ಸಿನಿಮಾಗಳ ಪ್ರೀ ರಿಲೀಸ್ ಈವೆಂಟ್ಗಳಿಗೂ ಈಗ ರಾಜಕೀಯ ಮೆರಗು ಸಿಗುತ್ತಿದೆ. ದಾವಣಗೆರೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ” ಪೊಗರುʼ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಭಾರೀ ಜನಸಾಗರವೇ ಸೇರಿದ್ದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚಿತ್ರದ ನಾಯಕ ಧ್ರುವ ಸರ್ಜಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆ ಸರದಿ ʼರಾಬರ್ಟ್ʼ ಚಿತ್ರದ್ದು.
ಭಾನುವಾರ ( ಫೆ. 28) ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ “ರಾಬರ್ಟ್ʼ ಚಿತ್ರದ ಪ್ರೀ ರಿಲೀಸ್ಈವೆಂಟ್ ಕಾರ್ಯಕ್ರಮ ನಡೆಯಿತು.ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್ ಶೆಟ್ಟರ್ ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದರು.ಭಾರೀ ಜನಸಾಗರವೇ ನೆರೆದಿದ್ದ ವರ್ಣರಂಜಿತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಗದೀಶ್ ಶೆಟ್ಟರ್, ತಾವು ದರ್ಶನ್ ಅಭಿಮಾನಿ ಅಂತ ದರ್ಶನ್ ಅವರನ್ನು ಗುಣಗಾನ ಮಾಡಿದರು. ” ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಸಿಗುವುದಾದರೆ ಅದು ಉತ್ತರ ಕರ್ನಾಟಕದಿಂದಲೇ ಸಾಧ್ಯ. ಹುಬ್ಬಳ್ಳಿ ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನೆಲ. ಇಲ್ಲಿಗೆ ನಿಮ್ಮೆಲ್ಲರ ನೆಚ್ಚಿನ ನಟ ದರ್ಶನ್ ಬಂದಿದ್ದಾರೆ. ಅವರಿಗೆ ನಿಮ್ಮಲ್ಲೆರ ಬೆಂಬಲ ಬೇಕುʼ ಎಂದರು.
ಕಳೆದ ಒಂದು ವರ್ಷದಿಂದ ಕೊರೋನಾದಿಂದ ಇಡೀ ದೇಶ ಸಾಕಷ್ಟು ಅನಾನುಕೂಲ ಅನುಭವಿಸಿತು. ಹಾಗೆಯೇ ಚಿತ್ರೋದ್ಯಮ ಕೂಡ ಸಾಕಷ್ಟು ತೊಂದರೆ ಅನುಭವಿಸಿತು. ಈಗ ಚೇತರಿಕೆ ಕಾಣುತ್ತಿರುವುದು ಸಂತೋಷದ ಸಂಗತಿ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಭಾರತಕ್ಕೆ ಮಾತ್ರವಲ್ಲ ಬೇರೆ ಬೇರೆ ದೇಶಗಳಿಗೂ ಕೊರೋನಾ ಲಸಿಕೆ ಕೊಡುವ ನಿಟ್ಟಿನಲ್ಲಿ ಪ್ರಧಾನಿ ದಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಹಾಗಾಗಿಯೇ ನಾವೆಲ್ಲ ಇಂದು ಇಲ್ಲಿ ಸೇರುವುದಕ್ಕೆ ಸಾಧ್ಯವಾಗಿದೆ. ಪ್ರಧಾನಿ ಅವರ ಪ್ರಯತ್ನ ಫಲವೇ ʼರಾಬರ್ಟ್ʼ ಚಿತ್ರಕ್ಕೂ ವರವಾಗಿದೆ. ಚಿತ್ರಕ್ಕೆ ಯಶಸ್ಸು ಸಿಗಲಿ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.