ಬಸವನಗುಡಿ ದೊಡ್ಡ ಗಣಪತಿಯ ಮುಂದೆ ಚಿತ್ರೀಕರಣಕ್ಕೆ ಕುಂಬಳಕಾಯಿ
ಸಧಭಿರುಚಿಯ ಚಿತ್ರಗಳ ನಿರ್ದೇಶಕ ಜಯತೀರ್ಥ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼಬನಾರಸ್ʼ ಚಿತ್ರೀಕರಣ ಮುಗಿಸಿದೆ. ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಚಿತ್ರೀಕರಣ ಮುಗಿಸಿ, ಕುಂಬಳ ಕಾಯಿ ಒಡೆಯಿತು.
ಕನ್ನಡದ ಮಟ್ಟಿಗೆ ಬನಾರಸ್ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಅದಕ್ಕೆ ಕಾರಣ ನಿರ್ದೇಶಕ ಜಯತೀರ್ಥ. ʼಬೆಲ್ ಬಾಟಮ್ʼಚಿತ್ರದ ಬಹುದೊಡ್ಡ ಸಕ್ಸಸ್ ನಂತರ ಜಯತೀರ್ಥಆಕ್ಷನ್ ಕಟ್ ಹೇಳಿದ ಸಿನಿಮಾ. ಹಾಗೆಯೇ ಇದರ ನಿರ್ಮಾಣ ಹಾಗೂ ತಾರಾಗಣವೂ ಕೂಡ ಸಾಕಷ್ಟು ಕುತೂಹಲ ಮೂಡಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣದ ಹಂತದಲ್ಲೇ ಸಾಕಷ್ಟು ಸುದ್ದಿ ಮಾಡಿದೆ.ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್ ಅಭಿನಯದ ಚೊಚ್ಚಲ ಚಿತ್ರ ಇದು. ಗ್ಲಾಮರಸ್ ನಟಿ ಸೋನಾಲ್ ಮಾಂತೆರೋ ಇದರ ನಾಯಕಿ.
ಇನ್ನು ಇದರ ಶೀರ್ಷಿಕೆಯೇ ವಿಶೇಷ. ಬನಾರಸ್ ಅಂದ್ರೆ ಕಾಶಿ. ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿಗಿರುವ ಇನ್ನೊಂದು ಹೆಸರೇ ಬನಾರಸ್. ಈ ಚಿತ್ರದ ಇದೇ ಹೆಸರಲ್ಲಿ ನಿರ್ಮಾಣಗೊಂಡು ತೆರೆಗೆ ಬರುತ್ತಿರುವುದರ ಜತೆಗೆ ಇದರ ಬಹುತೇಕ ಚಿತ್ರೀಕರಣ, ಕಾಶಿ ಸುತ್ತಮುತ್ತಲ ಪವಿತ್ರ ಜಾಗಗಳಲ್ಲಿ ನಡೆದಿದೆ.
ಬನಾರಸ್ ಎನ್ನುವ ಶೀರ್ಷಿಕೆ, ಕಾಶಿಯ ಸುತ್ತಮುತ್ತಲ ಜಾಗಗಳಲ್ಲಿಯೇ ಚಿತ್ರೀಕರಣ ಅಂದಾಕ್ಷಣ ಇದೊಂದು ಭಕ್ತಿ ಪ್ರಧಾನ ಚಿತ್ರವೇ ಎಂದೆನಿಸುವುದು ಸಹಜ. ಆದರೆ ಚಿತ್ರದ ಕತೆ ಅದಲ್ಲ. ವಿಭಿನ್ನ ಪ್ರೇಮಕಥೆಯ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ. ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ. ಹಾಗಾಗಿಯೇ ಸಹಜ ಸೌಂದರ್ಯದ ಕಾಶಿಯ ಎಲ್ಲಾ ಘಾಟ್ ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರು, ಗೋವಾದಲ್ಲೂ ಚಿತ್ರೀಕರಣವಾಗಿದೆ. ಹೆಸರಾಂತ ಕಲಾವಿದರಾದ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಅಲಿ, ಚಿರಂತ್, ರೋಹಿತ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರದ ತಾಂತ್ರಿಕ ವರ್ಗವೂ ಇಲ್ಲಿ ಗಮನಾರ್ಹವೇ. ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಅವರ ಸಂಭಾಷಣೆ ಹಾಗೂ ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ.