ಸಂಗ್ರಹಕ್ಕೆ ಯೋಗ್ಯವಿದು -ಕಮರ್ಷಿಯಲ್ ಅಲ್ಲವೇ ಅಲ್ಲ!
ಪ್ರಗತಿ ಅಶ್ವತ್ಥನಾರಾಯಣ್ ಕನ್ನಡ ಚಿತ್ರರಂಗದಲ್ಲಿ ಬಹು ಜನಪ್ರಿಯ ಹೆಸರಿದು. ಹೌದು, ಕಪ್ಪು- ಬಿಳುಪು ಕಾಲದಿಂದಲೂ ಚಿತ್ರರಂಗದ ನಂಟು ಬೆಳೆಸಿಕೊಂಡು ಬಂದವರು. ಸರಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನು ಅಳವಾಗಿ ಬಲ್ಲವರು. ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿರುವ ನೂರಾರು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್, ರಾಜೇಶ್, ಗಂಗಾಧರ್, ಲೋಕೇಶ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ವಜ್ರಮುನಿ, ಬಾಲಕೃಷ್ಣ, ನರಸಿಂಹರಾಜು, ಕಲ್ಪನಾ, ಮಂಜುಳಾ ಹೀಗೆ ಇನ್ನೂ ಅನೇಕ ಹಿರಿಯ ನಟ, ನಟಿಯರ ಚಿತ್ರಗಳಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಅದ್ಭುತ ಮತ್ತು ಅಪರೂಪದ ಫೋಟೋಗಳನ್ನೂ ತೆಗೆದಿದ್ದಾರೆ. ಅಪರೂಪದಲ್ಲಿ ಅಪರೂಪ ಎಂಬಂತಹ ಫೋಟೋಗಳು ಇಂದಿಗೂ ಅವರ ಬಳಿ ಇವೆ ಎಂಬುದೇ ವಿಶೇಷ.
ಪ್ರಗತಿ ಅಶ್ವತ್ಥನಾರಾಯಣ ಅವರು, 1965ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಕಪ್ಪು-ಬಿಳುಪು ಸಿನಿಮಾಗಳಿಂದ ಹಿಡಿದು, ಕಲರ್ ಸಿನಿಮಾಗಳವರೆಗೂ ಇವರ ಕ್ಯಾಮೆರಾ ಹಲವಾರು ನಟ,ನಟಿಯರು, ಪೋಷಕ ನಟ,ನಟಿಯರು,ಹಾಸ್ಯ ನಟರು, ನಿರ್ದೇಶಕ, ನಿರ್ಮಾಪಕರು, ಗೀತರಚನೆಕಾರರು, ತಾಂತ್ರಿಕ ವರ್ಗದವರು ಸೇರಿದಂತೆ ಸಿನಿಮಾ ವಿಭಾಗದಲ್ಲಿ ದುಡಿಯುವ ಅನೇಕರ ಫೋಟೋ ಕ್ಲಿಕ್ಕಿಸಿದೆ ಎಂಬುದೇ ಅಚ್ಚರಿ. ಈವರೆಗೆ ಸುಮಾರು ೩೦೦ಕ್ಕೂ ಹೆಚ್ಚು ಯಶಸ್ವಿ ಹಾಗೂ ಅಪರೂಪದ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದು.
೨೦೦೫ರ ನಂತರ ಗಾಂಧಿನಗರದಲ್ಲಿದ್ದ ಇವರ ಪ್ರಗತಿ ಸ್ಟುಡಿಯೋ ಕ್ಲೋಸ್ ಆಗಿದ್ದರೂ, ಅಶ್ವತ್ಥನಾರಾಯಣ ಅವರು ಮಾತ್ರ ಸುಮ್ಮನೆ ಕೂರದೆ, ಅಪರೂಪದ ಫೋಟೋಗಳೊಂದಿಗೆ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಈಗ ಹೊಸದೊಂದು ಸುದ್ದಿಗೂ ಕಾರಣರಾಗಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಷ್ಟಕ್ಕೂ ಪ್ರಗತಿ ಅಶ್ವತ್ಥನಾರಾಯಣ ಅವರ ಕುರಿತಾದ ಹೊಸ ಸುದ್ದಿ ಏನು ಎಂಬ ಪ್ರಶ್ನೆಗೆ “ತಾರಾ ಕ್ಯಾಲೆಂಡರ್-೨೦೨೧” ಉತ್ತರ.
ಪ್ರಗತಿ ಅಶ್ವತ್ಥನಾರಾಯಣ ಅವರು, ಬರುವ ಹೊಸ ವರ್ಷಕ್ಕೆ “ತಾರಾ ಕ್ಯಾಲೆಂಡರ್ -೨೦೨೧” ಸಿದ್ಧಗೊಳಿಸಿದ್ದಾರೆ. ಹಾಗಂತ, ಇದು ಕಮರ್ಷಿಯಲ್ ಅಂದುಕೊಂಡರೆ ಆ ಊಹೆ ತಪ್ಪು. ಸದಾ ಸಿನಿಮಾ ಪ್ರೀತಿಸುವ, ಧ್ಯಾನಿಸುವ ಪ್ರಗತಿ ಅಶ್ವತ್ಥನಾರಾಯಣ ಅವರು, ತಮ್ಮದೇ ಶೈಲಿಯಲ್ಲೊಂದು ತಾರಾ ಕ್ಯಾಲೆಂಡರ್ ವಿನ್ಯಾಸಗೊಳಿಸಿದ್ದಾರೆ.
ಅದನ್ನು ಫೇಸ್‌ಬುಕ್ ಅಕೌಂಟ್‌ನಲ್ಲೂ ಹಾಕಿಕೊಂಡಿದ್ದಾರೆ. ಮೊದಲೇ ಹೇಳಿದಂತೆ, ಇದನ್ನು ಕಮರ್ಷಿಯಲ್ ಆಗಿ ಮಾಡಿಲ್ಲ. ಸಿನಿಮಾದ ಮೇಲಿರುವ ಪ್ರೀತಿಗೆ ಮಾಡಿದ್ದಾರೆ. ಇದನ್ನು ಸಿನಿಪ್ರಿಯರು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಟೋರ್ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲ, ಬೇಕಾದವರು ಡಿಜಿಟಲ್ ಪ್ರಿಂಟ್, ಜೆರಾಕ್ಸ್ ಕೂಡ ಮಾಡಿಟ್ಟುಕೊಳ್ಳಬಹುದು. ಕೇವಲ ತಾರೆಯರಷ್ಟೇ ಅಲ್ಲ, ಅಶ್ವತ್ಥನಾರಾಯಣ ಅವರು, ಟೆಂಪಲ್ಸ್ ಫೋಟೋಗಳನ್ನೂ ಬಳಸಿಕೊಂಡು ಕ್ಯಾಲೆಂಡರ್ ಮಾಡಿದ್ದಾರೆ. ಅದನ್ನು ಇನ್ನಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಬಿಡಬೇಕಿದೆ.
ಈ ಕುರಿತು “ಸಿನಿಲಹರಿ” ಜೊತೆ ಮಾತನಾಡುವ ಪ್ರಗತಿ ಅಶ್ವತ್ಥನಾರಾಯಣ, “ನಾನು ಈ ತಾರಾ ಕ್ಯಾಲೆಂಡರ್ ಅನ್ನು ಕಮರ್ಷಿಯಲ್ ದೃಷ್ಟಿಯಲ್ಲಿ ಮಾಡಿಲ್ಲ. ಸುಮ್ಮನೆ ಒಂದಷ್ಟು ಫೋಟೋ ಆಯ್ಕೆ ಮಾಡಿಕೊಂಡು ಮಾಡಿದ್ದೇನೆ. ಈ ತಾರಾ ಕ್ಯಾಲೆಂಡರ್‌ನ ವಿಶೇಷತೆ ಅಂದರೆ, ಕನ್ನಡ ಚಿತ್ರರಂಗದ ಮಹನೀಯರನ್ನು ಒಟ್ಟಿಗೆ ನೋಡಬಹುದಷ್ಟೇ.
ಒಂದೇ ವೇದಿಕೆಯಲ್ಲಿ ಸಿನಿಮಾ ಮಂದಿ ಸಿಕ್ಕಂತೆ ಈ ತಾರಾ ಕ್ಯಾಲೆಂಡರ್‌ನಲ್ಲೂ ಕಾಣಬಹುದು. ಇಲ್ಲಿ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಬಾಲಕೃಷ್ಣ, ಲೋಕೇಶ್, ವಜ್ರಮುನಿ, ನರಸಿಂಹರಾಜು, ಕಲ್ಪನಾ, ಮಂಜುಳಾ ಅವರ ಫೋಟೋಗಳಿವೆ. ಇದನ್ನು ನಾನೇ ಆಯ್ಕೆ ಮಾಡಿ ಮಾಡಿದ್ದು,
ಇಲ್ಲಿರುವರಾರೂ ಈಗ ಇಲ್ಲ. ಹಾಗಾಗಿ ಇದೊಂದು ವಿಶೇಷ ತಾರಾ ಕ್ಯಾಲೆಂಡರ್ ಅಷ್ಟೇ. ಕೆಲವರು ಆ ಫೋಟೋ ಹಾಕಿಲ್ಲ, ಇವರನ್ನೇಕೆ ಕೈ ಬಿಟ್ಟಿದ್ದೀರಿ ಅಂತೆಲ್ಲಾ ಕೇಳುತ್ತಿದ್ದಾರೆ. ಆದರೆ, ಇರುವ ಹನ್ನೆರೆಡು ತಿಂಗಳಲ್ಲಿ ಒಂದೊಂದು ತಿಂಗಳಿಗೆ ಒಬ್ಬೊಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಮುಂದಿನ ಸಲದ ತಾರಾ ಕ್ಯಾಲೆಂಡರ್‌ನಲ್ಲಿ ಉಳಿದವರ ಫೋಟೋ ಬಳಸಿಕೊಂಡು ಕ್ಯಾಲೆಂಡರ್ ಮಾಡತ್ತೇನೆ ಎನ್ನುವ ಅವರು, ತಾವೇ ಸೆರೆಹಿಡಿದ ಅಪರೂಪದ ಫೋಟೋಗಳನ್ನು ನೋಡುಗರಿಗೆ ಕ್ಯಾಲೆಂಡರ್ ರೂಪದಲ್ಲಿ ಕೊಟ್ಟಿರುವುದು ವಿಶೇಷವೇ ಸರಿ.