ನಟಿ ರಾಖಿ ಸಾವಂತ್ ಇಂದು ಇನ್‌ಸ್ಟಾಗ್ರಾಂನಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ತಾಯಿಯ ಫೋಟೋ ಹಂಚಿಕೊಂಡಿದ್ದಾರೆ. ಅವರ ಆರೋಗ್ಯಕ್ಕಾಗಿ ಹಾರೈಸಿ ಎನ್ನುವುದು ಅವರ ಮನವಿ. ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ರಾಖಿ ಸಾವಂತ್ ಮೊನ್ನೆಯಷ್ಟೇ ಮುಗಿದ ಬಿಗ್‌ಬಾಸ್ 14ನೇ ಸೀಸನ್ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್ ಮನೆಯಲ್ಲಿದ್ದಷ್ಟೂ ದಿನ ಆಗಿಂದಾಗ್ಗೆ ಅವರು ಅನಾರೋಗ್ಯಕ್ಕೆ ಈಡಾಗಿರುವ ತಮ್ಮ ತಾಯಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಇಂದು ತಾಯಿಯ ಫೋಟೋ ಹಂಚಿಕೊಂಡು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಬರೆದಿದ್ದಾರೆ.
ಮೊನ್ನೆ ಬಿಗ್‌ಬಾಸ್‌ನಲ್ಲಿ ಫೈನಲ್ ತಲುಪಿದ ಐವರು ಸ್ಪರ್ಧಿಗಳಲ್ಲಿ ರಾಖಿ ಸಾವಂತ್ ಕೂಡ ಒಬ್ಬರಾಗಿದ್ದರು. ರಾಹುಲ್ ವೈದ್ಯ, ರುಬಿನಾ ದಲೈಕ್, ನಿಕ್ಕಿ ತಂಬೋಲಿ, ಅಲಿ ಗೋನಿ ಫೈನಲ್ ಪಟ್ಟಿಯಲ್ಲಿದ್ದ ಇತರೆ ಸ್ಪರ್ಧಿಗಳು. ಈ ಹಂತದಲ್ಲಿ ಹಣದ ಅಗತ್ಯವಿದ್ದ ರಾಖಿ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದರು. ಅದರಂತೆ ಅವರು ಹದಿನಾಲ್ಕು ಲಕ್ಷ ರೂಪಾಯಿ ತೆಗೆದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಿದ್ದರು.
“ಕಾನ್ಸರ್‌ನಿಂದ ಬಳಲುತ್ತಿರುವ ಅಮ್ಮನಿಗೆ ಕಿಮೋತೆರಪಿ ಮಾಡಿಸಲು ನನಗೆ ಹಣದ ಅವಶ್ಯಕತೆ ಇತ್ತು. ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೂ ಕೂಡ ಅದೇ ಕಾರಣಕ್ಕೆ. ತಾಯಿಯ ಅನಾರೋಗ್ಯವಲ್ಲದೆ ನನಗೆ ಹಲವಾರು ವೈಯಕ್ತಿಕ ಸಮಸ್ಯೆಗಳಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಇದೆಲ್ಲರದ ಹೊರತಾಗಿಯೂ ನಾನು ಬಿಗ್‌ಬಾಸ್ ಮನೆಯಲ್ಲಿ ಖುಷಿಯಾಗಿದ್ದೆ. ಪ್ರೇಕ್ಷಕರನ್ನು ರಂಜಿಸಲು ಶ್ರಮಿಸಿದ್ದೇನೆ. ಬಿಗ್‌ಬಾಸ್ ನನ್ನ ಬದುಕಿನಲ್ಲಿ ಮತ್ತೆ ವಿಶ್ವಾಸ ತುಂಬಿದೆ” ಎನ್ನುತ್ತಾರೆ ನಟಿ ರಾಖಿ ಸಾವಂತ್.