ವಿಜಯಪ್ರಸಾದ್ ಮತ್ತು ಜಗ್ಗೇಶ್ ಜೋಡಿಯ ‘ತೋತಾಪುರಿ’ ಚಿತ್ರತಂಡ ಕಳೆದ ವಾರ ಮೈಸೂರಿನಲ್ಲಿ ಬೀಡುಬಿಟ್ಟಿತ್ತು. ನಿರ್ದೇಶಕರು ಅಲ್ಲಿ ಸಾಕಷ್ಟು ಸನ್ನಿವೇಶಗಳನ್ನು ಚಿತ್ರಿಸಿದ್ದರು. ಶೂಟಿಂಗ್ ಹೊರತಾಗಿ ಜಗ್ಗೇಶ್ ದೂರವಾಣಿ ಕರೆಯ ವಿವಾದದ ಮೂಲಕವೂ ಸಿನಿಮಾ ಸುದ್ದಿಯಾಗಿತ್ತು. ಕೊನೆಗೆ ಪೊಲೀಸರ ರಕ್ಷಣೆ ಪಡೆದು ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ ಸದ್ಯ ಕೇರಳಕ್ಕೆ ತೆರಳಿದೆ. ಅಲ್ಲಿ ಭರದ ಚಿತ್ರೀಕರಣ ನಡೆದಿದ್ದು, ಡಾಲಿ ಧನಂಜಯ ಮತ್ತು ಸುಮನ್ ರಂಗನಾಥ್ ನಟನೆಯ ಕೆಲವು ಸನ್ನಿವೇಶಗಳು ಚಿತ್ರಣಗೊಳ್ಳುತ್ತಿವೆ.
ಕೇರಳದಲ್ಲಿ ಈಗ ಕೊರೋನಾ ಎರಡನೇ ಅಲೆಯ ಹಾವಳಿ ಇದ್ದೇ ಇದೆ. ಈ ಸಂಕಷ್ಟದ ಮಧ್ಯೆಯೂ ಸೂಕ್ತ ಮುಂಜಾಗರೂಕತಾ ಕ್ರಮಗಳೊಂದಿಗೆ ಚಿತ್ರತಂಡ ಅಲೆಪ್ಪಿಯಲ್ಲಿ ಶೂಟಿಂಗ್ ನಡೆಸುತ್ತಿದೆ. ಚಿತ್ರದಲ್ಲಿ ಧನಂಜಯ್ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದಿತಿ ಪ್ರಭುದೇವ ಮುಸ್ಲಿಂ ಯುವತಿಯಾಗಿ ಮತ್ತು ಸುಮನ್ ರಂಗನಾಥ್ ಅವರು ಕ್ರಿಶ್ಚಿಯನ್ ಮಹಿಳೆಯ ಪಾತ್ರದಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಿಸಿದ್ದ ಕೆ.ಎ. ಸುರೇಶ್ ಅವರು ‘ತೋತಾಪುರಿ’ಗೆ ಹಣ ಹಾಕಿದ್ದು, ಅನೂಪ್ ಸೀಳನ್ ಸಂಗೀತ ಸಂಯೋಜಿಸುತ್ತಿದ್ದಾರೆ.