ಕಲಾತ್ಮಕ ಸಿನಿಮಾದಿಂದ ಕಮರ್ಷಿಯಲ್ ಕಡೆ ಮುಖ ಮಾಡಿದ ಕ್ರಿಯಾಶೀಲ ನಿರ್ದೇಶಕ
ಯುವ ನಿರ್ದೇಶಕ ನೀನಾಸಂ ಮಂಜು ಮತ್ತೊಮ್ಮೆ ಖುಷಿಯಲ್ಲಿದ್ದಾರೆ. ಅವರು ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ “ಕನ್ನೇರಿ” ಚಿತ್ರ ಈಗ ಇನ್ನೇರೆಡು ಚಿತ್ರೋತ್ಸವಗಳಿಗೆ ಆಯ್ಕೆ ಆಗಿದೆ. ಇವೆರೆಡು ಪ್ರತಿಷ್ಟಿತ ಫಿಲ್ಮ್ ಫೆಸ್ಟಿವೆಲ್ಸ್ ಎನ್ನುವುದು ವಿಶೇಷ. ಭಾರತದಲ್ಲೆ ನಡೆಯುವ ಗೋಲ್ಡನ್ ಜ್ಯೂರಿ ಫಿಲ್ಮ್ ಫೆಸ್ಟಿವೆಲ್ ಒಂದಾದರೆ, ಯುಎಸ್ಎ ಫಿಲ್ಮ್ ಫೆಸ್ಟಿವೆಲ್ಗೂ ಕೂಡ” ಕನ್ನೇರಿʼ ಚಿತ್ರ ಅಫೀಷಿಯಲ್ ಅಗಿಯೇ ಎಂಟ್ರಿ ಪಡೆದಿದೆ. ಸದ್ಯಕ್ಕೆ ಇವೆರೆಡು ಫೆಸ್ಟಿವೆಲ್ ನಡೆಯುವುದು ಯಾವಾಗ, ಅಲ್ಲಿ ʼಕನ್ನೇರಿʼ ಪ್ರದರ್ಶನ ಹೇಗೆ ಎನ್ನುವ ವಿವರ ನಮಗೆ ಮಾತ್ರವಲ್ಲ ಚಿತ್ರ ತಂಡಕ್ಕೂ ಗೊತ್ತಾಗಿಲ್ಲ. ಆದರೆ ಎರಡು ಫೆಸ್ಟಿವೆಲ್ ಗೆ ‘ಕನ್ನೇರಿ ‘ಚಿತ್ರ ಅಫಿಷಿಯಲಿ ಎಂಟ್ರಿ ಆಗಿರುವ ಖುಷಿಯನ್ನು ನಿರ್ದೇಶಕ ಮಂಜುʼಸಿನಿಲಹರಿʼಗೆ ಹಂಚಿಕೊಂಡಿದ್ದಾರೆ.
ಹನ್ನೇರೆಡು ಚಿತ್ರೋತ್ಸವಗಳಿಗೆ ‘ಕನ್ನೇರಿ’ ಪಯಣ
ʼಕನ್ನೇರಿʼ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಅ
ಆಗಿರುವುದು ಹಳೇ ಸುದ್ದಿ. ಅದು ಮೊದಲು ಗಮನ ಸೆಳೆದಿದ್ದು ವಿಭಿನ್ನ ಕಥಾ ಹಂದರದ ಮೂಲಕ. ಒಂದು ಬುಡಕಟ್ಟು ಸಮುದಾಯದಲ್ಲಿನ ಹುಡುಗಿಯ ಸುತ್ತಲ ಕತೆ ಇದು. ಅಭಿವೃದ್ದಿ ಹೆಸರಲ್ಲಿ ಇಂದು ದೇಶದ ವಿವಿಧೆಡೆ ಕಾಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ಕಾಡು ನಾಶ ಅಥವಾ ಅಭಿವೃದ್ಧಿ ಹೆಸರಲ್ಲಿ ಆವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಅಲ್ಲಿ ತಮ್ಮ ಮೂಲ ನೆಲೆ ಕಳೆದುಕೊಂಡ ಬುಡಕಟ್ಟು ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹಾಗೆ ವಲಸೆ ಬಂದವರಿಗೆ ಉದ್ಯೋಗ ಸೇರಿದಂತೆ ಮನೆ, ಮಠ ಇತ್ಯಾದಿ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಅಂತಹ ಅತಂತ್ರಗೊಂಡ ಒಂದು ಬುಡಕಟ್ಟು ಕುಟುಂಬದ ಹುಡುಗಿಯ ಸುತ್ತಲ ಕತೆಯೇ ಕನ್ನೇರಿ. ಆಕೆಯ ಬದುಕಲ್ಲಿ ಏನಾಯಿತು, ಆಕೆ ಯಾರನ್ನು , ಏನನ್ನು ಕಳೆದುಕೊಂಡಳು ಎನ್ನುವುದನ್ನು ನಿರ್ದೇಶಕ ನೀನಾಸಂ ಮಂಜು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.
ಕನ್ನೇರಿ ವರ್ತಮಾನದ ಕತೆ
ಕತೆ ವರ್ತಮಾನದ ಬಹು ಚರ್ಚಿತ ವಿಷಯ. ಹಾಗೆ ನೋಡಿದರೆ ಬಡಜನರ ಕರುಣಾಜನಕ ಕತೆ. ಆ ದೃಷ್ಟಿಯಲ್ಲಿ ಒಂದು ಸಾಮಾಜಿಕ ಕಾಳಜಿಯಿಂದಲೇ ಸಿನಿಮಾ ಮಾಡಿರುವ ನಿರ್ದೇಶಕ ಮಂಜು ಅವರ ಪ್ರಯತ್ನ ವಾಣಿಜ್ಯದ ದೃಷ್ಟಿಯಿಂದ ಎಷ್ಟು ವರ್ಕೌಟ್ ಆಗುತ್ತೋ ಗೊತ್ತಿಲ್ಲ, ಆದರೆ ಈಗ ಅದು ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ದೊಡ್ಡ ಸದ್ದು ಮಾಡುತ್ತಿರುವುದು ಒಬ್ಬ ಕ್ರಿಯಾಶೀಲ ನಿರ್ದೇಶಕನ ನಿಜ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಂತೂ ಹೌದು.
ಸಿನಿಮಾ ಸಕಲ ರೀತಿಯಲ್ಲೂ ರಿಲೀಸ್ ಗೆ ಸಜ್ಜಾಗಿದೆ. ದೊಡ್ಡ ತಾರಾಗಣವೂ ಇದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಷ್ಟರಲ್ಲಿ ತೆರೆಗೆ ಬರಲಿತ್ತೇನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರತಂಡ ಈಗಲೂ ಸೂಕ್ತ ಸಂದರ್ಭಕ್ಕೆ ಕಾಯುತ್ತಿದೆ. ಆದರೆ ಈ ಸಮಯದಲ್ಲೆ ಚಿತ್ರ ಚಿತ್ರೋತ್ಸವಗಳ ಮೂಲಕ ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವುದು ಚಿತ್ರ ತಂಡಕ್ಕೂ ಖುಷಿ ತಂದಿದೆ.
ಇದು ದುಸ್ಸಾಹಸದ ಕೆಲಸ
‘ ಸಾಮಾಜಿಕ ಕಾಳಜಿಯ ವಿಷಯ ಇಟ್ಟಕೊಂಡು ಪ್ರಯೋಗಾತ್ಮಕ ಸಿನಿಮಾ ಮಾಡುವುದು ಒಂದ್ರೀತಿ ದುಸ್ಸಾಹಸದ ಕೆಲಸ. ಯಾಕಂದ್ರೆ ಕಮರ್ಷಿಯಲ್ ದೃಷ್ಟಿಯಿಂದ ಇಂತಹ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೆಂಬಲ ಸಿಗುವುದಿಲ್ಲ. ಹಾಗೂ ಕಂಟೆಂಟ್ ಮೂಲಕ ಗೆದ್ದರೆ, ನಮ್ಮ ಪುಣ್ಯ. ಹಾಗಾಗಿ ಬಹಳಷ್ಟು ಜನರು ಇಂತಹ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬರುವುದಿಲ್ಲ ಎನ್ನುವುದು ನಿಮಗೂ ಗೊತ್ತು. ಆದರೂ ನಿರ್ಮಾಪಕರನ್ನು ಒಪ್ಪಿಸಿ, ಈ ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಆ ಕಷ್ಟಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಸಿನಿಮಾ ಮುಂದೆ ರಿಲೀಸ್ ಆಗಿ ಎಷ್ಟು ಹಣ ಮಾಡುತ್ತೋ ಗೊತ್ತಿಲ್ಲ, ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆಯುತ್ತಿರುವುದು ಗೆದ್ದ ಖುಷಿ ನೀಡುತ್ತಿದೆ’ ಎನ್ನುತ್ತಾರೆ ನಿರ್ದೇಶಕ ನೀನಾಸಂ ಮಂಜು.
ಕೋಲ್ಕೋತ್ತಾ ಚಿತ್ರೋತ್ಸವದಲ್ಲಿ ಪ್ರಶಸ್ತಿ
ಈಗಾಗಲೇ ಈ ಚಿತ್ರ ಕೊಲ್ಕೋತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿ ಬೆಸ್ಟ್ ಔಟ್ಸ್ಟ್ಯಾಂಡಿಂಗ್ ಪ್ರಶಸ್ತಿ ಈ ಚಿತ್ರಕ್ಕೆ ಸಿಕ್ಕಿದೆ. ಹಾಗೆಯೇ ಈಗ 12 ಚಿತ್ರೋತ್ಸವಗಳಿಗೂ ಹೋಗಿದೆ. ಅದರಲ್ಲಿ ಆಧಿಕೃತವಾಗಿ ಈಗ ಗೋಲ್ಡನ್ ಜ್ಯೂರಿ ಹಾಗೂ ಯುಎಸ್ ಎ ಫಿಲ್ಮ್ ಫೆಸ್ಟಿವೆಲ್ ಗೆ ಪ್ರದರ್ಶನಕ್ಕೆ ಸೆಲೆಕ್ಟ್ ಆಗಿದೆ. ಇಲ್ಲೂ ಮೆಚ್ಚುಗೆ ಪಡೆದು ಪ್ರಶಸ್ತಿಗೆ ಪಾತ್ರವಾದರೆ, ನಿರ್ದೇಶಕ ಮಂಜು ಮತ್ತವರ ತಂಡದ ಶ್ರಮ ಇನ್ನಷ್ಟು ಸಾರ್ಥಕ. ಇನ್ನು ಮಂಜುಗೆ ಈ ಪ್ರಯತ್ನ ಅಥವಾ ಸಾಹಸ ಹೊಸದಲ್ಲ. ಅವರ ಚೊಚ್ಚಲ ಚಿತ್ರ ಮೂಕಹಕ್ಕಿ ಕೂಡ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಈಗ ಆ ಸರದಿ ʼಕನ್ನೇರಿ ʼಚಿತ್ರದ್ದು. ಒಂದೆಡೆ ಕಲಾತ್ಮಕ ಅಥವಾ ಪ್ರಯೋಗಾತ್ಮಕ ಚಿತ್ರಗಳಲ್ಲಿ ಜನ ಮನ್ನಣೆ ಹಾಗೂ ಪ್ರಶಸ್ತಿಗಳ ಮೂಲಕ ತಮ್ಮನ್ನು ತಾವು ನಿರ್ದೇಶಕನಾಗಿ ಸಾಬೀತು ಮಾಡಿಕೊಳ್ಳುತ್ತಿರುವಾಗಲೇ, ಮತ್ತೊಂದೆಡೆ ಕಮರ್ಷಿಯಲ್ ಸಿನಿಮಾ ಮಾಡುವ ಅನಿವಾರ್ಯತೆ ಅವರಿಗೂ ಎದುರಾಗಿದೆ.
ಶೋಗನ್ ಹೊತ್ತು ಕಮರ್ಷಿಯಲ್ ಕಡೆಗೆ
ಈಗವರು ಲೂಸ್ ಮಾದ ಯೋಗೇಶ್ ಕಾಂಬಿನೇಷನ್ ಮೂಲಕ ʼಶೋಗನ್ʼಹೆಸರಿನ ಚಿತ್ರ ಮಾಡುವುದಾಗಿ ಪ್ರಕಟಿಸಿದ್ದಾರೆ. ಅದರ ಫಸ್ಟ್ ಲುಕ್ ಪೋಸ್ಟರ್ ಕೂಡ ಹೊರ ಬಂದಿದೆ. ಇಷ್ಟರಲ್ಲಿಯೇ ಅದರತ್ತ ಗಮನ ಹರಿಸುವುದಾಗಿ ಹೇಳುವ ಮಂಜು, ಕಮರ್ಷಿಯಲ್ ಸಿನಿಮಾ ಯಾಕೆ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾರೆ. ” ಪ್ರತಿಯೊಂದಕ್ಕೂಕ್ರಿಯಾಶೀಲತೆ ಬೇಕು, ಆದರೆ ಕ್ರಿಯಾಶೀಲತೆಯೇ ಇಲ್ಲ ಹೊಟ್ಟೆ ತುಂಬಿಸೋದಿಲ್ಲ. ಬಹುಕಾಲ ಇಲ್ಲಿ ನಿರ್ದೇಶಕನಾಗಿ ಉಳಿಯಬೇಕಾದರೂ ನಂಗೆ ಕಮರ್ಷಿಯಲ್ ಸಿನಿಮಾವೊಂದರ ಗೆಲುವು ಬೇಕು. ಹಾಗೆಯೇ ನಾನು ಕೂಡ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದಕ್ಕಾಗಿ ಈ ಕಮರ್ಷಿಯಲ್ ಸಿನಿಮಾದ ಪ್ರಯತ್ನ ಎನ್ನುವ ಮೂಲಕ ತಮ್ಮ ಬದಲಾದ ಪರಿಯನ್ನು ವಿವರಿಸುತ್ತಾರೆ ನೀನಾಸಂ ಮಂಜು. ʼನಿ ಲಹರಿʼಕಡೆಯಿಂದ ನಿರ್ದೇಶಕ ಮಂಜು ಅವರಿಗೆ ಶುಭಾಶಯ.