ಚಿಂದೋಡಿ ಬಂಗಾರೇಶ್ ನಿರ್ದೇಶನದಲ್ಲಿ ತಯಾರಾಗಿದ್ದ ‘ಗಾನಯೋಗಿ ಪಂಚಾಕ್ಷರ ಗವಾಯಿ’ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಈ ಸಿನಿಮಾದ ಅತ್ಯುತ್ತಮ ಸಂಗೀತಕ್ಕೆ ಹಂಸಲೇಖ ಮತ್ತು ಗಾಯನಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಆನಂತರ ‘ದಾನಮ್ಮದೇವಿ’ ಚಿತ್ರದೊಂದಿಗೆ ಮತ್ತೊಮ್ಮೆ ಚಿಂದೋಡಿ ಮತ್ತು ಹಂಸಲೇಖ ಸಂಗೀತದ ಮೋಡಿ ಮಾಡಿದ್ದರು. ಈಗ ‘ಹಾನಗಲ್ ಶ್ರೀ ಕುಮಾರೇಶ’ ಚಿತ್ರದಲ್ಲಿ ಮತ್ತೆ ಸಂಗೀತ ಸುಧೆ ಹರಿಸಲಿದ್ದಾರೆ. ಈಗಾಗಲೇ ಸಂಗೀತದ ಮಟ್ಟುಗಳು ತಯಾರಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಇತರೆ ಮಾಹಿತಿ ನೀಡಲಿದ್ದಾರೆ ಚಿಂದೋಡಿ ಬಂಗಾರೇಶ್.
ಹಾನಗಲ್ ಕುಮಾರೇಶರು ಸಂಗೀತಗಾರ ಪಂಚಾಕ್ಷರ ಗವಾಯಿ ಅವರ ಗುರುಗಳು. “ಪಂಚಾಕ್ಷರ ಗವಾಯಿಗಳ ಚಿತ್ರ ಮಾಡುವಾಗ ಕುಮಾರಸ್ವಾಮಿಗಳ ಬಗ್ಗೆ ಓದಿದ್ದೆ. ಈಗ ಅವರದೇ ಜೀವನ ಚರಿತ್ರೆ ಮಾಡುವ ಯೋಗ ಬಂದಿದ್ದು ಪುಣ್ಯವೆಂದೇ ಭಾವಿಸುತ್ತೇನೆ. ಈ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ, ಸ್ವಾಮೀಜಿ, ಮಠಾದೀಶರನ್ನು ಸಂಪರ್ಕಿಸಿದ್ದೇನೆ. ಈಗ ಅಗಡೀಶ ಪ್ರೊಡಕ್ಷನ್ಸ್ ಅಡಿ ಸಿನಿಮಾ ಸೆಟ್ಟೇರುತ್ತಿದೆ” ಎನ್ನುತ್ತಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್.
ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಹಾಡುಗಳು ಸಿದ್ಧವಾಗುತ್ತಿವೆ. ಭಕ್ತಿಪ್ರಧಾನ ಹಾಡುಗಳನ್ನು ಅವರು ಸೊಗಸಾಗಿ ಸಂಯೋಜಿಸುತ್ತಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ‘ಹಾನಗಲ್ ಕುಮಾರೇಶ’ ಚಿತ್ರಕ್ಕಾಗಿ ಭೀಮಕವಿ ವಿರಚಿತ ಬಸವ ಪುರಾಣ 3500 ಸಾಲುಗಳ ಭಾಮಿನಿ ಷಟ್ಪದಿಯಲ್ಲಿರುವ ಪುರಾಣ ಆಧರಿಸಿ ಎಂಟು ನಿಮಿಷಗಳ ಹಾಡೊಂದನ್ನು ಹಂಸಲೇಖ ಸಂಯೋಜಿಸಲಿದ್ದಾರೆ. ಖಂಡಿತವಾಗಿ ಕನ್ನಡಕ್ಕೆ ಇದೊಂದು ಅತ್ಯುತ್ತಮ ಸಂಗೀತಮಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಚಿಂದೋಡಿ. ಕಲಾವಿದರ ಆಯ್ಕೆ ನಡೆದಿದ್ದು, ಜುಲೈನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.