ಶಕೀಲಾ ಬರ್ತಾರೆ ದಾರಿ ಬಿಡಿ! ಫೇವರೇಟ್ ನಟಿಯ ಜೀವನಗಾಥೆ

ಕ್ರಿಸ್ಮಸ್ ಹಬ್ಬಕ್ಕೆ ಶಕೀಲಾ ಸಂಭ್ರಮ!

ಈಗಂತೂ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆ ಸಾಲಿಗೆ ದಕ್ಷಿಣ ಭಾರತ ಚಿತ್ರರಂಗದ ಮಾದಕ ನಟಿ ಎಂದೇ ಖ್ಯಾತಿ ಪಡೆದಿರುವ ‘ಶಕೀಲಾ’ಅವರ ಜೀವನಗಾಥೆ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೇ ಕ್ರಿಸ್ಮಸ್ ದಿನ ಚಿತ್ರ ಬಿಡುಗಡೆಯಾಗುತ್ತಿದೆ.
ಅಂದಹಾಗೆ, ದಕ್ಷಿಣ ಭಾರತ ಚಿತ್ರರಂಗದ ನಟಿಯೊಬ್ಬರ ಬಯೋಪಿಕ್ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.


‘ಶಕೀಲಾ’ ಅವರ ಬಯೋಪಿಕ್ ಆಗಿರುವುದರಿಂದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸಿನಿಮಾಗೂ ‘ಶಕೀಲಾ’ ಎಂದೇ ನಾಮಕರಣ ಮಾಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುವುದರ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಆರಂಭದಲ್ಲಿ ಬಾಲಿವುಡ್ ಗೆ ಮಾತ್ರ ಸೀಮೀತವಾಗಿರಲಿ ಅಂದುಕೊಂಡು ಶುರುವಾದ ಈ ಚಿತ್ರ, ಈಗ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸಾಗುತ್ತಿರುವುದು ವಿಶೇಷ. ಬಹಳಷ್ಟು ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಡು, ಯುವಕರ ಹಾಟ್ ಫೇವರೇಟ್ ಎನಿಸಿಕೊಂಡಿರುವ ಮಲಯಾಳಂನ ಮಾದಕ ನಟಿ ಶಕೀಲಾ ಅವರ ಬಯೋಪಿಕ್ ಇದು.

1990 ಹಾಗೂ 2000ರ ದಶಕದಲ್ಲಿ ಸಕ್ಸಸ್ ಫುಲ್ ಆಗಿದ್ದ ಅವರು, ಒಂದೇ ವರ್ಷದಲ್ಲಿ ಅವರ ನಟನೆಯ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು ಎಂಬುದು ವಿಶೇಷ.
ಆರಂಭದಲ್ಲಿ ಶಕೀಲಾ ಅವರ ಬದುಕು ಅಂದುಕೊಂಡಂತೆ ಸುಲಭವಾಗಿರಲಿಲ್ಲ. ತಮ್ಮ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಆಗಿನ ಗೆಲುವು-ಸೋಲು, ನೋವು-ನಲಿವು ಅವರಿಗಷ್ಟೇ ಗೊತ್ತು. ಈಗ ಶಕೀಲಾ ಅವರ ಸಿನಿಪಯಣದಲ್ಲಾದ ಅಪರೂಪದ ಸಂಗತಿಗಳನ್ನು ಸಿನಿಮಾ‌ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಇಂದ್ರಜಿತ್ ಲಂಕೇಶ್.
ಇನ್ನು, ಶಕೀಲಾ ಅವರ ಪಾತ್ರವನ್ನು ಬಾಲಿವುಡ್ ನಟಿ ರಿಚಾ ಛಡ್ಡಾ ನಿರ್ವಹಿಸಿದ್ದಾರೆ.

ತಮ್ಮ ಬಯೋಪಿಕ್ ಚಿತ್ರದ ಬಗ್ಗೆ ಮಾತಾಡುವ ಶಕೀಲಾ, ‘ನಾನು ಬದುಕಿನಲ್ಲಿ ಎದುರಿಸಿದ ಕಷ್ಟ, ಸುಖದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನನ್ನ ಬಳಿ ಚರ್ಚಿಸಿ ಒಂದಷ್ಟು ಬದಲಾವಣೆ ಕೂಡ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
ಇಂತಹ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜೊತೆಗಿಲ್ಲ. ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದೆಲ್ಲವೂ ಅವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ. ಆದರೆ ನನ್ನವರೇ ನನಗೆ ದ್ರೋಹ ಮಾಡಿದರು. ನೀಲಿ ಚಿತ್ರಗಳನ್ನು ಮಾಡಿದ ಬಗ್ಗೆ ನನಗೆ ವಿಷಾದವಿಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ. ನಾನು ದೇವರ ಮಗಳು. ಇಂದು ನನ್ನ ಬಗ್ಗೆ ಸಿನಿಮಾ ಆಗುತ್ತಿದೆ ಎಂದರೆ ಅದಕ್ಕೆ ಆ ಚಿತ್ರಗಳೇ ಕಾರಣ. ನಾನೊಬ್ಬ ಪೋಷಕ ನಟಿ ಮಾತ್ರ ಆಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂಥ ಕುಟುಂಬಕ್ಕಾಗಿ ಮಾಡಿದೆನಲ್ಲ ಎಂಬ ಬೇಸರವಿದೆ ಎಂದು ಶಕೀಲಾ ತನ್ನ ಕುಟುಂಬದ ಬಗ್ಗೆ ಬೇಸರ ಹೊರ ಹಾಕುತ್ತಾರೆ.


ಇಂದ್ರಜಿತ್ ಅವರ ಜೊತೆ ನಾನು ‘ಲವ್‍ ಯೂ ಆಲಿಯಾ’ ಸಿನಿಮಾ ಮಾಡುವಾಗ ನಿರ್ದೇಶಕಿಯೊಬ್ಬರು ನನ್ನನ್ನು ಭೇಟಿಮಾಡಿ ನನ್ನ ಆತ್ಮಚರಿತ್ರೆಯನ್ನು ಸಿನಿಮಾ ಮಾಡಬೇಕೆಂದಿದ್ದೇನೆ ಎಂದರು. ಆ ವಿಷಯ ಇಂದ್ರಜಿತ್‍ರಿಗೂ ತಿಳಿಯಿತು. ಎರಡು ದಿನ ಸಮಯ ತೆಗೆದುಕೊಂಡು ಇಂದ್ರಜಿತ್ ಕೂಡ ನನ್ನ ಆತ್ಮಚರಿತ್ರೆಯನ್ನು ಓದಿದರು. ತಾವೇ ಈ ಚಿತ್ರ ಮಾಡುವುದಾಗಿ ತಿಳಿಸಿದರು. ನನಗೂ ಖುಷಿ ಆಯಿತು. ನನ್ನ ಕಥೆಯನ್ನು ಅವರು ಚೆನ್ನಾಗಿ ತೆರೆಮೇಲೆ ತರುತ್ತಾರೆ ಎಂಬ ನಂಬಿಕೆಯಿತ್ತು. ನಾನು ಈ ಬಯೋಪಿಕ್ ಪುಸ್ತಕ ಬರೆದು 10 ವರ್ಷಗಳಾಗಿವೆ. ಆನಂತರ ಏನೆಲ್ಲ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಿದ್ದಾರೆ. ನನ್ನ ಹುಟ್ಟಿನಿಂದ ಹಿಡಿದು 42ನೇ ವಯಸ್ಸಿನವರೆಗೆ ಅನೇಕ ವಿಷಯಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎಂಬುದು ಶಕೀಲಾ ಮಾತು.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಈ ಚಿತ್ರ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ‘ಒಂದರ್ಥದಲ್ಲಿ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾವಿದು, ಕನ್ನಡದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರಸಮರ್ಥ್ ಸೇರಿದಂತೆ ಎಲ್ಲಾ ಭಾಷೆಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಐದೂ ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ವಿವರ ಕೊಟ್ಟರು ಇಂದ್ರಜಿತ್.
ಈ ಚಿತ್ರವನ್ನು ಸಾಮಿ ನಾನ್ವಾನಿ ಹಾಗೂ ಶರವಣ ಪ್ರಸಾದ್ ನಿರ್ಮಿಸಿದ್ದಾರೆ.
ನಿರ್ದೇಶಕ ಸಂದೀಪ್ ಮಲಾನಿ ಸಹ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ. ರೀಚಾ ಛಡ್ಡಾ ಜೊತೆಗೆ ಪಂಕಜ್‍ ತ್ರಿಪಾಠಿ, ರಾಜೀವ್ ಪಿಳ್ಳೈ, ಸಮರ್ಜಿತ್ ಲಂಕೇಶ್, ಸಂದೀಪ್ ಮಲಾನಿ ಹಾಗೂ ಎಸ್ಟರ್ ನರೋನಾ ಕಾಣಿಸಿಕೊಂಡಿದ್ದಾರೆ.

Related Posts

error: Content is protected !!