ಗಡಿಭಾಗದ ಕ್ರೈಮ್ ಥ್ರಿಲ್ಲರ್ ಕತೆಯಲ್ಲಿದೆ ಕನ್ನಡದೊಂದಿಗಿನ ಸೆಂಟಿಮೆಂಟ್
ಯುವ ನಿರ್ದೇಶಕ ಸಂತೋಷ್ ಕುಮಾರ್ ನಿರ್ದೇಶನದ “ಕ್ಯಾಂಪಸ್ ಕ್ರಾಂತಿ’ ಚಿತ್ರವೀಗ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಚಿತ್ರತಂಡ ಟೈಟಲ್ ಲಾಂಚ್ ಮೂಲಕ ಸದ್ದು ಮಾಡಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಅವರ ಆರ್ಟ್ಆಫ್ ಲಿವಿಂಗ್ ಆಶ್ರಮದಲ್ಲಿ ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರು ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಚಿತ್ರತಂಡ ಅಲ್ಲಿಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ʼಕ್ಯಾಂಪಸ್ ಕ್ರಾಂತಿʼ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡುವ ಮೂಲಕ ಶುಭ ಕೋರಿದರು.
“ಬಿಂದಾಸ್ ಗೂಗ್ಲಿʼ ಹಾಗೂ ʼಸ್ಟೂಡೆಂಟ್ಸ್ʼ ಚಿತ್ರಗಳ ನಂತರವೀಗ ಸಂತೋಷ್ ಕುಮಾರ್ ಆಕ್ಷನ್ ಕಟ್ ಹೇಳಿದ ಮೂರನೇ ಚಿತ್ರ “ಕ್ಯಾಂಪಸ್ ಕ್ರಾಂತಿʼ. ಚಿತ್ರದ ನಿರ್ದೇಶನ ಜತೆಗೆ ಸಂತೋಷ್ ಹಿಂದಿಯಲ್ಲೂ ಒಂದು ಆಲ್ಬಂ ಸಾಂಗ್ ವೊಂದನ್ನು ನಿರ್ದೇಶಿಸಿ, ಹೊರ ತಂದಿದ್ದಾರೆ. ಅದರ ಜತೆಗೀಗ ಲಾಕ್ ಡೌನ್ ಸಮಯದಲ್ಲಿ ಕತೆ, ಚಿತ್ರಕತೆ ಬರೆದು ‘ಕ್ಯಾಂಪಸ್ ಕ್ರಾಂತಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಲೇಜು ಸುತ್ತು ನಡೆಯುವ ಕತೆ. ಹಾಗಂತ ಕನ್ನಡ ಚಿತ್ರರಂಗಕ್ಕೆ ಇಂತಹ ಕತೆಗಳೇನು ಹೊಸದಲ್ಲ. ಕಾಲೇಜು ಲವ್ ಸ್ಟೋರಿ ಕತೆಗಳು ಬೆಳ್ಳಿತೆರೆಯಲ್ಲಿ ಬೇಕಾದಷ್ಟು ಬಂದಿವೆ. ಹಾಗೆ ನೋಡಿದರೆ, ಪ್ರತಿ ಸಿನಿಮಾದಲ್ಲೂ ಇಂತಹ ಕಾಲೇಜು ಕತೆ ಇರುವುದು ಸರ್ವೇ ಸಾಮಾನ್ಯ. ಆದರೆ “ಕ್ಯಾಂಪಸ್ ಕ್ರಾಂತಿ’ ವಿಭಿನ್ನ ಕತೆಯ ಚಿತ್ರ. ಆ ಕತೆ ಹೇಗೆ ವಿಭಿನ್ನ ಅಂತ ಹೇಳ್ತಾರೆ ಕೇಳಿ ನಿರ್ದೇಶಕ ಸಂತೋಷ್ ಕುಮಾರ್.
” ಇದು ನಾನು ಲಾಕ್ ಡೌನ್ ಸಮಯದಲ್ಲಿ ಬರೆದ ಕತೆ. ಕರ್ನಾಟಕ ಹಾಗು ಮಹಾರಾಷ್ಟ್ರ ಗಡಿ ಭಾಗದ ಕಾಲೇಜ್ ಒಂದರಲ್ಲಿ ನಡೆದಿದ್ದು. ನಿಜವಾಗಿಯೂ ನಡೆದಿದ್ದು. ಆ ಕಾಲೇಜ್ ನಲ್ಲಿ ತುಂಬಾ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನಡೆಯುವುದಿಲ್ಲ. ಅದಕ್ಕೆ ಕಾರಣ ಯಾಕೆ ಎನ್ನುವುದು ಸಸ್ಪೆನ್ಸ್. ಆದರೆ ಅಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತವೆ. ಆ ಕೊಲೆಗಳಿಗೂ, ರಾಜ್ಯೋತ್ಸವ ನಡೆಯದಿರುವುದಕ್ಕೂ ಸಂಬಂಧ ಇದೀಯಾ? ಇದ್ದರೆ ಅದಕ್ಕೆ ಕಾರಣ ಏನು? ಅದರ ಸುತ್ತ ನಡೆಯುವ ಕತೆ ಇದು. ಇದು ಸಸ್ಪೆನ್ಸ್ ಥ್ರಿಲ್ಲರ್ ಕತೆ. ಅದರ ಜತೆಗೆ ಒಂದು ಕ್ಯೂಟ್ ಪ್ರೇಮ ಕತೆಯೂ ಇದೆ’
– ಸಂತೋಷ್ ಕುಮಾರ್, ನಿರ್ದೇಶಕ
ಬಹುತೇಕ ಹೊಸಬರೇ ಚಿತ್ರದ ಕಲಾವಿದರು. ಒಂದೆರೆಡು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇರುವ ಆರ್ಯ ಹಾಗೂ ಅಲಂಕಾರ್ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಹಾಗೆಯೇ ಈಶಾನಾ ಹಾಗೂ ಆರತಿ ಪಡುಬಿದ್ರಿ ನಾಯಕಿಯರು. ಅವರೊಂದಿಗೆ ವಾಣಿಶ್ರೀ, ಹನುಮಂತೇ ಗೌಡ್ರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕೊರೋನಾ ಆತಂಕದ ಮಧ್ಯೆಯೇ ಚಿತ್ರ ತಂಡ ಸೂಕ್ತ ರಕ್ಷಣೆಯೊಂದಿಗೆ ೪೫ ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಹಾಗೆಯೇ ರೀ ರೆಕಾರ್ಡಿಂಗ್ ಜತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಮುಗಿಸಿಕೊಂಡು ಈಗ ಆಡಿಯೋ ರಿಲೀಸ್ ಗೆ ಪ್ಲಾನ್ ಮಾಡಿಕೊಂಡಿದೆ.
ಹೊಸ ವರ್ಷ ಜನವರಿ ತಿಂಗಳಲ್ಲಿ ಆಡಿಯೋ ಲಾಂಚ್ ಮಾಡಲು ತಯಾರಿ ನಡೆಸಿದೆ. ಹಾಗೆಯೇ ಚಿತ್ರದ ರಿಲೀಸ್ ಗೂ ಸಿದ್ದತೆ ನಡೆದಿದೆ. ಎಲ್ಲವೂ ಅಂದುಕೊಂಡಂತಾದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಚಿತ್ರ ರಿಲೀಸ್ ಗ್ಯಾರಂಟಿ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಕುಮಾರ್. ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಪಿಕೆಎಚ್ ದಾಸ್ ಛಾಯಾಗ್ರಣವಿದೆ. ಪ್ಯಾಷನ್ ಮೂವೀ ಮೇಕರ್ಸ್ ಮೂಲಕ ಸಂತೋಷ್ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ದೇಶಕರಾಗಿ ಅವರಿಗಿದು ಮೂರನೇ ಚಿತ್ರ. ಹಾಗೆಯೇ ನಿರ್ಮಾಪಕರಾಗಿ ಎರಡನೇ ಚಿತ್ರ. ಈ ಸಲ ಸಕ್ಸಸ್ ಪಡೆಯಲೇ ಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ ಸಂತೋಷ್. ಆಲ್ ದಿ ಬೆಸ್ಟ್ ಸಂತೋಷ್.