ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ವಿರುದ್ಧ ಅವರ ಪುತ್ರಿ ಅಖ್ತರ್ ಸ್ವಲೇಹಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಕೊಡುವಂತೆ ತಂದೆ ಕಿರುಕುಳ ಕೊಡುತ್ತಿದ್ದಾರೆ, ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ ಎನ್ನುವುದು ಅವರ ದೂರು. ಸ್ವಲೇಹಾ ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. “ಪ್ರತೀ ತಿಂಗಳು ತಂದೆಗೆ ನಾನು ಒಂದು ಲಕ್ಷ ರೂಪಾಯಿ ಕೊಡುತ್ತಿದ್ದೆ. ನಾನೀಗ ತುಂಬು ಗರ್ಭಿಣಿಯಾದ್ದರಿಂದ ಕೆಲಸ ತೊರೆದಿದ್ದೇನೆ. ಅಲ್ಲದೆ ನನಗೆ ಕೌಟುಂಬಿಕ ಜವಾಬ್ದಾರಿಗಳು ಇರುವುದರಿಂದ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಅವರು ನನಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಈ ವಿಚಾರವಾಗಿ ಮಾನಸಿಕ ಕಿರುಕುಳ ಕೊಡುತ್ತಿದ್ದು, ರೌಡಿಗಳಿಂದಲೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಸ್ವಲೇಹಾ ದೂರು ದಾಖಲಿಸಿದ್ದಾರೆ.
ಸತ್ಯಜಿತ್ ಕಳೆದ ಮೂರು ವರ್ಷಗಳ ಹಿಂದೆ ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದು ಸಂಕಷ್ಟಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ಚಿತ್ರರಂಗದ ಕೆಲ ಹಿರಿಯರು ಅವರಿಗೆ ನೆರವಾಗಿದ್ದಿದೆ. ಇದೀಗ ಕೌಟುಂಬಿಕ ಕಾರಣಕ್ಕಾಗಿ ಸತ್ಯಜಿತ್ ಸುದ್ದಿಯಲ್ಲಿದ್ದಾರೆ. ಪುತ್ರಿಯ ದೂರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸತ್ಯಜಿತ್, ಇದು ಸಂಪೂರ್ಣ ಸತ್ಯವಲ್ಲ ಎಂದಿದ್ದಾರೆ. ಹುಬ್ಬಳ್ಳಿ ಮೂಲದ ಸತ್ಯಜಿತ್ ಅವರ ಜನ್ಮನಾಮ ನಿಜಾಮುದ್ದೀನ್ ಸೈಯದ್. ಕೆಎಸ್‍ಆರ್‍ಟಿಸಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಆಗ ನಟನೆ ಪ್ರವೃತ್ತಿಯಾಗಿತ್ತು. ಹುಬ್ಬಳ್ಳಿಯ ಹವ್ಯಾಸಿ ರಂಗತಂಡವೊಂದರ ಸಕ್ರಿಯ ಸದಸ್ಯರಾಗಿ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಒಮ್ಮೆ ನಾಟಕ ಪ್ರದರ್ಶನಕ್ಕೆಂದು ತಂಡದೊಂದಿಗೆ ಮುಂಬೈಗೆ ಹೋಗಿದ್ದರು ಸೈಯದ್. ಅಲ್ಲಿ ಸಿನಿಮಾ ತಂತ್ರಜ್ಞರೊಬ್ಬರ ಕಣ್ಣಿಗೆ ಬಿದ್ದದ್ದೇ ಅವರ ಬದುಕಿಗೆ ತಿರುವು ಸಿಕ್ಕಿತು. ನಾನಾ ಪಾಟೇಕರ್ ಹೀರೋ ಆಗಿದ್ದ `ಅಂಕುಶ್’ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಅವರದಾಯಿತು. ಈ ಚಿತ್ರದ ಟೈಟಲ್ ಕಾರ್ಡ್‍ನಲ್ಲೇ ಅವರ ಹೆಸರು `ಸತ್ಯಜಿತ್’ ಎಂದು ಬದಲಾದದ್ದು. ಹಿಂದಿ ಚಿತ್ರದ ನಂತರ ಸತ್ಯಜಿತ್‍ಗೆ ಕನ್ನಡ ಸಿನಿಮಾಗಳಲ್ಲೂ ಅವಕಾಶಗಳು ಹುಡುಕಿಕೊಂಡು ಬಂದವು. ಕನ್ನಡ ಚಿತ್ರರಂಗದ ಪ್ರಮುಖ ಖಳನಾಯಕ, ಪೋಷಕ ನಟನಾಗಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.