ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿರುವ ನಟಿ ಅಕ್ಷತಾ ಪಾಂಡವಪುರ
ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಆಂದ್ರೆ, ಅವರು ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಆಗಿದ್ದಲ್ಲದೆ, ಅಲ್ಲಿನ ಸಿಬ್ಬಂದಿಯ ಸುರಕ್ಷಿತ ಆರೈಕೆಯಿಂದ ಮಗಳೊಂದಿಗೆ ಖುಷಿಯಿಂದ ಮನೆ ಸೇರಿದ್ದಾರೆ.
ಅದೇ ಸಂತೋಷದೊಂದಿಗೆ ಆಸ್ಪತ್ರೆ ಸಿಬ್ಬಂದಿಗಳಾದ ಡಾ. ಶಿಲ್ಪಾಶ್ರೀ, ಡಾ. ಪೃಥ್ವಿ, ಸಿಸ್ಟರ್ ಸೋಪಿಯಾ ರಾಣಿ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಕುಮಾರ್ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದೆಲ್ಲಕ್ಕಿಂತ ಇಂಪಾರ್ಟೆಂಟ್ ವಿಷಯ ಎನಂದ್ರೆ, ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲರಿಗೂ ತಾತ್ಸರ. ಅದರಲ್ಲೂ ನಟ-ನಟಿಯರು, ಸೆಲಿಬ್ರಿಟಿಗಳು ಅತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅದಕ್ಕೆ ಕಾರಣ ಅಲ್ಲಿನ ಚಿಕಿತ್ಸಾ ಸೇವೆ ಸರಿಯಲ್ಲ ಎನ್ನುವ ಅಪನಂಬಿಕೆ. ಅದರಲ್ಲೂ ಹೆರಿಗೆ ವಿಷಯದಲ್ಲಾ…. ಅದೊಂದು ನರಕ ಅಂತಲೇ ಜನರ ಮಾತು.
ನಟಿ ಅಕ್ಷತಾ ಕೂಡ ಅವರದೇ ಊರಿನ ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಗೆ ದಾಖಲಾಗುವೆ ಅಂತ ಹೇಳಿದಾಗ ಅವರಿಗೆ ಕೇಳಿ ಮಾತು ಒಂದಲ್ಲ, ಹಲವಾರು ಅಂತೆ.
ಮಕ್ಕಳ ವಿಷಯದಲ್ಲಿ ತಮಾಷೆನಾ ? ನಿಜವಾಗೂ ಸರ್ಕಾರಿ ಅಸ್ಪತ್ರೆ ಯೋಚ್ನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿ, ಒಳ್ಳೆಯ ಹಾಸ್ಪಿಟಲ್ ನಲ್ಲಿಯೇ ತೋರಿಸಬೇಕು.. ಕಾಸು ಕೊಟ್ಟಂತೆ ಕಜ್ಜಾಯ, ಎನೋ ಮಾಡೋಕೆ ಹೋಗಿ ಇನ್ನೇನೋ ಆದೀತು… ಸರ್ಕಾರಿ ಆಸ್ಪತ್ರೆನಲ್ಲಿ ಅಡ್ಡ ದಿಡ್ಡಿ ನಾರ್ಮಲ್ ಮಾಡಿ ಕಳಿಸ್ತಾರೆ, ಅದು ತೆಡೆದುಕೊಳ್ಳೋ ಶಕ್ತಿ ಇರ್ಬೇಕು, ಡಿಲಿವರಿ ಏನೋ ಆಗುತ್ತೆ ಮುಂದೆ ಮಗುವಿನ ಆರೈಕೆ , ಫೀಡಿಂಗ್ ಬಗ್ಗೆ ಎಲ್ಲಾ ಏನೂ ಹೇಳಲ್ಲ, ರೋಗಗಳು ಅಂದ್ರೆ ಸ್ವಲ್ಪನೂ ಕೇರ್ ಇಲ್ಲ, ಎಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್ ಬೇಡ್ವಾ…..
ಅವರು ಪಾಂಡವಪುರ ಸರ್ಕಾರಿ ಆಸ್ಪತ್ರೆನಲ್ಲೇ ಹೆರಿಗೆ ಅಂತ ಅಂದಾಗ ಇಂತಹ ಸಾಕಷ್ಟು ಮಾತು ಅವರ ಕಿವಿಗೆ ಕೇಳಿದವಂತೆ. ಆದರೆ ಅದ್ಯಾವುದಕ್ಕೂ ಅವರು ಭಯ ಪಡದೆ, ಸರ್ಕಾರಿ ಆಸ್ಪತ್ರೆಗೇ ದಾಖಲಾದ್ರಂತೆ. ಆದರೆ ಅಲ್ಲಿಗೆ ಹೋದಾಗ ಅವರಿಗೆ ಅಲ್ಲಿನ ಸಿಬ್ಬಂದಿ ಕಾಳಜಿ ಕಂಡು ಖುಷಿ ಆಯಿತ್ತಂತೆ. “ ಇವೆಲ್ಲದರ ಮದ್ಯೆ ಅಂತೂ ಇಂತೂ ನಮ್ಮ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಅಂತಾ ಹೇಳಬಲ್ಲೇ ಅಂದ್ರೆ ಅದಕ್ಕೆ ಇಡೀ ಸಿಬ್ಬಂದಿವರ್ಗವೇ ಕಾರಣ. ಅವರೆಲ್ಲರಿಗೂ ಧನ್ಯವಾದಗಳು ಅಂತ ಇದಿಷ್ಟು ಮಾಹಿತಿಯನ್ನು ನಟಿ ಅಕ್ಷತಾ ಪಾಂಡವಪುರ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಖುಷಿಗಾದರೂ, ಇತರ ಕಲಾವಿದರಿಗೂ ಕೂಡ ಪ್ರೇರಣೆಯಾಗಲಿ. ಆ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿ.