ಇಳಯರಾಜರ ಹೊಸ ಮ್ಯೂಸಿಕ್‌ ಸ್ಟುಡಿಯೋ

ವೆಟ್ರಿಮಾರನ್ ನಿರ್ದೇಶನದ ಚಿತ್ರಕ್ಕೆ ಮೊದಲ ಹಾಡು ಕಂಪೋಸ್ ಶುರು

ಭಾರತದ ಸಿನಿಮಾ ಸಂಗೀತ ಮಾಂತ್ರಿಕ ಇಳಯರಾಜ ಅವರೀಗ ಹೊಸದೊಂದು ಮ್ಯೂಸಿಕ್‌ ಸ್ಟುಡಿಯೋ ಶುರು ಮಾಡಿದ್ದಾರೆ. ಅವರ ನೂತನ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ನಿರ್ದೇಶನದಲ್ಲಿ ವಿಜಯ್‌ ಸೇತುಪತಿ, ಸೂರಿ ನಟಿಸಲಿರುವ ಚಿತ್ರಕ್ಕೆ ಮೊದಲ ಹಾಡು ಸಂಯೋಜಿಸಿದ್ದಾರೆ.

ಆ ಹಾಡು ಸಂಯೋಜನೆ ವೇಳೆ ನಟರು ಸಾಕ್ಷಿಯಾಗಿದ್ದು ವಿಶೇಷ. “ನಾವೆಲ್ಲಾ ಇಳಯರಾಜ ಅವರ ಸಂಗೀತ ಆಲಿಸುತ್ತಾ ಬೆಳೆದವರು. ಮೊದಲ ಬಾರಿ ನನ್ನ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಅದರಲ್ಲೂ ಅವರ ಹೊಸ ಸ್ಟುಡಿಯೋದಲ್ಲಿ ನನ್ನ ಚಿತ್ರಕ್ಕಾದ ಸಂಯೋಜನೆಯೇ ಮೊದಲನೆಯದ್ದು! ಇದು ನಮಗೆಲ್ಲರಿಗೂ ಖುಷಿ, ಅದೃಷ್ಟದ ಸಂಗತಿ” ಅಂತ ನಿರ್ದೇಶಕ ವೆಟ್ರಿಮಾರನ್‌ ಹೇಳಿಕೊಂಡಿದ್ದಾರೆ.


ಈ ಮೊದಲು ಇಳಯರಾಜ ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜನೆಯ ಕಾಯಕ ನಡೆಸುತ್ತಿದ್ದರು. ಖ್ಯಾತ ತಂತ್ರಜ್ಞ ಎಲ್‌.ವಿ.ಪ್ರಸಾದ್ ಅವರು ಇಳಯರಾಜ ಅವರಿಗೆ ತಮ್ಮ ಸ್ಟುಡಿಯೋದಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಇಳಯರಾಜ ಕೂಡ ಇದು ತಮಗೆ ‘ಅದೃಷ್ಟವಂತ ಜಾಗ’ ಎಂದೇ ನಂಬಿದ್ದರು. ಇದೀಗ ಆಡಳಿತ ಮಂಡಳಿ ನಿರ್ಧಾರದಂತೆ ಪ್ರಸಾದ್ ಸ್ಟುಡಿಯೋ ನೆಲಸಮವಾಗುವ ಸೂಚನೆ ಇದೆ. ಹಾಗಾಗಿ ಇಳಯರಾಜ ಕೋಡಂಬಾಕಂನಲ್ಲಿ ಸ್ವಂತಕ್ಕೊಂದು ಭವ್ಯ ಸ್ಟುಡಿಯೋ ಆರಂಭಿಸಿದ್ದಾರೆ.

ಹೊಸ ಸ್ಟುಡಿಯೋದಲ್ಲಿ ತಮ್ಮ ಚಿತ್ರದ ಹಾಡು ಮೊದಲ ಸಂಯೋಜನೆ ಎನ್ನುವ ಸಂಗತಿ ನಟ ವಿಜಯ್ ಸೇತುಪತಿ ಅವರಿಗೂ ಖುಷಿ ಕೊಟ್ಟಿದೆ. “ನಾನು ಬಹುವಾಗಿ ಆರಾಧಿಸುವ ಸಂಗೀತ ಸಂಯೋಜಕ ನನ್ನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ” ಅಂತ ವಿಜಯ್ ಸೇತುಪತಿ ಹೇಳಿದ್ದಾರೆ.

Related Posts

error: Content is protected !!