ಸಚಿವ ಸುಧಾಕರ್ ಕೂಡ ಬಣ್ಣ ಹಚ್ಚುವ ಸಾಧ್ಯತೆ
ಅಂತರ್ಜಲ ಚಿತ್ರದ ಮೂಲಕ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದ ಸೃಜಲಶೀಲ ಯುವ ನಿರ್ದೇಶಕ ಹರೀಶ್ ಕುಮಾರ್ ಎಂ.ಡಿ ಹಳ್ಳಿ ಒಂದಷ್ಟು ಗ್ಯಾಪ್ ನಂತರ ಮತ್ತೊಂದು ಸಿನಿಮಾದೊಂದಿಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನವೊಂದರಿಂದ ಪ್ರಭಾವಿತರಾಗಿ ಹೊಸದೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ʼತನುಜಾʼ.
Beyond visions cinemas ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಲಾಂಚ್ ಮಾಡಿದರು. ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಹಾಗೂ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ವಿಶೇಷ ಅಂದ್ರೆ ಈ ಚಿತ್ರದ ಒಂದು ಪಾತ್ರದಲ್ಲಿ ಆರೋಗ್ಯ ಸಚಿವ ಸುಧಾಕರ್ ಕೂಡ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ.
ಇದೊಂದು ಡಿಫೆರೆಂಟ್ ಜಾನರ್ ಸಿನಿಮಾ.ನೈಜ ಘಟನೆ ಆಧರಿತ ಕಥೆ. ಕೊರೋನಾ ಸಂಕಷ್ಟದ ಕಾಲದಲ್ಲಿ ನೀಟ್ ಪರೀಕ್ಷೆ ಬರೆಯಲು ಹೆಣಗಾಟ ನಡೆಸಿ, ಕೊನೆಗೂ ಸಿನಿಮೀಯ ರೀತಿಯಲ್ಲಿ ಅದರಲ್ಲಿ ಸಕ್ಸಸ್ ಆದ ಒಬ್ಬ ವಿದ್ಯಾರ್ಥಿನೀಯ ಕಥೆ ಇದು. ಕೊನೆಗೂ ಆಕೆ ಹೇಗೆ ಪರೀಕ್ಷೆ ಬರೆದಳು, ಅದರಿಂದ ಮುಂದೆ ಆಕೆ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದಳು ಎನ್ನುವುದೇ ತನುಜಾ ಚಿತ್ರದ ಕಥಾ ಹಂದರ.
” ಇದು ನಿಜ ಘಟನೆಯೇ. ಎಲ್ಲರಿಗೂ ಗೊತ್ತಿರುವುದೇ. ಆದರೆ ಇಡೀ ಘಟನೆ ಒಂದು ಥ್ರಿಲ್ಲರ್ ಮೂವೀ ರೀತಿಯಲ್ಲಿದೆ. ಸಿನಿಮಾ ಮಾಡುವ ನಿಟ್ಟಿನಲ್ಲಿ ಸಾಕಷ್ಟು ವರ್ಕ ಮಾಡಿಕೊಂಡಿದ್ದೇನೆ. ಮೇಲಾಗಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ್ ಭಟ್ ಅವರ ಮೂಲಕ ಇಂತಹದೊಂದು ಕತೆ ಸಿನಿಮಾ ಮಾಡೋದಿಕ್ಕೆ ನನಗೆ ಸಿಕ್ಕಿದ್ದು ಅದೃಷ್ಟವೇ ಹೌದು. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣಿಕವಾಗಿ ಸಿನಿಮಾವನ್ನು ತೆರೆಗೆ ತರಬೇಕೆನ್ನುವ ಆಸೆ ಇದೆ ʼಎನ್ನುತ್ತಾರೆ ನಿರ್ದೇಶಕ ಹರೀಶ್ ಕುಮಾರ್.
ಇದು ಒರ್ವ ವಿದ್ಯಾರ್ಥಿನಿ ಮೇಲೆಯೇ ಕೇಂದ್ರಿಕೃತವಾದ ಸಿನಿಮಾ. ಕಥಾ ನಾಯಕಿ ತನುಜಾ. ಆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಯುವ ನಟಿ ಸಪ್ತ ಪಾವೂರು. ʼಸರ್ಕಾರಿ ಹಿ.ಪ್ರಾಥಮಿಕ ಶಾಲೆʼ ಚಿತ್ರದಲ್ಲಿ ಸಪ್ತ ಪಾವೂರು ಅಭಿನಯಿಸಿದ್ದರು. ಚಿತ್ರದ ಪಾತ್ರಕ್ಕೆ ಸರಿ ಸರಿಯಾದ ಅಯ್ಕೆ ಅಂತ ಚಿತ್ರದ ಹೇಳುತ್ತಿದೆ. ತಾರಾಬಳಗದ ಆಯ್ಕೆ ನಡೆಯುತ್ತಿದೆ.ಚಿತ್ರದ ಚಿತ್ರೀಕರಣ ಮಾರ್ಚ್ ಎರಡನೇವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು – ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.
2016_17 ಸಾಲಿನ ರಾಜ್ಯಪ್ರಶಸ್ತಿಗೆ ಭಾಜನವಾಗಿದ್ದ “ಅಂತರ್ಜಲ” ಚಿತ್ರದ ನಂತರ ಎಂ ಡಿ ಹಳ್ಳಿ ಅವರಿಗೆ ಇದು ಎರಡನೇ ಚಿತ್ರ.
ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ “ತನುಜಾ” ಚಿತ್ರಕ್ಕೆ ಆರ್ ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ. Beyond visions cinemas ಲಾಂಛನದಲ್ಲಿ ಹರೀಶ್ ಕುಮಾರ್ , ರಘು ನಂದನ್ ಸೇರಿದಂತೆ ಒಂದಷ್ಟು ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.