ರಾಮಘಡದಲ್ಲೊಂದು ಅವಘಡ! ಹೊಸಬರು ಹೇಳ ಹೊರಟ ಥ್ರಿಲ್ಲಿಂಗ್‌ ಸ್ಟೋರಿ

ಪೋಸ್ಟರ್‌ ನೋಡಿದವರಿಗೆ ಅದು ಮೂವರು ದರೋಡೆಕೋರರ ಕಥೆಯೇ ಎಂಬ ಪ್ರಶ್ನೆ ಮೂಡುತ್ತೆ. ಯಾಕೆಂದರೆ, ಮೂವರ ಕೈಯಲ್ಲಿ ಬಂದೂಕು ಇದೆ. ಹಾಗಂತ, ಅವರನ್ನು ದರೋಡೆಕೋರರು ಅಂತ ಹೇಳುವುದೂ ಕಷ್ಟ. ಅದೇನೆ ಇದ್ದರೂ, ಸಿನಿಮಾ ಬರುವವರೆಗೂ ಕಾಯಲೇಬೇಕು

ಕನ್ನಡದಲ್ಲಿ ಸದ್ಯಕ್ಕೆ ಹೊಸಬರ ಚಿತ್ರಗಳದ್ದೇ ಹವಾ. ಸ್ಟಾರ್‌ ಸಿನಿಮಾಗಳೊಂದಿಗೆ ಹೊಸಬರೂ ಒಂದಷ್ಟು ಜೋರು ಸುದ್ದಿ ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಕನ್ನಡದಲ್ಲಿ ಸ್ಟಾರ್‌ ಸಿನಿಮಾಗಳಿಗಿಂತ ಹೊಸಬರ ಚಿತ್ರಗಳ ಸಂಖ್ಯೆಯೇ ಹೆಚ್ಚು. ಲಾಕ್‌ಡೌನ್‌ ಬಳಿಕ ಸಾಕಷ್ಟು ಹೊಸಬರು ಹೊಸ ಕಥೆಗಳೊಂದಿಗೆ ಒಂದಷ್ಟು ಭರವಸೆಯೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆ ಸಾಲಿಗೆ “ಥಗ್ಸ್‌ ಇನ್‌ ರಾಮಘಡ” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಈ ಚಿತ್ರದ ಮೂಲಕ ಅಶ್ವಿನ್‌ ಹಾಸನ್‌ ಅವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹಾಗೆ ಹೇಳುವುದಾದರೆ, ಅಶ್ವಿನ್‌ ಹಾಸನ್‌ ಮತ್ತು ಚಂದನ್‌ ರಾಜ್‌ ಕೂಡ  ಇಲ್ಲಿ ಒಂದರ್ಥದಲ್ಲಿ ಹೀರೋಗಳೇ . ಆದರೆ, ಅಶ್ವಿನ್‌ ಹಾಸನ್‌ ಹೇಳುವ ಪ್ರಕಾರ,  ನಾನಿಲ್ಲಿ  ಹೀರೋ ಅಲ್ಲ. ಇಲ್ಲಿರುವ ಕಥೆ, ಪಾತ್ರವೇ ಹೀರೋ ಅನ್ನುತ್ತಾರೆ ಅವರು.

ಇದೊಂದು ಹೊಸ ರೀತಿಯ ಕಥೆ. ಒಂದೂರಲ್ಲಿ ಮೂರು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಒಂದು ಸಸ್ಪೆನ್ಸ್-ಥ್ರಿಲ್ಲರ್‌ ಕಥಾಹಂದರ ಇದು ಹೊಂದಿದೆ. ದಟ್ಟ ಕಾಡಲ್ಲೇ ಚಿತ್ರದ ಶೂಟಿಂಗ್‌ ನಡೆಯಲಿದ್ದು, ಒಂದಷ್ಟು ವಿಶೇಷ ಅಂಶಗಳನ್ನು ಇಲ್ಲಿ ಹೇಳಲಾಗುತ್ತಿದೆ. ಅಂದಹಾಗೆ, ಈ ಚಿತ್ರಕ್ಕೆ ಕಾರ್ತಿಕ್‌ ಮರಳಭಾವಿ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಶಿವಸ್ವಾಮಿ ಮತ್ತು ಕಾರ್ತಿಕ್‌ ಮರಳಭಾವಿ ಇಬ್ಬರೂ ಸೇರಿ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಕೀರ್ತಿ ರಾಜ್‌ ನಿರ್ಮಾಣವಿದೆ. ಜೈ ಕುಮಾರ್‌ ಸಹ ನಿರ್ಮಾಪಕರು.

ಚಿತ್ರದಲ್ಲಿ ಅಶ್ವಿನ್‌ ಹಾಸನ್‌ ಅವರೊಂದಿಗೆ ಚಂದನ ರಾಜ್ ಕೂಡ ಹೀರೋ. ಉಳಿದಂತೆ ಮಹಾಲಕ್ಷ್ಮೀ  ಇತರರು ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಪೂಜೆ ನೆರವೇರಿದ್ದು, ನಿರ್ದೇಶಕ ಅಭಿಷೇಕ್‌ ಶೆಟ್ಟಿ ಅವರು ಕ್ಲಾಪ್‌ ಮಾಡಿ, ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಪೋಸ್ಟರ್‌ ನೋಡಿದವರಿಗೆ ಅದು ಮೂವರು ದರೋಡೆಕೋರರ ಕಥೆಯೇ ಎಂಬ ಪ್ರಶ್ನೆ ಮೂಡುತ್ತೆ.

ಯಾಕೆಂದರೆ, ಮೂವರ ಕೈಯಲ್ಲಿ ಬಂದೂಕು ಇದೆ. ಹಾಗಂತ, ಅವರನ್ನು ದರೋಡೆಕೋರರು ಅಂತ ಹೇಳುವುದೂ ಕಷ್ಟ. ಅದೇನೆ ಇದ್ದರೂ, ಸಿನಿಮಾ ಬರುವವರೆಗೂ ಕಾಯಲೇಬೇಕು. ಇನ್ನು, ಚಿತ್ರದ ಹಾಡುಗಳಿಗೆ ಸೂರಜ್ ಸಂಗೀತ ನೀಡಿದರೆ, ಮನು ದಾಸಪ್ಪ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ.


ಅಶ್ವಿನ್‌ ಹಾಸನ್‌ ಅವರು, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಒಂದಷ್ಟು ಪ್ರಮುಖ ಪಾತ್ರಗಳನ್ನು ನಿರ್ವಹಿಸಿ, ಗುರುತಿಸಿಕೊಂಡಿದ್ದಾರೆ. ಈಗ “ಥಗ್ಸ್‌ ಇನ್‌ ರಾಮಘಡ” ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ, ಚಿತ್ರದ ಜವಾಬ್ದಾರಿಯನ್ನೇ ಹೊತ್ತುಕೊಂಡಿದ್ದಾರೆ. ಗೆಳೆಯರು ಸೇರಿ ಮಾಡುತ್ತಿರುವ ಸಿನಿಮಾ ಆಗಿರುವುದರಿಂದ, ಅಶ್ವಿನ್‌ ಹಾಸನ್‌ ಅವರಿಗೆ ಇದೊಂದು ಹೆಮ್ಮೆ. ಅದರಲ್ಲೂ, ತುಂಬಾ ಚೆನ್ನಾಗಿಯೇ ಸಿನಿಮಾವನ್ನು ಕಟ್ಟಿಕೊಡಬೇಕು, ಕನ್ನಡದಲ್ಲಿ ಭಿನ್ನ ಸಿನಿಮಾ ಎಂದೆನಿಸಿಕೊಳ್ಳಬೇಕು ಎಂಬ ಆಸೆ ಅವರದು. ಆ ನಿಟ್ಟಿನಲ್ಲಿ ಒಂದೊಳ್ಳೆಯ ತಂಡದ ಜೊತೆ ಸೇರಿ ಸಿನಿಮಾ ಮಾಡುತ್ತಿದ್ದಾರೆ.

Related Posts

error: Content is protected !!