ಜಗ ಮೆಚ್ಚಿದ ಸುಂದರಿ ಭದ್ರಾವತಿಯ ಚೆಲುವೆ ಆಶಾಭಟ್ ದೊಡ್ಡದೊಂದು ತವಕದಲ್ಲಿದ್ದಾರೆ. “ರಾಬರ್ಟ್’ ಚಿತ್ರದ ಮೂಲಕ ಇದೇ ಮೊದಲು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮಾರ್ಚ್ 11 ಕ್ಕೆ ರಾಬರ್ಟ್ ಭರ್ಜರಿ ಆಗಿ ಬಿಡುಗಡೆ ಆಗುತ್ತಿದೆ. ಮೊದಲ ಚಿತ್ರವಾದರೂ ದರ್ಶನ್ ಅವರಂತಹ ಸ್ಟಾರ್ ಜತೆಗೆ ಇದೇ ಮೊದಲು ತೆರೆ ಹಂಚಿಕೊಂಡಿದ್ದು ಮಾತ್ರವಲ್ಲ, ಮೊದಲ ಚಿತ್ರದಲ್ಲೇ ಕನ್ನಡದ ಜತೆಗೆ ತೆಲುಗಿಗೂ ಎಂಟ್ರಿ ಆಗುತ್ತಿದ್ದಾರೆ ಮಾಡೆಲ್ ಆಶಾ ಭಟ್. ಫಸ್ಟ್ ಟೈಮ್ ನಟಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿರುವ ಆಶಾ ಭಟ್ “ರಾಬರ್ಟ್ʼ ಕುರಿತು ಹೇಳುವುದಿಷ್ಟು….
- ಕೊನೆಗೂ ನೀವು ತೆರೆ ಕಾಣಸಿಕೊಳ್ಳುವ ಕ್ಷಣ ಬಂದೇ ಬಿಟ್ಟಿದೆ, ಹೇಗನಿಸುತ್ತೆ ?
- ಹೌದು, ಬಾಳಾ ಖುಷಿ ಆಗ್ತಿದೆ. ಈ ದಿನಕ್ಕಾಗಿ ನಾವೆಲ್ಲ ಕಾಯ್ತ ಇದ್ದೇವು. ಅಂತೂ ಆ ದಿನ ಬಂದೇ ಬಿಟ್ಟಿದೆ. ನಂಗಂತೂ ತುಂಬಾ ಎಕ್ಸೈಟ್ ಆಗ್ತಿದೆ. ಇಷ್ಟು ದೊಡ್ಡ ಜನರ ಪ್ರೀತಿ, ನಿರೀಕ್ಷೆ, ಅಭಿಮಾನ ಕಂಡು ನಾನೇ ನರ್ವಸ್ ಆಗಿಬಿಟ್ಟಿದ್ದೇನೆ. ಆದ್ರೂ ತುಂಬಾ ಹೋಪ್ ಇದೆ. ಈ ಸಿನಿಮಾ ದರ್ಶನ್ ಅವರ ಫ್ಯಾನ್ಸಿಗೆ, ಪ್ರೇಕ್ಷಕರಿಗೆ ಭರಪೂರ ರಂಜಿಸುತ್ತದೆ ಎನ್ನುವ ವಿಶ್ವಾಸ, ನಂಬಿಕೆ ನಂಗಂತೂ ಬಲವಾಗಿದೆ
- ಕನ್ನಡದವರೇ ಆದ ನಿಮಗೆ ಇದು ಮೊದಲ ಸಿನಿಮಾ, ಈ ಬಗ್ಗೆ ಏನ್ ಹೇಳ್ತೀರಾ?
- ಒಹೋ.. ನಿಜಕ್ಕೂ ಭಯ ಆಗ್ತಿದೆ. ಹಾಗೆಯೇ ಬಾಳಾ ಖುಷಿಯೂ ಇದೆ. ದರ್ಶನ್ ಅವರಂತಹ ಸ್ಟಾರ್ ನಟರ ಜತೆಗೆ ಅಭಿನಯಿಸುವ ಅವಕಾಶ ಸಿಗಬಹುದು ಅಂತ ನಾನು ಕನಸಲ್ಲೂ ಕಂಡಿರಲಿಲ್ಲ. ಅದೃಷ್ಟ ಎನ್ನುವಂತೆ ರಾಬರ್ಟ್ ಸಿನಿಮಾದ ಅವಕಾಶ ನನ್ನನ್ನೇ ಹುಡುಕಿಕೊಂಡು ಬಂತು. ನಿರ್ದೇಶಕರಾದ ತರುಣ್ ಸುಧೀರ್ ಸರ್, ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದು ಅದೃಷ್ಟವೇ ಅಲ್ಲದೆ ಇನ್ನೇನು ಅಲ್ಲ. ಮೊದಲ ಸಿನಿಮಾ ಅಂತ ನಾನೇನು ನಿರೀಕ್ಷೆ ಮಾಡಿದ್ದೇನೋ ಅದಕ್ಕಿಂತ ದುಪ್ಪಟ್ಟು, ಮೂರು ಪಟ್ಟು ಈ ಸಿನಿಮಾದಲ್ಲಿ ಅಭಿನಯಿಸಿದ ಖುಷಿ ಇದೆ.
- ಮಾಡೆಲಿಂಗ್ನಲ್ಲಿ ನೀವು ಬ್ಯುಸಿ ಆಗಿ ಮುಂಬೈನಲ್ಲಿದ್ದಾಗ ಕನ್ನಡದ ಅವಕಾಶಗಳ ಬಗ್ಗೆ ಯೋಚಿಸಿದ್ರಾ?
- ಖಂಡಿತಾ ಹೌದು. ನಾನು ಕನ್ನಡತಿ. ಇಲ್ಲಿ ನನ್ನನ್ನು ನಾನು ಗುರುತಿಸಿಕೊಂಡಾಗಲೇ ಅದಕ್ಕೊಂದು ಗೌರವ. ಹಾಗೆಯೇ ನನಗೂ ಖುಷಿ. ಅದಕ್ಕಾಗಿ ನಾನು ಕನ್ನಡದಲ್ಲಿನ ಸಿನಿಮಾ ಅವಕಾಶಗಳನ್ನು ಎದುರು ನೋಡುತ್ತಿದ್ದೆ. ಆದ್ರೆ ಒಳ್ಳೆಯ ಅವಕಾಶಗಳು ಸಿಗಲಿ ಅಂತ ಕಾಯುತ್ತಿದ್ದಾಗ, ಅದೃಷ್ಟವೇ ಅಂತ ಸಿಕ್ಕಿದ್ದು ರಾಬರ್ಟ್. ತರುಣ್ ಸರ್ ಫಸ್ಟ್ ಟೈಮ್ ಭೇಟಿ ಮಾಡಿ ಕಥೆ ಹೇಳಿದಾಗ ನಾನು ಮರು ಮಾತನಾಡದೆ ಉಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ದೊಡ್ಡ ಪ್ರೊಡಕ್ಷನ್ ಹೌಸ್ ಅನ್ನೋದು ಒಂದು ಕಾರಣವಾದರೆ, ದರ್ಶನ್ ಹಾಗೂ ತರುಣ್ ಸುಧೀರ್ ಜೋಡಿಯ ಸಿನಿಮಾ ಅನ್ನೋದು ಮತ್ತೊಂದು ಕಾರಣ.
- ʼರಾಬರ್ಟ್ʼ ಅದೃಷ್ಟ ಅಂತಿದ್ದೀರಿ, ಮತ್ತೊಂದು ಅದೃಷ್ಟ ಎನ್ನುವ ಹಾಗೆ ಇದು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ, ಈ ಬಗ್ಗೆ ಹೇಳಿ ?
- ಇದೊಂಥರ ನಂಗೆ ಡಬಲ್ ಧಮಾಕಾ. ಯಾರಿಗುಂಟು ಯಾರಿಗಿಲ್ಲ ಈ ಅವಕಾಶ ಎನ್ನುವ ಹಾಗೆ. ಆರಂಭದಲ್ಲಿ ಇದು ಕನ್ನಡದಲ್ಲಿ ಮಾತ್ರವೇ ಎನ್ನುವಂತಿತ್ತು. ಆ ನಂತರ ತೆಲುಗಿನಲ್ಲೂ ರಿಲೀಸ್ ಮಾಡೋದಿಕ್ಕೆ ಪ್ಲಾನ್ ಮಾಡಲಾಯಿತು. ನನ್ನ ಮಟ್ಟಿಗೆ ಮೊದಲು ಸಿನಿಮಾವೇ ಈ ರೀತಿ ಬಹು ಭಾಷೆಯಲ್ಲಿ ಬರುತ್ತಿರುವುದು ದೊಡ್ಡ ಖುಷಿ ತಂದಿದೆ. ಅಷ್ಟಾಗಿಯೂ ನಂಗೆ ಕನ್ನಡ ಮುಖ್ಯ. ಇಲ್ಲಿಯ ಜನರಿಗೆ ನಾನು ಇಷ್ಟ ಆಗಬೇಕು. ಅವರು ನನ್ನ ಅಭಿನಯ ಒಪ್ಪಿಕೊಳ್ಳಬೇಕು. ಆಗಲೇ ನಮ್ಮಂತಹವರ ಶ್ರಮಕ್ಕೆ ಬೆಲೆ.
- ದರ್ಶನ್ ಅವರೊಂದಿಗೆ ಅಭಿನಯಿಸಿದ ಅನುಭವ ಹೇಗಿತ್ತು ?
- ವಂಡರ್ಫುಲ್. ಅವರ ಜತೆಗೆ ಎಷ್ಟು ಸಿನಿಮಾದಲ್ಲಾದರೂ ಅಭಿನಯಿಸಬಹುದು. ಯಾಕಂದ್ರೆ, ಕ್ಯಾಮೆರಾ ಮುಂದೆ ಅಷ್ಟು ಕಂಫರ್ಟ್ ಆರ್ಟಿಸ್ಟ್ ಅವರು. ನಮಗೆ ಗೊತ್ತಿಲ್ಲದನ್ನು ಹಾಗಲ್ಲ, ಹೀಗೆ ಮಾಡಿ ಅಂತ ಅತ್ಯಂತ ತಾಳ್ಮೆಯಿಂದಲೇ ಹೇಳಿಕೊಡುತ್ತಾರೆ. ಸಿನಿಮಾ ಅಂತ ಬಂದಾಗ ನಂಗೆ ಇದೇ ಮೊದಲ ಅನುಭವವೇ ಆಗಿದ್ದರೂ, ಯಾವುದೇ ತೊಂದರೆ ಆಗಿಲ್ಲ. ಅದಕ್ಕೆ ಕಾರಣ ಚಿತ್ರ ತಂಡ. ಹಾಗೆಯೇ ಕೋ ಸ್ಟಾರ್ ದರ್ಶನ್ ಸರ್.
- ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಏನ್ ಹೇಳ್ತೀರಾ?
- ಅಯ್ಯೂ.. ಅವರ ಬಗ್ಗೆ ನಾವು ಮಾತನಾಡುವಷ್ಟು ದೊಡ್ಡವಳಲ್ಲ ನಾನು. ಒಂದೇ ಮಾತಿನಲ್ಲಿ ಹೇಳೋದಾದ್ರೆ, ಅವರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀತಿಯಲಿ ಜಾನಕಿ ರಾಮ.
- ರಾಬರ್ಟ್ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
- ಪಾತ್ರ ತುಂಬಾ ಚೆನ್ನಾಗಿದೆ. ನಂಗೆ ಇದೊಂದು ತುಂಬಾ ಡಿಫೆರೆಂಟ್. ಫಸ್ಟ್ ಟೈಮ್ ನಾನಿಲ್ಲಿ ಪರಿಚಯವಾಗುತ್ತಿರುವುದರಿಂದ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂತಹ ಪಾತ್ರ ಬೇಕೆಂದು ಕಾಯುತ್ತಿದ್ದೆ. ಅಂತಹ ಪಾತ್ರವೇ ಇಲ್ಲಿ ಸಿಕ್ಕಿದೆ. ಗ್ಲಾಮರ್, ರೊಮಾನ್ಸ್, ಪರ್ಫಾಮೆನ್ಸ್ ಹೀಗೆ ಎಲ್ಲದಕ್ಕೂ ಇಲ್ಲಿದೆ ಅವಕಾಶ. ಒಂದು ಪಾತ್ರಕ್ಕೆ ಇದಕ್ಕಿಂತ ಇನ್ನೇನು ಬೇಕು ನೀವೇ ಹೇಳಿ? ನಂಗಂತೂ ಒಂದೊಳ್ಳೆಯ ಪಾತ್ರದಲ್ಲಿ ಅಭಿನಯಿಸಿದ ಖುಷಿ ಇದೆ.
- ನಿಮಗೀಗ ಸಿನಿಮಾ ಅವಕಾಶ ಹೇಗಿವೆ? ರಾಬರ್ಟ್ ನಂತರ ಯಾವ ಸಿನಿಮಾ ?
- ಆ ಬಗ್ಗೆ ನಾನು ಈಗಲೇ ಏನನ್ನು ಹೇಳಲಾರೆ. ನಂಗೀಗ ರಾಬರ್ಟ್ ಸಿನಿಮಾವೇ ಮುಖ್ಯ. ಆದಾದ ಮೇಲೆ ಮುಂದಿನ ಸಿನಿಮಾದ ಬಗ್ಗೆ ಆಲೋಚನೆ. ಹಾಗಂತ ನಂಗೀಗ ಅವಕಾಶ ಬಂದಿಲ್ಲ ಅಂತಲ್ಲ, ಆ ಬಗ್ಗೆ ನಾನಿನ್ನು ತಲೆ ಕೆಡಿಸಿಕೊಂಡಿಲ್ಲ. ಅದನ್ನು ರಾಬರ್ಟ್ ತೆರೆ ಕಂಡ ನಂತರದ ದಿನಗಳಲ್ಲಿ ರಿವೀಲ್ ಮಾಡುವೆ.