ನಿರ್ದೇಶಕ ರವಿ ಶ್ರೀವತ್ಸಗೆ ನಿರ್ಮಾಪಕ ಪದ್ಮನಾಭ್ ಎಚ್ಚರಿಕೆ
ರವಿಶ್ರೀವತ್ಸ ನಿರ್ದೇಶನದ “ಎಂಆರ್ʼ ಸಿನಿಮಾಕ್ಕೆ ವಿಘ್ನ ಎದುರಾಗುವುದು ಗ್ಯಾರಂಟಿ ಆಗಿದೆ. ನಿರ್ಮಾಪಕ ಪದ್ಮನಾಭ್ ಅವರ ಹೇಳಿಕೆ ನಂತರವೂ ನಿರ್ದೇಶಕ ರವಿ ಶ್ರೀವತ್ಸ, ಸಿನಿಮಾ ಮಾಡಿಯೇ ತೀರುತ್ತೇನೆಂದು ಪ್ರತಿಕ್ರಿಯೆ ನೀಡಿದ್ದರೂ, ಮುಂದೆ ಅವರು ಸಿನಿಮಾ ಮಾಡುವುದು ಅಷ್ಟು ಸುಲಭ ಇಲ್ಲ. ಯಾಕಂದ್ರೆ, ಮುತ್ತಪ್ಪ ರೈ ಸ್ಥಾಪಿಸಿದ ʼಜಯ ಕರ್ನಾಟಕʼ ಸಂಘಟನೆ ಈಗ ರವಿ ಶ್ರೀವತ್ಸ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ. ಮತ್ತೊಂದೆಡೆ ಮುತ್ತಪ್ಪ ರೈ ಪುತ್ರರು ಕೂಡ, ತಮ್ಮ ಅನುಮತಿ ಇಲ್ಲದೆ ಮುತ್ತಪ್ಪ ರೈ ಕುರಿತು ಯಾರು ಸಿನಿಮಾ ಮಾಡುವಂತಿಲ್ಲ ಅಂತಲೂ ಹೇಳಿದ್ದಾರಂತೆ.
ಶುಕ್ರವಾರ ಇವೆರೆಡು ಸಂಗತಿಗಳನ್ನು ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ ಮುತ್ತಪ್ಪ ರೈ ಶಿಷ್ಯ ಹಾಗೂ ನಿರ್ಮಾಪಕ ಪದ್ಮನಾಭ್ ಮತ್ತು ವಕೀಲ ನಾರಾಯಣ ಸ್ವಾಮಿ, ಅನುಮತಿ ಇಲ್ಲದೆ ಚಿತ್ರೀಕರಣ ಶುರು ಮಾಡಿರುವ ರವಿ ಶ್ರೀವತ್ಸ ಅವರ ʼಎಂಆರ್ʼ ಸಿನಿಮಾ ರಿಲೀಸ್ ಆಗುವುದಕ್ಕೆ ತಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಮುಂದೆ ಆಗುವ ನಷ್ಟಕ್ಕೂ ತಾವು ಕಾರಣರಲ್ಲ. ಸಿನಿಮಾಕ್ಕೆ ಬಂಡವಾಳ ಹಾಕುತ್ತಿರುವ ನಿರ್ಮಾಪಕ ಶೋಭ ರಾಜಣ್ಣ ಈಗಲೇ ಅರ್ಥ ಮಾಡಿಕೊಂಡು ಸಿನಿಮಾ ನಿಲ್ಲಿಸಿದರೆ ಸೂಕ್ತ ಅಂತಲೂ ಎಚ್ಚರಿಕೆ ನೀಡಿದರು.
ನಿರ್ದೇಶಕ ರವಿ ಶ್ರೀವತ್ಸ ಹೇಳಿದ ಹಾಗೆಯೇ ʼಎಂಆರ್ʼ ಎನ್ನುವುದು ಮತ್ತಪ್ಪ ರೈ ಅವರ ಜೀವನ ಚರಿತ್ರೆ ಕುರಿತ ಸಿನಿಮಾ. ಅಲ್ಲಿ ಅವರು ರೈ ಅವರ ಹಳೆಯ ದಿನಗಳ ಕುರಿತು ಸಿನಿಮಾ ಮಾಡಲು ಹೊರಟಿದ್ದಾರೆನ್ನುವ ಮಾಹಿತಿ ಇದೆ. ಅಲ್ಲಿದೆ ಇದು ಮುತ್ತಪ್ಪ ರೈ ಅವರ ಬಯೋಪಿಕ್. ಯಾವುದೇ ಭಾಷೆಯ ಚಿತ್ರೋದ್ಯಮದಲ್ಲಿ ಒಬ್ಬ ನಿರ್ದೇಶಕ ಇನ್ನೊಬ್ಬರ ಜೀವನ ಚರಿತ್ರೆ ಆಧರಿಸಿ ಸಿನಿಮಾ ಮಾಡಲು ಹೊರಟಾಗ ಸಂಬಂಧಪಟ್ಟ ವ್ಯಕ್ತಿ ಅಥವಾ ಅವರಿಗೆ ಸಂಬಂಧಪಟ್ಟವರ ಅನುಮತಿ ಪಡೆಯಲೇಬೇಕು. ಹಾಗೆ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ ರವಿ ಶ್ರೀವತ್ಸ ಅದನ್ನು ಮಾಡಿಲ್ಲ. ಇದು ತಪ್ಪು ಅಂತಲೇ ನಾವು ಹೇಳುತ್ತಿದ್ದೇವೆ ಅಂತ ನಿರ್ಮಾಪಕ ಪದ್ಮನಾಭ್ ಸ್ಪಷ್ಟಪಡಿಸಿದರು.
ರೈ ಅವರ ಜೀವನ ಬರೀ ಭೂಗತ ಜಗತ್ತು ಮಾತ್ರವಲ್ಲ. ಅವರು ಬೇಕಾದಷ್ಟು ಸಮಾಜ ಸೇವೆ ಮಾಡಿದ್ದಾರೆ. ಜಯ ಕರ್ನಾಟಕ ಸಂಘಟನೆ ಕಟ್ಟಿ ನಾಡಿನ ನೆಲ, ಜಲ ಉಳಿವಿಗೆ ಹೋರಾಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ತಮ್ಮ ಜೀವನ ಕುರಿತ ಸಿನಿಮಾವನ್ನು ತಮ್ಮದೇ ಬ್ಯಾನರ್ ನಲ್ಲಿಯೇ ಮಾಡುತ್ತೇನೆ, ಬೇರೆಯವರಿಗೆ ಅವಕಾಶ ಕೊಡುವುದಿಲ್ಲ ಅಂತಲೂ ಮಾಧ್ಯಮದವರ ಎದುರೇ ಹೇಳಿಕೆ ನೀಡಿದ್ದಾರೆ. ಇಷ್ಟಾಗಿಯೂ, ರವಿ ಶ್ರೀವತ್ಸ ಇದನ್ನು ಯಾಕೆ ಪರಿಗಣಿಸಿಲ್ಲ? ಇಷ್ಟಕ್ಕೂ ಮುತ್ತಪ್ಪ ರೈ ಕುರಿತು ಸಿನಿಮಾ ಮಾಡಲು ಅವರಿಗೆ ಅವಕಾಶ ಕೊಟಿದ್ದು ಯಾರು? ಇದನ್ನು ನಾವು ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೆಟ್ಟದಾಗಿ ಚಿತ್ರಿಸಲು ಬಿಡುವುದಿಲ್ಲ ಎಂದು ಮುತ್ತಪ್ಪ ರೈ ಕುಟುಂಬದ ಪರ ವಕೀಲ ನಾರಾಯಣ ಸ್ವಾಮಿ ಹೇಳಿದರು.