ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಮಂತಾ ಅಕ್ಕಿನೇನಿ ಜನಪ್ರಿಯ ನಟಿ. ಗ್ಲಾಮರಸ್ ನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ಇದೀಗ ಅಪರೂಪದ, ವಿಶಿಷ್ಟ ಕತೆಗಳಲ್ಲಿ ನಟಿಸತೊಡಗಿದ್ದಾರೆ. ಸ್ವತಃ ತಮ್ಮ ಹೆಸರಿನಿಂದಲೇ ಥಿಯೇಟರ್ಗೆ ಪ್ರೇಕ್ಷಕರನ್ನು ಕರೆತರುವಷ್ಟು ಖ್ಯಾತಿ ಅವರದಾಗಿದೆ. ಇಂದಿಗೆ ಅವರು ಸಿನಿಮಾ ಪ್ರವೇಶಿಸಿ ಹನ್ನೊಂದು ವರ್ಷ. ತೆಲುಗು ಜನಪ್ರಿಯ ನಟ ನಾಗ ಚೈತನ್ಯ ಪತ್ನಿಯಾಗಿ, ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ವೈಯಕ್ತಿಕ ಬದುಕಿನಲ್ಲೂ ಆಕೆ ಸಂತೃಪ್ತರು.
ಗೌತಮ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ (2010) ತೆಲುಗು ಚಿತ್ರದೊಂದಿಗೆ ಅವರು ಸಿನಿಮಾಗೆ ಪರಿಚಯವಾಗಿದ್ದು. ನಾಗ ಚೈತನ್ಯ ಹೀರೋ ಆಗಿ ನಟಿಸಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈ ಗೆಲುವು ಅವರ ವೃತ್ತಿ ಬದುಕಿಗೆ ಚಿಮ್ಮು ಹಲಗೆಯಾಯ್ತು. ಮುಂದೆ ಅವರು ನಟಿಸಿದ ಸಾಕಷ್ಟು ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ದೂಕುಡು, ಬೃಂದಾವನಂ, ಅತ್ತಾರಿಂಟಿಕಿ ದಾರೇದಿ, ಈಗಾ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಮನಂ, ಸನ್ಆಫ್ ಸತ್ಯಮೂರ್ತಿ, ಜನತಾ ಗ್ಯಾರೇಜ್, ರಂಗಸ್ಥಳಂ, ಮಹಾನಟಿ ಚಿತ್ರಗಳಲ್ಲಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡರು.
ತಮಿಳಿನಲ್ಲೂ ಅವರು ಸಾಕಷ್ಟು ಯಶಸ್ಸು ಕಂಡ ತಾರೆ. ಕತ್ತಿ, ಥೆರಿ, 24, ಮೆರ್ಸಲ್, ಸೂಪರ್ ಡಿಲಕ್ಸ್ ಕೆಲವು ಉದಾಹರಣೆ. ಅವರ ನಾಯಕಿಪ್ರಧಾನ ಸಿನಿಮಾ ‘ಓಹ್ ಬೇಬಿ’ ಬ್ಲಾಕ್ಬಸ್ಟರ್ ಎನಿಸಿಕೊಂಡಿತು. ಈ ಮೂಲಕ ಹೀರೋ ಇಲ್ಲದೆಯೇ ಸ್ವತಃ ತಮ್ಮ ನಾಮಬಲದಿಂದ ಸಿನಿಮಾ ಗೆಲ್ಲಿಸಬಲ್ಲೆ ಎನ್ನುವುದನ್ನು ಅವರು ಸಾಬೀತು ಮಾಡಿದರು. ಕಳೆದ ವರ್ಷ ಅವರ ‘ಜಾನು’ ಸಿನಿಮಾ ತೆರೆಕಂಡಿತ್ತು. ಈ ವರ್ಷ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯೊಂದಿಗೆ ಅವರು ಓಟಿಟಿಗೂ ಪದಾರ್ಪಣೆ ಮಾಡಿದ್ದಾರೆ. ಸದ್ಯ ತೆಲುಗು ಸಿನಿಮಾ ‘ಶಾಕುಂತಲಂ’ ಮತ್ತು ತಮಿಳು ‘ಕಥುವಾಕುಲ ರೆಂಡು ಕಾಧಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದರುವ ಸಮಂತಾಗೆ ಅವರ ತಾರಾ ನಟಿ ಕೀರ್ತಿ ಸುರೇಶ್ ಶುಭ ಹಾರೈಸಿದ್ದಾರೆ.