋಡಿ ಖುಷಿಪಡಲು ಅಡ್ಡಿ ಇಲ್ಲ.

ಸಿನಿಮಾ ಲ್ಯಾಗ್ ಆಯ್ತು ಅನ್ನುವುದು ಬಿಟ್ಟರೆ , ಭಟ್ಟರು ಯುವ ಮನಸ್ಸನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಹಳೆಯ ಟ್ರ್ಯಾಕ್ ಬದಿಗೊತ್ತಿ ಹೊಸದೇನನ್ನೋ ಹೇಳಿದ್ದಾರೆ ಅನ್ನುವ ಭ್ರಮೆ ಬಿಟ್ಟು ಸಿನಿಮಾ ನೋಡಬೇಕು. ಎಲ್ಲೂ ಬೋರ್ ಅನಿಸಲ್ಲ. ಕೆಲವು ಕಡೆ ಕೆಲ ಮಾತುಗಳು, ದೃಶ್ಯಗಳು ಅನಗತ್ಯ ಅನಿಸುತ್ತವೆ. ಉಳಿದಂತೆ ಕಡಲ ಕಿನಾರೆಯೊಳಗಿನ ಚಿತ್ರಣ ಖುಷಿ ಕೊಡುತ್ತೆ.

ಕಥೆ ಏನು?

ನಾಯಕ ಸುಮುಖ ಅಪ್ಪ ಅಮ್ಮನಿಗೆ ಒಬ್ಬನೇ ಮಗ. ಅಪ್ಪ ಡಾಕ್ಟರ್ ಅಮ್ಮ ಟೀಚರ್. ಸುಮುಖ ಮೆಡಿಕಲ್ ಸ್ಟುಡೆಂಟ್. ಮೂರನೇ ವರ್ಷ ಓದಿದ ನಂತರ ಮೆಡಿಕಲ್ ಓದೋದೇ ಬೇಡ ಅಂತ ನಿರ್ಧರಿಸ್ತಾನೆ. ಅದಕ್ಕೊಂದು ಬಲವಾದ ಕಾರಣವೂ ಇದೆ. ಮೆಡಿಕಲ್ ಕಾಲೇಜ್ ಬಿಟ್ಟು, ಹೊರ ಬರುವ ಸುಮುಖನಿಗೆ ಕ್ರಿಕೆಟ್ ಪ್ಲೇಯರ್ ರಾಶಿಕಾ ದರ್ಶನವಾಗುತ್ತೆ. ಮೊದಲ‌ ನೋಟಕ್ಕೆ ಲವ್ ಶುರು. ಅಲ್ಲಿಂದ ಪ್ರೀತಿ ಮಾಡುವಂತೆ ದುಂಬಾಲು. ನಂತರ ಆರು ತಿಂಗಳು ಆಕೆ ಮಾಯ. ಆಮೇಲೆ ಸಿಗ್ತಾಳಾ? ಇದು ಟ್ವಿಸ್ಟು.

ಇಲ್ಲಿ ಅಂಜಲಿ ಅನ್ನುವ ಮತ್ತೊಬ್ಬ ನಾಯಕಿ ಇದ್ದಾಳೆ. ಅವಳಿಗೆ ಸುಮುಖನ ಮೇಲೆ ಪ್ರೀತಿ. ಸುಮುಖನಿಗೆ ರಾಶಿಕಾ ಮೇಲೆ ಪ್ರೀತಿ. ಇಬ್ಬರ ಜೊತೆಗೂ ಇರುವ ಸುಮುಖ ಕೊನೆಗೆ ಯಾರನ್ನು ಕೈ ಹಿಡಿತಾನೆ ಎಂಬುದು ಕಥೆ. ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಯಾರು ಹೇಗೆ?

ಸುಮುಖ ಪಾತ್ರಕ್ಕೆ ಜೀವ ತುಂಬಿದ್ದಾನೆ. ಅವರ ನಟನೆಯಲ್ಲಿ ಲವಲವಿಕೆ ಇದೆ. ಪ್ರತಿ ದೃಶ್ಯದಲ್ಲೂ ಲೀಲಾಜಾಲ. ಸಣ್ಣಪುಟ್ಟ ಮಿಸ್ಟೇಕ್ಸ್ ತಿದ್ದಿಕೊಂಡರೆ ಕನ್ನಡಕ್ಕೊಬ್ಬ ಹೀರೋ ಆಗಿ ನಿಲ್ಲುವ ಲಕ್ಷಣಗಳಿವೆ. ರಾಶಿಕಾ ಮತ್ತು ಅಂಜಲಿ ಇಬ್ಬರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಇಬ್ಬರಿಗೂ ಸಮಪಾತ್ರ. ಅದನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಸ್ವಲ್ಪ ಬೋಲ್ಡ್ ಮಾತುಗಳು ಹೆಚ್ಚಾದವು ಅನ್ನೋದು ಬಿಟ್ಟರೆ ನಟನೆ ಓಕೆ. ರಂಗಾಯಣ ರಘು ಅವರಿಗಿಲ್ಲಿ ವಿಶೇಷ ಪಾತ್ರವಿದೆ. ಅವರ ಶೈಲಿಯ ಮಾತಿಗೆ ಅವಕಾಶವಿಲ್ಲ. ದತ್ತಣ್ಣ ಇಲ್ಲೊಂದು ಗಮನ ಸೆಳೆಯೋ ಪಾತ್ರದಲ್ಲಿ ಇಷ್ಟ ಆಗುತ್ತಾರೆ. ಉಳಿದಂತೆ ಶಿವಧ್ವಜ್ ಇತರರು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇಲ್ಲಿ ಮುಖ್ಯವಾಗಿ ಗಮನ ಸೆಳೆಯೋದು ಸಂತೋಷ್ ರೈ ಪಾತಾಜೆ ಅವರ ಕ್ಯಾಮರಾ ಕೆಲಸ. ಅದ್ಭುತವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಒಂದಷ್ಟು ಶಾಟ್ಸ್ ನೋಡಲೇಬೇಕು. ಇನ್ನು ಸಂಗೀತದ ಎರಡು ಹಾಡು ಓಕೆ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಸ್ವಾದ ಬೇಕಿತ್ತು. ಹರಿಕೃಷ್ಣ ಹಾಡುವ ಬದಲು ಬೇರೆ ಗಾಯಕರಿಗೆ ಅವಕಾಶ ಕೊಟ್ಟಿದ್ದರೆ ಇನ್ನೂಂದು ಹಾಡು ಕೇಳುವಂತಿರುತ್ತಿತ್ತು.

ಕೊನೇಮಾತು: ಇಲ್ಲಿ ಕಥೆ ಬಗ್ಗೆ ಹೇಳುವುದಕ್ಕಿಂತ ಒಂದೊಳ್ಳೆಯ ಸಂದೇಶವಿದೆ. ಸಾವು ಮುಖ್ಯ ಅಲ್ಲ. ಬದುಕೋದನ್ನ ಕಲೀರಿ . ಬದುಕೇ‌ ಜೀವನ ಎನ್ನುವುದು ಭಟ್ಟರ ವೇದಾಂತ.

Categories
ಸಿನಿ ಸುದ್ದಿ

ಸೆಲಿಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1 ಟ್ರೋಫಿ, ಲೋಗೋ ಅನಾವರಣ

STellar studio & event management ಸಂಸ್ಥೆ‌,‌ PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಅವರು ಆಯೋಜಿಸುತ್ತಿರುವ “CSBL” “ಸೆಲಿಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1” ಉದ್ಘಾಟನಾ ಹಾಗೂ‌ ಲೋಗೊ ಲಾಂಚ್ ಸಮಾರಂಭ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ “CSBL” ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು‌.‌

ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ 50 ನೇ ಹುಟ್ಟುಹಬ್ಬವನ್ನು ಸಹ ಅದ್ದೂರಿಯಾಗಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಶರವಣ(ಸಾಯಿ ಗೋಲ್ಡ್ ಪ್ಯಾಲೆಸ್), ನಟ ಅನಿರುದ್ಧ್ ಜತ್ಕರ್, ನಟಿ ರಾಗಿಣಿ ದ್ವಿವೇದಿ, ಸಾ.ರಾ.ಗೋವಿಂದು, ಪತ್ರಕರ್ತ ಸದಾಶಿವ ಶೆಣೈ ಮುಂತಾದವರು ಸಮಾರಂಭಕ್ಕೆ ಆಗಮಿಸಿ “CSBL” ಯಶಸ್ವಿಯಾಗಲೆಂದು ಹಾರೈಸಿದರು. ವರ್ಣರಂಜಿತ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರದ ಹಾಡುಗಳಿಗೆ ಹೆಸರಾಂತ ನೃತ್ಯ ತಂಡದವರು ಹೆಜ್ಜೆ ಹಾಕಿದರು.

“CSBL” ಕುರಿತು ಮಾಹಿತಿ ನೀಡಿದ ಆಯೋಜಕರಲ್ಲಿ ಒಬ್ಬರಾದ ಚೇತನ್ ಸೂರ್ಯ, ನಾವು ಎರಡು ವರ್ಷಗಳ ಕಾಲ “ಅಪ್ಪು ಕಪ್” ಎಂಬ ಹೆಸರಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸುತ್ತಾ ಬಂದಿದ್ದೇವೆ. ಆಗಿನಿಂದಲೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಶರವಣ ಅವರ ಸಹಕಾರವೂ ಆಗಿನಿಂದಲೂ ಇದೆ.‌ ಇನ್ನೂ ಈ ಬಾರಿ ಇಂಟರ್ ಸ್ಟೇಟ್ ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್‌ ಆಯೋಜಿಸಲಾಗಿದೆ.

ಕರ್ನಾಟಕ,‌ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳ ನಾಲ್ಕು ರಾಜ್ಯಗಳ ಸೆಲೆಬ್ರಿಟಿಗಳು ಈ ಲೀಗ್ ನಲ್ಲಿ‌ ಆಡಲಿದ್ದಾರೆ. ಮುಂದಿನ ಬಾರಿ ಇನ್ನೂ ಹೆಚ್ಚಿನ ರಾಜ್ಯಗಳು ಸೇರ್ಪಡೆಯಾಗಲಿದೆ. “ಕರ್ನಾಟಕ ವಾರಿಯರ್ಸ್”, “ಚೆನೈ ಸೂಪರ್ ಸ್ಟಾರ್ಸ್”, ” ಕೇರಳ ರಾಕರ್ಸ್” ಹಾಗೂ “ತೆಲುಗು ಫೈಟರ್ಸ್” ಎಂಬ ನಾಲ್ಕು ತಂಡಗಳಿದೆ‌.‌ ನನ್ನ ಜೊತೆಗೆ ಅರ್ಜುನ್ ಹಾಗೂ ಪಾರಿತೋಷ್ ಅವರು ಈ ಬಾರಿ ಕೈಜೋಡಿಸಿದ್ದು, ಜೂನ್ ತಿಂಗಳಲ್ಲಿ ಅದ್ದೂರಿಯಾಗಿ “CSBL” ನಡೆಯಲಿದೆ ಎಂದರು.

“ಕರ್ನಾಟಕ ವಾರಿಯರ್ಸ್” ತಂಡದ ನಟರಾದ ಪ್ರಮೋದ್ ಶೆಟ್ಟಿ, ರವಿ ಚೇತನ್,‌ ಮನೋರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ರವಿಚಂದ್ರನ್, “ಚೆನೈ ಸೂಪರ್ ಸ್ಟಾರ್ಸ್” ತಂಡದ ಶಿವಕುಮಾರ್(ಕೌಂಟಿ ಕ್ರಿಕೇಟರ್), ವಿಕ್ರಾಂತ್(ನಟ ಹಾಗೂ ಸಿ.ಸಿ.ಎಲ್ ಕ್ಯಾಪ್ಟನ್), ಭರತ್(ನಟ), ಬಿ.ಆರ್.ಕೃಷ್ಣ (ಹಿನ್ನೆಲೆ ಗಾಯಕ),‌ “ತೆಲುಗು ಫೈಟರ್ಸ್” ತಂಡದ ಶರತ್, ನಿತೀಶ್ ಹಾಗೂ “ಕೇರಳ ರಾಕರ್ಸ್” ತಂಡದ ಮಂಜುನಾಥ್ (ನಿರ್ಮಾಪಕ), ನಟರಾದ ಸಂತೋಷ್ ಹಾಗೂ ರಾಜೀವ್ ಪಿಳ್ಳೈ ಮುಂತಾದ ಸೆಲೆಬ್ರಿಟಿ ಆಟಗಾರರು “CSBL” ಲೋಗೊ ಹಾಗೂ ಟ್ರೋಫಿ ಅನಾವರಣದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಇದು ಹೆಣ್ಮಕ್ಳ ಕಬ್ಬಡ್ಡಿ ಗುರು: ಏಪ್ರಿಲ್ 5 ಕ್ಕೆ CWKL ಶುರು

ನವರಸನ್ ನೇತೃತ್ವದ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಗೆ ಚಂದನ್ ಶೆಟ್ಟಿ ಅವರು ಚಂದದ ಥೀಮ್ ಸಾಂಗ್ ಬರೆದಿದ್ದಾರೆ.

ನಿರ್ಮಾಪಕ, ನಿರ್ದೇಶಕ, ನಟ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೂ‌ ಪಾದಾರ್ಪಣೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಳೆದ ಕೆಲವು ದಿನಗಳ ಹಿಂದೆ “CWKL” ಲೋಗೊ ಅನಾವರಣವನ್ನು ನವರಸನ್ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು. ಪ್ರಸ್ತುತ ಹೆಸರಾಂತ ಗಾಯಕ, ನಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು “CWKL” ಗಾಗಿ “ಕಬ್ಬಡಿ ಕಬ್ಬಡಿ” ಎಂಬ ಚಂದದ ಥೀಮ್ ಸಾಂಗ್ ಬರೆದು ಸಂಗೀತ ಸಂಯೋಜಿಸಿದ್ದಾರೆ.

ಇದೇ ಸಂದರ್ಭದಲ್ಲಿ “CWKL” ಪಂದ್ಯಗಳು ನಡೆಯುವ ದಿನಾಂಕಗಳನ್ನು ಸಹ ತಿಳಿಸಲಾಯಿತು. ವಿಧಾನ ಪರಷತ್ ಸದಸ್ಯರು ಹಾಗೂ‌ ಸಾಯಿಗೋಲ್ಡ್ ಸಂಸ್ಥೆಯ ಮಾಲೀಕರಾದ ಶರವಣ ಅವರು ಪಂದ್ಯಗಳು ನಡೆಯುವ ದಿನಾಂಕಗಳ ಬಗ್ಗೆ ತಿಳಿಸಿ, “CWKL” ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಏಪ್ರಿಲ್ 5 ಹಾಗೂ 6 “CWKL” ನ ಪಂದ್ಯಗಳು ನಡೆಯಲಿದೆ. ಥೀಮ್ ಸಾಂಗ್ ಅನ್ನು ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿದರು.

“CWKL” ತಂಡಗಳ ಮಾಲೀಕರಾದ ಸಾಯಿಗೋಲ್ಡ್ ಪ್ಯಾಲೆಸ್ ನ ಶರವಣ,‌ “ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ,‌ ನಿರ್ಮಾಪಕ ಸುರೇಶ್ ಗೌಡ, ನಿರ್ಮಾಪಕ ರಾಜೇಶ್ ಗೌಡ, ನಿರ್ಮಾಪಕ ಗೋವಿಂದರಾಜು ಹಾಗೂ ಗಜೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಲೀಗ್ ನಲ್ಲಿ ಏಳು ತಂಡಗಳಿದ್ದು, ಏಳೂ ತಂಡಗಳ ನಾಯಕಿಯರು ಹಾಗೂ ಆಟಗಾರರು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಾಡು ಬಿಡುಗಡೆ ನಂತರ ಆಯೋಜಕರಾದ ನವರಸನ್ ಮಾತನಾಡಿದರು.

ಕಳೆದ ಕೆಲವು ದಿನಗಳ ಹಿಂದಷ್ಟೇ “CWKL” ಲೋಗೊ ಅನಾವರಣ ಮಾಡುವ ಮೂಲಕ ಅದ್ದೂರಿ ಚಾಲನೆ ನೀಡಲಾಗಿತ್ತು. ಈಗಂತೂ ಎಲ್ಲೆಲ್ಲೂ ನಮ್ಮ “CWKL” ದೇ ಮಾತು. ನಾನು ಇತ್ತೀಚೆಗೆ ಬೇರೆ ಭಾಷೆಗಳ ಸಿನಿಮಾ ಇವೆಂಟ್ ಗಳಿಗೆ ಹೋದಾಗಲೂ ಅಲ್ಲಿನ ಸೆಲೆಬ್ರಿಟಿಗಳು ಹಾಗೂ ನಮ್ಮ ಕನ್ನಡದ ಸೆಲೆಬ್ರಿಟಿಗಳು “CWKL” ಬಗ್ಗೆ ಮೆಚ್ಚುಗೆ ಮಾತುಗಳಾಡಿದ್ದು ನನಗೆ ಬಹಳ ಖುಷಿಯಾಗಿದೆ. ಈ ಲೀಗ್ ಗಾಗಿ ಒಂದು ಹಾಡನ್ನು ಬರೆದು ಸಂಗೀತ ಸಂಯೋಜಿಸಿ ಕೊಡಿ ಎಂದು ಚಂದನ್ ಶೆಟ್ಟಿ ಅವರನ್ನು ಕೇಳಿದಾಗ ಅದ್ಭುತವಾದ ಥೀಮ್ ಸಾಂಗ್ ಬರೆದುಕೊಟ್ಟಿದ್ದಾರೆ.

ಚಂದನ್ ಶೆಟ್ಟಿ ಅವರ ತಮ್ಮ ಪುನೀತ್ ಈಗಿನ AI ತಂತ್ರಜ್ಞಾನದ ಮೂಲಕ ಈ ಹಾಡನ್ನು ಸಿದ್ದ ಮಾಡಿಕೊಟ್ಟಿದ್ದಾರೆ. ನಮ್ಮ “CWKL” ನ ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಥೀಮ್ ಸಾಂಗ್ ಅನ್ನು ಬಳಸಿಕೊಳ್ಳಲಾಗುವುದು. ನಮ್ಮ ತಂಡಗಳ ಮಾಲೀಕರಾದ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ,‌ “ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ, ಸುರೇಶ್ ಗೌಡ, ರಾಜೇಶ್ ಗೌಡ, ಎ.ವಿ.ಅರ್ ಫಿಲಂಸ್ ನ ವೆಂಕಟೇಶ್ ರೆಡ್ಡಿ,

ಗಜೇಂದ್ರ ಹಾಗೂ ಗೋವಿಂದರಾಜು ಅವರಿಗೆ, ನನಗೆ ಬೆನ್ನೆಲುಬಾಗಿ ನಿಂತಿರುವ ನನ್ನ ತಂಡಕ್ಕೆ ಹಾಗೂ ಈ ಲೀಗ್ ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸೆಲೆಬ್ರಿಟಿ ನಟಿಯರಿಗೆ ನನ್ನ ಧನ್ಯವಾದ ಎಂದು ತಿಳಿಸಿದ ನವರಸನ್, ಏಪ್ರಿಲ್ 5 ಹಾಗೂ 6 ನಮ್ಮ “CWKL” ನ ಪಂದ್ಯಗಳು ಅದ್ದೂರಿಯಾಗಿ ನಡೆಯಲಿದೆ ಎಂದರು.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್: ಎಲ್ 2 ಎಂಪುರಾನ್ ಭರ್ಜರಿ ಪ್ರಚಾರ

ಮಾಲಿವುಡ್ ಬಹುನಿರೀಕ್ಷಿತ ಸಿನಿಮಾ ‘ಎಲ್ 2 ಎಂಪುರಾನ್’ ಇಂದು ತೆರೆಗೆ ಬಂದಿದೆ. ಈಗಾಗಲೇ ನಾನಾ ರಾಜ್ಯದಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡಿರುವ ಚಿತ್ರತಂಡ ಇಂದು ಬೆಂಗಳೂರಿನಲ್ಲಿ ಪ್ರಚಾರ ನಡೆಸಿದೆ. ನಗರದ ಓರಿಯಾನ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್, ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್, ನಟಿ ಮಂಜು ವಾರಿಯರ್, ನಟ ಟೊವಿನೋ ಥಾಮಸ್ ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿರುವ ‘ಎಲ್-2:ಎಂಪುರಾನ್’ ಇಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಲೂಸಿಫರ್ ಸೀಕ್ವೆಲ್ ಆಗಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕೆ ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಸಾಥ್ ನೀಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗಂದೂರ್ ‘ಎಲ್-2:ಎಂಪುರಾನ್’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

L2E: ಎಂಪುರಾನ್ ಚಿತ್ರಕ್ಕೆ ಕಥೆ ಮುರಳಿ ಗೋಪಿ ಬರೆದಿದ್ದಾರೆ, ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸುಜಿತ್ ವಾಸುದೇವ್ ಅವರ ಛಾಯಾಗ್ರಹಣವಿದೆ. ಸುರೇಶ್ ಬಾಲಾಜೆ ಮತ್ತು ಜಾರ್ಜ್ ಪಯಸ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಮೋಹನ್ದಾಸ್ ಕಲಾ ನಿರ್ದೇಶಕರಾಗಿ ದುಡಿದ್ದಾರೆ. 2019ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ಲೂಸಿಫರ್ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಲೂಸಿಫರ್ ಪಾರ್ಟ್ 2 ಸಿನಿಮಾವನ್ನು ನಿರ್ಮಾಪಕ ಸುಭಾಷ್ಕರ್ ಹಾಗೂ ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದಲ್ಲಿ ಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಇನ್ ದಿ ನೈಟ್’ ಫೈರ್ ಫ್ಲೈ ಮೆಲೋಡಿ ಹಾಡು ರಿಲೀಸ್

ಫೈರ್ ಫ್ಲೈ’ ಸಿನಿಮಾದ ಮೊದಲ ಹಾಡು ರಿಲೀಸ್…ಇನ್ ದಿ‌ ನೈಟ್ ಎನ್ನುತ್ತಾ ಹೆಜ್ಜೆ ಹಾಕಿದ ವಂಶಿ-ರಚನಾ

ಶ್ರೀ ಮುತ್ತು ಸಿನಿ ಸರ್ವೀಸಸ್ ಅಂಡ್ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಫೈರ್ ಫ್ಲೈ ಈಗಾಗಲೇ ನಾನಾ ವಿಷಯಗಳಿಂದ ಸುದ್ದಿಯಲ್ಲಿದೆ. ಪೋಸ್ಟರ್, ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಇನ್ ದಿ ನೈಟ್ ಎಂಬ ಮೆಲೋಡಿ ಗೀತೆಯನ್ನು ಅನಾವರಣ ಮಾಡಲಾಗಿದೆ. ಧನಂಜಯ್ ರಂಜನ್ ಸಾಹಿತ್ಯ ಬರೆದಿರುವ ಗೀತೆಗ ಸಾಹಿತ್ಯ ಬರೆದಿದ್ದು, ಕಪಿಲ್ ಕಪಿಲನ್ ಧ್ವನಿಯಾಗಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ ದಿ ನೈಟ್ ಎನ್ನುತ್ತಾ ವಂಶಿ ಹಾಗೂ ರಚನಾ ಹೆಜ್ಜೆ ಹಾಕಿದ್ದಾರೆ.

ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಹೀರೋ ಜೊತೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಉಳಿದಂತೆ, ಅಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಳಾ ಬಿರಾದರ್, ಮೂಗು ಸುರೇಶ್ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಅವರು ಸಂಗೀತ ನೀಡಿದ್ದಾರೆ. ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಕ್ಕಿದೆ. ಅಭಿಲಾಷ್ ಕಳತ್ತಿ ಕ್ಯಾಮೆರಾ ಚಿತ್ರಕ್ಕಿದೆ. ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದೇ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ ತೆರೆಕಾಣುತ್ತಿದೆ.

Categories
ಸಿನಿ ಸುದ್ದಿ

ಮನದ ಕಡಲು ಜನ ಕಾಯುತ್ತಿರಲು!

.

ಇ.ಕೆ.ಎಂಟರ್ ಟೈನರ್ಸ್ ಲಾಂಛನದಲ್ಲಿ ಇ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ “ಮನದ ಕಡಲು” ಚಿತ್ರ ಈ ವಾರ ರಾಜ್ಯಾದ್ಯಂತ (ಮಾರ್ಚ್ 28) ಬಿಡುಗಡೆಯಾಗುತ್ತಿದೆ.

ಜಿ.ಗಂಗಾಧರ್ ಅವರ ಸಹ ನಿರ್ಮಾಣ ಹಾಗೂ ಪ್ರತಾಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರ ಈಗಾಗಲೇ ಟೀಸರ್,‌ ಟ್ರೇಲರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ನಾಯಕನಾಗಿ ಸುಮುಖ ಅಭಿನಯಿಸಿದ್ದಾರೆ. ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ನಟಿಸಿದ್ದಾರೆ. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ‌ ನಿರ್ದೇಶನ, ವಿನೋದ್ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮತ್ತು ಮುರಳಿ, ಕಂಬಿ ರಾಜು , ಗೀತಾ ಸಾಯಿ ಅವರ ನೃತ್ಯ ನಿರ್ದೇಶನವಿರುವ “ಮನದ ಕಡಲು” ಚಿತ್ರಕ್ಕೆ ಯೋಗರಾಜ್ ಭಟ್, ಗಡ್ಡ ವಿಜಿ ಹಾಗೂ ಅಮೋಲ್ ಪಾಟೀಲ್ ಚಿತ್ರಕಥೆ ಬರೆದಿದ್ದಾರೆ.
.

Categories
ಸಿನಿ ಸುದ್ದಿ

ರಾಜಸ್ಥಾನದಲ್ಲಿ ಡೆವಿಲ್

ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಬಿರುಸಿನಿಂದ ಸಾಗಿದೆ. ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚನ ರೈ, ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ “ದಿ ಡೆವಿಲ್” ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ.

ದರ್ಶನ್ ಅವರಿಗೆ ನಾಯಕಿಯಾಗಿ ರಚನ ರೈ ಅಭಿನಯಿಸುತ್ತಿದ್ದಾರೆ. ತುಳಸಿ,‌ ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು , ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!