Categories
ಸಿನಿ ಸುದ್ದಿ

ಮತೀನ್ ಹುಸೇನ್ ಈಗ ‌ರೋಡ್ ಕಿಂಗ್! ಇದು ಹಾಲಿವುಡ್ ನಿರ್ದೇಶಕನ ಕನ್ನಡ ಸಿನಿಮಾ…

ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತವೆ. ಆದರೆ ಈ ಬಾರಿ ವಿಭಿನ್ನ ಹಾಗೂ ಈ ಹಿಂದೆ ನಡೆದಿರದ ಪ್ರಯೋಗವೊಂದು ಕನ್ನಡ ಚಿತ್ರರಂಗದಲ್ಲಿ ನಡೆದಿದೆ. ಸ್ಕೈಪ್(ಅಂತರಜಾಲ)ದ ಮೂಲಕವೇ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ಅದೇ ಈ ಹೊತ್ತಿನ ಸುದ್ದಿ.

ಈ ಚಿತ್ರದ ನಾಯಕ ಮತೀನ್ ಹುಸೇನ್ ಮೂಲತಃ ಯು ಎಸ್ ಎ ನಿವಾಸಿ. ಕೆಲವು ವರ್ಷಗಳ ನಂತರ ಮುಂಬೈಗೆ ಆಗಮಿಸಿದ್ದ ಮತೀನ್, ಆನಂತರ ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆಯುತ್ತಾರೆ. ಆ ಬಳಿಕ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ನಿರ್ದೇಶನಕ್ಕಾಗಿ ಹಾಲಿವುಡ್ ನ ಖ್ಯಾತ ನಿರ್ದೇಶಕ ರಾಂಡಿ ಕೆಂಟ್ ಅವರನ್ನು ಸಂಪರ್ಕಿಸುತ್ತಾರೆ. ರಾಂಡಿ ಕೆಂಟ್ ಒಪ್ಪುತ್ತಾರೆ. ಆದರೆ ವೀಸಾ ತೊಂದರೆಯಿಂದ ರಾಂಡಿ ಕೆಂಟ್ ಇಲ್ಲಿಗೆ ಬರಲಾಗುವುದಿಲ್ಲ.‌ ಆಗ, ಈಗಿನ ತಂತ್ರಜ್ಞಾನ ಬಳಸಿಕೊಂಡು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ‌ ಮಾಡಲು ಆರಂಭಿಸುತ್ತಾರೆ. ಕಲಾವಿದರು ಬೆಂಗಳೂರಿನಲ್ಲಿ. ನಿರ್ದೇಶಕ ಲಾಸ್ ಎಂಜಲೀಸ್ ನಲ್ಲಿ. ಹೀಗೆ “ರೋಡ್ ಕಿಂಗ್” ಚಿತ್ರ ಸಿದ್ದವಾಗುತ್ತದೆ.

ಮತೀನ್ ಹುಸೇನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ರುಕ್ಷರ್ ದಿಲ್ಹಾನ್ (ರನ್ ಆಂತೋನಿ ಖ್ಯಾತಿ) ನಾಯಕಿಯಾಗಿ ನಟಿಸಿದ್ದಾರೆ.

ಲವ್ ಬ್ರೇಕಪ್ ನಿಂದ ಎಕ್ಸ್
ಸಿಂಡ್ರೋಮ್ ಗೆ ತುತ್ತಾದ ಯುವ ಅಪ್ರೇಮಿಗಳ ಸುತ್ತ ಹೆಣೆದಿರುವ ಕಥೆಯಿದು. ರೊಮ್ಯಾಂಟಿಕ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ.

ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಹಾಡಿರುವ “ಕೊಡು ನನಗೆ” ಎಂಬ ಹಾಡು ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಅರೀಫ್ ಲಲಾನಿ ಈ ಚಿತ್ರದ ಛಾಯಾಗ್ರಹಕರು.

ಹಾಲಿವುಡ್ ನ ಖ್ಯಾತ ಚಿತ್ರಗಳಿಗೆ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿರುವ ಸ್ಕಾಟ್ ವಾಲ್ಫ್ ಈ ಚಿತ್ರಕ್ಕೂ ಸೌಂಡ್‌ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಕಾಟ್ ವಾಲ್ಫ್ ಅವರ ಸೌಂಡ್ ಡಿಸೈನ್ “ರೋಡ್ ಕಿಂಗ್” ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಎವರಿಥಿಂಗ್ ಈಸ್ ಪಾಸಿಬಲ್ ಗುರು! ಕನ್ನಡದ ಈ ಕಿರುಚಿತ್ರ ಅಮೇಜಾನ್ ಓಟಿಟಿಯಲ್ಲಿ ಲಭ್ಯ…

ರಂಗಭೂಮಿ ಕಲಾವಿದರಾಗಿ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವದ ಜೊತೆಗೆ ದೇವರನಾಡಲ್ಲಿ ಎಂಬ ಸಿನಿಮಾದಲ್ಲಿಯೂ ನಟಿಸಿರುವ ಜೀವನದಿ ಸೀರಿಯಲ್ ನಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದ ಇಕ್ಷ್ವಾಕು ರಾಮ್ ಸಾರಥ್ಯದಲ್ಲಿ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಿದೆ

ಈ ಹಿಂದೆ ರಹಸ್ತ ಎಂಬ ಕಿರುಚಿತ್ರ ಮಾಡಿದ್ದ ಇಕ್ಷ್ವಾಕು ರಾಮ್ ಈಗ ‘Everything Is Possible’ ಎಂಬ ಕ್ಯಾಚಿ ಟೈಟಲ್ ನಡಿ ಸೈನ್ಸ್ ಫಿಕ್ಷನ್ ಕಿರುಚಿತ್ರ ಮಾಡಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಎಂಕೆ ಮಠ ನಟನೆಯ Everything Is Possible ಚಿತ್ರದ ಬಗ್ಗೆ ಟೀಮ್ ಹೇಳಿದ್ದಿಷ್ಟು.

ನಾಯಕಿ ಖುಷಿ ರವಿ ಹೇಳೋದು ಹೀಗೆ: ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾವಿದು. ಸೆಕೆಂಡ್ ಲಾಕ್ ಡೌನ್ ಟೈಮ್ ನಲ್ಲಿ ಬಂದು ನಿರ್ದೇಶಕರು ಕಥೆ ಹೇಳಿದರು. ಇದೊಂದು ಶಾರ್ಟ್ ಮೂವೀ. ತುಂಬಾ ಅದ್ಭುತ ಕಾನ್ಸೆಪ್ಟ್ ಇದು. ಇವತ್ತಿನಿಂದ ನಮ್ಮ ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋದಲ್ಲಿ ಶಾರ್ಟ್ ಮೂವೀ ಸ್ಟ್ರೀಮ್ ಆಗುತ್ತಿದೆ. ಪ್ರತಿಯೊಬ್ಬರು ನೋಡಿ ಬೆಂಬಲ ಕೊಡಿ ಎಂದರು.

ಪಿಎಂಕೆ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ‘Everything Is Possible’ ಕಿರುಚಿತ್ರಕ್ಕೆ ಪೂರ್ಣಿಮಾ ಮನೋಜ್, ಯಶ್ವಿಕ್ ನಿರ್ಮಾಣ ಮಾಡಿದ್ದು, ಎರಿಕ್ ವಿಜೆ ಛಾಯಾಗ್ರಾಹಣ ಜೊತೆಗೆ ಸಂಕಲನವಿದೆ. ಸ್ವಾಮಿನಾಥನ್ ಆರ್ ಕೆ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಿನಿಮಾಗಿದೆ. ನಮ್ಮ ಫ್ಲಿಕ್ಸ್, ಅಮೇಜಾನ್, airtel xstream ಓಟಿಟಿಯಲ್ಲಿ ರಿಲೀಸ್ ಆಗಿದೆ.

Categories
ಸಿನಿ ಸುದ್ದಿ

ಅಯ್ಯೋ ದೇವ್ಲೆ..! ನೀನೆ ಬಂದು ಹೇಳುಬಿಡು- ಇದು ಗಾಳಿಪಟ ಸಿನಿಮಾದ ಭಟ್ಟರ ಹೊಸ ಶೈಲಿಯ ‘ಲ’ ಕಾರ ಪ್ರಯೋಗದ ಹಾಡು…

ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಸಿರುವ “ಗಾಳಿಪಟ 2” ಚಿತ್ರದ “ದೇವ್ಲೆ ದೇವ್ಲೆ” ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇದೊಂದು ವಿಶೇಷ ಶೈಲಿಯ ಹಾಡು ಕೇಳೋಕೂ ನೋಡೋಕು ಮಜಾ ಇದೆ

ಈ ಹಾಡು ಕುರಿತು ಭಟ್ಟರು ಹೇಳಿದ್ದು ಹೀಗೆ. ಈ ಹಾಡು ಬರೆದು ಅರ್ಜುನ್ ಜನ್ಯ ಅವರಿಗೆ ಕಳುಹಿಸಿದೆ. ಮೊದಲು ಈ ಹಾಡನ್ನು “ದೇವ್ರೆ ದೇವ್ರೆ” ಎಂದು ಬರೆದಿದ್ದು. ಆನಂತರ ಇದು ಮಾಮೂಲಿ ತರಹ ಇದೆ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ ಎಂದರು ಅರ್ಜುನ್ ಜನ್ಯ. ಆಗ ರ ಕಾರ ತೆಗೆದು ಲ‌ ಕಾರ ಹಾಕಿ ಅಂದೆ. ಆಗ ಎಲ್ಲರಿಗೂ ಹಿಡಿಸಿತು. ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ನನ್ನ , ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯರ ಕಾಂಬಿನೇಶನ್ ನಲ್ಲಿ ಸಾಕಷ್ಟು ಎಣ್ಣೆ ಹಾಡುಗಳು ಗೆದ್ದಿವೆ. ಇದು ಕೂಡ ಗೆಲುತ್ತದೆ ಎಂಬ ಭರವಸೆಯಿದೆ. ಕೊರೋನ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಚಿತ್ರೀಕರಣವಾದ ಹಾಡು ಇದು.

ಎಲ್ಲಾ ಕಡೆ ಲಾಕ್ ಡೌನ್. ಅಂತಹ ಸಮಯದಲ್ಲಿ ದೂರದ ಕಜಕಿಸ್ತಾನದಲ್ಲಿ ಚಿತ್ರೀಕರಣ ಮಾಡುವುದು ಅಂದರೆ ಕಷ್ಟ ಸಾಧ್ಯ. ಆದರೆ ಅದನ್ನು ಸಾಧ್ಯ ಮಾಡಿದವರು ನಮ್ಮ ನಿರ್ಮಾಪಕ ರಮೇಶ್ ರೆಡ್ಡಿ ಅವರು. ಈ ಹಾಡಿಗೆ ಸ್ನೋ ಬೇಕಾಗಿದ್ದರಿಂದ ಅಲ್ಲಿಗೆ ಹೋದೆವು. ಆದರೆ ಕೊನೆಗೆ ಏಕಾದರೂ ಬಂದೆವೊ? ಅನಿಸುವಷ್ಟು ಚಳಿ ಅಲ್ಲಿ. ಇಷ್ಟೆಲ್ಲಾ ಕಷ್ಟಗಳ ನಡುವೆ ಎಲ್ಲರಿಗೂ ಇಷ್ಟವಾಗುವ ಹಾಡನ್ನು ಚಿತ್ರಿಸಿಕೊಂಡು ಬಂದಿದ್ದೀವಿ. ಸಹಕಾರ ನೀಡಿದ್ದ ಇಡೀ ತಂಡಕ್ಕೆ ವಂದನೆಗಳು ಎಂದರು ನಿರ್ದೇಶಕ ಯೋಗರಾಜ್ ಭಟ್.

ಕೋವಿಡ್ ಸಮಯದಲ್ಲಿ ಯಾರಿಗೂ ಏನೂ ಆಗದ ಹಾಗೆ ಕಜಕಿಸ್ತಾನಕ್ಕೆ ಹುಷಾರಾಗಿ ಕರೆದು ಕೊಂಡು ಹೋಗಿ ಬಂದ ನಿರ್ಮಾಪಕರಿಗೆ ಧನ್ಯವಾದ. ಇನ್ನು ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಯೋಗರಾಜ್ ಸರ್ ಈ ಹಾಡನ್ನು ನನಗೆ ಕಳುಹಿಸಿದಾಗ, ಇದೇನ್ ಸರ್ ಹೀಗಿದೆ? ಈ ಹಾಡು ಕೇಳಿದವರು ನಿಮ್ಮ ಬಗ್ಗೆ ಏನಾದರೂ ಅಂದುಕೊಳ್ಳುತ್ತಾರೆ ಅಂದೆ. ಆನಂತರ ಇಲ್ಲ ಗಣಪ ಇನ್ನೊಂದು ಸಲ ಕೇಳು ಅಂದರು. ಕೇಳುತ್ತಾ, ಕೇಳುತ್ತಾ ನಾನೇ ಸದಾ ಗುನುಗುವಂತಾಯಿತು. ಅಂದು ಇದ್ದ ಆತಂಕ ಈಗ ಇಲ್ಲ. ಜನ “ದೇವ್ಲೆ ದೇವ್ಲೆ” ಹಾಡನ್ನು ಒಪ್ಪಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಜಯ್ ಪ್ರಕಾಶ್ ಗಾಯನ, ಪಾತಾಜೆ ಅವರ ಛಾಯಾಗ್ರಹಣ, ಧನು ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಎಲ್ಲರ ಅಭಿನಯ ಈ ಹಾಡನ್ನು ಶ್ರೀಮಂತಗೊಳಿಸಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.

ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಮೂಲಕ ನನ್ನ ಗಾಯನದ ಜರ್ನಿ “ಗಾಳಿಪಟ” ಮೊದಲ ಭಾಗದಲ್ಲಿ ಆರಂಭವಾಯಿತು “ಕವಿತೆ ಕವಿತೆ” ಹಾಡಿನ ಮೂಲಕ. ಈಗ “ಗಾಳಿಪಟ 2” ಚಿತ್ರದಲ್ಲೂ ಹಾಡಿದ್ದೇನೆ. ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟ ಅಂದುಕೊಂಡೆ. ಅಭ್ಯಾಸ ಮಾಡಿದ್ದೆ. ಅರ್ಧ ಗಂಟೆಯಲ್ಲಿ “ದೇವ್ಲೆ ದೇವ್ಲೆ” ಹಾಡು ಹಾಡಿದೆ. ಈ ಹಿಂದೆ ಕೂಡ ನನ್ನ ಹಾಗೂ ಭಟ್ಟರ ಕಾಂಬಿನೇಶನಲ್ಲಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿದೆ ಎಂದರು ಗಾಯಕ ವಿಜಯ್ ಪ್ರಕಾಶ್.

ಈ ಹಾಡು ಮಾಡಿದಾಗ ಲ ಕಾರ ಇರಲಿಲ್ಲ. ಮೊದಲು ರ ಕಾರ ಇತ್ತು. ರ ಕಾರದ ಹಾಡು ಅಷ್ಟು ಮಜಾ ಇಲ್ಲ ಅಂದೆ. ಆಗ ಯೋಗರಾಜ್ ಸರ್, ರ ಕಾರಗಳನ್ನು ತೆಗೆದು ಲ ಕಾರ ಮಾಡು ಅಂದರು. ಹಾಗೆ ಮಾಡಿದಾಗ ಈ ಹಾಡು ತುಂಬಾ ಹಿಡಿಸಿತು. ವಿಜಯ್ ಪ್ರಕಾಶ್ ಅವರು ಇಂಪಾಗಿ ಹಾಡಿದ್ದಾರೆ. ನಾನು ಪದೇಪದೇ ಕೇಳುವ ಹಾಡಗಳೆಂದರೆ ಅದು “ಗಾಳಿಪಟ 2” ಚಿತ್ರದ ಹಾಡುಗಳು ಎಂದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಈ ಹಾಡಿನ‌ ಚಿತ್ರೀಕರಣ ನೋಡಲು ಕಜಕಿಸ್ತಾನಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿಗೆ ನಾನು ಅಂತರರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ನಾಯಕರಾದ ದಿಗಂತ್, ಪವನ್ ಕುಮಾರ್, ನಾಯಕಿ ಶರ್ಮಿಳಾ ಮಾಂಡ್ರೆ, ನಟಿ ಸುಧಾ ಬೆಳವಾಡಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಆನಂದ್ ಆಡಿಯೋ ಶ್ಯಾಮ್ “ದೇವ್ಲೆ ದೇವ್ಲೆ” ಹಾಡಿನ ಬಗ್ಗೆ ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಜೇಮ್ಸ್ ಸುವರ್ಣ ವರ್ಲ್ಡ್ ಪ್ರೀಮಿಯರ್! ರಾಜ್ಯದ ನೂರು ಶಾಲೆಯಿಂದ 40ಸಾವಿರ ಮಕ್ಕಳು ಅಭಿಯಾನದಲ್ಲಿ ಭಾಗಿ….

ರಾಜ್ಯದಾದ್ಯಂತ 40ಸಾವಿರ ಮಕ್ಕಳಿಂದ ಅಪ್ಪು ಭಾವಚಿತ್ರಕ್ಕೆ ಬಣ್ಣ ತುಂಬಿದ ಸಾವಿರಾರೂ ಪುಟ್ಟ ಕೈಗಳು. ಹೌದು ಇದು ಜೇಮ್ಸ್ ಚಿತ್ರದ ಸುವರ್ಣ ವರ್ಲ್ಡ್ ಪ್ರಿಮಿಯರ್ ಗೆ ಸ್ಟಾರ್ ಸುವರ್ಣ ವಾಹಿನಿ ಮಕ್ಕಳಿಗಾಗಿಯೇ ವಿಶೇಷ ಅಭಿಯಾನವನ್ನ ಆಯೋಜಿಸಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಮಕ್ಕಳೆಂದರೆ ತುಂಬಾ ಇಷ್ಟ. ಮಕ್ಕಳಿಗೂ ಅಪ್ಪು ಅಂದರೆ ಅಷ್ಟೇ ಪ್ರೀತಿ. ಹಾಗಾಗಿ ವಾಹಿನಿ ಜೇಮ್ಸ್ ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿರೋ ಈ ವೇಳೆಯಲ್ಲಿ ಇಂತಹ ವಿಶಿಷ್ಠ ಅಭಿಯಾನವನ್ನ ಹಮ್ಮಿಕೊಂಡಿದೆ.

ಅದರಂತೆ, ರಾಜ್ಯಾದ್ಯಂತ ಸುಮಾರು 40 ಸಾವಿರ ಶಾಲಾ ಮಕ್ಕಳಿಂದ ಪುನೀತ್ ರಾಜ್ ಕುಮಾರ್ ರವರ ರೇಖಾಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯನ್ನ ನಡೆಸಿದೆ.
ಈಗಾಗಲೇ ರಾಜ್ಯದ ವಿವಿಧ ಶಾಲೆಗಳಲ್ಲಿ ಮಕ್ಕಳು ಪುನೀತ್ ಅವರ ಭಾವ ಚಿತ್ರಕ್ಕೆ ಬಣ್ಣ ತುಂಬಿ ಸಂಭ್ರಮಿಸಿದ್ದಾರೆ.

ಅತ್ಯುತ್ತಮವಾಗಿ ಬಣ್ಣ ತುಂಬಿಸಿದ ಮಕ್ಕಳಿಗೆ ಸುವರ್ಣ ವಾಹಿನಿ ವತಿಯಿಂದ ಪ್ರಶಂಸೆ ಪತ್ರ ನೀಡಲಾಗುತ್ತಿದೆ. ಈ ವಿಶೇಷ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ.

ರಾಜ್ಯಾದಾದ್ಯಂತ ಎಲ್ಲಾ ಮಾದರಿಯ ಶಾಲಾ ಮಕ್ಕಳಿಂದ ರಾಜಕುಮಾರ ಪುನೀತ್ ರಾಜ್ ಕುಮಾರ್ ರವರ ರೇಖಾ ಚಿತ್ರಕ್ಕೆ ಬಣ್ಣ ತುಂಬಿ ನಮನ ಸಲ್ಲಿಸುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

ಗಿರ್ಕಿಗೆ ಜೈ ಎಂದ ಪ್ರೇಕ್ಷಕ: ಇನ್ನೊಂದು‌ ಸಿನಿಮಾ ಮಾಡೋ ಉತ್ಸಾಹದಲ್ಲಿ ನಿರ್ಮಾಪಕರು…

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನರನ್ನು ತಮ್ಮ ಪಾತ್ರದ ಮೂಲಕ ನಕ್ಕುನಗಿಸುವ ತರಂಗ ವಿಶ್ವ ನಿರ್ಮಿಸಿರುವ, ವೀರೇಶ್ ಪಿ.ಎಂ ನಿರ್ದೇಶಿಸಿರುವ “ಗಿರ್ಕಿ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಣದಲ್ಲಿ ವಿಶ್ವ ಅವರಿಗೆ ವಾಸುಕಿ ಭುವನ್ ಸಾಥ್ ನೀಡಿದ್ದಾರೆ.

ನಟನಾಗಿದ್ದ ನಾನು, ಈ ಚಿತ್ರದಿಂದ ನಿರ್ಮಾಪಕನಾದೆ. ನಟನೆ ಕೂಡ ಮಾಡಿದ್ದೇನೆ. ಕಳೆದವಾರ ಚಿತ್ರ ತೆರೆ ಕಂಡಿದೆ. ನಮ್ಮ ಚಿತ್ರಕ್ಕೆ ರಾಜ್ಯಾದ್ಯಂತ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ. ಕನಕಪುರ ಸೇರಿ ಹಲವು ಕಡೆ ಭೇಟಿ ನೀಡಿದ್ದೇನೆ. ಜನ ಸಿನಿಮಾ ಬಗ್ಗೆ ಉತ್ತಮ ಮಾತುಗಳಾಡುತ್ತಿದ್ದಾರೆ. ಚಿತ್ರದ ಹಿಂದಿ ರೈಟ್ಸ್ ಕೂಡ ಮಾರಾಟವಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ನಾನು ಮತ್ತೊಂದು ಚಿತ್ರ ಸಹ ಆರಂಭಿಸಲಿದ್ದೇನೆ. ಚಿತ್ರದ ಗೆಲುವಿಗೆ ಕಾರಣರಾದ ನನ್ನ ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾರಸಿಕರಿಗೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹಾಗೂ ನಟ ತರಂಗ ವಿಶ್ವ.

ನಾನು ಅಸೋಸಿಯೇಟ್ ಆಗಿದ್ದಾಗ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದೆ. ಆಗ ಅಲ್ಲಿ ಜನರು ಆ ನಿರ್ದೇಶಕನ ಬಗ್ಗೆ ಆಡುತ್ತಿದ್ದ ಪ್ರಶಂಸೆಯ ಮಾತುಗಳನ್ನು ಕೇಳಿ ನನಗೂ‌ ನಿರ್ದೇಶಕನಾಗುವ ಅಸೆ ಹೆಚ್ಚುತ್ತಿತ್ತು. ಈಗ ನಾನು ಆ ಸಂತೋಷವನ್ನು ‌ಅನುಭವಿಸುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಹೋದ ಕಡೆ ಎಲ್ಲಾ ಉತ್ತಮ ಪ್ರಶಂಸೆ ಸಿಗುತ್ತಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ‌ ಹಾಗೂ ನನ್ನ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ವೀರೇಶ್ ಪಿ.ಎಂ.

ತಮ್ಮ ಚಿತ್ರಕ್ಕೆ ಸಿಗುತ್ತಿರುವ ಯಶಸ್ಸಿನ ಬಗ್ಗೆ ನಟ ವಿಲೋಕ್ ರಾಜ್, ಆನಂದಭರಿತ ಮಾತುಗಳನ್ನಾಡುವ ಮೂಲಕ ಸಂಭ್ರಮಿಸಿದರು.

ಯಶಸ್ಸನ್ನು ಸಂಭ್ರಿಮಿಸುವುದು ಒಬ್ಬೊಬ್ಬರು ಬೇರೆ ಬೇರೆ ರೀತಿ. ನಾನು ಥಿಯೇಟರ್ ಗೆ ಹೋದಾಗ ಜನ‌‌ ಸಿಳ್ಳೆ ಹೊಡೆಯುತ್ತಾರಲ್ಲಾ? ಎದುರಿಗೆ ಸಿಕ್ಕಾಗ ಆ ಪಾತ್ರ ಮಾಡಿರುವುದು ನೀವೇ ಅಲ್ಲವಾ? ಅಂತಾರಲ್ಲ. ಅದೇ ನನಗೆ ನಿಜವಾದ ಯಶಸ್ಸು ಎಂದರು ದಿವ್ಯ ಉರುಡಗ.

ಪರಿಮಳ ಎಂಬ ಪಾತ್ರದ ಹೆಸರಿನ ಮೂಲಕ ನನ್ನ ಹೋದ ಕಡೆ ಗುರುತಿಸುತ್ತಿದ್ದಾರೆ. ಸಂತೋಷವಾಗಿದೆ ಎಂದರು ರಾಶಿ ಮಹದೇವ್.

ಸಂಗೀತ ನಿರ್ದೇಶಕ ವೀರಸಮರ್ಥ್, ವಿತರಕ ರಾಜು ಮುಂತಾದವರು “ಗಿರ್ಕಿ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಸ್ಟಾರ್ ಸುವರ್ಣದಲ್ಲಿ ಶನಿವಾರದಿಂದ ಇಸ್ಮಾರ್ಟ್​ ಜೋಡಿ ಆಟ ಶುರು…

ಸೆಲೆಬ್ರಿಟಿ ಜೋಡಿಗಳು ಭಾಗವಹಿಸುವ ಸುಂದರ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಸಾರಥ್ಯ

ರಂಜನೆಗೆ ಮತ್ತೊಂದು ಹೆಸರು. ರಿಯಾಲಿಟಿ ಶೋಗಳ ತವರು ಸ್ಟಾರ್ ಸುವರ್ಣ ವಾಹಿನಿ.
ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ “ಇಸ್ಮಾರ್ಟ್ ಜೋಡಿ”‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ ಶನಿವಾರದಿಂದ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದು ಹೀಗೆ…

ಇದುವರೆಗೂ ಮನರಂಜನೆಯ ಮತ್ತು ಸ್ನೇಹದ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈಗ ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಎರಡು ವರ್ಷ ಗ್ಯಾಪ್​ ಆಗಿತ್ತು. ಬೇರೇನೋ ಹೊಸದು ಮಾಡಬೇಕು, ಫ್ಯಾಮಿಲಿ ಆಡಿಯನ್ಸ್​ ತಲುಪಬೇಕು ಎಂದು ಯೋಚಿಸುತ್ತಿದ್ದಾಗ ಸ್ಟಾರ್​ ಸುವರ್ಣದವರು ಈ ಕಾರ್ಯಕ್ರಮದ ಕುರಿತು ಹೇಳಿದರು. ಇದೊಂದು ಸೆಲೆಬ್ರಿಟಿ ಜೋಡಿಯ ಕುರಿತಾದ ಕಾರ್ಯಕ್ರಮ. ಇಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ ಇದ್ದಾರೆ. ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳುಬೀಳು, ಸುಖ-ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು.

ಈ ಕಾರ್ಯಕ್ರಮವು ನಾಲ್ಕು ಜನರಿಗೆ ಮಾದರಿ ಆಗಬೇಕು, ನೀವೇ ಇದನ್ನು ನಡೆಸಿಕೊಡಬೇಕು ಎಂದರು. ಒಳ್ಳೆಯ ಕಾನ್ಸೆಪ್ಟ್​ ಆದ್ದರಿಂದ ಒಪ್ಪಿಕೊಂಡೆ. ಒಟ್ಟು 26 ಕಂತುಗಳು. ಪ್ರತಿ ಶನಿವಾರ ಮತ್ತು ಭಾನುವಾರ ರಾತಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಆರಂಭಿಕ ಎರಡು ಕಂತುಗಳ ಚಿತ್ರೀಕರಣ ನಡೆದಿದೆ. ಈಗ ಇನ್ನೆರೆಡು ಕಂತುಗಳ ಚಿತ್ರೀಕರಣ ಆಗುತ್ತಿದೆ. ಇಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ. ಹಿರಿಯರ ಜೊತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು.

ನಾನು ಸಹ ಒಬ್ಬ ಪ್ರೇಕ್ಷಕನಾಗಿ ಬಹಳ ಕುತೂಹಲ ಎಂದನಿಸಿತು. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು. ಇಲ್ಲಿ ತೀರ್ಪುಗಾರರಿರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ. ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್​ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್​ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ ಎಂದರು ಗಣೇಶ್.

ನಿರ್ದೇಶಕ ಪ್ರಶಾಂತ್​, ವರ್ಷ, ಉಷಾ ಗೌಡ ಇದ್ದರು.

ರಾಕ್​ಲೈನ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅದ್ಭುತ ಸೆಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಶೀರ್ಷಿಕೆ ಹಾಡಿಗೆ ALL OK ಸಂಗೀತ ಸಂಯೋಜನೆ ಮಾಡಿ ಅವರೆ ಹಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಈ ಹಾಡು ಜನರ ಮನ ಗೆದ್ದಿದೆ.

ಇಸ್ಮಾರ್ಟ್ ಜೋಡಿ” ಯಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿ ಜೋಡಿಗಳು

ವಿನಯ್​ ಗೌಡ ಮತ್ತು ಅಕ್ಷತಾ ಗೌಡ,
ಸುಮನ್​ ನಗರ್​ಕರ್​ ಮತ್ತು ಗುರುದೇವ್​ ನಾಗರಾಜ,
ದಿಶಾ ಮದನ್​ ಮತ್ತು ಶಶಾಂಕ್​ ವಾಸುಕಿ ಗೋಪಾಲ್​,
ಪ್ರತಿಕ್​ ಪ್ರೊ ಮತ್ತು ಮೌಲ್ಯಶ್ರೀ ಎಂ,
ಶ್ರೀರಾಮ ಸುಳ್ಯ ಮತ್ತು ಪುನೀತ ಆಚಾರ್ಯ,
ರಘು ವೈನ್​ ಸ್ಟೋರ್​ ಮತ್ತು ವಿದ್ಯಾಶ್ರೀ,
ಇಂಪನಾ ಜಯರಾಜ್​ ಮತ್ತು ಅಜಿತ್​ ಜಯರಾಜ್​,
ಸಪ್ನ ದೀಕ್ಷಿತ್​ ಮತ್ತು ಅಶ್ವಿನ್​ ದೀಕ್ಷಿತ್​,ಜೈಜಗದೀಶ್​ ಮತ್ತು ವಿಜಯಲಕ್ಷ್ಮಿ ಸಿಂಗ್​, ರಿಚರ್ಡ್​ ಲೂಯಿಸ್​ ಮತ್ತು ಹ್ಯಾರಿಯೆಟ್​ ಲೂಯಿಸ್​.

Categories
ಸಿನಿ ಸುದ್ದಿ

ಲಕ್ಕಿಮ್ಯಾನ್ ನ ಸಿನಿಮಾದಲ್ಲಿ ಅಪ್ಪು! ಆಗಸ್ಟ್ ವೇಳೆ ಬಿಡುಗಡೆ…

ಕನ್ನಡ ಚಿತ್ರರಂಗದ ಧೃವತಾರೆ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿ ಬಿಡುಗಡೆಯಾಗುತ್ತಿರುವ ಕೊನೆಯ ಚಿತ್ರ ಲಕ್ಕಿಮ್ಯಾನ್. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದು ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ತಮಿಳುನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ.

ನಾನಾ ನೀನಾ ಎನ್ನುವ ಹಾಗೆ ಇಬ್ಬರೂ ಸೇರಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಭರ್ಜರಿ ಡ್ಯಾನ್ಸ್ ಮಾಡಿರುವ ಈ ಹಾಡು ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ. ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇದೇ ಮೊದಲಬಾರಿಗೆ ಪುನೀತ್ ರಾಜಕುಮಾರ್ ಹಾಗೂ ಪ್ರಭುದೇವಾ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ, ಅದ್ಭುತವಾದ ಹಾಡೊಂದರಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.


ಇನ್ನು ಈ ಚಿತ್ರವನ್ನು ಮೊದಲಬಾರಿಗೆ ಪ್ರಭುದೇವಾ ಸಹೋದರ ನಾಗೇಂದ್ರಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಈಗಾಗಲೇ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಲಕ್ಕಿಮ್ಯಾನ್ ಚಿತ್ರವನ್ನು ಬರುವ ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.


‌‌ತಮಿಳಿನ ಓ ಮೈ ಕಡವುಲೆ ಚಿತ್ರದ ಎಳೆಯನ್ನಿಟ್ಟುಕೊಂಡು ನಿರ್ದೇಶಕ ನಾಗೇಂದ್ರಪ್ರಸಾದ್ ಅವರು ಒಂದು ಅದ್ಭುತವಾದ ಫ್ಯಾಂಟಸಿ ಡ್ರಾಮಾ ಕಥಾಹಂದರವನ್ನು ಲಕ್ಕಿ ಮ್ಯಾನ್ ಚಿತ್ರದಲ್ಲಿ ನಿರೂಪಿಸಿದ್ದಾರೆ. ನಿರ್ಮಾಪಕ ಪಿ.ಆರ್. ಮೀನಾಕ್ಷಿ ಸುಂದರಂ, ಪಿ.ಕಾಮರಾಜ್ ಅವರು ತಮಿಳಲ್ಲಿ ಹಲವಾರು ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ರೋಷನಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ರಾಕ್ಷಸರ ಆಗಮನವಾಗುತ್ತಿದೆ ಹುಷಾರ್!

ಕನ್ನಡ ಚಿತ್ರರಂಗದಲ್ಲಿ ಸಿಂಹಾದ್ರಿ ಪ್ರೊಡಕ್ಷನ್ಸ್ ಮೂಲಕ ಉತ್ತಮ ಚಿತ್ರಗಳನ್ನು ನೀಡಿರುವ ರಮೇಶ್ ಕಶ್ಯಪ್ ನಿರ್ಮಿಸಿರುವ “ರಾಕ್ಷಸರು” ಚಿತ್ರ ಆಗಸ್ಟ್ ನಲ್ಲಿ ದೇಶದಾದ್ಯಂತ ತೆರೆ ಕಾಣುತ್ತಿದೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಇದೊಂದು ಸಖತ್ ಕ್ರೈಮ್ ಥ್ರಿಲ್ಲರ್ ಚಿತ್ರ. ಐದು ಜನ ಕ್ರಮಿನಲ್ ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ದಂಡುಪಾಳ್ಯದ ಕ್ರಿಮಿನಲ್ ಗಳನ್ನು ಮೀರಿಸುವ ಕ್ರಿಮಿನಲ್ ಗಳು ಈ “ರಾಕ್ಷಸರು”. ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ.

ಚಿತ್ರ ಸಿದ್ದವಾಗಿ ಬಹಳ ದಿನಗಳಾಗಿದೆ. ಆದರೆ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ, ಕ್ರೈಂ ಹೆಚ್ಚಾಗಿರುವುದರಿಂದ ಬಿಡುಗಡೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು.
ಆ ನಂತರ ನಿರ್ಮಾಪಕರ ಮನವಿ ಮೇರೆಗೆ ಕೆಲವು ಕಟ್ ಗಳ ಜೊತೆಗೆ A ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದೆ.

A ಸರ್ಟಿಫಿಕೇಟ್ ನೊಂದಿಗೆ
ಆಗಸ್ಟ್‌ ಎರಡನೇ ವಾರ ಚಿತ್ರ ಭಾರತದಾದ್ಯಂತ ತೆರೆ ಕಾಣುತ್ತಿದೆ ಎಂದು ತಿಳಿಸಿರುವ ನಿರ್ಮಾಪಕರು, ಈ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲು ನಿರ್ಧರಿಸಿದ್ದಾರೆ.

ಎರಡು ಹಾಡುಗಳಿರುವ ಈ‌ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಡೈಲಾಗ್ ಕಿಂಗ್ ಸಾಯಿಕುಮಾರ್, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ತ್ರಿವೇಣಿ, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ ರಾಧ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಾರಿ ಕೇಳಿದ ರಾಗಿಣಿ: ಸಿನಿಮಾದ ಲಿರಿಕಲ್ ಸಾಂಗ್ ಗೆ ಮೆಚ್ಚುಗೆ…

ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿರುವ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು ಸಖತ್ ಟ್ರೆಂಡಿಂಗ್ ಆಗಿದೆ…

ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಇವರಿಬ್ಬರೂ ಒಂದೇ ವೇದಿಕೆಯಲ್ಲಿ ಹಾಡು ರಿಲೀಸ್ ಮಾಡಿ ಶುಭ ಕೋರಿದರು.

ನಾನು ಮೂಲತಃ ವಿ.ಎಫ್.ಎಕ್ಸ್ ತಂತ್ರಜ್ಞ. ಈ ಹಿಂದೆ “ಸಿದ್ದಿಸೀರೆ” ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ.
ಇದು ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ. ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ ಎನ್ನಬಹುದು. ಈ ಹಿಂದೆ ಕೆಲವು ಚಿತ್ರ ಬಂದಿದೆ ಎನ್ನುತ್ತಾರೆ. ಆದರೆ ಮೋಷನ್ ಕ್ಯಾಪ್ಚರ್ ಎಂಬ ವಿಶೇಷ ತಂತ್ರಜ್ಞಾನ ಬಳಿಸಿ ನಿರ್ಮಾಣ ಮಾಡುತ್ತಿರುವ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಕನ್ನಡ ಚಿತ್ರವಿದು. ಆ ಕುರಿತು ಈಗಾಗಲೇ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದ್ದೇವೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಬ್ರಹ್ಮ ಮಾಹಿತಿ ನೀಡಿದರು.

ನಾನು ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷಗಳಾಯಿತು. ಈತನಕ ಹೊಸತು ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದೀನಿ. ಕಲಾವಿದರು ಸ್ವಲ್ಪ ರಿಸ್ಕ್ ಆದರೂ ಪರವಾಗಿಲ್ಲ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಅನಿಸಿಕೆ. ನಾನು ಆ ರೀತಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸೂಪರ್ ಹೀರೊ ಅಂದರೆ ಇಷ್ಟ. ಈಗ ಅದೇ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ. ನಿರ್ದೇಶಕ ಬ್ರಹ್ಮ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯ ಹಾಗೂ ಅರ್ಜುನ್ ಶರ್ಮ ಸೇರಿದಂತೆ ಎಲ್ಲಾ ಸಹನಟರ ಅಭಿನಯ ಚೆನ್ನಾಗಿದೆ ಎಂದರು ರಾಗಿಣಿ ದ್ವಿವೇದಿ.

ನಾನು ಈ ತನಕ ಐದಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ರಾಗಿಣಿ ಅವರ ಜೊತೆ ಅಭಿನಯಿಸಿದ್ದು ಸಂತಸವಾಗಿದೆ ಎಂದರು ನಟ ಅರ್ಜುನ್ ಶರ್ಮ.

ಚಿತ್ರದಲ್ಲಿ ನಟಿಸಿರುವ ಅಫ್ಜಲ್, ಸಂಗೀತ ನೀಡಿರುವ ರಾಜು ಎಮ್ಮಿಗನೂರು, ಛಾಯಾಗ್ರಾಹಕ ರಾಜೀವ್ “ಸಾರಿ” ಬಗ್ಗೆ ಮಾತನಾಡಿದರು.

ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು . ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Categories
ಸಿನಿ ಸುದ್ದಿ

ಓ ಮೈ ಲವ್ ಎಂಬ ನಿರೀಕ್ಷೆಯ ಸಿನಿಮಾ: ರಿಲೀಸ್ ಮೊದಲೇ ಸದ್ದಾದ ಶ್ರೀನು ಚಿತ್ರ…

ನಿರ್ದೇಶಕ ಸ್ಮೈಲ್ ಶ್ರೀನು ಅವರ ನಿರ್ದೇಶನದ ಓ ಮೈ ಲವ್ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಟ ಶಶಿಕುಮಾರ್ ಪುತ್ರ ಅಕ್ಷಿತ್ ಈ ಚಿತಗರದ ಹೀರೋ. ರಿಲೀಸ್ ಮೊದಲೇ ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾದಲ್ಲಿ ಹಕವಾರು ವಿಶೇಷತೆಗಳಿವೆ….

ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ಅವರು ಕಥೆ ಬರೆದು ನಿರ್ಮಿಸಿರುವ, ಸ್ಮೈಲ್ ಶ್ರೀನು ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನವಿರುವ ಓ ಮೈ ಲವ್’ ಚಿತ್ರ ಈ ವಾರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‌ತೆರೆ ಕಾಣುತ್ತಿದೆ.

ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಮೇಕಿಂಗ್ ಅದ್ಭುತವಾಗಿದೆ. ಸದ್ಯ ಸ್ಯಾಂಡಲ್’ವುಡ್’ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾಗಳ ಪೈಕಿ ‘ಓ ಮೈ ಲವ್’ ಮುಂಚೂಣಿಯಲ್ಲಿದೆ.

ಈ ಚಿತ್ರದ ಎಲ್ಲಾ ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ನಿರ್ದೇಶನ ಹಾಡುಗಳಿಗಿದೆ.

ಹಿರಿಯ ನಿರ್ದೇಶಕ ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

error: Content is protected !!