ಈ ಮಾತನ್ನು ಹೇಳಿದ್ದು ಸ್ವತಃ ಶುಭಾಪೂಂಜಾ. ಅವರು ಹೇಳಿಕೊಂಡಿದ್ದು ಬಿಗ್ಬಾಸ್-೮ರಲ್ಲಿ. ಹೌದು, ಶುಭಾಪೂಂಜಾ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಹುಷಾರಿಲ್ಲದೆ, ಆಸ್ಪತ್ರೆ ಸೇರಿ, ಐಸಿಯುನಲ್ಲಿದ್ದು, ಸಾಯುವ ಪರಿಸ್ಥಿತಿಯಲ್ಲಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಶುಭಾಪೂಂಜಾ, ಹೇಳಿಕೊಂಡಿದ್ದು, ಮತ್ತೊಬ್ಬ ಸ್ಪರ್ಧಿ “ಬ್ರಹ್ಮಗಂಟು” ಖ್ಯಾತಿಯ ನಟಿ ಗೀತಾ ಜೊತೆ. ಅವರೊಂದಿಗೆ ಮಾತನಾಡುವಾಗ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ ಶುಭಾ.
ಈ ವೇಳೆ, ಅವರು ಹೇಳಿದ್ದಿಷ್ಟು. “ನಾನು ಚಿಕ್ಕವಳಿದ್ದಾಗಲೇ ತುಂಬಾ ಚೂಟಿಯಾಗಿದ್ದೆ. ನನ್ನ ಅಮ್ಮ ಆಗಾಗ ಬಡಿಯುತ್ತಿದ್ದರು. ನಾನು ನನ್ನ ಫ್ರೆಂಡ್ಸ್ ಜೊತೆ ಸದಾ ಗಲಾಟೆ ಮಾಡುತ್ತಿದ್ದೆ. ಆಗ ನನ್ನ ಅಮ್ಮ ಬಯ್ಯುತ್ತಿದ್ದರು. ಅದು ನನಗೆ ಸಿಕ್ಕಾಪಟ್ಟೆ ಕೋಪ ತರಿಸುತ್ತಿತ್ತು. ಒಮ್ಮೆ ನನಗೆ ಹುಷಾರಿಲ್ಲದೆ ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆಗ, ನನ್ನ ಸ್ಥಿತಿ ನೋಡಿದವರು ಇನ್ನೇನು ನಾನು ಸತ್ತೇ ಹೋಗುತ್ತೇನೆ ಅಂತಾನೇ ಅಂದುಕೊಂಡಿದ್ದರು. ಆ ವೇಳೆ ನನಗೆ ಪ್ರಜ್ಞೆಯೇ ಇರಲಿಲ್ಲವಂತೆ. ನನ್ನನ್ನು ನೋಡಿದ ಅಮ್ಮನ ಸ್ಥಿತಿಯೂ ಸಹ ಅಷ್ಟೇ ಚಿಂತಾಜನಕವಾಗಿತ್ತು. ನನ್ನ ಪರಿಸ್ಥಿತಿ ನೋಡಿದ ಅಮ್ಮ ದೇವರ ಮೊರೆ ಹೋದರು. ನಾವು ನಂಬುವ ದೇವರಿಗೆ ಮುಡಿ ಕೊಡುತ್ತೇವೆ ಅಂತ ಅಮ್ಮ ಹರಕೆ ಹೇಳಿದ್ದರು. ಇದರಿಂದ ನಾನು ದಿನೇ ದಿನೇ ಚೇತರಿಸಿಕೊಂಡು ಬಂದೆ. ಆ ದೇವರ ದಯೆಯಿಂದ ನಾನು ಬದುಕುಳಿದೆ! ಇದಾದ ಬಳಿಕ ನನ್ನ ತಲೆಗೂದಲನ್ನು ದೇವರಿಗೆ ಅರ್ಪಿಸಲು ಹೋದೆವು. ನಂತರದ ದಿನಗಳಲ್ಲಿ ತಲೆಗೂದಲಿಲ್ಲದೆ ಸ್ಕೂಲ್ಗೆ ಹೋಗಲು ಮುಜುಗರವಾಗುತ್ತಿತ್ತು. ಮನೆಯಲ್ಲಿ ಅಮ್ಮನ ಬಟ್ಟೆಗಳನ್ನು ತಲೆಗೆ ಕವರ್ ಮಾಡಿಕೊಳ್ಳುತ್ತಿದ್ದೆ. ಸ್ಕೂಲ್ನಲ್ಲಂತೂ ಎಲ್ಲರೂ ನನ್ನ ನೋಡಿ ನಗೋರು..” ಅಂತ ಶುಭಾ ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಲ್ಲದೆ, ತನ್ನ ಜೊತೆ ಇದ್ದ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಅದೇನೆ ಇರಲಿ, ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ, ಕರಾವಳಿ ಬೆಡಗಿ ಶುಭಾಪೂಂಜಾ, ಎಲ್ಲರ ಜೊತೆ ಓಪನ್ ಆಗಿ ಮಾತನಾಡುತ್ತ, ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಂತೂ ನಿಜ. ಶುಭಾ ಅವರ ಮನೆಯೊಳಗಿನ ನಡವಳಿಕೆಗಳು, ಮಾತುಗಳು ಆ ಮನೆಯಲ್ಲಿರುವ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಪಟ ಪಟ ಅಂತ ಮಾತನಾಡಿ, ಹೇಳೋದನ್ನು ನೇರವಾಗಿ ಹೇಳಿ ಮೊದಲ ವಾರದಲ್ಲೇ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.