ಪುನೀತ್ ರಾಜಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ‘ಊರಿಗೊಬ್ಬ ರಾಜ’ ಹಾಡು ಕ್ಲಿಕ್ಕಾಗಿದೆ. ನಿನ್ನೆ ಬಿಡುಗಡೆಯಾದ ಹಾಡಿನಲ್ಲಿನ ಪುನೀತ್ – ಸಾಯೇಶಾ ಡ್ಯಾನ್ಸ್ ಸ್ಟೆಪ್ಗಳು ಮಕ್ಕಳಿಗೂ ಇಷ್ಟವಾಗಿವೆ. ಈ ಹಿಂದಿನ ‘ನಟಸಾರ್ವಭೌಮ’ ಚಿತ್ರದಲ್ಲಿನ ಅಪ್ಪು ಡ್ಯಾನ್ಸ್ ಸ್ಟೆಪ್ಗಳನ್ನು ಮಕ್ಕಳು ಅನುಕರಿಸಿದ್ದರು. ಈಗ ‘ಯುವರತ್ನ’ ಹಾಡಿನ ಪುನೀತ್ ಡ್ಯಾನ್ಸ್ ಕೂಡ ಅದೇ ರೀತಿ ವೈರಲ್ ಆಗುವ ಸೂಚನೆಗಳಿವೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದ್ರಾಮ್ ಗೀತೆ ರಚಿಸಿದ್ದು, ಜಾನಿ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆ ತಮನ್ ಅವರದು.
ಉತ್ತಮ ಗಾಯಕರೂ ಆದ ಪುನೀತ್ ‘ಊರಿಗೊಬ್ಬ ರಾಜ’ ಹಾಡಿದ್ದು, ಗಾಯಕಿ ರಮ್ಯಾ ಬೆಹರಾ ಅವರಿಗೆ ಜೊತೆಯಾಗಿದ್ದಾರೆ. ವಿಶೇವೆಂದರೆ ‘ಯುವರತ್ನ’ನ ಈ ಹೊಸ ಹಾಡು ತೆಲುಗಿನಲ್ಲೂ ತೆರೆಕಂಡಿದೆ. ತೆಲುಗಿನಲ್ಲಿ ದಿನಕರ್ ಮತ್ತು ರಮ್ಯಾ ಬೆಹರಾ ಹಾಡಿದ್ದಾರೆ. ನೃತ್ಯವನ್ನು ಬಹುವಾಗಿ ಇಷ್ಟಪಡುವ ತೆಲುಗು ಸಿನಿಪ್ರೇಮಿಗಳಿಗೂ ಪುನೀತ್ ರಾಜಕುಮಾರ್ ಅವರ ವಿಶಿಷ್ಟ ಡ್ಯಾನ್ಸ್ ಸ್ಟೆಪ್ಗಳು ಇಷ್ಟವಾಗಲಿವೆ. ಈ ಮೂಲಕ ತೆಲುಗು ಚಿತ್ರರಂಗದಲ್ಲೂ ‘ಯುವರತ್ನ’ನ ಹವಾ ಸೃಷ್ಟಿಸುವುದು ಚಿತ್ರತಂಡದ ಯೋಜನೆ. ‘ರಾಜಕುಮಾರ’ ಸೂಪರ್ಹಿಟ್ ಚಿತ್ರದ ನಂತರ ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್ ‘ಯುವರತ್ನ’ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ.