ವಿಜಯ್ ದೇವರಕೊಂಡ ನಟಿಸುತ್ತಿರುವ ಹಿಂದಿ ಮತ್ತು ತೆಲುಗು ದ್ವಿಭಾಷಾ ‘ಲೈಗರ್’ ಚಿತ್ರಕ್ಕೆ ಸದ್ಯ ಮುಂಬಯಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ನಾಯಕಿ ಅನನ್ಯಾ ಪಾಂಡೆ. ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಅವರು ಈ ಚಿತ್ರದ ನಿರ್ಮಾಪಕರಲ್ಲೊಬ್ಬರು ಎನ್ನುವುದು ವಿಶೇಷ. ಕರಣ್‌ಜೋಹರ್ ಮತ್ತು ಪುರಿ ಜಗನ್ನಾಥ್ ಕೂಡ ಚಿತ್ರದ ಸಹನಿರ್ಮಾಪಕರು. ನಟಿ ಚಾರ್ಮಿ ಚಿತ್ರೀಕರಣದುದ್ದಕ್ಕೂ ಸಿನಿಮಾ ತಂಡದೊಂದಿಗೆ ಇದ್ದಾರೆ. ಆಗಿಂದಾಗ್ಗೆ ಅಲ್ಲಿನ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಸಿನಿಮಾ ಕುರಿತಂತೆ ಸುದ್ದಿಗಳನ್ನು ಅಪ್‌ಡೇಟ್ ಮಾಡುತ್ತಾ ಇರುತ್ತಾರೆ.
ನಟಿ ಚಾರ್ಮಿ ತಮ್ಮ ಟ್ವಿಟರ್‌ನಲ್ಲಿ ಹಾಕಿರುವ ಎರಡು ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ‘ಲೈಗರ್’ ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ಚಾರ್ಮಿ ಸ್ಕೂಟರ್ ರೈಡ್ ಮಾಡಿದ್ದಾರೆ. ಹಿಂದೆ ನಟ ವಿಜಯ್ ದೇವರಕೊಂಡ ಅವರು ಕುಳಿತಿರುವುದು ವಿಶೇಷ! “ನಾನು ಸ್ಕೂಟರ್ ಓಡುಸುತ್ತಿದ್ದರೆ, ನನ್ನ ಮೇಲೆ ವಿಶ್ವಾಸವಿಟ್ಟು ವಿಜಯ್ ಕುಳಿತಿದ್ದಾರೆ. ಹೀಗೆ, ಮುಂಬಯಿಯಲ್ಲಿ ನಮ್ಮದೊಂದು ಜಾಲಿ ರೈಡ್” ಎಂದಿದ್ದಾರೆ ಚಾರ್ಮಿ. ‘ಲೈಗರ್’ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ವಿಜಯ್ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮತ್ತು ಹಿಂದಿ ಅಲ್ಲದೆ ದಕ್ಷಿಣದ ವಿವಿಧ ಭಾಷೆಗಳಿಗೂ ಡಬ್ ಆಗಿ ಇದೇ ಸೆಪ್ಟೆಂಬರ್ 9ರಂದು ಸಿನಿಮಾ ಬಿಡುಗಡೆಯಾಗಲಿದೆ.