ಆ ದಿನವನ್ನು ನಟ ಸುದೀಪ್ ಇವತ್ತು ನೆನಪಿಸಿಕೊಂಡ ಪರಿಯೇ ವಿಚಿತ್ರ…
ನಟ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಲ್ಲಿಗೆ 25 ವರ್ಷ. ಈಗ ಒಬ್ಬ ನಟನಿಗೆ 25 ವರ್ಷದ ಸಿನಿಮಾ ಜರ್ನಿ ಅನ್ನೋದು ದೊಡ್ಡ ಸಾಧನೆ. ಅದರಲ್ಲೂ ಬಹುಬೇಡಿಕೆಯ ನಟನಾಗಿ ಬಹುಕಾಲ ವರ್ಚಸ್ಸು ಉಳಿಸಿಕೊಂಡು ಇರುವುದೇ ಇಲ್ಲಿ ದೊಡ್ಡ ಸವಾಲು. ಅದರೆ ಅದು ಸುದೀಪ್ ಅವರಿಗೆ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಕನ್ನಡದಾಚೆಯೂ ಕಿಚ್ಚ ಸುದೀಪ್ ಬಹುಬೇಡಿಕೆಯ ನಟರಾಗಿರುವುದು ಅವರ ಬಹುಮುಖ ಪ್ರತಿಭೆಗೆ ಹಿಡಿದ ಕನ್ನಡಿ. ಈ ತಾರಾ ವರ್ಚಸ್ಸಿನ ನಡುವೆಯೇ ಅವರೀಗ ತಮ್ಮ ಸಿನಿಮಾ ಜರ್ನಿಯ 25 ನೇ ವರ್ಷದ ಸಂಭ್ರಮವನ್ನು ದೂರದ ದುಬೈನಲ್ಲಿ ತುಂಬಾನೆ ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಅಂದ್ರೆ, ಅವರೀಗ ಬಹುನಿರೀಕ್ಷಿತ ʼ ವಿಕ್ರಾಂತ್ ರೋಣʼ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ದುಬೈಗೆ ಹಾರಿದ್ದಾರೆ. ನಾಳೆ( ಜ.31 ) ಅಲ್ಲಿ “ವಿಕ್ರಾಂತ್ ರೋಣʼ ಚಿತ್ರದ ಟೀಸರ್ ಲಾಂಚ್ ಆಗುತ್ತಿದೆ. ಚಿತ್ರದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಅನಾವರಣ ಮಾಡಲಾಗುತ್ತಿದೆ. ಅದಕ್ಕೂ ಮೊದಲು ಅಂದ್ರೆ, ಜ. 30 ರಂದು ಶನಿವಾರ ದುಬೈನಿಂದಲೇ ವರ್ಚುವಲ್ ನೆಟ್ವರ್ಕ್ ಮೂಲಕ ನಟ ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 25 ವರ್ಷದ ಹಾದಿಯಲ್ಲಿ ಸಿಕ್ಕ ಕೆಲವು ಮರೆಯಲಾಗದ ಘಟನೆಗಳನ್ನು ಹೇಳಿಕೊಂಡರು. ಹಾಗೆಯೇ ಇಷ್ಟು ವರ್ಷದ ಸಿನಿಮಾ ಜರ್ನಿಯ ಏಳು-ಬೀಳಿನ ಬಗ್ಗೆ ಮಾತನಾಡಿದರು.
ಸಿನಿಮಾ ರಿಲೀಸ್ ಆದ ದಿನ ಚಿತ್ರಮಂದಿರಕ್ಕೆ ತೆರಳಿದ್ದಾಗ ಆದ ಅನುಭವದ ಬಗ್ಗೆ ಮಾತನಾಡಿದ ಸುದೀಪ್, ‘ಚಿತ್ರಮಂದಿರಕ್ಕೆ ಹೋದಾಗ ಏಳೆಂಟು ಜನ ಇದ್ರು. ಒಬ್ಬ ಹಾರ ಕೈಯಲ್ಲಿ ಹಿಡಿದು ನಿಂತಿದ್ದ. ನಾನು ಹೋಗುತ್ತಿದ್ದ ಹಾಗೆ ಬಂದು ಹಾರ ಹಾಕಿದ್ರು. ಇರೋದು 8 ಜನ ಅದ್ರಲ್ಲಿ ಒಬ್ಬ ಬಂದು ಹಾರ ಹಾಕಿದ್ದು ನೋಡಿ, ಅವ್ನೇನೋ ತಿಥಿ ಮಾಡೋಕೆ ಬಂದಿದ್ದಾನಾ ಅಂತೆನಿಸಿತು. ಅಷ್ಟೇ ಅಲ್ಲ, ಅಲ್ಲಿದ್ದ ಕಟೌಟ್ ನೋಡಿದೆ. ಅದರ ಮೇಲೆ ಕಾಗೆ ಬಿಟ್ರೆ ಒಂದು ಹಾರನು ಇರಲಿಲ್ಲ. ನಾನು ನನ್ನ ಸ್ನೇಹಿತ ಚಿತ್ರಮಂದಿರದ ಒಳಗೆ ಹೋದೆವು. ಮ್ಯಾನೇಜರ್ ಬಂದು ಕಾಫಿ ಬೇಕಾ ಅಂತ ಕೇಳಿದ್ರು, ಬೇಡ ಎಂದೆ, ಕಾಫಿ ತಗೊಳ್ಳಿ ಎಂದು ಒತ್ತಾಯ ಮಾಡಿದ್ರು. ಅವರು ನನ್ನ ಸ್ನೇಹಿತನ ಬಳಿ ಕೇಳಿದ್ರು ಏನಾಯಿತು ಎಂದು ಆಗ ಜನ ಇಲ್ಲ ಅದಕ್ಕೆ ಹೀಗೆ ಕುಳಿದ್ದಾರೆ ಎಂದ. ಆಗ ಅವರು ಇದಕ್ಕಿಂತ ಜನ ಬೇಕಾ ಎಂದು ಹೇಳಿದ್ರು. 8 ಜನಕ್ಕೆ ಇವರು ಇಷ್ಟು ದೊಡ್ಡ ಕ್ರೌಡ್ ಅಂತ ಅಂದುಕೊಂಡಿದ್ದಾರಾ ಅಂತ ಅಂದು ಕೊಂಡೆ. ಆದ್ರೆ ಟಾಕೀಸ್ ಹೌಸ್ ಫುಲ್ ಆಗಿತ್ತು. ಆ ಮೇಲಿನ ಕ್ಷಣಗಳೇ ರೋಚಕʼ ಎಂದರು ನಟ ಸುದೀಪ್.