Categories
ಸಿನಿ ಸುದ್ದಿ

ಚಿದಂಬರನ ರುಚಿಸುವ ಶುಚಿಸುವ ಕಥೆ

ರೇಟಿಂಗ್ : 3/5

ನಿರ್ದೇಶನ : ಆನಂದ್ ರಾಜ್ ಎಂ.
ನಿರ್ಮಾಣ : ರೂಪ ಡಿ.ಎನ್
ತಾರಾಗಣ: ಅನಿರುದ್ಧ, ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ ಇತರರು.

ಅನಿರುದ್ಧ ಅವರು ಸಹಜ ಅಭಿನಯಕ್ಕೆ ಸುದ್ದಿಯಾದವರು. ಯಾವುದೆ ಪಾತ್ರ ಇರಲಿ ಸೈ ಎನಿಸಿಕೊಂಡವರು. ಈಗ ಶೆಫ್ ಆಗಿಯೂ ರುಚಿಸುವ ನಟನೆ ಕೊಡಬಲ್ಲೆ ಅಂತ ಸಾಬೀತು ಪಡಿಸಿದ್ದಾರೆ.

ಈ ವಾರ ತೆರೆಕಂಡ ಶೆಫ್ ಚಿದಂಬರ ಹೊಸ ವ್ಯಾಖ್ಯಾನದೊದಿಗೆ ಪ್ರೇಕ್ಷಕರ‌ ಮುಂದೆ ಬಂದಿದೆ. ಹೊಡಿ ಬಡಿ ಕಡಿ ಕಥೆಗಳ ಜೊತೆಗೆ ಒಂದೊಳ್ಳೆಯ ಮನರಂಜನೆ ಮತ್ತು ಅಲ್ಲಲ್ಲಿ ಕುತೂಹಲ ಮೂಡಿಸುವ ಕಥೆ ಜೊತೆಗೆ ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗುತ್ತದೆ.

ನಿರ್ದೇಶಕ ಆನಂದರಾಜ್ ಅವರ ಕಥೆಯಲ್ಲಿ ಹೊಸತನವಿದೆ. ಚಿತ್ರಕಥೆಯಲ್ಲೂ ಬಿಗಿಹಿಡಿತವಿದೆ. ಇನ್ನು ನಿರೂಪಣೆ ಶೈಲಿಯ ವಿಧಾನ ಕೂಡ ಇಷ್ಟ ಆಗುತ್ತೆ. ಒಬ್ಬ ಅಡುಗೆ ಮಾಡುವ ನಿಪುಣನ ತರಹೇವಾರಿ ತೊಳಲಾಟಗಳನ್ನು ಅಷ್ಟೇ ಚಂದವಾಗಿ ಕಟ್ಟಿಕೊಟ್ಟಿದ್ದಾರೆ.

ಮೊದಲರ್ಧ ಸರಾಗವಾಗಿ ಸಾಗುವ ಕಥೆಯಲ್ಲಿ ಸಾಕಷ್ಟು‌ ಮಜಬೂತು ಎನಿಸುವ ಅಂಶಗಳಿವೆ. ಒಬ್ಬ ಶೆಫ್ ಬರೀ ರುಚಿಸುವ ಖಾದ್ಯ ಮಾಡುವಲ್ಲಿ ನಿಪುಣ ಅಲ್ಲ, ಒಂದು ಘಟನೆಯಲ್ಲಿ ಸಿಲುಕಿದ ಬಳಿಕವೂ ಹೇಗೆ ಪಾರಾಗುತ್ತಾನೆ ಎಂಬುದರಲ್ಲೂ ಜಾಣತನ ಮೆರೆಯುತ್ತಾನೆ ಅನ್ನೋದನ್ನು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಒಂದಷ್ಟು ಸಣ್ಣಪುಟ್ಟ ಅಂಶಗಳ ಕಡೆ ಗಮನ ಹರಿಸಿದ್ದರೆ, ಚಿದಂಬರನ ಕಥೆ ಮತ್ತಷ್ಟು ರುಚಿಸುತ್ತಿತ್ತು. ಅದೇನೆ ಇದ್ದರೂ ಕೆಲವು ಸನ್ನಿವೇಶಗಳು ರುಚಿಗೆ ತಕ್ಕಷ್ಟು ಉಪ್ಪಿನಂತೆ ರುಚಿಸುತ್ತ ಹೋಗುತ್ತವೆ. ಕಥೆಗೆ ಪೂರಕವಾಗಿರುವ ಹಾಡು ಕೂಡ ಗಮನಸೆಳೆಯುತ್ತೆ.

ಚಿದಂಬರನ ಕಥೆ ಏನು?

ತನ್ನ ಪಾಡಿಗೆ ತಾನು ಶೆಫ್ ಕೆಲಸ ಮಾಡಿಕೊಂಡು ತನ್ನ ಪ್ರೀತಿಯ ಹುಡುಗಿಯ ಜೊತೆ ದಿನ ಸವೆಸುವ ಚಿದಂಬರ ಬದುಕಲ್ಲಿ ಒಂದು ಘಟನೆ ನಡೆಯುತ್ತೆ. ತನಗೇ ಅರಿವಿಲ್ಲದೆ ಒಂದು ಕ್ರಮಿನಲ್ ಲೋಕಕ್ಕೆ ಸಿಕ್ಕಿಕೊಳ್ಳುತ್ತಾನೆ. ಒಂದು ಸಾವು ವಿಷಯವನ್ನು ಯಾರಿಗೂ ಗೊತ್ತಾಗಬಾರದು ಅಂತ ಅದನ್ನು ಮುಚ್ಚಿಡಲು ಹೋಗಿ ಒಂದಷ್ಟು ಪೇಚಿಗೆ ಸಿಲುಕುತ್ತಾನೆ. ಆಮೇಲೆ ಹೇಗೆ ಅದಕ್ಕೆ ಅಂತ್ಯ ಹೇಳುತ್ತಾನೆ ಎಂಬುದು ವಿಶೇಷ.

ಸಿನಿಮಾದುದ್ದಕ್ಕೂ ಮಜ ಎನಿಸುವ ಅಂಶಗಳ ಜೊತೆಗೆ ಒಂದಷ್ಟು ಒದ್ದಾಡುವ ಸೀನ್ ಗಳು ನಗುತರಿಸುತ್ತವೆ. ಇನ್ನು ಒಬ್ಬಾಕೆಯ ಕೊಡುವ ದೊಡ್ಡ ಡೀಲ್ ಯಾವುದು? ಅದರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆಯ ತಿರುಳು. ಇದರ ಮಧ್ಯೆ ಒಂದಷ್ಟು ಪಾತ್ರಗಳು ಕಾಣಿಸಿಕೊಂಡು ಸಿನಿಮಾ ವೇಗವನ್ನು ಹೆಚ್ಚಿಸುತ್ತಾ ಹೋಗುತ್ತವೆ. ಒಟ್ಟಾರೆ, ಒಂದು ಇಂಟ್ರೆಸ್ಟಿಂಗ್ ಎಲಿಮೆಂಟ್ಸ್ ಇದರಲ್ಲಿದೆ. ಅದರ ರುಚಿ ಸವಿಯುವ ಕುತೂಹಲ ಇದ್ದರೆ ಒಮ್ಮೆ ಶೆಫ್ ಚಿದಂಬರನ ನೋಡಬಹುದು.

ಮುಖ್ಯವಾಗಿ ಇಲ್ಲಿ ಹಣಕ್ಕಿಂತ ರುಚಿಸುವ ಅಡುಗೆ ಮುಖ್ಯ ಎಂಬ ಧೈಯವಾಕ್ಯ ಚಿದಂಬರನದು. ಅದೇನೆಂಬ ಕಾತರ ಇದ್ದರೆ ನೋಡಲ್ಲಡ್ಡಿಯಿಲ್ಲ.

ನಿರ್ದೇಶಕ ಆನಂದರಾಜ್ ಅವರ ಪ್ರಯತ್ನ ಕೂಡ ರುಚಿಸಿದೆ. ಹಾಸ್ಯ ಹಾಸುಹೊಕ್ಕಾಗಿಲ್ಲ. ಆದರೆ, ಪೋಣಿಸಿರುವ ಕಥೆಯಲ್ಲಿ ಫೋರ್ಸ್ ಇದೆ. ಮನುಷ್ಯನಲ್ಲಿರುವ ಆಸೆ ಆಕಾಂಕ್ಷೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಕಥೆ ಹೇಳುತ್ತದೆ.

ಯಾರು ಹೇಗೆ?

ಹಲವು ಸಿನಿಮಾಗಳಲ್ಲಿ ಸಹಜ ನಟನಾಗಿ ಸೈ ಎನಿಸಿಕೊಂಡ ಅನಿರುದ್ಧ್ ಇಲ್ಲೂ ಅವರು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಗೆದ್ದಿದ್ದಾರೆ‌. ಶೆಫ್ ಆಗಿ ಪರಿಪೂರ್ಣ ನಟರಾಗಿ ಮತ್ತೆ ಸಾಬೀತುಪಡಿಸಿದ್ದಾರೆ.
ಉಳಿದಂತೆ ಕಾಣಿಸಿಕೊಂಡಿರುವ
ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ ಇತರರು ಕೂಡ ಪಾತ್ರಕ್ಕೆ ಮೋಸ‌ ಮಾಡಿಲ್ಲ. ಸಿನಿಮಾದ ವೇಗಕ್ಕೆ‌ಎಲ್ಲರೂ ಹೆಗಲಾಗಿದ್ದಾರೆ.

ಟೆಕ್ನೀಷಿಯನ್ಸ್ ಬಗ್ಗೆ ಹೇಳುವುದಾದರೆ ಉದಯಲೀಲಾ ಅವರ ಕ್ಯಾಮೆರಾ ಬಕೈಚಳಕ ಕೂಡ ಚಿದಂಬರನ ಆಟೋಟಾಪಗಳನ್ನು ಅಂದವಾಗಿಸಿದೆ. ಹಾಗೆಯೇ ರಿತ್ವಿಕ್ ಮುರಳಿಧರ್ ಸಂಗೀತ ಮತ್ತು ಹಿನ್ನೆಲೆ ಚಿತ್ರವನ್ನು‌ ಮತ್ತಷ್ಟು ರಂಜಿಸುವಲ್ಲಿ ಸಹಕಾರಿಯಾಗಿದೆ.

Categories
ಸಿನಿ ಸುದ್ದಿ

ಕೋಟಿ ನೋಡಿ ಚಿಲ್ ಮಾಡಿ: ಜೂನ್ 14 ರಿಲೀಸ್

ಇದೇ ಶುಕ್ರವಾರ ಬಿಡುಗಡೆಗೆ ಸಜ್ಜಾಗಿರುವ ಡಾಲಿ ಧನಂಜಯ ಅಭಿನಯದ ‘ಕೋಟಿ’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಟ್ರೆಂಡ್ ಆಗಿದ್ದು ಮಂಗಳವಾರದಿಂದ ಟಿಕೇಟ್ ಬುಕಿಂಗ್ ಓಪನ್ ಆಗ್ತಾ ಇದೆ.

ಈ ಚಿತ್ರದ ಬರಹಗಾರ, ನಿರ್ದೇಶಕ ಪರಮ್ ಕಿರುತೆರೆಯಲ್ಲಿ ಬಹುದೊಡ್ಡ ಹೆಸರು. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿ ಯಶಸ್ಸಿನ ಅಲೆಯಲ್ಲಿ ತೇಲೆಸಿದ್ದ ಇವರು ಈಗ ನಿರ್ದೇಶನದ ಟೋಪಿ ತೊಟ್ಟಿದ್ದಾರೆ. ‘ಕೋಟಿ’ ತಂಡ ಬಹುಸಕ್ರಿಯವಾಗಿ ಸಿನಿಮಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಬಸ್ಸು, ಮೆಟ್ರೋ, ಟೀವಿ, ಯೂಟ್ಯೂಬ್, ಇನ್ಟಾಗ್ರಾಮ್ ಎಲ್ಲೆಡೆಯೂ ಕೋಟಿ ಸುದ್ದಿ ಮಾಡ್ತಾ ಇದೆ.

ಇತ್ತೀಚೆಗೆ ಅದ್ದೂರಿಯಾಗಿ ನಡೆದ ಕೋಟಿ ಸಿನಿಮಾದ ಪ್ರೀರಿಲೀಸ್ ವಿಶೇಷ ಟೀವಿ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಆಗಮಿಸಿ ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆಯ ಮೇಲಿದ್ದು‌ ತಂಡಕ್ಕೆ ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ಚಿತ್ರತಂಡ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೋಟಿಯ ಮೊದಲ ಟಿಕೇಟ್ ನೀಡಿತು. ಹತ್ತಾರು ವರ್ಷ ಟೀವಿ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ಪರಮ್ ಅವರಿಗೆ ಎಲ್ಲೆಡೆ ಸ್ನೇಹಿತರಿದ್ದಾರೆ. ಇದೇ ಬುಧವಾರ ‘ಕೋಟಿ’ ತಂಡ ಟೆಲಿವಿಷನ್ ಮತ್ತು ಸಿನಿಮಾತಾರೆಗಳಿಗೆ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದ್ದು. ದೊಡ್ಡ ಸಂಖ್ಯೆಯಲ್ಲಿ ತಾರೆಗಳು ಸೇರುವ ನಿರೀಕ್ಷೆ ಇದೆ. ತಾರೆಗಳಿಗಾಗಿಯೇ ಎರಡೆರಡು ಪ್ರೀಮಿಯರ್ ಶೋಗಳನ್ನು ಆಯೋಜಿಸಿರುವುದೇ ಇದಕ್ಕೆ ಸಾಕ್ಷಿ. ಇದರ ಜತೆಗೆ ಸಿನಿರಸಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳ ಸಹ ಇವೆ!

ಗುರುವಾರ ಮೈಸೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿದ್ದು ಧನಂಜಯ್‌ ಮತ್ತು ಚಿತ್ರತಂಡ ಮೈಸೂರಿನ ಸಿನಿರಸಿಕರ ಜತೆ ಸಿನಿಮಾ ನೋಡಲಿದ್ದಾರೆ. ಕೋಟಿ ಸಿನಿಮಾ ಶುಕ್ರವಾರದಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.

ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕೊಲೆ ಪ್ರಕರಣ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ವಶಕ್ಕೆ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೇಣುಕಾ ಸ್ವಾಮಿ ಎಂಬುವರ ಕೊಲೆ ಕೇಸ್‌ನಲ್ಲಿ ದರ್ಶನ್ ಅವರ ಹೆಸರು ಕೇಳಿ ಬಮದಿದ್ದು, ಇದಕ್ಕೆ‌ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆ.
ಕಾಮಾಕ್ಷಿ ಪಾಳ್ಯದಲ್ಲಿ ಮೃತದೇಹವನ್ನು ಕೊಲೆ ಮಾಡಿ ಎಸೆಯಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆವರು ದರ್ಶನ್ ಹೆಸರು ಪ್ರಸ್ತಾಪಿಸಿದ್ದರು ಎನ್ನಲಾಗಿದೆ.

ಈ ಕಾರಣಕ್ಕೆ ಕಾಮಾಕ್ಷಿ ಪಾಳ್ಯ ಪೊಲೀಸರು ನಟ ದರ್ಶನ್‌ರನ್ನು ವಶಕ್ಕೆ ಪಡೆದಿದ್ದಾರೆ.

ಎರಡು ತಿಂಗಳ ಹಿಂದೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಮೈಸೂರಿನ ತೋಟದ ಮನೆಯಿಂದ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ದರ್ಶನ್ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

ರೇಣುಕಾಸ್ವಾಮಿ ಎಂಬುವವರ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೆಸರು ತಳಕು ಹಾಕಿಕೊಂಡಿದೆ. ದರ್ಶನ್ ಅವರಿಗೆ ಪರಿಚಯಸ್ಥರೊಬ್ಬರಿಗೆ ಕೆಟ್ಟದಾಗಿ ಮೆಸೇಜ್ ಹಾಗೂ ಸಂದೇಶವನ್ನು ರೇಣುಕಾಸ್ವಾಮಿ ಕಳುಹಿಸಿದ್ದ. ಹೀಗಾಗಿ, ರೇಣುಕಾಸ್ವಾಮಿಯ ಕೊಲೆಯಾಗಿತ್ತು. ಕೊಲೆ ಆರೋಪಿ ಜೊತೆ ದರ್ಶನ್ ಸಂಪರ್ಕದಲ್ಲಿದ್ದರು. ಹೀಗಾಗಿ, ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.

Categories
ಸಿನಿ ಸುದ್ದಿ

ತಾಜ್ ಸಿನಿಮಾದ ತಾಜಾ ಟೀಸರ್- ಹಾಡು ಬಂತು

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ತಾಜ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ತಾಜ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಸೆನ್ಸಾರ್ ಮುಂದಿದೆ. ಇದೇ ವೇಳೆ ‘ತಾಜ್’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದ ಟೀಸರ್ ಮತ್ತು ಹಾಡೊಂದನ್ನು ಬಿಡುಗಡೆ ಮಾಡಿದೆ.

‘ಶ್ರೀಪಾವನಿ ಲಕ್ಷ್ಮೀ ಕಂಬೈನ್ಸ್’ ಲಾಂಛನದಲ್ಲಿ ಶ್ರೀಮತಿ ಲಕ್ಷ್ಮೀ ಷಣ್ಮುಖ ನಿರ್ಮಾಣ ಮಾಡಿರುವ ‘ತಾಜ್’ ಸಿನಿಮಾಕ್ಕೆ ಬಿ. ರಾಜರತ್ನ ಆ್ಯಕ್ಷನ್-ಕಟ್ ಹೇಳಿದ್ದಾರೆ. ಯುವ ಪ್ರತಿಭೆ ಷಣ್ಮುಖ ‘ತಾಜ್’ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜವಾಡಿ, ಶೋಭರಾಜ್, ವರ್ಧನ್, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಸೂರಜ್ ಮೊದಲಾದ ಕಲಾವಿದರು ‘ತಾಜ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯ ನಿರ್ಮಾಪಕ ಮತ್ತು ಛಾಯಾಗ್ರಹಕರಾದ ಅಣಜಿ ನಾಗರಾಜ್, ನಿರ್ಮಾಪಕ ಸತೀಶ್, ‘ಹತಾರ’ ಚಿತ್ರದ ನಿರ್ಮಾಪಕ ಸೌಗತ್, ನಾಯಕ ನಟರಾದ ಚಂದು ಶಿವಾನಂದ್ ಸೇರಿದಂತೆ ಚಿತ್ರರಂಗದ ಅನೇಕರು ಮತ್ತು ‘ತಾಜ್’ ಸಿನಿಮಾದ ಬಹುತೇಕ ಕಲಾವಿದರು, ತಂತ್ರಜ್ಞರು ಹಾಜರಿದ್ದು, ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡನ್ನು ಬಿಡುಗಡೆಗೊಳಿಸಿದರು.

ಸುಮಾರು 12 ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ಬರಹಗಾರನಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಬಿ. ರಾಜರತ್ನ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಮೊದಲಿಗೆ ‘ತಾಜ್’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಬಿ. ರಾಜರತ್ನ, ‘ಸುಮಾರು ಹತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ ನಂತರ ನಿರ್ಮಾಪಕರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ. ನಮ್ಮ ಸುತ್ತಮುತ್ತ ನಡೆದ ಶೇಕಡಾ 80 ರಷ್ಟು ನೈಜ ಘಟನೆಗಳು ಮತ್ತು ಶೇಕಡಾ 20 ರಷ್ಟು ಸಿನಿಮೀಯ ಅಂಶಗಳನ್ನು ಇಟ್ಟುಕೊಂಡು ‘ತಾಜ್’ ಸಿನಿಮಾ ಮಾಡಲಾಗಿದೆ. ಹಿಂದೂ-ಮುಸ್ಲಿಂ ಜೋಡಿಯ ಪ್ರೇಮಕಥೆ ಸಿನಿಮಾದಲ್ಲಿದ್ದು, ಜೊತೆಗೆ ಮಾನವೀಯ ನೆಲೆಗಟ್ಟು, ಸಾಮಾಜಿಕ ಸಂದೇಶ ಎಲ್ಲವನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

ನವನಟ ಷಣ್ಮುಖ ‘ತಾಜ್’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡುವ ನಾಯಕ ನಟ ಷಣ್ಮುಖ, ‘ಮೊದಲ ಸಿನಿಮಾ 10 ಕಥೆಗಳನ್ನು ಕೇಳಿ ನಂತರ ಮಾಡಿದ ಸಿನಿಮಾ. ಈಗಾಗಲೇ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ತೆರೆಗೆ ಬರುವ ಯೋಜನೆಯಿದೆ. ಸುಮಾರು 8 ತಿಂಗಳ ಹಿಂದೆ ಶುರುವಾದ ಸಿನಿಮಾ ಈಗ ತೆರೆಗೆ ಬರುತ್ತಿದೆ. ಹಿಂದೂ-ಮುಸ್ಲಿಂ ನಡುವಿನ ಕಥೆ, ಮಾನವೀಯತೆಯ ನೆಲೆಗಟ್ಟು , ಸಾಮಾಜಿಕ ಸಂದೇಶ ಎರಡೂ ಸಿನಿಮಾದಲ್ಲಿದೆ. ನಮ್ಮ ನಡುವೆಯೇ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ಆರಂಭದಲ್ಲಿ ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ಚಿತ್ರರಂಗಕ್ಕೆ ಬಂದೆ. ಆ ನಂತರದ ಬೆಳವಣಿಯಲ್ಲಿ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಬೇಕಾಯಿತು. ಇಂದಿನ ಪ್ರೇಕ್ಷಕರು ಬಯಸುವಂತ ಒಳ್ಳೆಯ ಕಥೆ, ಮನರಂಜನೆ ಎಲ್ಲವೂ ‘ತಾಜ್’ ಸಿನಿಮಾದಲ್ಲಿದ್ದು, ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ತಾಜ್’ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ನಟ ವರ್ಧನ್ ಮಾತನಾಡಿ, ‘ಈ ಸಿನಿಮಾದಲ್ಲಿ ನಾನು ಮುಸ್ಲಿಂ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಬಾರಿಗೆ ಇಂಥದ್ದೆೊಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ತುಂಬ ಅಚ್ಚುಕಟ್ಟಾಗಿ ಸಿನಿಮಾದ ಕೆಲಸಗಳು ನಡೆದಿದ್ದು, ಅಷ್ಟೇ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ’ ಎಂದು ‘ತಾಜ್’ ಸಿನಿಮಾದಲ್ಲಿನ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ಬೆಂಗಳೂರು ಸುತ್ತಮುತ್ತ ‘ತಾಜ್’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು ಸಿನಿಮಾಕ್ಕೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

ಸದ್ಯ ಬಿಡುಗಡೆಯಾಗಿರುವ ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ಯಂಗ್ ಮ್ಯಾನ್ ಇದು ಸಿಂಗಲ್ ಟೇಕ್ ಚಿತ್ರ ಕಣ್ರೀ: ಜೂನ್ 7 ಕ್ಕೆ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಅವರ “ಇದು ಸಾಧ್ಯ”, ಎಸ್ ನಾರಾಯಣ್ ಅವರ ” ದಕ್ಷ” ಸೇರಿದಂತೆ ಕೆಲವು ಚಿತ್ರಗಳ ಚಿತ್ರೀಕರಣ ಕೆಲವೇ ಗಂಟೆಗಳಲ್ಲಿ ಮುಗಿದಿದ್ದು ಎಲ್ಲರಿಗೂ ತಿಳಿದ ಸಂಗತಿ. ಪ್ರಸ್ತುತ “ಯಂಗ್ ಮ್ಯಾನ್” ಚಿತ್ರದ ಚಿತ್ರೀಕರಣವನ್ನು ಸಿಂಗಲ್ ಟೇಕ್ ನಲ್ಲೇ ಉತ್ಸಾಹಿ ತಂಡ ಮಾಡಿ ಮುಗಿಸಿದೆ . ಚಿತ್ರ ಜೂನ್ 7 ರಂದು ಬಿಡುಗಡೆಯಾಗಲಿದೆ.

ಮುತ್ತುರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಜಯಲಕ್ಷ್ಮಿ ರಾಮೇಗೌಡ ನಿರ್ಮಾಣ ಮಾಡಿದ್ದಾರೆ.‌ ಕ್ರಿಯೇಟಿವ್ ಹೆಡ್ ಆಗಿ ಮುರಳಿ ಎಸ್ ವೈ ಕಾರ್ಯ ನಿರ್ವಹಿಸಿದ್ದಾರೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್ ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ, ಶೃತಿ ಗೌಡ, ಋಷಿ ಅನಿತಾ, ಆನಂದ ಕುಮಾರ್, ನಯನ ಪುಟ್ಡಸ್ವಾಮಿ, ತನುಜಾ, ಅನುಕುಮಾರ್, ಜಯರಾಮ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ದೇಶಪ್ರೇಮ ಕುರಿತಾದ ಕಥಾಹಂದರ ಹೊಂದಿರುವ “ಯಂಗ್ ಮ್ಯಾನ್” ಚಿತ್ರವನ್ನು DSK Cinema’S ಸಂಸ್ಥೆಯ ಮುಖ್ಯಸ್ಥರಾದ ಡಾ.ಸುನಿಲ್ ಕುಂಬಾರ್ ಅವರು
ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಜೂನ್ 14ಕ್ಕೆ ಬರ್ತಾರೆ ಶಿವಮ್ಮ! ಇದು ರಿಷಭ್ ಶೆಟ್ಟಿ ಚಿತ್ರ

ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಅವರು ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ “ಶಿವಮ್ಮ”. ಗ್ರಾಮೀಣ ಸೊಗಡಿನ ಈ ಚಿತ್ರ ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳು ಈ ಚಿತ್ರಕ್ಕೆ ದೊರಕಿದೆ. “ಶಿವಮ್ಮ” ಚಿತ್ರವನ್ನು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ರಿಷಭ್ ಶೆಟ್ಟಿ ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.

ನಾನು ವಿಜಯ ಕರ್ನಾಟಕ ಪತ್ರಿಕೆ ನಡೆಸುವ ಕಿರು ಚಿತ್ರೋತ್ಸವಕ್ಕೆ ಹೋದಾಗ ನಿರ್ದೇಶಕ ಜೈಶಂಕರ್ ಆರ್ಯರ್ ಅವರ ಪರಿಚಯವಾಯಿತು. ಆನಂತರ ನಮ್ಮ “ಕಥಾ ಸಂಗಮ” ಚಿತ್ರದ ನಿರ್ದೇಶಕರಲ್ಲಿ ಅವರು ಒಬ್ಬರಾದರು‌‌‌. ಆನಂತರ ಜೈಶಂಕರ್ ಅವರು “ಶಿವಮ್ಮ” ಚಿತ್ರದ ಕಥೆ ಕುರಿತಾಗಿ ಹೇಳಿದರು. ಕಥೆ ಇಷ್ಟವಾಯಿತು. ನಿರ್ಮಾಣ ಆರಂಭಿಸಿದ್ದೆವು. ಕೋವಿಡ್ ಗೂ ಮುನ್ನ ಆರಂಭವಾದ ಚಿತ್ರವಿದು. ಉತ್ತರ ಕರ್ನಾಟಕದ ಯರೇಹಂಚಿನಾಳ ನಿರ್ದೇಶಕರ ಊರು. ಈ ಚಿತ್ರದಲ್ಲಿ ನಟಿಸಿರುವ “ಶಿವಮ್ಮ” ಪಾತ್ರಧಾರಿ ಶರಣಮ್ಮ ಚಟ್ಟಿ ಅವರ ಊರು ಕೂಡ ಅದೆ. ಆ ಊರಿನ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ‌. ಈವರೆಗೂ ಹದಿನೇಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಶಿವಮ್ಮ” ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿದೆ.

ಜನರಿಗೂ ಈ ಚಿತ್ರ ಇಷ್ಟವಾಗಲಿದೆ. ಏಕೆಂದರೆ ನಾನು ಈ ಚಿತ್ರ ನೋಡಿದ್ದೇನೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾಗೆ ಸಿಕ್ಕ ಮೆಚ್ಚುಗೆ ನೋಡಿ ಖುಷಿಯಾಯಿತು. ಈಗ ಈ ಚಿತ್ರವನ್ನು ಜನರ ಮುಂದೆ ತರುತ್ತಿದ್ದೇನೆ. ಇದೇ ಜೂನ್ 14 ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ‌. “ಶಿವಮ್ಮ” ಎಂಬ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯ ಮಾಡುತ್ತಿದ್ದೇವೆ.‌ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರಕ್ಕಿರಲಿ ಎಂದರು ನಿರ್ಮಾಪಕ ರಿಷಭ್ ಶೆಟ್ಟಿ.

ನಾನು ಮೂಲತಃ ಐಟಿ ಉದ್ಯೋಗಿ. ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ ಯರೇಹಂಚಿನಾಳ ನನ್ನ ತಂದೆಯ ಊರು. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ನನ್ನ ಊರಿನ ಬಗ್ಗೆ ಸಿನಿಮಾ ಮಾಡುವ ಆಸೆಯಾಯಿತು. ಹಾಗಾಗಿ ನಮ್ಮ ಊರಿಗೆ ಹೋದೆ. ಕೋವಿಡ್ ನಿಂದಾಗಿ ಒಂದು ವರ್ಷ ಅಲ್ಲೇ ಇರಬೇಕಾಯಿತು. ಅದು ನನಗೆ ಅನುಕೂಲವಾಯಿತು. ಅಲ್ಲಿನ ಜನರ ಹಾಗೂ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಸಿಕ್ಕಿತ್ತು. ರಿಷಭ್ ಶೆಟ್ಟಿ ಅವರು ನಿರ್ಮಾಣಕ್ಕೆ ಮುಂದಾದರು. ನಮ್ಮ ಊರಿನವರಾದ ಶರಣಮ್ಮ ಚಟ್ಟಿ “ಶಿವಮ್ಮ”ನ ಪಾತ್ರಕ್ಕೆ ಆಯ್ಕೆಯಾದರು. ಅದೇ ಊರಿನ ಹೆಚ್ಚಿನ ಜನರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆನಂತರ ಚಿತ್ರೀಕರಣ ಪೂರ್ಣವಾಗಿ “ಶಿವಮ್ಮ” ಚಿತ್ರ ತೆರೆಗೆ ಬರಲು ಸಿದ್ದವಾಯಿತು. ಬಿಡುಗಡೆಗೂ ಮುನ್ನ ಒಂದುವರ್ಷದಿಂದ ಸಾಕಷ್ಟು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ. ಜೂನ್ 14 ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಜೈಶಂಕರ್ ಆರ್ಯರ್ ತಿಳಿಸಿದರು.

ನಿರ್ದೇಶಕ ಜೈಶಂಕರ್ ಅವರ ತಾಯಿಯನ್ನು ಮಾತನಾಡಿಸಲು ಹೋದಾಗ, ನನ್ನನ್ನು ನೋಡಿದ ಜೈಶಂಕರ್ ಅವರು ಸಿನಿಮಾದಲ್ಲಿ ಮಾಡುತ್ತೀರಾ ಎಂದರು. ನಮಗೆ ಇದೆಲ್ಲಾ ಹೊಸತು. ಯಾವಾಗಲಾದರು ಒಮ್ಮೆ ಸಿನಿಮಾ ನೋಡಿ ಗೊತ್ತಿದೆ‌ ಅಷ್ಟೇ. ಆನಂತರ ನಮ್ಮ ಮನೆಯವರ ಹಾಗು ಊರಿನ ಹಿರಿಯರ ಅನುಮತಿ ಪಡೆದು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರತಂಡದವರು ನಮ್ಮನೆಲ್ಲಾ ಚೆನ್ನಾಗಿ ನೊಡಿಕೊಂಡಿದ್ದಾರೆ. ನಿರ್ದೇಶಕರು ಹಾಗು ತಂಡದವರು ನಟನೆ ಗೊತ್ತಿಲ್ಲದ ನಮಗೆ ನಟಿಸುವುದನ್ನು ಕಲಿಸಿದ್ದಾರೆ ಎಂದು “ಶಿವಮ್ಮ” ಪಾತ್ರಧಾರಿ ಶರಣಮ್ಮ ಚಟ್ಟಿ ಹೇಳಿದರು.

ಚಿತ್ರದಲ್ಲಿ ನಟಿಸಿರುವ ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ಶೃತಿ ಕೊಂಡೇನಹಳ್ಳಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ಪ್ರಮೋದ್ ಶೆಟ್ಟಿ ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಎಸ್.ನಾರಾಯಣ್ ನಿರ್ದೇಶನದ ಸಿನಿಮಾದಲ್ಲಿ ದುನಿಯಾ ವಿಜಯ್- ಶ್ರೇಯಸ್ ಮಂಜು ನಟನೆ

ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್ ಮುಂತಾದ ಜನಪ್ರಿಯ ನಟರ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಡಾ.ಎಸ್ ನಾರಾಯಣ್ ಅವರ ನಿರ್ದೇಶನದ “ಪ್ರೊಡಕ್ಷನ್ ನಂ 1” ಚಿತ್ರ ಇತ್ತೀಚೆಗಷ್ಟೇ ಆರಂಭವಾಗಿದೆ. ಈ ನೂತನ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್ ಅವರು ಜೂನ್ 5 ರಿಂದ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.
ಈಗಾಗಲೇ ಚಿಕ್ಕಮಗಳೂರಿನಲ್ಲಿ ಶ್ರೇಯಸ್ ಮಂಜು ಮುಂತಾದ ಕಲಾವಿದರ ಅಭಿನಯದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರ ಪಾಲ್ಗೊಳ್ಳುವಿಕೆಯಲ್ಲಿ ಮೂಡಿ ಬರುತ್ತಿರುವ ಈ ನೂತನ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯದಲ್ಲೇ ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ‌.

ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಬೃಂದಾ. ವಿಭಿನ್ನಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಎಸ್ ನಾರಾಯಣ್ ಅವರು ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೆ‌ಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನವಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ,ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಂತು ಅವರ ನೃತ್ಯ ನಿರ್ದೇಶನವಿರುವ “ಪ್ರೊಡಕ್ಷನ್ ನಂ 1” ಚಿತ್ರದ ಪಿ.ಆರ್.ಓ ಆಗಿ ಸುಧೀಂದ್ರ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಬೆಣ್ಣೆ ನಗರಿಯಲ್ಲಿ ಕೋಟಿ ಉತ್ಸವ! ದಾವಣಗೆರೆಯಲ್ಲಿ ಡಾಲಿ ಅಬ್ಬರ

ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೋಟಿ’ ಜೂನ್ 14ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.‌ ಈಗಾಗಲೇ ಚಿತ್ರದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ಇದೇ ಬುಧವಾರ ‘ಕೋಟಿ’ಯ ಟ್ರೇಲರ್ ಬಿಡುಗಡೆಯಾಗಲಿದೆ.

‘ಕೋಟಿ’ಯ ಪ್ರಮೋಶನ್ ಸಲುವಾಗಿ ಡಾಲಿ ಧನಂಜಯ ದಾವಣಗೆರೆಗೆ ತೆರಳಿದ್ದರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ‘ದವನ ಫೆಸ್ಟ್’ ಅತಿದೊಡ್ಡ ಕಾಲೇಜ್ ಫೆಸ್ಟಿವಲ್‌ಗಳಲ್ಲೊಂದು. ಇಲ್ಲಿಗೆ ಡಾಲಿ ಮುಖ್ಯ ಅತಿಥಿಯಾಗಿ ಬಂದಿದ್ದು ಅಭಿಮಾನಿಗಳನ್ನು ಖುಷಿಯ ಕಡಲಿನಲ್ಲಿ ತೇಲಿಸಿತ್ತು. ಸುಮಾರು ಐದು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಸೇರಿದ್ದ ಈ ಸಮಾರಂಭದಲ್ಲಿ ಡಾಲಿಯ ಜತೆ ಕೋಟಿಯ ನಾಯಕಿ ಮೋಕ್ಷಾ ಕುಶಾಲ್, ಸಹಕಲಾವಿದರಾದ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್ ಮತ್ತು ಅಭಿಷೇಕ್ ಶ್ರೀಕಾಂತ್ ಪಾಲ್ಗೊಂಡಿದ್ದರು.

ಡಾಲಿ ಧನಂಜಯ ‘ದವನ’ದ ವೇದಿಕೆಯ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಕೇಕೆ, ಕೂಗಾಟ ಮುಗಿಲ ಮುಟ್ಟಿತ್ತು. ‘ಕೋಟಿ’ ಒಬ್ಬ ಸಾಮಾನ್ಯ ಡ್ರೈವರ್‌. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. “ಇಲ್ಲಿ ಯಾರ್ಯಾರಿಗೆ ಕೋಟಿ ದುಡಿಯುವ ಆಸೆ ಇದೆ?” ಎಂದು ನೆರೆದಿದ್ದ ವಿಧ್ಯಾರ್ಥಿಗಳ ಕೇಳಿದ ಧನಂಜಯ ಎಲ್ಲರ ಉತ್ತರ ಕೇಳಿ, “ಕೋಟಿ ನಮ್ಮೆಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ” ಎಂದರು. ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ‘ಕೋಟಿ’ಯ ಟೀಸರ್ ಮತ್ತು ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಧನಂಜಯ್ ಕಾರ್ಯಕ್ರಮದಿಂದ ವಾಪಾಸು ಹೋಗುವವರೆಗೂ ಇಡೀ ಕಾಲೇಜಿನ‌ ಮೂಲೆಮೂಲೆಯಲ್ಲಿ ‘ಡಾಲಿ ಡಾಲಿ’ ಎಂಬ ಅಭಿಮಾನಿಗಳ‌ ಪ್ರೀತಿಯ ದನಿ ಮೊಳಗುತ್ತಿತ್ತು.

ಜೂನ್ 14 ರಂದು ಬಿಡುಗಡೆಗೆ ಸಿದ್ಧವಾಗಿರುವ ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಿಚ್ಚ ಜೊತೆ ಸಂದೇಶ್ ಪ್ರೊಡಕ್ಷನ್ಸ್: ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಸುದೀಪ್

ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಘೋಸ್ಟ್‌” ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್‌. ಸಂದೇಶ್‌.

ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.

ಹಾಗಾದರೆ ಯಾವಾಗ ಶುರು? ಸದ್ಯಕ್ಕೆ ಕಿಚ್ಚ ಸುದೀಪ್‌ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಶುರು, ನಿರ್ದೇಶಕರು ಯಾರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ.

ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ “ಘೋಸ್ಟ್‌ 2” ಅಥವಾ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ”, “ಬೀರಬಲ್ 2” ಸಿನಿಮಾಗಳೂ ಸೆಟ್ಟೇರಲಿವೆ.

Categories
ಸಿನಿ ಸುದ್ದಿ

ಬೇಬೀಸ್: ಇದು ಮಹಿಳಾ ಪ್ರಧಾನ ಚಿತ್ರ: ಮರ್ಡರ್ ಮಿಸ್ಟ್ರಿ ಸಿನಿಮಾಗೆ ಚಾಲನೆ

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರ ವಿರಳ ಎನ್ನಬಹುದು. ಇತ್ತೀಚೆಗೆ ಕೆಲ ಮಹಿಳಾ ತಂತ್ರಜ್ಞರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥವರಲ್ಲಿ ಶ್ರೀಪಲ್ಲವಿ ಕೂಡ ಒಬ್ಬರು. ಇವರೊಂದು ಮಹಿಳಾ ಪ್ರಧಾನ
ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಾನ್ಸೆಪ್ಟ್ ಇಟ್ಟುಕೊಂಡು “ಕ್ಯಾನ್ಬೆರಿ ಬೇಬೀಸ್” ಎಂಬ ಚಿತ್ರವನ್ನು ನಿರ್ದೇಶನ ಮಾಡಹೊರಟಿದ್ದಾರೆ.

5 ಜನ ಯುವತಿಯರ ಸುತ್ತ ನಡೆಯುವ ಕಥೆ ಹೊಂದಿದ ಕ್ಯಾನ್ಬೆರಿ ಬೇಬೀಸ್ ಚಿತ್ರದ ಮುಹೂರ್ತ ಕಳೆದ ಗುರುವಾರ ಬೆಂಗಳೂರಿನ ಶ್ರೀ ಬಲಮುರಿ ಬಾಲಚಂದ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ನಿರ್ದೇಶಕಿ ಶ್ರೀಪಲ್ಲವಿ, ನಾನು ಚಿತ್ರರಂಗಕ್ಕೆ ಬಂದು ಎಂಟು ವರ್ಷವಾಯ್ತು. ಕೆಲ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ನಂತರ ಮಾಯಾಜಾಲ ಎಂಬ ಸಿನಿಮಾ ಡೈರೆಕ್ಟ್ ಮಾಡಿದ್ದೆ. ಇದು ಎರಡನೇ ಚಿತ್ರ. ದೊಡ್ಡ ಕನಸಿಟ್ಟುಕೊಂಡು ಬೆಂಗಳೂರಿಗೆ ಬರುವ ಐವರು ಯುವತಿಯರು ಇಲ್ಲಿ ಬಂದಮೇಲೆ ಏನೆಲ್ಲ ತೊಂದರೆ ರಿಸ್ಕ್ ಗಳನ್ನು ಎದುರಿಸಿದರು ಎಂದು ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು ಸುತ್ತಮುತ್ತ 25ರಿಂದ 30 ದಿನಗಳ ಕಾಲ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ನಂತರ ಕಲಾವಿದರು ನಂದಿನಿಗೌಡ, ರಕ್ಷಾ,ಸಿಂಚನ ಶೆಟ್ಟಿ, ಸಂದೀಪ್ ಮಲಾನಿ, ಪ್ರಕಾಶ್, ಸುಶ್ಮಿತಾಗೌಡ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಹಾಸ್ಯನಟ ವಿಜಯ್ ಚೆಂಡೂರ್ ಅವರು ಚಿತ್ರದ ಕಥೆಗೆ ಹೊಸ ತಿರುವು ಕೊಡುವ ಕಾನ್ಸ್ ಟೇಬಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮತ್ತೊಬ್ಬ ಹಿರಿಯ ನಟ, ಸಂಕಲನಕಾರ ನಾಗೇಂದ್ರ ಅರಸ್ ಈ ಚಿತ್ರದಲ್ಲಿ ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡುತ್ತ ಪಲ್ಲವಿ ಅವರು ಒಳ್ಳೇ ಕಥೆ ಮಾಡಿಕೊಂಡಿದ್ದಾರೆ, ಅಲ್ಲದೆ ಅವರ ಪ್ರಯತ್ನಕ್ಕೆ ಸಪೋರ್ಟ್ ಮಾಡಬೇಕೆಂದು ಈ ಚಿತ್ರ ಒಪ್ಪಿದೆ. ಕನಸಿಟ್ಟುಕೊಂಡು ಬರುವ ಯುವತಿಯರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಸೈಂಟಿಸ್ಟ್ ಎಂದು ಹೇಳಿದರು.

ಇನ್ನು ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಎಸ್.ನಾಗು ಅವರ ಸಂಗೀತವಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ಈಶ್ವರ್ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಆರ್ಯನ್ ರೋಷನ್ ಅವರ ಕೊರಿಯೋಗ್ರಫಿ, ಧನುಷ್ ಅವರ ಸಂಕಲನ, ವೀರೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

error: Content is protected !!