ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ದೊಡ್ಡ ಯಶಸ್ಸು ಫ್ಯಾಂಟಸಿ ಐತಿಹಾಸಿಕ ಚಿತ್ರಗಳಿಗೆ ಪ್ರೇರಣೆ ನೀಡಿದೆ. ಮೊನ್ನೆಯಷ್ಟೇ ಬಹುಕೋಟಿ ವೆಚ್ಚದ ‘ಮಹಾವೀರ್ ಕರ್ಣ’ ಸೆಟ್ಟೇರಿತು. ಈಗ ಬಹುಭಾಷಾ ಸಿನಿಮಾ ‘ಸೀತಾ’ಗೆ ಚಾಲನೆ ಸಿಕ್ಕಿದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಚಿತ್ರಕ್ಕೆ ಬಾಹುಬಲಿ, ಮಗಧೀರ, ಭಜರಂಗಿ ಭಾಯಿಜಾನ್, ಮಣಿಕರ್ಣಿಕಾ ಚಿತ್ರಗಳಿಗೆ ಚಿತ್ರಕಥೆ ಹೆಣೆದ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಹೆಣೆದಿದ್ದಾರೆ. ಮನೋಜ್ ಮುನ್ಸ್ಟಾಶಿರ್ ಸಂಭಾಷಣೆ ಬರೆಯುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾರಾಬಳಗದ ಆಯ್ಕೆ ನಡೆಯಲಿದೆ.
ಹ್ಯೂಮನ್ ಬೀಯಿಂಗ್ ಸ್ಟುಡಿಯೋ ನಿರ್ಮಿಸಲಿರುವ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಗುಲ್ಲು ಎದ್ದಿದೆ. ದಕ್ಷಿಣದಲ್ಲಿ ಈಗಾಗಲೇ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಮತ್ತು ಕೀರ್ತಿ ಸುರೇಶ್ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. ‘ಬಾಹುಬಲಿ’ ಚಿತ್ರದೊಂದಿಗೆ ಅನುಷ್ಕಾ ಮತ್ತು ‘ಮಹಾನಟಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಪ್ಯಾನ್ ಇಂಡಿಯಾ ಹಿರೋಯಿನ್ಗಳಾಗಿ ಹೆಸರು ಮಾಡಿದ್ದಾರೆ. ಹಾಗಾಗಿ ಇವರಲ್ಲೊಬ್ಬರು ‘ಸೀತೆ’ಯಾಗುವುದು ಖಚಿತ ಎನ್ನಲಾಗಿದೆ.