ಈ ವಾರ ತೆರೆಗೆ ಮೂರು ಮತ್ತೊಂದು
ಅಂತೂ ಇಂತೂ ಆ ದಿನಗಳು ಮರುಕಳಿಸುತ್ತಿವೆ. ಹೌದು, ಇದು ಪುಟಿದೇಳುತ್ತಿರುವ ಸ್ಯಾಂಡಲ್ವುಡ್ ವಿಷಯ. ಇಲ್ಲೀಗ ಹೇಳಹೊರಟಿರೋದು ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಬಗ್ಗೆ. ಕೊರೊನಾ ಹಾವಳಿಗೆ ತತ್ತರಿಸಿದ್ದ ಕನ್ನಡ ಸಿನಿಮಾ ರಂಗ ಮತ್ತು ಸಿನಿ ಮಂದಿ ಮೊಗದಲ್ಲೀಗ ಮಂದಹಾಸ ಬೀರಿದೆ. ಇದಕ್ಕೆ ಕಾರಣ, ಸಾಲು ಸಾಲು ಸಿನಿಮಾಗಳ ಬಿಡುಗಡೆ. ಕಳೆದ ವರ್ಷ ವಾರಕ್ಕೆ ಎಂಟು, ಹತ್ತು ಸಿನಿಮಾಗಳ ಬಿಡುಗಡೆಯನ್ನು ಕಂಡಿದ್ದ ಚಿತ್ರರಂಗಕ್ಕೆ ಕೊರೊನೊ ದೊಡ್ಡ ಹೊಡೆತ ಕೊಟ್ಟಿತ್ತು.
ಅಲ್ಲಿಂದ ಸತತ ಹತ್ತು ತಿಂಗಳ ಕಾಲ ಚಿತ್ರರಂಗ ಚೈತನ್ಯ ಕಳೆದುಕೊಂಡಿದ್ದು ನಿಜ. ಈಗ ಎಲ್ಲಾ ಸಮಸ್ಯೆಯಿಂದಲೂ ಹೊರಬಂದಿದೆ. ಕೇಂದ್ರ ಸರ್ಕಾರ ಕೂಡ ಶೇ.೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಸ್ಟಾರ್ ಸಿನಿಮಾಗಳೂ ಈಗ ಬಿಡುಗಡೆ ತಯಾರಿ ಮಾಡಿಕೊಂಡಿವೆ. ಎಂದಿನಂತೆ ಚಿತ್ರರಂಗ ಶೈನ್ ಆಗುತ್ತಿದೆ. ಈ ವಾರ (ಫೆ.೫) ರಾಜ್ಯಾದ್ಯಂತ ನಾಲು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಕನ್ನಡ ಚಿತ್ರರಂಗ ಪುನಃ ಆ ದಿನಗಳತ್ತ ಮರಳಿರುವುದು ಸಹಜವಾಗಿಯೇ ಕನ್ನಡ ಚಿತ್ರರಂಗದ ಜನರಿಗೆ ಖುಷಿಕೊಟ್ಟಿದೆ.
ಕೊರೊನಾ ಹಾವಳಿ ಕೊಂಚ ಕಮ್ಮಿಯಾಗುತ್ತಿದ್ದಂತೆಯೇ, ಮೆಲ್ಲನೆ ಒಂದೊಂದೇ ಚಿತ್ರಗಳು ಚಿತ್ರಮಂದಿರ ಕಡೆ ವಾಲಿದವು. ಈಗ ಬಿಡುಗಡೆಯ ಸಂಖ್ಯೆಯಲ್ಲೂ ಚೇತರಿಕೆ ಕಂಡಿದೆ. ಈ ವಾರ ನಾಲ್ಕು ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಆ ನಾಲ್ಕು ಚಿತ್ರಗಳ ಪೈಕಿ ನಟ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೋ” ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ವಿನೋದ್ ಪ್ರಭಾಕರ್ ಅವರು ಈ ವರ್ಷ ತಮ್ಮ ಖಾತೆ ಆರಂಭಿಸುತ್ತಿದ್ದಾರೆ.
ಈ ಚಿತ್ರವನ್ನು ರವಿಗೌಡ ನಿರ್ದೇಶಿಸಿದ್ದಾರೆ. ಶೋಭಿತಾ ರಾಣಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಚ್ಚು ಅವರ ಸಂಗೀತವಿದೆ. ಮನೋಹರ್ ಜೋಶಿ ಛಾಯಾಗ್ರಹಣವಿದೆ. ಛೋಟಾ ಕೆ ಪ್ರಸಾದ್ ಸಂಕಲನ ಹಾಗೂ ವಿನೋದ್ ಅವರ ಸಾಹಸವಿದೆ. ಚಕ್ರವರ್ತಿ ಸಿ.ಹೆಚ್ ಈ ಚಿತ್ರದ ನಿರ್ಮಾಪಕರು. ಶರತ್ ಲೋಹಿತಾಶ್ವ, ಶ್ರೀಗಿರಿ, ಗಿರಿಶಾಮ್, ಸತ್ಯದೇವ್, ಸಿರಿ ಇತರರು ನಟಿಸಿದ್ದಾರೆ.
ಇನ್ನು, ಇವರೊಂದಿಗೆ ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್ಪೆಕ್ಟರ್ ವಿಕ್ರಂ” ಚಿತ್ರ ಕೂಡ ತೆರೆಗೆ ಬರುತ್ತಿದೆ. “ಬಿಗ್ ಬಾಸ್” ಖ್ಯಾತಿಯ ಚಂದನ್ ಆಚಾರ್ ಅವರ ‘ಮಂಗಳವಾರ ರಜಾದಿನ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಇದೊಂದು ಕ್ಷೌರಿಕನ ಸುತ್ತ ಹೆಣೆದ ಕಥೆಯಾಗಿದ್ದು, ಒಂದೊಳ್ಳೆಯ ಮನರಂಜನೆಗೆ ಇಲ್ಲಿ ಕಮ್ಮಿ ಇಲ್ಲ ಎಂಬುದು ತಂಡದ ಮಾತು. ಚಂದನ್ ಆಚಾರ್ ಅವರೊಂದಿಗೆ ಲಾಸ್ಯ ನಾಗರಾಜ್, ಜಹಾಂಗೀರ್, ಹರಿಣಿ ಮತ್ತು ರಜನಿಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಸಬರು ನಟಿಸಿರುವ ಮಾಂಜ್ರಾ ಎಂಬ ಸಿನಿಮಾನೂ ಈ ವಾರ ತೆರೆಗೆ ಬರುತ್ತಿದೆ.