ಅಂಜು ಎಂಬ ಹೊಸಬರ ಸಸ್ಪೆನ್ಸ್ ಥ್ರಿಲ್ಲರ್
ಎರಡನೇ ಹಂತಕ್ಕೆ ಚಿತ್ರತಂಡ ಸಜ್ಜು
ಕನ್ನಡದಲ್ಲಿ ಈಗಂತೂ ಹೊಸಬರ ಅನೇಕ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ “ರಸಗುಲ್ಲ ಅಂಜು” ಎಂಬ ಸಿನಿಮಾ ಕೂಡ ಸೇರಿದೆ. ಈ ಚಿತ್ರಕ್ಕೆ ರಾಜೀವ್ ಕೃಷ್ಣ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಈಗಾಗಲೇ ನಿರ್ದೇಶಕರು ಸದ್ದಿಲ್ಲದೆಯೇ ಮೊದಲ ಹಂತವನ್ನು ಮುಗಿಸಿದ್ದಾರೆ. ಸದ್ಯಕ್ಕೆ ಏಳು ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ತೆಲುಗಿನ ನಟ ಬಾನುಚಂದರ್ ಹಾಗೂ ಅಭಿಜಿತ್ ಅವರ ಡೇಟ್ ನೋಡಿಕೊಂಡು ಚಿತ್ರೀಕರಿಸಿದರೆ ಚಿತ್ರೀಕರಣ ಮುಕ್ತಾಯ. ಇದು ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಚಿಂತಾಮಣಿಯಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಾಲಯದಲ್ಲಿ ಮುಹೂರ್ತ ನೆರವೇರಿತ್ತು.
ಅಷ್ಟೇ ವೇಗದಲ್ಲಿ ನಿರ್ದೇಶಕರು ಮೊದಲ ಹಂತವನ್ನು ಮುಗಿಸಿದ್ದಾರೆ. ಚಿತ್ರಕ್ಕೆ “ಖೇಲ್” ಚಿತ್ರದ ನಿರ್ಮಾಪಕ ಮಾರ್ಕೆಟ್ ಸತೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, “ಲೆಕ್ಕಾಚಾರ” ಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಕುರಿತು ಹೇಳುವ ನಿರ್ದೇಶಕ, ರಾಜೀವ್ ಕೃಷ್ಣ, “ಇದೊಂದು ಗೆಳೆಯ, ಗೆಳತಿಯರ ನಡುವಿನ ಚಿತ್ರ. ಬೆಂಗಳೂರಿನಿಂದ ಹೈದರಾಬಾದ್ಗೆ ಸಿನಿಮಾ ಆಡಿಷನ್ಗಾಗಿ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರ ನಡುವೆ ಐದು ಮಂದಿ ಸೈಕೋಗಳು ಎಂಟ್ರಿಯಾಗುತ್ತಾರೆ. ಅವರಿಂದ ಆಗುವವಂತಹ ಅನಾಹುತಗಳೇನು, ಅವರು ಆ ಸೈಕೋಗಳಿಂದ ಪಾರಾಗಲು ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬ ಕಥಾಹಂದರ ಇಲ್ಲಿದೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಹಿರಿಯ ನಟ ಅಭಿಜಿತ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ ನಟಿಸುತ್ತಿದ್ದಾರೆ. ನಾಯಕರಾಗಿ ರಾಜ್ಪ್ರತೀಕ್, ಉಲಿಬೆಲೆ ರಾಜೇಶ್ ರೆಡ್ಡಿ, ಹಾಗೂ ಸಿದ್ಧಾರ್ಥ ಇದ್ದಾರೆ. ಖಳನಾಯಕರಾಗಿ ಮುಂಬೈನ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜ್ ನಟಿಸುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ನರಸಾಪುರ ಸಂದೀಪ್, ಭಕ್ತರಹಳ್ಳಿ ರವಿ, ರೇಣುಕಾ ಜೀವನ್, ಶಿವು, ಅಬ್ದುಲ್ ರೆಹಮಾನ್ ಇದ್ದಾರೆ. ಚಿತ್ರಕ್ಕೆ ವಿನುಮನಸು ಸಂಗೀತವಿದೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ.
ಮಲ್ಲಿ ಸಂಕಲನ ಮಾಡಿದರೆ, ಸುರೇಶ್ ಕಂಬಳಿ ಸಾಹಿತ್ಯವಿದೆ. ಶಿವು ಸಾಹಸ ಮಾಡಿದ್ದಾರೆ. ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಇದೆ. ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಕಲಾನಿರ್ದೇನವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ ನಂದಿಗಿರಿ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಮತ್ತು ಗಜೇಂದ್ರಗಡ ಕಡೆ ಪ್ರಯಾಣ ಬೆಳೆಸಲಿದೆ.