ಸಂಪತ್‌ನಂದಿ ನಿರ್ದೇಶನದ ‘ಸೀಟಿಮಾರ್’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗೋಪಿಚಂದ್ ಮತ್ತು ತಮನ್ನಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಚಿತ್ರವಿದು. ಏಪ್ರಿಲ್ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಕಬಡ್ಡಿ ಹಿನ್ನೆಲೆಯಲ್ಲಿ ಸಖತ್ ಆಕ್ಷನ್-ಡ್ರಾಮಾ ಇರುವುದನ್ನು ‘ಸೀಟಿಮಾರ್’ ಟೀಸರ್ ಸಾರಿ ಹೇಳುತ್ತಿದೆ. ಚಿತ್ರದಲ್ಲಿ ಗೋಪಿಚಂದ್ ಮತ್ತು ತಮನ್ನಾ ಕಬಡ್ಡಿ ಕೋಚ್‌ಗಳು!
ಗೋಪಿಚಂದ್ ಆಂಧ್ರ ಕಬಡ್ಡಿ ತಂಡದ ಕೋಚ್ ಆದರೆ ತಮನ್ನಾ ತೆಲಂಗಾಣ ತಂಡದ ಕೋಚ್. ಟೀಸರ್‌ನಲ್ಲಿ ತಮನ್ನಾಗೆ ಹೆಚ್ಚು ಸ್ಪೇಸ್ ಇದ್ದಂತಿಲ್ಲ. ಡೈಲಾಗ್ ಕೂಡ ಇಲ್ಲವಾದ್ದರಿಂದ ತೆರೆ ಮೇಲಿನ ಗೋಪಿಚಂದ್-ತಮನ್ನಾ ಕೆಮಿಸ್ಟ್ರಿ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಚಿತ್ರತಂಡದ ಮೂಲಗಳು ಹೇಳುವಂತೆ ಚಿತ್ರದಲ್ಲಿ ತಮನ್ನಾ ತೆಲಂಗಾಣ ಶೈಲಿ ತೆಲುಗು ಮಾತನಾಡುತ್ತಾರಂತೆ. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲೇ ಈ ಸಸ್ಪ್ರೈಸ್ ಸಿಗಲಿ ಎನ್ನುವುದು ನಿರ್ದೇಶಕರ ನಿಲುವು ಎನ್ನಲಾಗಿದೆ.
ನಿರ್ದೇಶಕ ಸಂಪತ್ ನಂದಿ ಅವರ ಜೊತೆ ಗೋಪಿಚಂದ್ ಅವರಿಗೆ ಇದು ಎರಡನೇ ಸಿನಿಮಾ. ‘ಸೀಟಿಮಾರ್’ ಟೀಸರ್‌ನಲ್ಲಿ ಗೋಪಿಚಂದ್ ಪಾತ್ರವನ್ನು ಮ್ಯಾಕೋ ಕಬಡ್ಡಿ ಕೋಚ್ ಎನ್ನುವಂತೆ ತೋರಿಸಲಾಗಿದೆ. ರಾವ್ ರಮೇಶ್ ಮತ್ತು ತರುಣ್ ಅರೋರಾ ಮುಖ್ಯಪಾತ್ರಗಳಲ್ಲಿ ಕಾಣಿಸುತ್ತಾರೆ. ದಿಗಂಗನ ಸೂರ್ಯವಂಶಿ ಮತ್ತು ನಟಿ ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ.