ಅವತಾರ್, ಇದು ನಟ ಅದ್ವೈತ ಅವರ ಹೊಸ ಅವತಾರ
ಬಹುದಿನಗಳ ನಂತರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮತ್ತೆ ಸಿನಿಮಾ ಕಳೆಯ ರಂಗು ತುಂಬಿಕೊಂಡಿತು. ʼಗಾಜನೂರುʼ ಹೆಸರಿನ ಚಿತ್ರದ ಮುಹೂರ್ತ ಕಾರ್ಯಕ್ರಮ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ರಂಗು ಕಳೆ ಗಟ್ಟುವಂತೆ ಮಾಡಿತು. ಚಿತ್ರೋದ್ಯಮದ ಹಲವು ಗಣ್ಯರು ಈ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಅಂದ ಹಾಗೆ , “ಗಾಜನೂರುʼ ಹೊಸಬರ ಸಿನಿಮಾ. ನಿರ್ದೇಶಕ ನಂದಕಿಶೋರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಜಯ್ ಇದೇ ಮೊದಲು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಹಾಗೆಯೇ ಕಲಬುರಗಿ ಮೂಲದ ಅವಿನಾಶ್ ಈ ಚಿತ್ರದ ನಿರ್ಮಾಪಕ. ಮೂಲತಃ ಉದ್ಯಮಿಯಾಗಿರುವ ಅವಿನಾಶ್ ಅವರಿಗೆ ಇದು ಚೊಚ್ಚಲ ಸಿನಿಮಾ. ಅವತಾರ್ ಹಾಗೂ ಸೋನಲ್ ಮಾಂತೆರೋ ಈ ಚಿತ್ರದ ನಾಯಕ-ನಾಯಕಿ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ್ ಕಿಶೋರ್ ಅತಿಥಿಗಳಾಗಿ ಬಂದಿದ್ದರು.
ಧ್ರುವ ಸರ್ಜಾ ಕ್ಲಾಪ್ ಮಾಡಿದರೆ, ನಂದ್ ಕಿಶೋರ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ʼಗಾಜನೂರುʼಚಿತ್ರದ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದರು. ಸದ್ಯಕ್ಕೆ ಮುಹೂರ್ತ ಮುಗಿಸಿಕೊಂಡಿರುವ ಚಿತ್ರ ತಂಡ ಫೆಬ್ರವರಿ ಎರಡನೇ ವಾರದಿಂದ ಚಿತ್ರೀಕರಣ ಶುರುಮಾಡಲಿದೆಯಂತೆ. ಮಂಗಳೂರು, ಬೆಂಗಳೂರು , ಸಕಲೇಶಪುರ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮಾತಿನ ಭಾಗದ ಚಿತ್ರೀಕರಣಕ್ಕೆ ಪ್ಲಾನ್ ಹಾಕಿಕೊಂಡಿದೆ. ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್ ಕೂಡ ಚಿತ್ರ ತಂಡದ್ದು. ಮುಹೂರ್ತದ ನಂತರ ಮಾಧ್ಯಮದ ಮುಂದೆ ಬಂದಿದ್ದ ಚಿತ್ರದ ನಿರ್ದೇಶಕ ವಿಜಯ್, ಚಿತ್ರ ತಂಡವನ್ನು ಪರಿಚಯಿಸುವ ಮೂಲಕ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.
” ಗಾಜನೂರು ಅಂದಾಕ್ಷಣ ಕನ್ನಡದ ಮೇರು ನಟ ರಾಜ್ ಕುಮಾರ್ ಅವರ ಊರು ನೆನಪಾಗುವುದು ಸಹಜ. ಆದರೆ ಅದಕ್ಕೂ ಈ ಚಿತ್ರಕ್ಕೂ ಸಂಬಂಧ ಇಲ್ಲ. ಬದಲಿಗೆ ಈ ಕತೆ ನಡೆಯುವುದು ಶಿವಮೊಗ್ಗ ಜಿಲ್ಲೆ ಗಾಜನೂರು ಎಂಬಲ್ಲಿ. ಹಾಗಾಗಿಯೇ ಚಿತ್ರಕ್ಕೆ ಗಾಜನೂರು ಅಂತ ಹೆಸರಿಟ್ಟಿದ್ದೇವೆʼ ಅಂತ ಚಿತ್ರದ ಶೀರ್ಷಿಕೆಯ ಬಗೆಗಿನ ಕುತೂಹಲಕ್ಕೆ ವಿವರ ನೀಡಿದರು ನಿರ್ದೇಶಕ ವಿಜಯ್. ಇನ್ನು ಚಿತ್ರದ ಕತೆಯ ಬಗ್ಗೆಯೂ ಅವರು ವಿವರ ಕೊಟ್ಟರು.” ಇದೊಂದು ಥ್ರಿಲ್ಲರ್ ಕಥಾ ಹಂದರ ಕತೆ. ಸಾಮಾನ್ಯವಾಗಿ ಥ್ರಿಲ್ಲರ್ ಅಂದ್ರೆ ಅದೊಂದು ಮರ್ಡರ್ ಮಿಸ್ಟ್ರಿಯೇ ಆಗಿರಬೇಕು ಅಂತ ಅಂದುಕೊಳ್ಳುವುದು ಸಹಜ. ಆದರೆ ಇದು ಅದಕ್ಕೆ ಭಿನ್ನವಾದ ಸಿನಿಮಾ. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಒಂದು ಮಿಸ್ಸಿಂಗ್ ಕೇಸು ದಾಖಲಾಗುತ್ತದೆ. ಅದರ ಸುತ್ತಮುತ್ತ ಈ ಕಥೆ ಸಾಗುತ್ತದೆʼ ಎನ್ನುವುದು ನಿರ್ದೇಶಕ ವಿಜಯ್ ಮಾತು. ಚಿತ್ರದ ಕಥೆಗೆ ಬರಹಗಾರ ಕೀರ್ತಿ ಸಾಥ್ ನೀಡಿದ್ದಾರೆ.
ಚಿತ್ರದ ನಾಯಕ ನಟ ಅದ್ವೈತ ತಮ್ಮ ಹೆಸರನ್ನು ಈಗ ಅವತಾರ್ ಅಂತ ಬದಲಾಯಿಸಿಕೊಂಡಿದ್ದಾರೆ. ಅದ್ಯಾಕೆ ಎನ್ನುವ ಪ್ರಶ್ನೆಗೆ ಅವರು ಕೊಟ್ಟಿದ್ದು, ಸುಮ್ನೆ ಅಂತ. ಆದರೆ ಚಿತ್ರದ ನಟ-ನಟಿಯರು ಹಾಗೆಲ್ಲ ಸುಮ್ನೆ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಅವರಿಗೂ ಗೆಲುವು ಬೇಕು. ಹಾಗಾಗಿ ಇಂತಹ ಸರ್ಕಸ್ ನಡೆಯುತ್ತಲೇ ಇರುತ್ತವೆ. ಇನ್ನು ಅದ್ವೈತ ಚಿತ್ರರಂಗಕ್ಕೆ ಹೊಸಬರಲ್ಲ. ಈಗಾಗಲೇ ʼಹ್ಯಾಪಿ ಜರ್ನಿʼ, ʼಕುಮಾರಿ ೨೧ʼ ಸೇರದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಇದು ಅವರ ಎರಡನೇ ಚಿತ್ರ. ಹಾಗೆಯೇ ತೆಲುಗಿನಲ್ಲೂ ಒಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಕನ್ನಡದಲ್ಲೀಗ ಅದೃಷ್ಟ ಪರೀಕ್ಷಿಸಿಕೊಳ್ಳಲು ಅವತಾರ್ ಎಂಬುದಾಗಿ ಹೊಸ ಅವತಾರ ತಾಳಿದ್ದಾರೆ. ಇವರಿಗೆ ಇಲ್ಲಿ ಜೋಡಿಯಾಗಿ ʼಬನಾರಸ್ʼಚೆಲುವೆ ಸೋನಲ್ ಮಾಂತೆರೂ ಇದ್ದಾರೆ. ಇದೇ ಮೊದಲು ಚಿತ್ರ ತಂಡ ಅವರ ಹೆಸರು ರಿವೀಲ್ ಮಾಡಿತು. ಹಾಗೆಯೇ ಅವರು ಕೂಡ ಮುಹೂರ್ತಕ್ಕೆ ಹಾಜರಿದ್ದು, ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದ ಪೋಷಕ ಪಾತ್ರಗಳಲ್ಲಿ ರವಿಶಂಕರ್, ತಬಲ ನಾಣಿ, ಕುರಿ ಪ್ರತಾಪ್, ತರಂಗ ವಿಶ್ವ ದೊಡ್ಡ ತಾರಾಬಳಗವೇ ಇದೆ. ಶ್ರೀಧರ್ ವಿ. ಸಂಭ್ರಮ್, ಕ್ಯಾಮೆರಾ ತನ್ವಿಕ್ ಛಾಯಾಗ್ರಹಣ ಚಿತ್ರಕ್ಕಿದೆ.