ಯುನೈಟೆಡ್ ಆಡಿಯೋ ಮೂಲಕ ಹೊರ ಬಂದ ಮೊದಲ ಕೊಡುಗೆ
ಬಿಗ್ ಬಾಸ್ ರಿಯಾಲಿಟಿ ಶೋ ಜತೆಗೆ ಪಾರ್ಟಿ ಸಾಂಗ್ ಆಲ್ಬಂ ಮೂಲಕ ಸಿಕ್ಕಾಪಟ್ಟೆ ಪಾಪ್ಯುಲರ್ ಆದ ಹೆಸರು ಚಂದನ್ ಶೆಟ್ಟಿ. ಅವರೀಗ ಮತ್ತೊಂದು ಹೊಚ್ಚ ಹೊಸ ಮ್ಯೂಜಿಕ್ ವಿಡಿಯೋ ಆಲ್ವಂ ಲಾಂಚ್ ಮಾಡಿದ್ದಾರೆ. ‘ ಒಂದೇ ಒಂದು ಪೆಗ್ ಗೆ ತಲೆ ಗಿರ ಗಿರ ಅಂತಿದೆ ‘ ಅಂತ ಈ ಹಿಂದೆ ಸಂಗೀತ ಪ್ರಿಯರ ತಲೆ ಗಿಮ್ಮ್ ಎನಿಸಿದ್ದ ಚಂದನ್ ಶೆಟ್ಟಿ ,ಈಗಲೂ ಅಂತಹದೇ ಒಂದು ಕಿಕ್ ಕೊಡುವ ಸಾಂಗ್ ಅನ್ನೇ ಸಂಗೀತ ಪ್ರಿಯರಿಗೆ ಕೊಟ್ಟಿದ್ದಾರೆ.ಈ ಆಲ್ಬಂ ಹೆಸರು ‘ಪಾರ್ಟಿ ಫ್ರೀಕ್”. ಇದು ಕೂಡ ಒಂದು ಪಾರ್ಟಿ ಸಾಂಗ್ ಅನ್ನೋದು ವಿಶೇಷ. ನ್ಯೂ ಈಯರ್ ಪಾರ್ಟಿಗೆ ಅಂತಲೇ ಸಾಹಿತ್ಯ ಬರೆದು , ಸಂಗೀತ ನೀಡಿ, ಅದರಲ್ಲಿ ತಾವೇ ಕುಣಿದು ಕುಪ್ಪಳಿಸಿ ಸಖತ್ ಕಿಕ್ ನೀಡುವಂತೆ ಮಾಡಿದ್ದಾರೆ ಚಂದನ್ ಶೆಟ್ಟಿ.
ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ‘ ಪಾರ್ಟಿ ಫ್ರೀಕ್ ‘ಹಾಡು ಶನಿವಾರ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ಇದು ಅದ್ದೂರಿ ವೆಚ್ಚದಲ್ಲಿ ಮೂಡಿ ಬಂದ ಮ್ಯೂಜಿಕ್ ಆಲ್ಬಂ. ಒಂದು ಸ್ಟಾರ್ ನಟರ ಸಿನಿಮಾ ದ ಹಾಡಿನ ಹಾಗೆಯೇ ರಿಚ್ ಆಗಿ ಬಂದಿದೆ. ಭಜರಂಗಿ ಮೂಹನ್ ನೃತ್ಯ ನಿರ್ದೇಶನದ ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಅವರ ಪತ್ನಿ ನಿವೇದಿತಾ ಗೌಡ, ನಟಿ ನಿಶ್ವಿಕಾ ನಾಯ್ಡ, ನಟ ಧರ್ಮ ಸೇರಿದಂತೆ ದೊಡ್ಡ ತಂಡವೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದೆ.
ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದಲೇ ಶನಿವಾರ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು.
ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರ ಎಂಟ್ರಿಗೆ ಈ ಆಲ್ಬಂ ನಿರ್ಮಾಣ ಮಾಡಿದ್ದಾರಂತೆ. ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಹೊರ ಬಂದಿದೆ.
ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್ ಶೆಟ್ಟಿ ಮಾತನಾಡಿ, ‘ ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ’ ಎಂದರು. ಜನಕ
ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.
ಹಾಡಿನ ನಿರ್ಮಾಣದಲ್ಲಿ ತಾವು ಒಬ್ಬರಾದ ನಟ ಧರ್ಮ, ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು. ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.