ಸಂಕ್ರಾಂತಿಗೆ ಟೈಟಲ್ ಲಾಂಚ್
ಕನ್ನಡದ ಯಂಗೆಸ್ಟ್ ನಿರ್ದೇಶಕ ಅಂತಲೇ ಚಿತ್ರರಂಗಕ್ಕೆ ಪರಿಚಯವಾದ ಗುರುದತ್ ಗಾಣಿಗ, “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರದ ಮೂಲಕ ನಿರ್ದೇಶಕರಾದವರು. ಆ ಸಿನಿಮಾ ಬಳಿಕ ಅವರು ಮುಂದೆ ಯಾರ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಗೊಂದಲವಿತ್ತು. ಆ ಗೊಂದಲಕ್ಕೀಗ ತೆರೆಬಿದ್ದಿದೆ. ಹೌದು, ಗುರುದತ್ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅಭಿಷೇಕ್ ಅಂಬರೀಶ್ ಜೊತೆ ಮಾಡಲಿದ್ದಾರೆ ಎಂದು ಜೋರು ಸುದ್ದಿಯಾಗಿತ್ತು. ಆದರೆ, ಆ ಚಿತ್ರದ ಬಗ್ಗೆ ಎಲ್ಲೂ ಅಪ್ಡೇಟ್ ಸಿಗಲಿಲ್ಲ. ಈಗ ಗುರುದತ್ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಹೌದು, ಈಗ ಎರಡನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿರುವ ಅವರು, ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದ್ದಾರೆ. ವಿಶೇಷ ಅಂದರೆ, ಗುರುದತ್ ಗಾಣಿಗ ತಮ್ಮ ಎರಡನೇ ನಿರ್ದೇಶನದ ಸಿನಿಮಾಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಸ್ಕ್ರಿಪ್ಟ್ ವರ್ಕ್ ಮುಗಿದಿದೆ. ಆದರೆ ಇನ್ನೂ, ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಜನವರಿ ಸಂಕ್ರಾಂತಿ ವೇಳೆಗೆ ಚಿತ್ರತಂಡ ಫಸ್ಟ್ ಲುಕ್ ಲಾಂಚ್ ಮಾಡುವುದರ ಜೊತೆಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು, ಈ ಚಿತ್ರವನ್ನು ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್ನಲ್ಲಿ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಾನವ ಕಳ್ಳಸಾಗಣೆ ಕುರಿತಾದ ಕಥೆಯಾಗಿದ್ದು, ಸಾಕಷ್ಟು ಥ್ರಿಲ್ಲರ್ ಅಂಶಗಳು ಇಲ್ಲಿರಲಿವೆ. “ಸಿನಿಲಹರಿ” ಜೊತೆ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, “ಪ್ರಜ್ವಲ್ ದೇವರಾಜ್ ಅವರಿಗೆ ಈ ಚಿತ್ರ ಬೇರೆಯದ್ದೇ ಇಮೇಜ್ ತಂದುಕೊಡುವ ವಿಶ್ವಾಸವಿದೆ. ಅವರ ಕೆರಿಯರ್ನಲ್ಲೇ ಇದೊಂದು ನೆಕ್ಸ್ಟ್ ಲೆವೆಲ್ಗೆ ಕರೆದುಕೊಂಡು ಹೋಗುವ ಸಿನಿಮಾ ಎಂಬ ಗ್ಯಾರಂಟಿ ಕೊಡುತ್ತೇನೆ.
ಪ್ರಜ್ವಲ್ ದೇವರಾಜ್ ಅವರು ಕೂಡ ಕಥೆ ಹಾಗೂ ಪಾತ್ರದ ಬಗ್ಗೆ ಕೇಳಿ ತುಂಬಾನೇ ಥ್ರಿಲ್ ಆಗಿದ್ದಾರೆ. ನಿರ್ಮಾಪಕ ಕುಮಾರ್ ಅವರು, ಕಥೆಗೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಗುಣಮಟ್ಟದ ಸಿನಿಮಾ ಕೊಡುವ ಉದ್ದೇಶವಿದೆ. ಚಿತ್ರಕ್ಕೆ “ಮುಂದಿನ ನಿಲ್ದಾಣ” ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಅಭಿ ಇಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಸಂಗೀತ ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಚಿತ್ರದಲ್ಲಿ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಒಬ್ಬರು, ಖಳನಟರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರು ಕಥೆ ಕೇಳಿ ಈಗಾಗಲೇ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೊಂದು ಮೇಜರ್ ಪಾತ್ರ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದೂ ಸ್ಟಾರ್ ನಟಿಯರ ಜೊತೆಯೇ ಚರ್ಚೆ ಆಗುತ್ತಿದೆʼ ಎಂದಷ್ಟೇ ಹೇಳುವ ಗುರುದತ್ ಗಾಣಿಗ, ಉಳಿದ ವಿಷಯವನ್ನು ಸಂಕ್ರಾಂತಿ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಹೇಳುತ್ತಾರೆ.