ಪತಿ ಜೊತೆಗಿನ ಫೋಟೋ ಶೇರ್ ಮಾಡಿದ ಕಾಜಲ್
ಸೋಷಿಯಲ್ ಮೀಡಿಯಾದಲ್ಲಿ ಜೋಡಿಗೆ ಭರ್ಜರಿ ರೆಸ್ಪಾನ್ಸ್!
ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಕಳೆದ ವರ್ಷ ಅಕ್ಟೋಬರ್ನಲ್ಲಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದರು. ಆಗಿನಿಂದ ಅವರು ಆಗಾಗ ಪತಿಯೊಂದಿಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ಗೆ ಹಾಕುತ್ತಲೇ ಸುದ್ದಿಯಾಗುತ್ತಿದ್ದರು. ಇದೀಗ ಅವರು ತಮ್ಮ ವಿವಾಹ ಆರತಕ್ಷತೆಯ ಫೋಟೋವೊಂದನ್ನು ಹಾಕಿದ್ದಾರೆ.
ತಮ್ಮ ಮದುವೆ ಸಮಾರಂಭದ ಬಗ್ಗೆ ಕಾಜಲ್ ಮೊನ್ನೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಸೊಗಸಾದ ಊಟ ಮತ್ತು ಸಂಗೀತದೊಂದಿಗೆ ಮದುವೆ ಸಮಾರಂಭವನ್ನು ಸಖತ್ ಎಂಜಾಯ್ ಮಾಡಿದೆವು” ಎಂದಿದ್ದರು. ಕಾಜಲ್ ಮತ್ತು ಗೌತಮ್ ಅವರದ್ದು ಒಂಬತ್ತು ವರ್ಷಗಳ ಪರಿಚಯ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ನಡೆಸಿದ್ದ ಜೋಡಿ ಅಕ್ಟೋಬರ್ನಲ್ಲಿ ದಾಂಪತ್ಯ ಬದುಕಿಗೆ ಅಡಿಯಿರಿಸಿದ್ದರು. “ಸ್ನೇಹಿತೆಯೊಬ್ಬರ ಮದುವೆ ಸಮಾರಂಭದಲ್ಲಿ ನನಗೆ ಗೌತಮ್ ಪರಿಚಿತರಾಗಿದ್ದರು.
ಸ್ನೇಹಿತರಾಗಿದ್ದ ನಾವು ಕ್ರಮೇಣ ಪ್ರೇಮಿಗಳಾಗಿ ಈಗ ದಂಪತಿಯಾಗಿದ್ದೇವೆ” ಎನ್ನುವುದು ಅವರ ಮಾತು. ಸದ್ಯ ಶಂಕರ್ ನಿರ್ದೇಶನದ ‘ಇಂಡಿಯನ್ 2’ ತಮಿಳು ಚಿತ್ರದಲ್ಲಿ ಕಮಲ ಹಾಸನ್ ಜೋಡಿಯಾಗಿ ಕಾಜಲ್ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಲೈವ್ ಟೆಲಿಕಾಸ್ಟ್’ನೊಂದಿಗೆ ಅವರು ಮೊದಲ ಬಾರಿ ವೆಬ್ ಸರಣಿಯಲ್ಲಿ ಅಭಿನಯಿಸುತ್ತಿರುವುದು ವಿಶೇಷ.