ಯುನೈಟೆಡ್ ಎಂಟರ್ಟೈನರ್ ಮೂಲಕ ಇಷ್ಟರಲ್ಲೇ ಶುರುವಾಗಲಿದೆ ಚಂದನ್ ಶೆಟ್ಟಿ ಸಿನಿಮಾ
ಸಿಂಗರ್ ಚಂದನ್ ಶೆಟ್ಟಿ, ಈಗ ಸಿನಿಮಾ ಪ್ರೊಡಕ್ಷನ್ ಕಡೆ ಮುಖ ಮಾಡಿದ್ದಾರೆ. ಅದಕ್ಕಂತಲೇ ಅವರೀಗ ಆಂಧ್ರ ಮೂಲದ ಗಣಿ ಉದ್ಯಮಿ ಚೈತನ್ಯ ಲಖಂ ಸಾನಿ ಎಂಬುವರೊಂದಿಗೆ ಸೇರಿ ʼಯುನೈಟೆಡ್ ಎಂಟರ್ ಟೈನರ್ʼ ಎಂಬ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ನಟ ಧರ್ಮ ಕೂಡ ಇದಕ್ಕೆ ಸಾಥ್ ನೀಡಿದ್ದು, ಎಲ್ಲವೂ ಅಂದುಕೊಂಡಂತಾದರೆ ಹೊಸ ವರ್ಷದ ಆರಂಭದಲ್ಲಿ ಯುನೈಟೆಡ್ ಎಂಟರ್ ಟೈನರ್ ಮೂಲಕ ಚಂದನ್ ಶೆಟ್ಟಿ ಅದ್ದೂರಿ ವೆಚ್ಚದ ನಿರ್ಮಾಣ ಮಾಡುವುದು ಕನ್ಫರ್ಮ್.
ಸದ್ಯಕ್ಕೆ ಆ ಸಿನಿಮಾದ ಪ್ಲಾನ್ ಏನು? ಆರ್ಟಿಸ್ಟ್ ಯಾರು? ಕಥೆ-ನಿರ್ದೇಶನ ಯಾರದು? ಇತ್ಯಾದಿ ಮಾಹಿತಿಗಳು ಇನ್ನು ನಿಗೂಢ. ಚಂದನ್ ಶೆಟ್ಟಿ ಆಂಡ್ ಗ್ರೂಪ್ ಅದೆಲ್ಲವನ್ನು ಫೈನಲ್ ಮಾಡಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ಟೀಮ್ ಕೂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಿನಿಮಾ ಮಾಡುವ ಮುಂದಿನ ಯೋಚನೆಯನ್ನು ಚಂದನ್ ಶೆಟ್ಟಿ ಆಂಡ್ ಟೀಮ್ ಶನಿವಾರ ಅಧಿಕೃತವಾಗಿಯೇ ರಿವೀಲ್ ಮಾಡಿದೆ. ಯುನೈಟೆಡ್ ಎಂಟರ್ ಟೈನರ್ ಬ್ಯಾನರ್ ಮೂಲಕ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆ ಇದೆ ಅಂತಲೂ ಹೇಳಿದೆ.
ಸದ್ಯಕ್ಕೀಗ ಯುನೈಟೆಡ್ ಆಡಿಯೋ ಸಂಸ್ಥೆ ಮೂಲಕ ಮೊದಲ ಮ್ಯೂಜಿಕ್ ವಿಡಿಯೋ ಆಲ್ಬಂ ಲಾಂಚ್ ಆಗಿದೆ.” ಪಾರ್ಟಿ ಫ್ರಿಕ್ʼ ಎನ್ನುವುದು ಅದರ ಹೆಸರು. ನ್ಯೂ ಈಯರ್ ಪಾರ್ಟಿಗಳಿಗೆ ಇನ್ನಷ್ಟು ಕಿಕ್ ಬರಲಿ ಅಂತನೇ ರ್ಯಾಪರ್ ಚಂದನ್ ಶೆಟ್ಟಿ ತಾವೇ ಸಾಹಿತ್ಯ ಬರೆದು, ಅದರಲ್ಲಿ ಹಾಡಿ ಕುಣಿದಿದ್ದಾರೆ. ಇದು ಕನ್ನಡ ಮತ್ತು ತೆಲುಗು ಏರಡೂ ಭಾಷೆಗೂ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಶರ್ಟಾನ್ ಸ್ಟಾರ್ ಹೋಟೆಲ್ ನಲ್ಲಿ ಚಿತ್ರೀಕರಣಗೊಂಡಿದ್ದು, ಅದಕ್ಕಾಗಿ ಸರಿ ಸುಮಾರು ೩೦ ಲಕ್ಷ ರೂ. ವೆಚ್ಚ ಮಾಡಿದ್ದಾಗಿ ತಂಡ ಹೇಳಿದೆ. ಅದೀಗ ಯುನೈಟೆಡ್ ಆಡಿಯೋ ಸಂಸ್ಥೆಯ ಆಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಅಗಿದೆ.
ಶನಿವಾರ ಅದು ಲಾಂಚ್ ಆದ ಸಂದರ್ಭದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ಯುನೈಟೆಡ್ ಸಂಸ್ಥೆಯ ಶುರುವಾದ ಬಗೆ, ಅದರ ಮೂಲ ಉದ್ದೇಶ, ಮುಂದಿನ ಯೋಜನೆಗಳನ್ನು ರಿವೀಲ್ ಮಾಡಿದರು.” ಯುನೈಟೆಡ್ ಸಂಸ್ಥೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಆಲ್ಬಂ ಸಾಂಗ್ ಮಾಡುವ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಅದರ ಮೊದಲ ಉದ್ದೇಶವಾದರೆ, ಕ್ರಮೇಣ ಸಿನಿಮಾ ನಿರ್ಮಾಣ ಮಾಡುವುದು ಅದರ ಟಾರ್ಗೆಟ್ ಎಂಬುದಾಗಿ ಹೇಳಿದರು. ನಟ ಧರ್ಮ ಹಾಗೂ ನಿರ್ಮಾಪಕ ಚೈತನ್ಯ ಲಖಂ ಸಾನಿ ಕೂಡ ಇದನ್ನು ಬಹಿರಂಗ ಪಡಿಸಿದರು. ಒಟ್ಟಿನಲ್ಲಿ ಸಿನಿಮಾದಲ್ಲಿ ಹಾಡು ಬರೆದು , ಹಾಡುವುದಕ್ಕಾಗಿ ಒಂದು ಟೈಮ್ ಪರದಾಡಿದ್ದ ಚಂದನ್ ಶೆಟ್ಟಿ ಇವತ್ತುಬಹುಬೇಡಿಕೆಯ ಸಿಂಗರ್ ಆಗಿದ್ದು ಒಂದೆಡೆಯಾದರೆ, ಮತ್ತೊಂದಡೆ ಸಿನಿಮಾ ನಿರ್ಮಾಣದತ್ತ ಕೂಡ ಮನಸ್ಸು ಮಾಡಿದ್ದು ವಿಶೇಷ.