ನನ್ ಮಾತು ಕೇಳದೇ ಮನಸ್ಸಿಗೆ ಬಂದಂತೆ ನಡೆದುಕೊಂಡರು!
“ಈ ಸಮಯದಲ್ಲಿ ಚಿತ್ರ ರಿಲೀಸ್ ಮಾಡೋದು ಬೇಡ ಅಂತ ಹೇಳಿದ್ದೆ. ಆದರೆ, ನಿರ್ಮಾಪಕರು ಮಾತ್ರ ನನ್ನ ಮಾತು ಕೇಳದೆ, ಹೇಳದೆಯೇ ಚಿತ್ರ ರಿಲೀಸ್ ಮಾಡಿದ್ದಾರೆ. ನಾನು, ನನ್ನದು ಅಂತ ಹೋದರೆ ಏನೂ ಲಾಭವಿರೋದಿಲ್ಲ…”
– ಇದು ನಟ ವಿನೋದ್ಪ್ರಭಾಕರ್ ಅವರ ಬೇಸರದ ನುಡಿ. ಇಷ್ಟಕ್ಕೂ ವಿನೋದ್ ಪ್ರಭಾಕರ್ ಹೀಗೆ ನೋವಿನ ಮಾತುಗಳಲ್ಲಿ ಹೇಳಿಕೊಂಡಿದ್ದು, ತಮ್ಮ “ಶ್ಯಾಡೊ” ಸಿನಿಮಾ ಬಗ್ಗೆ. ಹೌದು, “ಶ್ಯಾಡೊ” ಫೆ.೫ರಂದು ರಿಲೀಸ್ ಆಗಿತ್ತು. ಇದಕ್ಕೂ ಮುನ್ನ, ವಿನೋದ್ ಪ್ರಭಾಕರ್ ರಾಂಗ್ ಟೈಮ್ನಲ್ಲಿ ರಿಲೀಸ್ ಬೇಡ ಅಂತಾನೇ ಹೇಳಿದ್ದರಂತೆ. ಆದರೆ, ನಿರ್ಮಾಪಕರು ಮಾತ್ರ ಮಾತು ಕೇಳದೆ ರಿಲೀಸ್ ಮಾಡಿದ್ದಾರೆ.
ಚಿತ್ರದ ಬಗ್ಗೆ ಒಳ್ಳೆಯ ಮಾತು ಕೇಳಿಬಂದರೂ, ಕಲೆಕ್ಷನ್ ವಿಚಾರದಲ್ಲಿ ಏನೂ ಆಗಿಲ್ಲ. ನಾನು ಇರುವೆಯ ರೀತಿ ಸಾಮ್ರಾಜ್ಯ ಕಟ್ಟಿದ್ದೇನೆ. ಆದರೆ, ಎಲ್ಲರೂ ಅದನ್ನು ಕೆಡವಿದರು. ಎಲ್ಲಾ ಅವರವರೇ ಡಿಸೈಡ್ ಮಾಡ್ತಾರೆ, ನಾನು ಅನ್ನೋದು ಇಲ್ಲಿ ಶಾಶ್ವತ ಅಲ್ಲ. ಈ ಸಿನಿಮಾದಲ್ಲಿ ಟೀಂ ವರ್ಕ್ ಇರಲಿಲ್ಲ. ಫ್ಯಾಮಿಲಿ ತರಹ ನಾವೆಲ್ಲ ಒಂದೇ ಎನ್ನುವ ಭಾವನೆ ಕಿಂಚಿತ್ತೂ ಇದ್ದಿಲ್ಲ. ಮುಖ್ಯವಾಗಿ, ಕಮ್ಯೂನಿಕೇಷನ್ ಗ್ಯಾಪ್ ಸಮಸ್ಯೆ ಎಂದು ಬೇಸರಿಸಿಕೊಂಡೇ ಹೇಳಿಕೊಂಡರು ವಿನೋದ್.
“ಶ್ಯಾಡೊ” ಬಿಡುಗಡೆ ಮಾಡುವ ಸಮಯದಲ್ಲಿ ನನ್ನನ್ನು ಒಂದು ಮಾತೂ ಪ್ರೊಡ್ಯೂಸರ್ ಕೇಳಲೇ ಇಲ್ಲ. ಬಿಡುಗಡೆ ಯಾವಾಗ ಅನ್ನೋದು ಪತ್ರಿಕೆಗಳಲಲಿ ಓದಿ ಗೊತ್ತಾಯ್ತು. ಹಾಗಂತ ನಾನು ದುರಹಂಕಾರಿ ಮನುಷ್ಯನಲ್ಲ. ಮುಂದೆ ನನ್ನದೇ ಆದ ಹೊಸ ಟೀಂ ಕಟ್ಟಿ, ಸಿನಿಮಾ ರಂಗದಲ್ಲಿ ತಂದೆಯಾದ ಪ್ರಭಾಕರ್ ಹೆಸರನ್ನು ಬೆಳೆಸುವುದೊಂದೇ ನನ್ನಾಸೆ” ಎಂಬುದು ವಿನೋದ್ ಹೇಳಿಕೆ. ಅಂದಹಾಗೆ, ರವಿಗೌಡ “ಶ್ಯಾಡೊ” ಸಿನಿಮಾದ ನಿರ್ದೇಶಕರು. ಇದು ಮಲಯಾಳಂನಲ್ಲಿ ಬಂದ ಚಿತ್ರ. ತೆಲುಗಿಗೂ ಡಬ್ ಆಗಿದ್ದ “ನೆಪೋಲಿಯನ್” ಚಿತ್ರದ ರೀಮೇಕ್. ಚಕ್ರವರ್ತಿಸಿ.ಎಚ್. ನಿರ್ಮಾಣವಿದೆ.