ಧನುಷ್ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ಜಗಮೇ ತಂಧಿರಂ’ ಟೀಸರ್ ಬಿಡುಗಡೆಯಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಇದು ಡಾರ್ಕ್ ಕಾಮಿಡಿ ಪ್ರಯೋಗ. ಅಮೆರಿಕ ಭೂಗತ ಜಗತ್ತಿನಲ್ಲಿ ಸದ್ದು ಮಾಡುವ ಭಾರತೀಯ ಗ್ಯಾಂಗ್ಸ್ಟರ್ ಕತೆಯ ತೆಳುಹಾಸ್ಯದ ಚಿತ್ರವಿದು.
“ಹೂ ಈಸ್ ದಿಸ್ ಗಾಯ್ ಸುರಳಿ?” ಎನ್ನುವ ಪ್ರಶ್ನೆಯೊಂದಿಗೆ ಟೀಸರ್ ಶುರುವಾಗುತ್ತದೆ. ಹಳ್ಳಿಯ ಎಲ್ಲರ ಮುಚ್ಚಟೆಯ ವ್ಯಕ್ತಿ ಸುರಳಿ ಕಂಟ್ರಿ ಬಾಂಬ್ ತಯಾರಿಸುವುದರಲ್ಲಿ ಎಕ್ಸ್ಪರ್ಟ್. ಹೊಡಿ, ಬಡಿ, ಕಡಿ ಜಾಯಮಾನದ ವ್ಯಕ್ತಿ. ಇಂತಹ ಸುರಳಿ ಅಮೆರಿಕದ ಗ್ಯಾಂಗ್ಸ್ಟರ್ಗಳಿಗೆ ಹೇಗೆ ನಿದ್ದೆ ಕೆಡಿಸುತ್ತಾನೆ? ಇದಕ್ಕೆ ಸಿನಿಮಾ ರಿಲೀಸ್ಗೆ ಕಾಯಬೇಕು.
ನಿರ್ಮಾಪಕ ಎಸ್.ಶಶಿಕಾಂತ್ ಈ ಚಿತ್ರವನ್ನು ಓಟಿಟಿ ಫ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಅವರ ಈ ನಿರ್ಧಾರಕ್ಕೆ ಹೀರೋ ಧನುಷ್ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಚಿತ್ರಮಂದಿರದಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ಒದಗಿಸಿದ್ದೂ ನಿರ್ಮಾಪಕರೇಕೆ ಓಟಿಟಿಗೆ ಹೋಗಬೇಕು ಎನ್ನುವುದು ಹಲವರ ಪ್ರಶ್ನೆ.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲೇ ತೆರೆಕಾಣಬೇಕಿತ್ತು. ಕೊರೋನಾ ಕಾರಣದಿಂದಾಗಿ ಎಲ್ಲವೂ ಮುಂದಕ್ಕೆ ಹೋಯಿತು. ಸದ್ಯದಲ್ಲೇ ಓಟಿಟಿ ರಿಲೀಸ್ ಡೇಟ್ ಹೊರಬೀಳಲಿದೆ. ಐಶ್ವರ್ಯಾ ಲಕ್ಷ್ಮಿ, ಜೇಮ್ಸ್ ಕಾಸ್ಮೋ, ಜೋಜು ಜಾರ್ಜ್, ಕಲೈ ಅರಸನ್ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.