ಬುದ್ದ ಮಾರ್ಗ ತುಳಿದ ಹೊಸ ಪ್ರತಿಭೆ
ʼಮುಂಗಾರು ಮಳೆʼ ಚಿತ್ರದ ಮೂಲಕ ಯೋಗರಾಜ್ ಭಟ್ ದೊಡ್ಡ ಸಕ್ಸಸ್ ಕಂಡ ನಂತರ ಅವರ ಶಿಷ್ಯಂದಿರು ಒಬ್ಬೊಬ್ಬರಾಗಿಯೇ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದು ಹಳೇ ಸುದ್ದಿ. ಹಾಗೆ ಭಟ್ಟರ ಬಳಗದಿಂದ ಬಂದವರು ಚಿತ್ರೋದ್ಯಮದಲ್ಲಿ ಸಾಕಷ್ಟು ಜನರಿದ್ದಾರೆ. ಅದೇ ರೀತಿ ಈಗ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ತಂಡದಲ್ಲೀಗ ಅಂತಹ ಬಿರುಗಾಳಿ ಎದ್ದಿದೆ. ಅಲ್ಲಿರುವವರ ಪೈಕಿ ಈಗ ಒಬ್ಬೊಬ್ಬರಾಗಿಯೇ ನಿರ್ದೇಶನದ ಸಾಹಸಕ್ಕಿಳಿಯುತ್ತಿದ್ದಾರೆ. ಈಗ ಅಂತಹ ಸಾಹಸದಲ್ಲೀಗ ಸುದ್ದಿಯಲ್ಲಿದ್ದವರು ರಾಘವೇಂದ್ರ ವಿ. ಇಳಿಗಾರ್. ಸದ್ಯಕ್ಕೆ ಟೈಟಲ್ ಫೈನಲ್ ಆಗದ ಚಿತ್ರವೊಂದಕ್ಕೆ ರಾಘವೇಂದ್ರ ವಿ. ಇಳಿಗಾರ್ ನಿರ್ದೇಶಕ. ಸಂಕ್ರಾಂತಿ ಹಬ್ಬಕ್ಕೆ ಅದರ ಮೊದಲ ಪೋಸ್ಟರ್ ಲಾಂಚ್ ಆಗಿದೆ. ” ಪ್ರೊಡಕ್ಷನ್ ೨ʼ ಹೆಸರಲ್ಲಿ ಪೋಸ್ಟರ್ ಹೊರ ಬಂದಿದೆ.
ಬುದ್ಧನ ಮರಣ ನಂತರ ಅವರ ಪರಿಶ್ರಮ ಯಾವ ರೀತಿ ಅನುಕರಣೆಗೆ ಬಂದ ಬಗೆಯನ್ನು ಪೋಸ್ಟರ್ ನಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಮಧ್ಯದಲ್ಲಿ ಬುದ್ಧನ ಮುಖ, ತುತ್ತತುದಿಯಲ್ಲಿ ಹರಿದಿರುವ ವಿಚಿತ್ರ ಧ್ವಜ, ಅಕ್ಕಪಕ್ಕದಲ್ಲಿ ಎರಡು ಮಿಲಿಟರಿ ಹೆಲಿಕಾಫ್ಟರ್ಗಳು ಹಾರಾಡುತ್ತಿರುವುದು, ಕೆಳಗಡೆ ಒಂದು ಕಡೆಯಲ್ಲಿ ಜೀಪುಗಳು, ಮತ್ತೊಂದು ಭಾಗದಲ್ಲಿ ವ್ಯಕ್ತಿಯೊಬ್ಬ ಕುದುರೆ ಮೇಲೆ ಕೂತಿದ್ದೇನೆ. ಪಕ್ಕದಲ್ಲೆ ಬಾಂಬ್ ಸಿಡಿಸಲು ಟ್ಯಾಂಕ್ವೊಂದು ಸಜ್ಜಾಗಿದೆ. ಶಾಂತಿ ಮತ್ತು ಹಿಂಸೆ ಒಟ್ಟಿಗೆ ನಿರ್ಗಮನ. ಇವೆಲ್ಲವೂ ಪೋಸ್ಟರ್ದಲ್ಲಿ ಕಂಡುಬಂದಿದೆ. ಇದೊಂದು ಪೌರಾಣಿಕ ಹಾಗೂ ಫ್ಯಾಂಟಸಿ ಸಾಹಸದ ಸನ್ನಿವೇಶಗಳನ್ನು ಹೊಂದಿದ್ದು, ಚಿತ್ರ ಹೊಸ ತೆರೆನಾದ ಕತೆಯನ್ನು ತೋರಿಸಲು ಹೊರಟಿದೆಯಂತೆ. ಸದ್ಯಕ್ಕೆ ಚಿತ್ರದ ಛಾಯಾಗ್ರಾಹಕರಾಗಿ ಅರ್ಜುನ್ ಕೋಟ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಕಲಾವಿದರು ಹಾಗೂ ತಂತ್ರಜ್ಣರ ಆಯ್ಕೆ ಬಾಕಿ ಇದೆ. ಇಷ್ಟರಲ್ಲಿಯೇ ಇವೆಲ್ಲ ಪ್ರಕ್ರಿಯೆ ಮುಗಿಯಲಿದೆಯಂತೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಪೋಸ್ಟರ್ ಲಾಂಚ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹಾಗೆಯೇ ತಮ್ಮ ಶಿಷ್ಯ ರಾಘವೇಂದ್ರ ಅವರ ಸಿನಿ ಬದುಕಿಗೆ ಹರಸಿದ್ದಾರೆ. ರಾಘವೇಂದ್ರ ಅವರಿಗೆ ಇದು ಚೊಚ್ಚಲ ಸಿನಿಮಾವಾದರೂ, ಸಿನಿಮಾ ಜಗತ್ತು ಅವರಿಗೆ ಹೊಸದಲ್ಲ. ರಿಷಬ್ ಶೆಟ್ಟಿ ಅವರ ಬಳಿಯೇ ಸಾಕಷ್ಟು ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಸೈಕಾಲಜಿ ಓದಿ, ಜೀವನದಲ್ಲಿ ಇನ್ನೇನೋ ಆಗುವ ಕನಸು ಕಂಡಿದ್ದ ರಾಘವೇಂದ್ರ ಅವರು, ಸಿನಿಮಾ ಮೇಲಿನ ಆಸಕ್ತಿಯಿಂದ ಬಣ್ಣದ ಜಗತ್ತಿಗೆ ಬಂದರಂತೆ. ವಿಶೇಷ ಅಂದ್ರೆ ಹತ್ತೋಂಬತ್ತನೇ ವಯಸ್ಸಿನಲ್ಲೇ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಗಳಿಸಿದ್ದು, ಅವರೊಳಗಿನ ನಿರ್ದೇಶಕನಾಗುವ ಕನಸಿಗೆ ಮತ್ತಷ್ಟು ರೆಕ್ಕೆ ಬರುವಂತೆ ಮಾಡಿತು ಎನ್ನುವುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ ರಾಘವೇಂದ್ರ ವಿ. ಇಳಿಗಾರ್. ಇಷ್ಟರಲ್ಲಿಯೇ ಟೈಟಲ್ ಲಾಂಚ್ ಮಾಡುವುದಾಗಿ ಹೇಳಿರುವ ಚಿತ್ರ ತಂಡ, ಸದ್ಯಕ್ಕೆ ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಪ್ರಿಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಸ್ಕಾಯರ್ ಕಾನ್ಸೆಫ್ಟ್ಸ್ ಅಡಿಯಲ್ಲಿ ಜ್ನಾನ್ ಶೇಖರ್ ಸಿದ್ದಯ್ಯ, ರವಿಕುಮಾರ್, ಸುನಿಲ್ಗಾಟ್ಗೆ ಹಾಗೂ ರಾಘವೇಂದ್ರ.ಜಿ.ಆರ್ ಜಂಟಿಯಾಗಿ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ.