- ಭಗವಾನ್ (ದೊರೈ-ಭಗವಾನ್), ಹಿರಿಯ ಚಿತ್ರನಿರ್ದೇಶಕ
ಡಾ.ರಾಜಕುಮಾರ್, ಸರಿತಾ, ಮಮತಾ ರಾವ್ ಅಭಿನಯದ `ಹೊಸಬೆಳಕು’ (1982) ಶೂಟಿಂಗ್ ಸಂದರ್ಭ. ಈ ಚಿತ್ರಕ್ಕೆ ಬಿ.ಸಿ.ಗೌರಿಶಂಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ದಿಲ್ಲಿಯ ಇಂಡಿಯಾ ಗೇಟ್ ಹಾಗೂ ಇತರೆಡೆ ಚಿತ್ರಿಸಬೇಕೆನ್ನುವುದು ನನ್ನ ಹಾಗೂ ದೊರೈ ಆಸೆಯಾಗಿತ್ತು. ಅದರಂತೆ ಕೆಲವು ದಿನ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದೆವು. ಕರೋಲ್ಭಾಗ್ನ ಕೈಲಾಶ್ ಹೋಟೆಲ್ನ ಲಾಡ್ಜ್ ನಲ್ಲಿ ನಮ್ಮೆಲ್ಲರ ವಾಸ.
ಅದೊಂದು ದಿನ ಚಿತ್ರೀಕರಣ ಮುಗಿದ ನಂತರ ನಾವೆಲ್ಲರೂ ಲಾಡ್ಜ್ನಲ್ಲಿವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಮರುದಿನದ ಚಿತ್ರೀಕರಣಕ್ಕಾಗಿ ಕಾಸ್ಟ್ಯೂಮ್ ಬಗ್ಗೆ ನಟಿ ಮಮತಾ ರಾವ್ಗೆ ಮಾಹಿತಿ ನೀಡಬೇಕಿತ್ತು. ಆಕೆಗೆ ತಿಳಿಸುವಂತೆ ಪ್ರೊಡಕ್ಷನ್ ಮ್ಯಾನೇಜರ್ಗೆ ಹೇಳಿ ಕಳುಹಿಸಿದೆ. ಆತ ಹೋಗಿ ನೋಡಿದರೆ ಮಮತಾ ರಾವ್ ರೂಂಗೆ ಬೀಗ ಹಾಕಿತ್ತು. ಚಿತ್ರದ ಬಗ್ಗೆ ಚರ್ಚಿಸಲು ನಾನು ಛಾಯಾಗ್ರಾಹಕ ಗೌರಿಶಂಕರ್ರನ್ನು ಹುಡುಕಿಕೊಂಡು ಹೋಗಿದ್ದೆ. ಅವರ ರೂಂಗೂ ಬೀಗ ಹಾಕಿತ್ತು. ರಾತ್ರಿಯಾದರೂ ಇಬ್ಬರೂ ಪತ್ತೆಯಿಲ್ಲ! ನಮಗೆ ಅನುಮಾನದ ಜತೆ ಆತಂಕವೂ ಆಗಿತ್ತು. ಕೊನೆಗೂ ಪ್ರತ್ಯಕ್ಷವಾದ ಇಬ್ಬರೂ ಅದೇನೋ ಸಬೂಬು ಹೇಳಿದರು.
ಮರುದಿನವೂ ಇದು ಪುನರಾವರ್ತನೆಯಾಯ್ತು. ಅಂದು ರಾತ್ರಿ ಅವರು ಲಾ ಡ್ಜ್ ಗೆ ಬಂದಾಗ ತಡರಾತ್ರಿ. “ಕನ್ನಾಟ್ ಪ್ಲೇಸ್ನ ಪ್ರವಾಸಿ ತಾಣದ ವೀಕ್ಷಣೆಗೆಂದು ಹೋಗಿದ್ದೆವು. ಕರೋಲ್ಭಾಗ್ಗೆ ಬರಲು ಯಾವುದೇ ಗಾಡಿ ಸಿಗಲಿಲ್ಲ. ಇಬ್ಬರೂ ನಡೆದುಕೊಂಡೇ ಬರಬೇಕಾಯ್ತು. ಅದಕ್ಕೇ ಇಷ್ಟು ತಡವಾಗಿದೆ!” ಎನ್ನುವ ಕಾರಣ ಕೊಟ್ಟಿದ್ದರು ಗೌರಿಶಂಕರ್. ಕನ್ನಾಟ್ ಪ್ಲೇಸ್ನಿಂದ ಕರೋಲ್ಭಾಗ್ಗೆ ನಡೆದು ಬರುವುದೆಂದರೆ ತಮಾಷೆಯೇ? ಅಲ್ಲಿಗೆ ನಮಗೆಲ್ಲವೂ ಅರ್ಥವಾಗಿತ್ತು! ಮುಂದೆ ದಿಲ್ಲಿ ಶೂಟಿಂಗ್ ಮುಗಿಯುವವರೆಗೂ ಇವರಿಬ್ಬರ ಲವ್ಸ್ಟೋರಿ, ಓಪನ್ ಸೀಕ್ರೇಟ್ ಆಗೋಯ್ತು. “ಎಕ್ಸ್ಟ್ರಾ ಲೈಟ್ನಲ್ಲಿ ಮಮತಾ ರಾವ್ ಕ್ಲೋಸ್ಅಪ್ ಚೆನ್ನಾಗಿ ತೆಗಿಯಯ್ಯಾ” ಎಂದು ಗೌರಿಶಂಕರ್ ಅವರನ್ನು ಚುಡಾಯಿಸುತ್ತಿದ್ದೆವು.
ಬೆಂಗಳೂರಿಗೆ ಮರಳಿದ ನಂತರ ಗೌರಿಶಂಕರ್ – ಮಮತಾರಾವ್ ಮದುವೆಯಾದರು. ಇವರ ದಾಂಪತ್ಯಕ್ಕೆ ಜನಿಸಿದ ರಕ್ಷಿತಾ, ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿ ಮಿಂಚಿದ್ದು ಎಲ್ಲರಿಗೂ ಗೊತ್ತಿದೆ. ಅಮ್ಮ ಮಮತಾ ರಾವ್ ಛಾಯಾಗ್ರಾಹಕರನ್ನು ವರಿಸಿದರೆ, ರಕ್ಷಿತಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕನನ್ನೇ (ಪ್ರೇಮ್) ಪ್ರೀತಿಸಿ ಮದುವೆಯಾದರು!
(ನಿರೂಪಣೆ: ಶಚಿ)
ಫೋಟೋ ಕೃಪೆ: ಡಿ.ಸಿ.ನಾಗೇಶ್