Categories
ಸಿನಿ ಸುದ್ದಿ

ಸವದತ್ತಿ ಎಲ್ಲಮ್ಮ ದೇವಿಯ ದರ್ಶನ ಪಡೆದ ಶಿವಣ್ಣ

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಹಿಂದೆ “ಶ್ರೀರಾಮ್”, “ಮೈಲಾರಿ” ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸೌದತ್ತಿ ಎಲ್ಲಮ್ಮ ಅದೃಷ್ಟ ದೇವತೆ. ಹಾಗಾಗಿ “ಉತ್ತರಕಾಂಡ‌”ದ ಚಿತ್ರೀಕರಣದ ನಂತರ ಶಿವಣ್ಣ ತಾಯಿ‌ ಆಶಿರ್ವಾದವನ್ನು ಪಡೆದಿರುತ್ತಾರೆ.

ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ‌ ಧನಂಜಯ, ಐಶ್ವರ್ಯ ರಾಜೇಶ್,ಭಾವನಾ‌ ಮೆನನ್, ದಿಗಂತ್ ಮಂಚಾಲೆ, ರಂಗಾಯಣ ರಘು, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಬಾಲಿವುಡ್ ಹೆಸರಾಂತ ಗಾಯಕ,ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ.

Categories
ಸಿನಿ ಸುದ್ದಿ

ಡಾಲಿಯ ಕೋಟಿ ವಿತರಣೆ ಮಾಡಲು ರೆಡಿಯಾದ ಕೆಆರ್ ಜಿ ಸ್ಟುಡಿಯೋಸ್

ಡಾಲಿಯ ಕೋಟಿ ಸಿನಿಮಾ ಪ್ರಭೆ ಎಲ್ಲೆಡೆ ಹಬ್ಬಿಕೊಂಡಿದೆ. ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇರುವಾಗಲೇ ಈ ಸಿನಿಮಾದೆಡೆಗಿನ ಕ್ರೇಜ್ ಅಚ್ಚರಿದಾಯಕವಾಗಿ ವ್ಯಾಪಿಸಿಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಿನಕ್ಕೊಂದರಂತೆ ಹೊಸಾ ಬಗೆಯ ಸುದ್ದಿಗಳು ಕೋಟಿ ಬಳಗದಿಂದ ಕಡೆಯಿಂದ ಬರುತ್ತಲೇ ಇದ್ದಾವೆ. ಇದೀಗ ಕೋಟಿ ವಿತರಣಾ ಹಕ್ಕುಗಳು KRG ಸ್ಟುಡಿಯೋಸ್ ಪಾಲಾಗಿದೆ. ಸಿನಿಮಾ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ, ಭರವಸೆಯಿಂದ ಸದರಿ ಸಂಸ್ಥೆ ಡಾಲಿ ಸಿನಿಮಾ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿದೆ.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ವಿತರಣೆಯಲ್ಲಿ ಕೆಆರ್ ಜಿ ಸಂಸ್ಥೆ ಒಳ್ಳೆ ಹೆಸರು ಮಾಡಿದೆ. ಕೆಜಿಎಫ್ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಬಡವ ರಾಸ್ಕಲ್, ಪೈಲ್ವಾನ್, 12 ನೇ ಫೇಲ್, ಹನುಮಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯ ಮೂಲಕವೇ ಬಿಡುಗಡೆಗೊಂಡಿದೆ. KRG ಸ್ಟುಡಿಯೋಸ್ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದೆ. ಹಾಗೆಂದ ಮಾತ್ರಕ್ಕೆ, ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಸಲೀಸಿನ ಸಂಗತಿಯಲ್ಲ. ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿ. ಯಾಕೆಂದರೆ, ಎಲ್ಲ ಬಗೆಯಲ್ಲಿಯೂ ಪರಿಪೂರ್ಣವಾಗಿರುವ, ಗೆಲುವಿನ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ತನ್ನಡಾಗಿಸಿಕೊಳ್ಳುತ್ತೆ. ಇದೀಗ ಕೋಟಿ ವಿತರಣಾ ಹಕ್ಕು ಕೆಆರ್ ಜಿ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಕೋಟಿ ಸಿನಿಮಾವನ್ನು ಇಡೀ ಕೆಆರ್ ಜಿ ಬಳಗ ವೀಕ್ಷಣೆ ಮಾಡಿದೆ. ಭಾವನಾತ್ಮಕ ಎಳೆಯುಳ್ಳ ಈ ಚಿತ್ರ ಐಪಿಎಲ್ ಹಾಗೂ ಚುನಾವಣಾ ಬಳಿಕ ಇಡೀ ಫ್ಯಾಮಿಲಿಗೆ ಹೇಳಿ ಮಾಡಿಸಿದ ಪರಿಪೂರ್ಣವಾದ ಔತಣದಂತಿದೆ ಎಂದಿದೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, “ಧನಂಜಯ್ ಅವರೊಂದಿಗಿನ ನಮ್ಮ ಸಂಬಂಧವು ‘ಕೋಟಿ’ ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಹಾಗೂ ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ಅವಕಾಶವನ್ನು ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ನಾನು ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಬುಜ್ಜಿ- ಭೈರವ ಜುಗಲ್ ಬಂದಿ: ಅಮೇಜಾನ್ ಪ್ರೈಮ್ ನಲ್ಲಿ ಕಲ್ಕಿ ಸಿನಿಮಾದ ‘ಬಿ ಬಿ’ ಅನಿಮೇಷನ್‌ ಸೀರೀಸ್

2024 ರ ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ ‘ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಈವರೆಗೂ ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ‌.

ಪ್ರಭಾಸ್ ಈ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್)ಪಾತ್ರವಿದೆ‌. ಈ ಎರಡು ಪಾತ್ರಗಳನಿಟ್ಟುಕೊಂಡು ಚಿತ್ರತಂಡ “B&B” ಎಂಬ ಹದಿನೈದು ಹದಿನೈದು ನಿಮಿಷಗಳ ಎರಡು ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಿದೆ. ದೇಶದ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಈ ಅನಿಮೇಷನ್‌ ಸಿರೀಸ್ ಏಕಕಾಲಕ್ಕೆ ಬಿಡುಗಡೆಯಾಗಿದೆ‌. ಈ ಎರಡು ಭಾಗಗಳು ಮೇ 31 ರಿಂದ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ. ಈ ಅನಿಮೇಷನ್‌ ಸೀರಿಸ್ ನಲ್ಲಿರುವ ಭೈರವ ಹಾಗೂ ಬುಜ್ಜಿಯ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಚಿತ್ರದ ಪ್ರಚಾರಕಷ್ಟೇ ಮಾಡಿರುವ ಅನಿಮೇಷನ್‌ ಸಿರೀಸ್. ಚಿತ್ರದ ಕಥೆಯೆ ಬೇರೆ. ಇದೇ ಬೇರೆ ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.

ಕಳೆದ ಅರ್ಧ ಶತಕದಿಂದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು, ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಮಾಡುತ್ತಿದೆ.

ಬೆಂಗಳೂರಿನಲ್ಲೂ “ಕಲ್ಕಿ 2898 AD” ಚಿತ್ರದ ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ವಿ.ಎನ್ ಪ್ರೊಡಕ್ಷನ್ ನ ಸುಪ್ರೀತ್ ಅವರು ಈ ಅನಿಮೇಷನ್‌ ಸಿರೀಸ್ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ‌‌. ಎರಡು ಭಾಗಗಳಲ್ಲಿ ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬಂದಿರುವ ಈ ಅನಿಮೇಷನ್‌ ಸಿರೀಸ್ ಅನ್ನು ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು ಎಂದರು.

ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

Categories
ಸಿನಿ ಸುದ್ದಿ

ಬ್ಯಾಕ್ ಬೆಂಚರ್ಸ್ ಹಾಡು ಬಂತು

ಕಾಲೇಜು ದಿನಮಾನದ ಕಥೆಗಳು ಕನ್ನಡದಲ್ಲಿ ಸಾಕಷ್ಟು ಬಂದಿದೆ. ಆದರೆ ಮನೋರಂಜನೆಯೇ ಪ್ರಮುಖವಾಗಿಟ್ಟಿಕೊಂಡು ಕಾಲೇಜು ದಿನಗಳ ಕಥೆಯೊಂದು ಕನ್ನಡದಲ್ಲಿ ಬರುತ್ತಿದೆ. ಅದೇ ” ಬ್ಯಾಕ್ ಬೆಂಚರ್ಸ್ “. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಟ್ಟಿರುವ “ಬ್ಯಾಕ್ ಬೆಂಚರ್ಸ್” ಚಿತ್ರದ “ಯಲ್ಲೋ ಯಲ್ಲೋ” ಹಾಡು ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಯವಜನತೆಗೆ ಮುದ ನೀಡುವ ಈ ಹಾಡನ್ನು ನಕುಲ್ ಅಭಯಂಕರ್ ಹಾಡಿದ್ದಾರೆ. ಸಂಗೀತವನ್ನೂ ನಕುಲ್ ಅಭಯಂಕರ್ ಅವರೆ ನೀಡಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆಯ ನಂತರ “ಬ್ಯಾಕ್ ಬೆಂಚರ್ಸ್” ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಇದೊಂದು ಮನೋರಂಜನೆಯೇ ಪ್ರಮುಖವಾಗಿರುವ ಕಾಲೇಜು ಸ್ಟೋರಿ ಎಂದು ಮಾತನಾಡಿದ ನಿರ್ದೇಶಕ, ನಿರ್ಮಾಪಕ ಬಿ.ಆರ್ ರಾಜಶೇಖರ್, ಚಿತ್ರ ತೆರೆಗೆ ಬರಲು ಸಿದ್ದಾವಾಗಿದೆ‌.‌ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಹೊಸಬರು. ಹೊಸತಂಡಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ನಿರ್ದೇಶಕ ರಾಜಶೇಖರ್ ಅವರು ನಮಗೆಲ್ಲಾ ನೀಡಿದ ಪ್ರೋತ್ಸಹ ಅಷ್ಟಿಷ್ಟಲ್ಲ. ನಮ್ಮಗೆಲ್ಲಾ ಇದು ಮೊದಲ ಚಿತ್ರ. ಆದರೆ ನಮಗೆ ನಟನೆ ಹೊಸತಲ್ಲ‌‌. ನಾವೆಲ್ಲ ನಟನೆ ಕಲಿತು ಬಂದಿರುವವರು. ಈಗ ಚಿತ್ರಮಂದಿರಕ್ಕೆ ಹೆಚ್ಚಾಗಿ ಜನರು ಬರುತ್ತಿಲ್ಲ. ಆ ಮಾತನ್ನು ಸುಳ್ಳು ಮಾಡುವ ಪ್ರಯತ್ನವನ್ನು ನಾವು ಮಾಡುತ್ತೇವೆ‌. ವಿನೂತನ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ‌.

ಚಿತ್ರಮಂದಿರಕ್ಕೆ ಬಂದ ಮೇಲು ನಮ್ಮ ಚಿತ್ರ ನೀವು ಕೊಟ್ಟ ದುಡ್ಡಿಗೆ ಮೋಸ ಆಗುವುದಿಲ್ಲ ಎಂಬ ಭರವಸೆ ನೀಡುತ್ತೇವೆ ಎಂದು “ಬ್ಯಾಕ್ ಬೆಂಚರ್ಸ್ ” ಚಿತ್ರದಲ್ಲಿ ನಟಿಸಿರುವ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್ ಹೆಚ್, ಮನೋಜ್ ಶೆಟ್ಟಿ ಮುಂತಾದವರು ತಿಳಿಸಿದರು. ಛಾಯಾಗ್ರಾಹಕ ಮನೋಹರ್ ಜೋಶಿ “ಬ್ಯಾಕ್ ಬೆಂಚರ್ಸ್ ” ನ ಗುಣಗಾನ ಮಾಡಿದರು‌.

ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನವಿದೆ.

Categories
ಸಿನಿ ಸುದ್ದಿ

ಗೋವಾ ಗಲಾಟೆ: ಹಲ್ಲೆ ಮಾಡಿದ ಆಂತರ್ಯ ಸತೀಶ್ ಅಮಾನತು- ಫಿಲಂ ಚೇಂಬರ್ ನಿರ್ಧಾರ

ಗೋವಾಕ್ಕೆ ಪಾರ್ಟಿಗಾಗಿ ತೆರಳಿದ್ದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರ ನಡುವೆ ಗಲಾಟೆಯಲ್ಲಿ ನಿರ್ಮಾಪಕ ಎ. ಗಣೇಶ್‍ ಮೇಲೆ ದೈಹಿಕ ಹಲ್ಲೆ ಮಾಡಿದ್ದ ನಿರ್ಮಾಪಕ ಆಂತರ್ಯ ಸತೀಶ್‍ ಅವರನ್ನು ಅಮಾನತು ಮಾಡುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ. ಅಧ್ಯಕ್ಷರ ಈ ನಿರ್ಧಾರಕ್ಕೆ ನಿರ್ಮಾಪಕರ ಸಂಘ ಕೂಡ ಬೆಂಬಲಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಧ್ಯಕ್ಷ ಎನ್.ಎಮ್.ಸುರೇಶ್ ನೇತೃತ್ವದಲ್ಲಿ ಗೋವಾಗೆ ತೆರಳಿದ್ದರು. ರಾತ್ರಿ ಊಟದ ಸಮಯದಲ್ಲಿ ನಡೆದ ಗಲಾಟೆಯಲ್ಲಿ ನಿರ್ಮಾಪಕ ‘ರಥಾವರ ಮಂಜುನಾಥ್‍ ಮೇಲೆ ಆಂತರ್ಯ ಸತೀಶ್‍ ಜೋರಾದ ಜಗಳ ನಡೆದು, ಈ ವೇಳೆ ಸತೀಶ್ ಅವರು ಮಂಜುನಾಥ್‍ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆ ಬಿಡಿಸಲು ಹೋದ ಗಣೇಶ್‍ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಊಟ ಮಾಡುವ ಟೇಬಲ್ ಮೇಲಿದ್ದ ಫೋರ್ಕ್‍ನಿಂದ ಗಣೇಶ್ ಅವರಿಗೆ ಚುಚ್ಚಿದ್ದರಿಂದ. ಗಣೇಶ್‍ ತೀವ್ರ ಗಾಯಗೊಂಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡಿರುವ, ಮಂಜುನಾಥ್‍ ಆಸ್ಪತ್ರೆಯಲ್ಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿ ನಡೆಸಿತು. ಗಾಯಗೊಂಡ ಎ. ಗಣೇಶ್‍ ಮಾತನಾಡಿ, ಊಟದ ವೇಳೆ ಏಕಾಏಕಿ ‘ಸತೀಶ್‍ ಮತ್ತು ಮಂಜುನಾಥ್‍ ನಡುವೆ ಗಲಾಟೆ ಆಯ್ತು. ಅದು ದೊಡ್ಡ ಹಂತಕ್ಕೆ ಹೋಯ್ತು. ಆಗ ನಾನು ತಕ್ಷಣ ಜಗಳ ಬಿಡಿಸಲು ಹೋದಾಗ ನನ್ನ ಮಲೆ ಹಲ್ಲೆ ನಡೆಸಿದರು. ಗಾಯಗೊಂಡು ರಕ್ತಸ್ರಾವ ಆಯ್ತು. ಕೂಡಲೇ ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಚಿಕಿತ್ಸೆ ಪಡೆದು, ಬೆಂಗಳೂರಿಗೆ ಬಂದೆ. ಇಲ್ಲಿ ಗೊತ್ತಿರುವ ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದೆ.

ಗಲಾಟೆ ನಡೆದ ವಿಷಯಕ್ಕೆ ನಾನು ದೂರು‌ ನೀಡಲಿಲ್ಲ. ಈಗ ಮಂಡಳಿಯ ಸದಸ್ಯರ ಚರ್ಚೆ ಬಳಿಕ ದೂರು ನೀಡಲು ನಿರ್ಧರಿಸಿದ್ದೇನೆ ಎಂದರು.

ಈ ವಿಷಯಕ್ಕೆ‌ ಸಂಬಂಧಿಸಿದಂತೆ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ನೇತೃತ್ವದ ಸಮಿತಿ ರಚನೆಯಾಗಲಿದೆ. ಗದ್ದಲದ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿದೆ. ಇನ್ನು ಈ ಕೂಡಲೆ, ಸತೀಶ್‍ ಅವರನ್ನು ಅಮಾನತುಗೊಳಿಸಲಾಗುವುದು ಅಂತ ಅಧ್ಯಕ್ಷ ಎನ್‍.ಎಂ. ಸುರೇಶ್‍ ಸ್ಪಷ್ಟಪಡಿಸಿದ್ದಾರೆ.

Categories
ಸಿನಿ ಸುದ್ದಿ

ಕೆರೆಬೇಟೆಗೆ ಅರ್ಧ ಶತಕದ ಸಂಭ್ರಮ: ಸಂತಸದಲ್ಲೂ ಗೌರಿ ಬೇಸರ : ಹಣ ಇಲ್ಲವಾದರೂ ಜನಮನ ಗೆದ್ದ ಚಿತ್ರ

ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕನ್ನಡ ಸಿನಿಮಾಗಳು ಹಿಟ್ ಆಗುತ್ತಿಲ್ಲ, ಚಿತ್ರಮಂದಿರಕ್ಕೆ ಜನ ಬರ್ತಾ ಇಲ್ಲ ಈ ಪರಿಸ್ಥಿತಿಯಲ್ಲೂ ಕರೆಬೇಟೆ 50 ದಿನ ಪೂರೈಸಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಇದು ಖುಷಿಯ ವಿಚಾರ.

ನಿರ್ದೇಶಕ ರಾಜಗುರು ಮತ್ತು ನಾಯಕ ಗೌರಿಶಂಕರ್ ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಸಿನಿಮಾ ಕೆರೆಬೇಟೆ. ಈ ಸಿನಿಮಾ ಭಾರಿ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಕುತೂಹಲಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು ಆದರೆ ಯಾಕೋ ದೊಡ್ಡಮಟ್ಟದ ಸಕ್ಸಸ್ ಕಾಣಲಿಲ್ಲ. ಈ ಬೇಸರ ಕೂಡಾ ಸಿನಿಮಾ ತಂಡಕ್ಕಿದೆ. ಕಮರ್ಷಿಯಲಿ ದೊಡ್ಡಮಟ್ಟದ ಸಕ್ಸಸ್ ಆಗದಿದ್ದರೂ ಜನರ ಮನ ಗೆದ್ದಿರುವುದು ಸಿನಿಮಾ ತಂಡದ ಶ್ರಮಕ್ಕೆ ಸಿಕ್ಕ ಫಲವಾಗಿದೆ.

ಇದೇ ಖುಷಿಯಲ್ಲಿ ಸಿನಿಮಾ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಮೊಮೆಂಟುಗಳನ್ನು ಕೊಡುವ ಮೂಲಕ ಸಿನಿಮಾತಂಡ 50 ದಿನ ಪೂರೈಸಿದ ಸಂಭ್ರಮವನ್ನು ಆಚರಿಸಿತು. ಕಿರೆಬೇಟೆಯಾ ಸಂಭ್ರಮಕ್ಕೆ ಖ್ಯಾತ ನಿರ್ದೇಶಕರಾದ ಶಶಾಂಕ್, ದಯಾಳ್ ಪದ್ಮನಾಭ ಮತ್ತು ನಿರ್ಮಾಪಕ ಉದಯ ಮೆಹ್ತ ನಟ ಪ್ರಥಮ್ ಸಾಕ್ಷಿಯಾದರು.

ಈ ವೇಳೆ ಮಾತನಾಡಿದ ನಾಯಕ ಗೌರಿ ಶಂಕರ್ ‘ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟಕ್ಕೆ ಹಿಟ್ಟಾಗಿಲ್ಲ, ಆದರೆ ಜನ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತ ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 50 ದಿನಗಳು ಓಡಿದೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಇದೆ.

ಈ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ ಐವತ್ತು ದಿನದ ಸಂಭ್ರಮವನ್ನು ಇಟ್ಟುಕೊಂಡಿದ್ದೇವೆ. ಕೆರೆಬೇಟೆ ಸಿನಿಮಾ ನನಗೆ ದೊಡ್ಡ ಕನಸಾಗಿತ್ತು. ಆದರೆ ಸಕ್ಸಸ್ ಆಗದೆ ಇರುವ ಬೇಸರ ಇದೆ. ಇನ್ಮುಂದೆ ಒಳ್ಳೆಯ ಕಥೆ ಬಂದರೆ ನಟಿಸುತ್ತೇನೆ ಅಷ್ಟೆ. ಆದರೆ ಪ್ರೊಡಕ್ಷನ್ ಸದ್ಯಕ್ಕೆ ಮಾಡಲ್ಲ’ ಎಂದು ಹೇಳಿದರು.

ನಿರ್ದೇಶಕ ರಾಜಗುರು ಮಾತನಾಡಿ ನನ್ನ ಕನಸನ್ನು ನನಸು ಮಾಡಿದ ಜನಮನ ಸಿನಿಮಾ ಸಂಸ್ಥೆಗೆ ಧನ್ಯವಾದಗಳು. ಈ ಸಿನಿಮಾಗೆ ದೊಡ್ಡ ದೊಡ್ಡ ಡೈರೆಕ್ಟರ್ಗಳು, ಹೀರೋ ಹಾಗೂ ಹೀರೋಯಿನ್ಸ್ ಸಪೋರ್ಟ್ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದರು.

ಇನ್ನು ನಾಯಕಿ ಬಿಂದು ಗೌಡ ಮಾತನಾಡಿ, ‘ಈ ಸಿನಿಮಾ ನೋಡಿದ ಎಲ್ಲರೂ ಒಳ್ಳೆಯ ರಿವ್ಯೂ ಕೊಟ್ಟಿದ್ದಾರೆ. ಆ ಖುಷಿ ಇದೆ. ಸಿನಿಮಾ ತಂಡಕ್ಕೆ ಧನ್ಯವಾದಗಳು ಎಂದರು. ಇನ್ನೂ ನಟಿ ಹರಣಿ ಮಾತನಾಡಿ ಧನ್ಯವಾದ ತಿಳಿಸಿದರು.

ಇನ್ನು ನಿರ್ದೇಶಕರಾದ ದಯಾಳ್ ಪದ್ಮನಾಭ್, ಶಶಾಂಕ್, ನಿರ್ಮಾಪಕ ಉದಯ್ ಮೆಹ್ತಾ ಸಿನಿಮಾರಂಗದಲ್ಲಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು. ಸಿನಿಮಾ ಸಕ್ಸಸ್ ಆಗಿಲ್ಲ ಎನ್ನುವ ಬೇಸರದಲ್ಲಿದ್ದ ನಾಯಕ ಗೌರಿಶಂಕರಿಗೆ ಸಮಾಧಾನ ಮಾಡಿದರು. ಸಿನಿಮಾವನ್ನು ಜನ ಒಪ್ಪಿಕೊಂಡಿದ್ದಾರೆ, ಉತ್ತಮ ರಿವ್ಯೂ ಕೊಟ್ಟಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು. ನಟ ಪ್ರಥಮ್ ಕೂಡ ಮಾತನಾಡಿ 50 ದಿನದ ಸಂಭ್ರಮದಲ್ಲಿ ಬೇಸರದ ಮಾತುಗಳು ಬೇಡ ಎಂದು ಗೌರಿಶಂಕರ್ ಗೆ ಧೈರ್ಯ ತುಂಬಿದರು.

ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರುಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು.

Categories
ಸಿನಿ ಸುದ್ದಿ

ಕರಾವಳಿಗೆ ಬಂದ ಖಡಕ್ ಖಳನಟ: ಡೈನಾಮಿಕ್ ಪ್ರಿನ್ಸ್ ಎದುರು ತೊಡೆ ತಟ್ತಾರೆ ಮಿಸ್ಟರ್ ದುಬೈ

ಸೆಟ್ಟೇರಿದಾಗಿಂದಲೂ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಕರಾವಳಿ..ಗುರುದತ್ ಗಾಣಿಗ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರೋ ಕರಾವಳಿ ಸಿನಿಮಾಗೆ ಖಡಕ್ ವಿಲನ್ ಎಂಟ್ರಿ ಕೊಟ್ಟಾಗಿದೆ.

ಪ್ರತಿ ಪಾತ್ರವರ್ಗವನ್ನ ವಿಭಿನ್ನ ರೀತಿಯಲ್ಲಿ ಇಂಟ್ರಡ್ಯೂಸ್ ಮಾಡುತ್ತಿರೋ ನಿರ್ದೇಶಕ ಗುರುದತ್ ಗಾಣಿಗ ಚಿತ್ರದ ಮತ್ತೊಂದು ಮುಖ್ಯಪಾತ್ರಧಾರಿಯನ್ನ ವಿಶೇಷ ರೀತಿಯಲ್ಲಿ ಪರಿಚಯಿಸಿದ್ದಾರೆ. ಕರಾವಳಿ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಎದುರು ಅಬ್ಬರಿಸಲು ಮಿಸ್ಟರ್ ದುಬೈ ಶಿಥಿಲ್ ಪೂಜಾರಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಮಂಗಳೂರು ಮೂಲದ ಶಿಥಿಲ್ ಪೂಜಾರಿ ದುಬೈನಲ್ಲಿ ನೆಲಸಿದ್ದು ಕರಾವಳಿ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಆಯ್ಕೆ ಆಗಿದ್ದಾರೆ. ಬೆಸ್ಟ್ ಎಂಟರ್ಟೈನರ್ ದುಬೈ, ಬೆಸ್ಟ್ ಪೀಪಲ್ ಚಾಯ್ಸ್ ದುಬೈ , ಬೆಸ್ಟ್ ಫಿಜಿಕ್ಸ್ ದುಬೈ ಪಡೆದುಕೊಂಡು ಈ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರೋ ಮೊದಲ ಕನ್ನಡಿಗ ಶಿಥಿಲ್ ಆಗಿದ್ದಾರೆ.

ಸದ್ಯ ಕರಾವಳಿ ಸಿನಿಮಾದಲ್ಲಿ ವಾಲಿ ಎಂಬ ನೆಗೆಟಿವ್ ಶೇಡ್ ನಲ್ಲಿ ಶಿಥಿಲ್ಅಭಿನಯ ಮಾಡುತ್ತಿದ್ದು ಮೊದಲ ಹಂತದ ಚಿತ್ರೀಕರಣ ಮುಗಿಸಿರೋ ಶಿಥಿಲ್ ಮತ್ತೆ ಎರಡನೇ ಹಂತದ ಚಿತ್ರೀಕರಣಕ್ಕೇ ಕರಾವಳಿ ತಂಡ ಸೇರಿಕೊಳ್ಳಲಿದ್ದಾರೆ.

ಸದ್ಯ ಶಿಥಿಲ್ ಲುಕ್ ಮೊದಲ ನೋಟದಲ್ಲೇ ಭರವಸೆ ಮೂಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಭರವಸೆಯ ಖಳನಾಟನಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ…

Categories
ಸಿನಿ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಆಶಿಕಾ ರಂಗನಾಥ್: ವಿಶ್ವಂಭರ ಸಿನಿಮಾಗೆ ಎಂಟ್ರಿ‌

ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ಅಮಿಗೋಸ್‌ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದ ಆಶಿಕಾ ಆ ಬಳಿಕ ನಾ ಸಾಮಿ ರಂಗ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದರು. ಈಗ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.


ಚಿರು ಅಭಿನಯಿಸುತ್ತಿರುವ ‘ವಿಶ್ವಂಭರ’ ಚಿತ್ರದಲ್ಲಿ ಚುಟುಚುಟು ಚೆಲುವೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್​ ನಟಿಸಲಿದ್ದಾರೆ. ಯು ವಿ ಕ್ರಿಯೇಷನ್ ಬ್ಯಾನರ್ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿಂಬಿಸಾರ ಚಿತ್ರ ನಿರ್ದೇಶಿಸಿದ್ದ ವಸಿಷ್ಠ ವಿಶ್ವಂಭರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ಚೋಟಾ ಕೆ ನಾಯ್ಡು ಛಾಯಾಗ್ರಹಣ, ರಾಮ ಲಕ್ಷ್ಮಣ ಸಾಹಸ ನಿರ್ದೇಶನ ವಿಶ್ವಂಭರ ಚಿತ್ರಕ್ಕಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಮರ್ ಫಿಲಂ ಫ್ಯಾಕ್ಟರಿಯ ‘ರೆಡ್ ರಾಕ್ ಸ್ಟುಡಿಯೋ’ ಶುರು: ಪ್ರಿಯಾಂಕಾ ಉಪೇಂದ್ರ ಚಾಲನೆ

ಚಲನಚಿತ್ರಗಳು, ಶಾರ್ಟ್ ಫಿಲಂ, ವೆಬ್ ಸಿರೀಸ್ ಮೊದಲಾದವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯ ಹೊಂದಿರುವ ‘ರೆಡ್ ರಾಕ್ ಸ್ಟುಡಿಯೋ’ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.

ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸುಸಜ್ಜಿತ ರೀತಿಯಲ್ಲಿ, ಆಧುನಿಕ ಶೈಲಿಯಲ್ಲಿ ‘ಕಮರ್ ಫಿಲಂ ಫ್ಯಾಕ್ಟರಿ’ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ವನ್ನು ನಟಿ ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು. ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೇ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, ‘ಇಂದಿನ ದಿನಗಳಲ್ಲಿ ಸಿನಿಮಾಗಳಿಗೆ ಕಂಟೆಂಟ್ ಮತ್ತು ಕ್ವಾಲಿಟಿ ತುಂಬ ಮುಖ್ಯ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಹೊಸ ಸಿನಿಮಾ ಮೇಕರ್ಸ್ ತುಂಬ ಹೊಸದಾಗಿ ಯೋಚಿಸುತ್ತಿದ್ದಾರೆ.

ಅಂಥವರಿಗೆ ಕೈಗೆಟಕುವ ದರದಲ್ಲಿ ತಂತ್ರಜ್ಞಾನ ಲಭ್ಯತೆಯಿದ್ದರೆ ಗುಣಮಟ್ಟದಲ್ಲಿ ಸಿನಿಮಾ ಮಾಡಬಹುದು. ‘ರೆಡ್ ರಾಕ್ ಸ್ಟುಡಿಯೋ’ದಲ್ಲಿ ಇಂದಿನ ಸಿನಿಮಾ ಮೇಕರ್ಸ್ ಗೆ ಬೇಕಾದ ಎಲ್ಲ ಸೌಲಭ್ಯಗಳಿದ್ದು, ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ’ ಎಂದು ಆಶಿಸಿದರು.

ಇನ್ನು ನೂತನವಾಗಿ ಆರಂಭವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ದಲ್ಲಿ ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳಿಗೆ ಬೇಕಾದ ಎಡಿಟಿಂಗ್, ಡಬ್ಬಿಂಗ್, ಡಿ.ಐ, ವಿಎಫ್ಎಕ್ಸ್, ಗ್ರೀನ್ ಮ್ಯಾಟ್ ಶೂಟ್, ಪೋಟೋ ಶೂಟ್, 5.1 &
7.1 ಸೌಂಡ್ ಸಿಸ್ಟಂ, ಅಟ್ಮೋಸ್ ಹೀಗೆ ಎಲ್ಲ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳಿದ್ದು, ಕೈಗೆಟಕುವ ದರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಒಂದೇ ಸೂರಿನಡಿ ಬೆಂಗಳೂರಿನಲ್ಲೇ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಹಾಜರಿದ್ದ ‘ಕಮರ್ ಫಿಲಂ ಫ್ಯಾಕ್ಟರಿ’ಯ ಕಮರ್, ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು,

ಮೊದಲಾದವರು ‘ರೆಡ್ ರಾಕ್ ಸ್ಟುಡಿಯೋ’ ದ ಹಿಂದಿನ ಉದ್ದೇಶ, ಲಭ್ಯವಿರುವ ಸೌಲಭ್ಯಗಳು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಸಂಭವಾಮಿ ಯುಗೇ ಯುಗೇ ಫಸ್ಟ್ ಸಾಂಗ್ ಬಂತು: ಡೋಲು ತಮಟೆ ಸೌಂಡು ಮಾಡಿದ ಶ್ರುತಿ ಹರಿಹರನ್

ಪ್ರತಿಭಾ ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭವಾಮಿ ಯುಗೇಯುಗೇ” ಚಿತ್ರದ ಮೊದಲ ಹಾಡು “ಡೋಲು ತಮಟೆ ವಾದ್ಯ” ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಟಿ ಶ್ರುತಿ ಹರಿಹರನ್ ಜಾನಪದ ಶೈಲಿಯ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ.

ಇದು ನನ್ನ ಮೊದಲ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟು ಇಂಥದ್ದೊಂದು ಅವಕಾಶ ಕೊಟ್ಟ ನಿರ್ಮಾಪಕಿ ಪ್ರತಿಭಾ ಅವರಿಗೆ ಧನ್ಯವಾದಗಳು. ಇದೊಂದು ಕಮರ್ಷಿಯಲ್‍ ಥ್ರಿಲ್ಲರ್ ನ ಚಿತ್ರ. ಮಂಡ್ಯ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಾನು ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೆ. ಇದೊಂದು ಹಳ್ಳಿ ಹಿನ್ನೆಲೆಯ ಚಿತ್ರ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲಸಬೇಕು ಎಂಬುದೆ ಚಿತ್ರದ ಕಥಾ ಸಾರಾಂಶ. ಜೂನ್‍ 21ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಇದು ಕಮರ್ಷಿಯಲ್‍ ಚಿತ್ರವಾದರೂ ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳಿವೆ ಎಂದು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.

ಇದೊಂದು ಕೃಷಿ ಮತ್ತು ರೈತರ ಸಿನಿಮಾ ಎಂದು ಮಾತನಾಡಿದ ನಾಯಕ ಜಯ್ ಶೆಟ್ಟಿ, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಧನ್ಯವಾದಗಳು ಎಂದರು.

ನಾನು ಬಿಜಾಪುರ ಮೂಲದವಳು. ಆದರೆ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಒಂಬತ್ತು ವರ್ಷಗಳ ಕಾಲ ಮಾಡಲಿಂಗ್‍ ಮಾಡಿದ್ದೇನೆ. ಹೀಗಿರುವಾಗಲೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನನ್ನ ಭಾಷೆ ಮತ್ತು ನಟನೆಯನ್ನು ತಿದ್ದಿತೀಡಿದ ನಿರ್ದೇಶಕ ಚೇತನ್‍ ಶೆಟ್ಟಿ ಅವರಿಗೆ ಧನ್ಯವಾದಗಳು ಎಂದರು ನಾಯಕಿ ನಿಶಾ ರಜಪೂತ್ .

ಪ್ರಮುಖಪಾತ್ರದಲ್ಲಿ ನಟಿಸಿರುವ ಅಶೋಕ್ ಕುಮಾರ್ ಹಾಗೂ ಮಧುರಗೌಡ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು.

ಚಿತ್ರದಲ್ಲಿ ನಟಿಸಿರುವ ರಾಜೇಂದ್ರ ಕಾರಂತ್‍, ಅಶ್ವಿನ್‍ ಹಾಸನ್‍, ವಿಕ್ಟರಿ ವಾಸು, ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ, ಕಾರ್ಯಕಾರಿ ನಿರ್ಮಾಪಕ ದಿನೇಶ್ ರಾಜನ್ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಹಾಜರಿದ್ದರು.
ನಿರ್ಮಾಪಕಿ ಪ್ರತಿಭಾ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

error: Content is protected !!