ಫೆ.13ಕ್ಕೆ ಕಣ್ತೆರೆದು ನೋಡು ಚಿತ್ರದ ಟೀಸರ್ ರಿಲೀಸ್
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನೃತ್ಯ ನಿರ್ದೇಶಕರು ಒಂದೊಳ್ಳೆಯ ಕಥೆ ಮೂಲಕ ನಿರ್ದೇಶನ ಮಾಡಿದ್ದಾರೆ. ಈಗ ಆ ಸಾಲಿಗೆ
ನೃತ್ಯ ನಿರ್ದೇಶಕ ಎಂ.ಆರ್.ಕಪಿಲ್ ಕೂಡ ಸೇರಿದ್ದಾರೆ. ಕಪಿಲ್ ಈ ಹಿಂದೆಯೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಇದೀಗ “ಕಣ್ತೆರೆದು ನೋಡು”ವಂತಹ ಕೆಲಸ ಮಾಡಿದ್ದಾರೆ. ಹೌದು, ನಿರ್ದೇಶಕ ಕಪಿಲ್ ಈಗ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ನಿರ್ದೇಶನದ “ಕಣ್ತೆರೆದು ನೋಡು” ಚಿತ್ರ ಶೂಟಿಂಗ್ ಮುಗಿದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ.
ಕಳೆದ ನವೆಂಬರ್ 14ರಂದು “ಕಣ್ತೆರೆದು ನೋಡು” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈಗ ಟೀಸರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಫೆಬ್ರವರಿ13ರ ಶನಿವಾರ ಬೆಳಗ್ಗೆ 10.31ಕ್ಕೆ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರದೇ ಕಥೆ, ಚಿತ್ರಕಥೆ ಹೊಂದಿರುವ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ.
ಅಂದಹಾಗೆ, ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ಶಿವಪ್ಪ ಕುಡ್ಲೂರು ಈ ಚಿತ್ರದ ಕಥಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.
ಚಿತದ ಪ್ರಮುಖ ಕಲಾವಿದ ಶಿವಪ್ಪ ಕುಡ್ಲೂರು,ಅವರಿಗೆ ಬಾಲ್ಯದಿಂದಲೇ ನಟನೆ ಆಸಕ್ತಿ ಇದ್ದುದರಿಂದ ಒಳ್ಳೆಯ ಸಿನಿಮಾ ಮೂಲಕ ಕಾಣಿಸಿಕೊಳ್ಳಬೇಕೆಂಬ ಆಸೆಗೆ “ಕಣ್ತೆರೆದು ನೋಡು” ಚಿತ್ರ ಸಿಕ್ಕಿದೆ. ಅವರಿಲ್ಲಿ ಅಂಧನೊಬ್ಬನ ಪಾತ್ರದಲ್ಲಿ ಗಮನಸೆಳೆಯುತ್ತಿದ್ದಾರೆ.
ಚಿತ್ರದಲ್ಲಿ ಇವರೊಂದಿಗೆ ಉಮೇಶ್, ಶಿವಕುಮಾರ್ ಜೀವರಾಜ್, ಡಾ.ದೊಡ್ಡರಂಗೇಗೌಡ, ವಿ.ಮನೋಹರ್,ಕೆ.ಎಂ.ಇಂದ್ರ,ಮೈಸೂರು ರಮಾನಾಥ್, ರೇಖಾದಾಸ್, ಶಂಕರ್ ಭಟ್ ಇತರರು ನಟಿಸಿದ್ದಾರೆ.
ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೆಣೆದ ಅಂಧನೊಬ್ಬನ ಕಥೆಗೆ ಬಂಡವಾಳ ಹಾಕಿದ್ದಾರೆ.
ಸಿ.ನಾರಾಯಣ್ ಕ್ಯಾಮರಾ ಹಿಡಿದಿದ್ದಾರೆ. ಆರ್.ಡಿ.ರವಿ ಸಂಕಲನ ಮಾಡಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ ಹರೀಶ್ ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್, ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.