ಭೂಮಿ ಅಂದ್ರೆ ತಾಯಿ, ಅವಳ ಸೇವೆ ಮಾಡುವುದೇ ಪುಣ್ಯ ಅಂತಾರೆ ಈ ನಟಿ, ಅವನಿ ಸಾವಯವ ಗೊಬ್ಬರ ತಯಾರಿಕೆಯ ಹಿಂದಿದೆ ಭೂಮಿ ಮತ್ತು ರೈತರ ಆರೋಗ್ಯದ ಕಾಳಜಿ’.ಅವನಿ ಅಂದ್ರೇನು, ಬೆಳೆಗಳಿಗೆ ಹಾಕಿದ್ರೆ ಅದರಿಂದ ಆಗುವ ಲಾಭ ಏನು, ಅವರೇ ಹೇಳ್ತಾರೆ ಕೇಳಿ….
ಕಾಲಕ್ಕೆ ತಕ್ಕಂತೆ ಅನೇಕ ಮಂದಿ ನಟ-ನಟಿಯರು ಆ್ಯಕ್ಟಿಂಗ್ ಜತೆಗೆಯೇ ಉದ್ಯಮ, ಕೃಷಿ, ಹೈನುಗಾರಿಕೆ ಅಂತ ಬದುಕಿನ ಹೊಸ ಸಾಹಸಗಳಲ್ಲಿ ತೊಡಗಿಸಿಕೊಂಡಿರುವುದು ಹಳೇ ಸುದ್ದಿ. ಈಗಾಗಲೇ ಅನೇಕರು ಈ ಸಾಲಿನಲ್ಲಿ ಹೆಸರು ಮಾಡಿದವರೇ. ಈಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾದವರು ಕನ್ನಡದ ಮತ್ತೋರ್ವ ನಟಿ ಅಂಜಲಿ ಕೆ.ಆರ್. ಇವರೀಗ ‘ಅವನಿ ಗ್ರೀನ್ ಫ್ಯಾಕ್ಟರಿ’ ರೂವಾರಿ.
ಅಂಜಲಿ ಅಂದಾಕ್ಷಣ, ಇವರು’ ಕಂಕಣ ಭಾಗ್ಯ’ ಮತ್ತು ‘ಅನಂತನ ಅವಾಂತರ ‘ಚಿತ್ರಗಳ ನಾಯಕಿ ಅಲ್ಲ. ಸ್ಯಾಂಡಲ್ವುಡ್ ಗೆ ಈಗಷ್ಟೇ ಎಂಟ್ರಿಯಾದ ನಟಿ. ಇವರ ಪೂರ್ಣ ಹೆಸರು ಅಂಜಲಿ ರಾಮಚಂದ್ರ. ಭರತ ನಾಟ್ಯ, ಸಂಗೀತ ಹಾಗೂ ಸ್ಟೇಜ್ ಆ್ಯಂಕರಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿದವರು. ಒಂದು ಡಾನ್ಸ್ ಸ್ಕೂಲ್ ನ ಶಿಕ್ಷಕಿ ಕೂಡ. ಹಾಗೆಯೇ ಒಂದಷ್ಟು ಸಿರೀಯಲ್ ಗಳಲ್ಲಿ ನಟಿಸಿ ಸಿಲ್ವರ್ ಸ್ಕ್ರೀನ್ ಗೂ ಕಾಲಿಟ್ಟವರು. ಕಳೆದ ವರ್ಷವಷ್ಟೇ ರಿಲೀಸ್ ಆದ ‘ಮನೋರಥ’ ಹೆಸರಿನ ಚಿತ್ರದ ನಾಯಕಿ. ಈಗ ʼಸ್ವಚ್ಚ ಕರ್ನಾಟಕʼ ಹೆಸರಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಅದೀಗ ರಿಲೀಸ್ಗೆ ರೆಡಿಯಿದೆ. ಅವರು ನಾಯಕಿ ಆಗಿ ಒಪ್ಪಿಕೊಂಡಿರುವ ಮತ್ತೊಂದು ಚಿತ್ರ ಇಷ್ಟರಲ್ಲಿಯೇ ಸೆಟ್ಟೇರಲಿದೆಯಂತೆ.
ಆದರೂ, ನಟನೆ ಅವರ ಪ್ಯಾಷನ್.. ಅದರ ಜತೆಗೆ ನೃತ್ಯ ಹಾಗೂ ಸಂಗೀತ ಕೂಡ. ಆದರೆ ಅವರೀಗ ನಟನೆಯ ಜತೆಗೆಯೇ ವೃತ್ತಿಯಾಗಿ ಗಂಭಿರವಾಗಿ ತೆಗೆದುಕೊಂಡಿದ್ದು ಉದ್ಯಮ. ಅದೇ ‘ಅವನಿ’ ಗ್ರೀನ್ ಫ್ಯಾಕ್ಟರಿʼ. ‘ಅವನಿ’ ಅಂದ್ರೆ ಭೂಮಿ. ಅದೇ ಹೆಸರಲ್ಲಿ ಸಾವಯವ ಗೊಬ್ಬರ ತಯಾರಿಸಿ, ಅದರ ಮಾರಾಟವನ್ನೇ ಗಂಭೀರವಾಗಿ ಸ್ವೀಕರಿಸಿದ್ದಾರೆ. ಕೃಷಿ ಬೆಳೆಗಳಿಗೆ ಹೇಳಿ ಮಾಡಿಸಿದ ಸಾವಯವ ಗೊಬ್ಬರ ಇದು. ಸದ್ಯಕ್ಕೆ ಈಗವರು ‘ಅವನಿ ಗ್ರೀನ್ ಫ್ಯಾಕ್ಟರಿ ‘ಯ ರೂವಾರಿಗಳಲ್ಲಿ ಒಬ್ಬರು. ಕುತೂಹಲ ಇರೋದು, ನಟನೆ, ನೃತ್ಯ, ಸಂಗೀತ ಹಾಗೂ ಸ್ಟೇಜ್ ಆಂಕರಿಂಗ್ ಜತೆಗೆಯೇ , ಈ ನಟಿ ಇದ್ಯಾವುದೋ ಗೊಬ್ಬರ ಮಾರುವ ಕೆಲಸಕ್ಕೆ ಯಾಕೆ ಕೈ ಹಾಕಿದ್ರು, ಗೊಬ್ಬರ ಮಾರುವುದಕ್ಕೂ ಅವರಿಗೂ ಅದೇನು ನಂಟು ಅಂತ. ಅದಕ್ಕಿರುವ ಉತ್ತರ ಒಂದೇ, ಅವರ ಓದು.
ನಟಿ ಅಂಜಲಿ ರಾಮಚಂದ್ರ ಅವರು ಓದಿದ್ದು ಬಯೋಟೆಕ್ ಎಂಜಿನಿಯರಿಂಗ್. ಬಯೋಟೆಕ್ ಅಂದ್ರೆ ನಿಮಗೆಲ್ಲ ಗೊತ್ತೇ ಇದೆ, ಅದೊಂದು ಜೈವಿಕ ಜಗತ್ತಿಗೆ ಸಂಬಂಧಿಸಿದ್ದು ಅಂತ. ಮಣ್ಣು, ಅದರೊಳಗಿನ ಜೀವಿಗಳು, ಬೆಳೆಗಳು, ತಿನ್ನುವ ಆಹಾರ ಪದಾರ್ಥಗಳು ಆಂತೆಲ್ಲ ಓದುತ್ತಾ, ಅದನ್ನೇ ಗಂಭೀರವಾಗಿ ಸ್ವೀಕರಿಸಿದ್ದರ ಫಲವೇ ಈ “ಅವನಿ ಗ್ರೀನ್ ಫ್ಯಾಕ್ಟರಿʼ ಯ ಆರಂಭದ ಗುಟ್ಟು ಅಂತ ಅವನಿ ಕುರಿತು ಮಾತಿಗಿಳಿಯುತ್ತಾರೆ ನಟಿ ಅಂಜಲಿ ರಾಮಚಂದ್ರ.
“ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಆದರೂ ಹಳ್ಳಿ, ಮತ್ತು ಅಲ್ಲಿನ ಬದುಕು ನನಗೆ ಒಂಥರ ಆಸಕ್ತಿ. ಅದು ಇನ್ನಷ್ಟು ತೀವ್ರವಾಗಿದ್ದು ಬಯೋಟೆಕ್ ಎಂಜಿನಿಯರಿಂಗ್ ಸೇರಿದ ನಂತರ. ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗಲೇ ಭೂಮಿಗೆ ನನ್ನಿಂದಾದ ಸಹಾಯ ಮಾಡಬೇಕು, ರಸಾಯನಿಕ ಗೊಬ್ಬರ ಬಳಕೆಗೆ ಪರ್ಯಾಯವಾಗಿ ಏನಾದರೂ ಸಾವಯವ ಗೊಬ್ಬರ ಕಂಡು ಹಿಡಿಯಬೇಕೆಂದು ಆಲೋಚಿಸಿದೆ. ಅದರಲ್ಲೇ ಸಂಶೋಧನೆ ಶುರು ಮಾಡಿದೆ. ಕಾಲೇಜಿನ ಪ್ರಾಧ್ಯಾಪಕರಾದ ಪ್ರಶಾಂತ್ ಕುಮಾರ್ ಇದಕ್ಕೆ ಸಾಥ್ ಕೊಟ್ಟರು. ತೆಂಗಿನ ನಾರು ಬಳಸಿ ಒಂದೊಳ್ಳೆಯ ಸಾವಯವ ಗೊಬ್ಬರ ತಯಾರಿಸಬಹುದೆಂಬ ಆಲೋಚನೆ ಬಂತು. ಒಂದಷ್ಟು ದಿನ ಅದರಲ್ಲೇ ಸಂಶೋಧನೆ ನಡೆಸಿ, ಕೊನೆಗೂ ಸಕ್ಸಸ್ ಕಂಡೆ ‘ ಎನ್ನುತ್ತಾರೆ ನಟಿ ಅಂಜಲಿ.
ನಟಿ ಅಂಜಲಿ ಅವರ ಸಂಶೋಧನೆಯ ಫಲವಾಗಿ ತಯಾರಿಸಲ್ಪಟ್ಟ ಗೊಬ್ಬರವೇ ಅವನಿ. ಇದು ಶುದ್ಧ ತೆಂಗಿನ ನಾರಿನಿಂದ ತಯಾರದ ಗೊಬ್ಬರ. ಪಕ್ಕಾ ಸಾವಯವ. ಇದು ಬಹು ಉಪಯೋಗಿ. ಅಡಿಕೆ, ತೆಂಗು, ಶುಂಠಿ ಸೇರಿದಂತೆ ಎಲ್ಲಾ ಬಗೆಯ ಬೆಳೆಗಳಿಗೆ ಶಕ್ತಿ ನೀಡುವುದಲ್ಲದೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ತೇವಾಂಶವನ್ನು ಬಹುಕಾಲ ಕಾಪಾಡುತ್ತದೆ. ‘ ನನ್ನ ಪ್ರಕಾರ ಈಗ ರೈತರು ತಮ್ಮ ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು ಹಾಗೂ ತಾವು ಆರೋಗ್ಯವಂತರಾಗಿರಲು ಸಾವಯವ ಗೊಬ್ಬರ ಬಳಕೆ ಅನಿವಾರ್ಯ. ರಸಾಯನಿಕ ಗೊಬ್ಬರ ಬಳಕೆ ಭೂಮಿಯನ್ನು ಬಹುತೇಕ ಹಾಳು ಮಾಡಿದೆ. ಜತೆಗೆ ಆ ಗೊಬ್ಬರದಿಂದ ಬೆಳೆದ ಬೆಳೆಗಳನ್ನು ತಿಂದು ಜನರು ಕೂಡ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದು ನಿಲ್ಲಬೇಕಾದರೆ ʼಅವನಿʼಯಂತಹ ಸಾವಯವ ಗೊಬ್ಬರ ಬಳಕೆ ಅನಿವಾರ್ಯ’ ಎನ್ನುತ್ತಾರೆ ಅಂಜಲಿ.
ಅವನಿ ಗ್ರೀನ್ ಫ್ಯಾಕ್ಟರಿ ಈಗ ಗೊಬ್ಬರ ತಯಾರಿಕೆ ಮತ್ತು ಮಾರಾಟ ಎರಡು ಕ್ಷೇತ್ರದಲ್ಲೂ ಸಕ್ರಿಯವಾಗಿದೆ. ಕರ್ನಾಟಕ ತೆಂಗು ಮತ್ತು ನಾರು ಅಭಿವೃದ್ಧಿ ಸಂಸ್ಥೆ ಇದಕ್ಕೆ ಸಾಥ್ ನೀಡಿದೆ. ತಿಪಟೂರು ಹಾಗೂ ಗುಬ್ಬಿ ನಡುವಿರುವ ತೆಂಗಿನ ನಾರು ಅಭಿವೃದ್ಧಿ ಘಟಕದಲ್ಲೇ ಅವನಿ ಗೊಬ್ಬರ ತಯಾರಾಗುತ್ತದೆ . ಇನ್ನು ಇದರ ಮಾರಾಟ ಪ್ರಕ್ರಿಯೆಗೆ ಅವನಿ ಗ್ರೀನ್ ಫ್ಯಾಕ್ಟರಿಯು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತನ್ನ ಕಚೇರಿ ಹೊಂದಿದೆ. ಅಂಜಲಿ ಅವರ ಈ ಪ್ರಯತ್ನದಲ್ಲಿ ಸವಿತಾ ಹಾಗೂ ಡಯಾನಾ ಸಾಥ್ ನೀಡಿದ್ದಾರೆ. ಹಾಗೆಯೇ ಚಿತ್ರ ನಿರ್ದೇಶಕ ಗಿರೀಶ್ ಮೂಲಿಮನಿ ಕೂಡ ಕಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ತೆಂಗು, ಅಡಿಕೆ , ಬಾಳೆ, ಶುಂಠಿ ಸೇರಿದಂತೆ ಎಲ್ಲಾ ಬೆಳೆಗಳಿಗೂ ಇದು ಉಪಯುಕ್ತ ಗೊಬ್ಬರ. ಅದರಲ್ಲೂ ನಗರಗಳಲ್ಲಿನ ಗಾರ್ಡನ್ ಸಂಸ್ಕೃತಿಗೆ ಹೇಳಿ ಮಾಡಿಸಿದ ಗೊಬ್ಬರ ಎನ್ನುವುದು ಅಂಜಲಿ ಅವರ ಮಾತು. ಹೆಚ್ಚಿನ ಮಾಹಿತಿಗೆ 9243860725 ಹಾಗೂ gmail: avanigreen [email protected]
ಗೆ ಸಂಪರ್ಕಿಸಬಹುದು.