ತೆರೆ ಮೇಲೆ ಹಾರರ್ ಕಥಾ ಹಂದರದ ಕತ್ಲೆ ಕಾಡು
ಸ್ಟಾರ್ ಸಿನ್ಮಾ ಬರ್ಲಿ ಅಂತ ಕೆಲವರು ಕಾಯುತ್ತಿದ್ದಾರೆ. ಅದರ ನಡುವೆಯೇ ಹೊಸಬರು ಒಂದ್ ಕೈ ನೋಡಿ ಬಿಡೋಣ ಅಂತ ಈ ವಾರ ಚಿತ್ರ ಮಂದಿರಕ್ಕೆ ಬರಲು ರೆಡಿ ಆಗಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಈ ವಾರ ಎರಡು ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ. ಈ ಪೈಕಿ ʼಕತ್ಲೆ ಕಾಡುʼ ಕೂಡ ಒಂದು. ಸದ್ಯಕ್ಕೆ ಎಷ್ಟು ಚಿತ್ರಮಂದಿರಗಳಲ್ಲಿ ಇದು ತೆರೆ ಕಾಣುತ್ತಿದೆ ಎನ್ನುವ ಮಾಹಿತಿ ಇಲ್ಲ. ಆದರೂ ರಿಲೀಸ್ ಎನ್ನುವ ಸುದ್ದಿ ಹೊರ ಬಿದ್ದಿದೆ. ಉಳಿದಂತೆ ಈ ಚಿತ್ರದ ಕತೆಯೇ ವಿಶೇಷವಾದದ್ದು
ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಡು ಮತ್ತು ಅಲ್ಲಿನ ಕತ್ತಲಿಗೆ ಸಂಬಂಧಿಸಿದ ಚಿತ್ರ. ಅಂದ್ರೆ, ಹಾರರ್ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಸಾಗರ್ ಕಿಂಗ್ ಪ್ರೊಡಕ್ಷನ್ ಮೂಲಕ ಮುಹಮ್ಮೊದ್ ನಿಯಾಜುದ್ದೀನ್ ಈ ಚಿತ್ರ ನಿರ್ಮಿಸಿದ್ದಾರೆ. ಜತೆಗೆ ಈ ಚಿತ್ರದಲ್ಲಿನ ಒಂದು ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ರಾಜು ದೇವಸಂದ್ರ ಇದರ ನಿರ್ದೇಶಕ. ಈ ಹಿಂದೆ ಇವರು” ಗೋಸಿಗ್ಯಾಂಗ್ʼ ಅಂತ ಒಂದು ಸಿನಿಮಾ ಮಾಡಿದ್ರು. ಆನಂತರವೀಗ ಕತ್ಲೆ ಕಾಡು ಹೆಸರಿನ ಚಿತ್ರ ಮಾಡಿದ್ದಾರೆ. ಅವರ ಪ್ರಕಾರ ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ.
ಆಕರ್ಷಣೀಯವಾದ ಒಂದು ದಟ್ಟ ಕಾಡು. ಅದು ತನ್ನ ಸೌಂದರ್ಯದ ಮೂಲಕವೇ ಜನರನ್ನು ಸೆಳೆಯುತ್ತದೆ. ಆದರೆ ಅಲ್ಲಿಗೆ ಹೋದವರಾರು ವಾಪಾಸ್ ಬಂದ ದಾಖಲೆ ಇಲ್ಲ. ಈ ವಿಷಯ ಗೊತ್ತಾಗಿಯೂ, ನಾಲ್ಕಾರು ಮಂದಿ ಯುವಕ-ಯುವತಿಯರ ಒಂದು ತಂಡ ಆ ಕಾಡಿನತ್ತ ಪ್ರಯಾಣ ಬೆಳೆಸುತ್ತದೆ. ಅವರು ಅಲ್ಲಿಗೆ ಹೋದಾಗ ಏನೆಲ್ಲ ಘಟನೆಗಳು ನಡೆಯುತ್ತದೆ, ಆ ಘಟನೆಗಳ ಹಿಂದಿನ ಸತ್ಯವೇನು ಅನ್ನೋದೇ ಈ ಚಿತ್ರದ ಕತೆಯಂತೆ.
ಚಿತ್ರದಲ್ಲಿ ಶಿವಾಜಿ ನಗರ ಲಾಲು ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸಂಜೀವ್, ಕಿರಣ್ ನಿಯಾಜುದ್ದೀನ್, ಸಿಂಧು ರಾವ್, ಸಂಹಿತಾ ಶಾ, ಸಿಂಚನಾ, ಶಿವ ಮಂಜು, ಭೈರೇಶ್, ಗೋವಿಂದ ರೆಡ್ಡಿ, ಶಿವು, ಅಮಾನ್ ಮತ್ತಿತರರು ಚಿತ್ರದಲ್ಲಿದ್ದಾರೆ. ರಮೇಶ್ ಕೊಯಿರ ಛಾಯಾಗ್ರಹಣ, ಆರವ್ ರಿಶಿಕ್ ಸಂಗೀತ, ನಿರ್ದೇಶಕ ರಾಜು ದೇವಸಂದ್ರ ಹಾಗೂ ಪತ್ರಕರ್ತ ಶಶಿಕರ ಪಾತೂರು ಸಾಹಿತ್ಯ ಈ ಚಿತ್ರಕ್ಕಿದೆ. ಬೆಂಗೂರು, ಸಂಗಮ, ಮೇಕೆದಾಟು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆ.