ಆರ್ಮುಗಂ ಖ್ಯಾತಿಯ ಖಳ ನಟ ರವಿಶಂಕರ್ ಪುತ್ರ ಅದ್ವೈತ್ ಇಷ್ಟರಲ್ಲಿಯೇ ಹೀರೋ ಬೆಳ್ಳಿತೆರೆಗೆ ಎಂಟ್ರಿ ಆಗುವುದು ಗ್ಯಾರಂಟಿ ಆಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2020 ರಲ್ಲೆ ಅದ್ವೈತ್ಹೀರೋ ಆಗಿ ಸ್ಯಾಂಡಲ್ ವುಡ್ಗೆ ಕಾಲಿಡಬೇಕಿತ್ತು. ಆದರೆ ಕೊರೋನಾ ಎನ್ನುವ ಮಹಾ ಮಾರಿ ಅದ್ವೈತ್ ಅವರ ಬೆಳ್ಳಿತೆರೆ ಪ್ರವೇಶಕ್ಕೂ ಅಡ್ಡಿ ಉಂಟು ಮಾಡಿತು. ಕೊರೋನಾ ಆತಂಕ ಒಂದಷ್ಟು ಕಮ್ಮಿ ಆಗಿ ಚಿತ್ರೋದ್ಯಮದ ಚಟುವಟಿಕೆಗಳು ಗರಿಗೆದರಿಕೊಂಡ ಬೆನ್ನಲೇ ಅದ್ವೈತ್ ಬೆಳ್ಳಿತೆರೆ ಪ್ರವೇಶದ ಸಿದ್ಧತೆಗೆ ಚಾಲನೆ ಸಿಕ್ಕಿದೆ.
ಮಾತೃ ಭಾಷೆ ತೆಲುಗು ಆಗಿದ್ದರೂ, ಬದುಕು ಕೊಟ್ಟ ಕನ್ನಡದ ಮೂಲಕವೇ ಪುತ್ರ ನಟನಾಗಿ ಪರಿಚಯವಾಗಬೇಕೆನ್ನುವುದು ನಟ ರವಿಶಂಕರ್ ಅವರ ಆಸೆ. ಅದಕ್ಕೆ ಪೂರಕ ಎಂಬಂತೆ ಅದ್ವೈತ್ ರಂಗ ಪ್ರವೇಶ ಆರಂಭವಾಗಿದೆ. ಅವರ ದೊಡ್ಡಪ್ಪ ಹಾಗೂ ಹೆಸರಾಂತ ನಟ ಸಾಯಿಕುಮಾರ್ ಅವರ ಪುತ್ರಿ ಡಾ.ಜ್ಯೋತಿರ್ಮಯಿ ಹಾಗೂ ಕೃಷ್ಣ ಪಲ್ಗುಣ ದಂಪತಿ ಒಡೆತನದ ಕ್ಸೋಬು ಫುಡ್ಸ್ ಮತ್ತು ಬೆವರೇಜಸ್ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಫುಡ್ ಸ್ಟೆಪ್ಸ್ ಮಕ್ಕಳ ರುಚಿಕರ ಆಹಾರ ಪದಾರ್ಥದ ಪ್ರಚಾರಕ್ಕೆ ಆಡ್ ಶೂಟ್ ಮಾಡಿದ್ದೇ ಅದ್ವೈತ್. ಇದು ಅವರ ಮೊದಲ ಕೊಡುಗೆ. ಇದು ತುಂಬಾ ಗುಣಮಟ್ಟ ಹಾಗೂ ಆಕರ್ಷಣೀಯವಾಗಿ ಮೂಡಿ ಬಂದಿದೆ.
ಪುತ್ರನ ಈ ಕೆಲಸದ ಬಗ್ಗೆ ಮಾತನಾಡುವ ನಟ ಆರ್ಮುಗಂ ಖ್ಯಾತಿಯ ರವಿಶಂಕರ್, ಇದು ಆತನ ರಂಗ ಪ್ರವೇಶ. ನಮ್ಮ ಫ್ಯಾಮೀಲಿಯೇ ಬಣ್ಣದ ಜಗತ್ತಿನಲ್ಲಿರುವುದರಿಂದ ಆತನಿಗೆ ನಟ ಆಗ್ಬೇಕು ಅನ್ನೋದಿದೆ. ಅದಕ್ಕಂತಲೇ ಅಮೆರಿಕದ ನ್ಯೂಯಾರ್ಕ್ ನ ಪ್ರತಿಷ್ಟಿತ ಆಕ್ಟಿಂಗ್ ಸ್ಕೂಲ್ ನಲ್ಲಿ ಮೂರು ವರ್ಷ ಆಕ್ಟಿಂಗ್ ಟ್ರೈನಿಂಗ್ ಮುಗಿಸಿಕೊಂಡು ಬಂದಿದ್ದಾನೆ. ಇದು ಆತನ ಆಸಕ್ತಿಯ ಕ್ಷೇತ್ರ. ನಮ್ಮ ಒತ್ತಾಯವೇನಿಲ್ಲ. ಆಸಕ್ತಿ ಇದ್ದ ಕ್ಷೇತ್ರದಲ್ಲೇ ಆತನೂ ಇರಲಿ ಅನ್ನೋದು ನಮ್ಮಾಸೆ. ಸದ್ಯಕ್ಕೆ ಅದಕ್ಕೆ ನಮ್ಮಣ್ಣ , ಮತ್ತು ಮಗಳು ಹಾಗೂ ಅಳಿಯ ಅದಕ್ಕೊಂದು ಅವಕಾಶ ಕೊಟ್ಟಿದ್ದಾರೆ. ಮುಂದಿನದು ಬೆಳ್ಳಿ ತೆರೆ ಪ್ರವೇಶʼ ಎನ್ನುತ್ತಾರೆ.
ರವಿಶಂಕರ್ ಅವರ ಹಾಗೆಯೇ ಅವರ ಪುತ್ರ ಅದ್ವೈತ್ ಕೂಡ ಹ್ಯಾಂಡ್ ಸಮ್ ಆಗಿದ್ದಾರೆ. ಹೆಚ್ಚು ಕಡಿಮೆ 6 ಅಡಿ ಕಟೌಟ್. ನಟನೆ, ಡಾನ್ಸ್ ಸೇರಿದಂತೆ ಸಿನಿಮಾಕ್ಕೆ ಬೇಕಾದ ಎಲ್ಲಾ ಕಲೆಗಳನ್ನು ಕಲಿತುಕೊಂಡೆ ಬಂದಿದ್ದಾರೆ. ಇನ್ನೇನು ಕ್ಯಾಮೆರಾ ಎದುರಿಸುವುದೊಂದೇ ಬಾಕಿಯಿದೆ. ಅಂದುಕೊಂಡಂತಾದರೆ ಇಷ್ಟರಲ್ಲಿಯೇ ಕನ್ನಡಕ್ಕೆ ಮತ್ತೊಬ್ಬ ಆರಡಿ ಹೀರೋ ಬರುವುದು ಖಚಿತ.