ಕುತೂಹಲ ಹುಟ್ಟಿಸುತ್ತೆ ಆರ್ ಎಚ್ 100 ಚಿತ್ರದ ಥ್ರಿಲ್ಲರ್ ಟ್ರೇಲರ್
ಹರ್ಷ್ ಮತ್ತು ಸೋಮಶೇಖರ್ ಇಬ್ಬರು ಯುವ ವಕೀಲ ಮಿತ್ರರು. ಅವರೀಗ ತಮ್ಮ ವಕೀಲಿ ವೃತ್ತಿಯ ಜತೆಗೆ ಸಿನಿಮಾ ಜಗತ್ತಿಗೂ ಎಂಟ್ರಿ ಆಗಿದ್ದಾರೆ. ಇಂಟೆರೆಸ್ಟಿಂಗ್ ಅಂದ್ರೆ ಸಿನಿಮಾನಿರ್ಮಾಣ ಅಂತ ಬಂದವರು, ನಟರಾಗಿಯೂ ಪರಿಚಯವಾಗುತ್ತಿದ್ದಾರೆ. ಹಾಗೊಂದು ರೂಪಾಂತರದ ಮೂಲಕ ಅವರನ್ನು ಕನ್ನಡ ಸಿನಿಮಾ ಜಗತ್ತಿಗೆ ಅವರನ್ನು ಪರಿಚಯಿಸುತ್ತಿರುವ ಚಿತ್ರ’ ಆರ್ ಎಚ್ 100′.
ಈ ಚಿತ್ರವೀಗ ರಿಲೀಸ್ ಗೆ ರೆಡಿಯಾಗಿದೆ. ಅಚ್ಚರಿ ಅಂದ್ರೆ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಚಿತ್ರತಂಡವು ಡಿಸೆಂಬರ್ 18 ಕ್ಕೆ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ. ಸದ್ಯಕ್ಕೀಗ ಟ್ರೇಲರ್ ಲಾಂಚ್ ಮೂಲಕ ಸೌಂಡ್ ಮಾಡಿದೆ. ಟ್ರೇಲರ್ ಸಖತ್ತಾಗಿದೆ. ಹಾರರ್, ಥ್ರಿಲ್ಲರ್ ಎಳೆಯ ಟ್ರೇಲರ್ ನೋಡುಗನನ್ನು ತುದಿಗಾಲ ಮೇಲೆ ನಿಲ್ಲಿಸುತ್ತಿದೆ. ಹಾಗಾದ್ರೆ ಸಿನಿಮಾ ಹೇಗಿರಬಹುದು? ಅದು ಡಿಸೆಂಬರ್ 18 ಕ್ಕೆ ಗೊತ್ತಾಗಲಿದೆ.
ಚಿತ್ರ ತಂಡ ಸದ್ದಿಲ್ಲದೆ ರಿಲೀಸ್ ಪ್ಲಾನ್ ಮಾಡಿಕೊಂಡರೂ ರಿಲೀಸ್ ಆನ್ನೋದು ಈಗ ಅಷ್ಟು ಸುಲಭ ಇಲ್ಲ. ಕೊರೋನಾ ಹೊಡೆತಕ್ಕೆ ಸಿಕ್ಕು ತತ್ತರಿಸಿರುವ ಚಿತ್ರರಂಗ ಇನ್ನು ಚೇತರಿಕೆ ಕಂಡಿಲ್ಲ. ಚಿತ್ರಮಂದಿರ ಒಪನ್ ಆಗಿದ್ದರೂ, ಜನರು ಚಿತ್ರಮಂದಿರಕ್ಕೆ ಅಷ್ಟಾಗಿ ಬರುತ್ತಿಲ್ಲ ಎನ್ನುವ ನೋವು ಇನ್ನು ಹೇಗೋ ಏನೋ ಎನ್ನುವ ಆತಂಕದಲ್ಲಿರಿಸಿದೆ.ಆದರೂ ಹೊಸಬರ ಚಿತ್ರ ʼR H 100ʼ ಮುಂದಿನ ವಾರವೇ ಚಿತ್ರ ಮಂದಿರಕ್ಕೆ ಬರುತ್ತಿದೆ ಅಂದ್ರೆ, ಚಿತ್ರತಂಡಕ್ಕೆ ಚಿತ್ರದ ಕಂಟೆಂಟ್ ಮೇಲಿರುವ ನಂಬಿಕೆ ಮತ್ತು ವಿಶ್ವಾಸ.
ಡಿಫೆರೆಂಟ್ ಟೈಟಲ್ ಮೂಲಕ ಬರುತ್ತಿರುವ ಈ ಚಿತ್ರವು ಕತೆ, ಚಿತ್ರಕತೆ ಹಾಗೂ ಟೆಕ್ನಿಕಲ್ ಕೆಲಸದಲ್ಲೂ ಅಷ್ಟೇ ಡಿಫೆರೆಂಟ್ ಆಗಿದೆ. ಬಹುಮುಖ್ಯವಾಗಿ ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನೇ ಮೈನ್ ಆಗಿಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕೊರೋನಾ ಅಂತ ಚಿತ್ರಮಂದಿರದಿಂದ ದೂರ ಇರುವ ಪ್ರೇಕ್ಷಕರನ್ನು ಹಾರರ್ ಹಾಗೂ ಥ್ರಿಲ್ಲರ್ ಸಿನಿಮಾದ ಮೂಲಕವಾದರೂ ಚಿತ್ರಮಂದಿರಕ್ಕೆ ತರೋಣ ಎನ್ನುವ ವಿಶ್ವಾಸದೊಂದಿಗೆ ಚಿತ್ರ ತಂಡ ಈ ಚಿತ್ರವನ್ನು ಡಿಸೆಂಬರ್ ೧೮ ಕ್ಕೆ ತರಲು ಮುಂದಾಗಿದೆಯಂತೆ. ಹಾಗಂತ ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಹರ್ಷ್ ಅವರು ಮಾತು.
ರಿಲೀಸ್‌ಗೆ ರೆಡಿಯಾಗಿರುವ ಚಿತ್ರ ತಂಡವು ಸೋಮವಾರ ಚಿತ್ರದ ಟ್ರೇಲರ್ ಲಾಂಚ್ ಮೂಲಕ ಚಿತ್ರದ ವಿಶೇಷತೆ ಕುರಿತು ಮಾಧ್ಯಮದ ಮುಂದೆ ಮಾತನಾಡಿತು. ಅದು ಚಿತ್ರತಂಡದ ಮೊದಲ ಸುದ್ದಿ ಗೋಷ್ಟಿಯೂ ಹೌದು. ಟ್ರೇಲರ್ ಲಾಂಚ್ ಆಕ್ಟ್ ೧೯೭೮ ಚಿತ್ರದ ಖ್ಯಾತಿಯ ನಿರ್ಮಾಪಕ ದೇವರಾಜ್ , ಸಮಾಜ ಸೇವಕ ಕೃಷ್ಣ ಮೂರ್ತಿ, ಮತ್ತೊರ್ವ ನಿರ್ಮಾಪಕ ಶ್ರೀಧರ್,ಯುವ ನಟ ಲೋಕೇಶ್ ಗೌಡ ಅತಿಥಿಗಳಾಗಿ ಬಂದಿದ್ದರು. ಹೊಸಬರು ಒಂದೊಳ್ಳೆಯ ಸಿನಿಮಾ ಮಾಡಿರುವ ವಿಶ್ವಾಸದಲ್ಲಿ ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರ ತಂಡ ಕೂಡ ಚಿತ್ರದ ವಿಶೇಷತೆ ಹೇಳಿಕೊಂಡಿತು.
ವಕೀಲಿ ವೃತ್ತಿಯ ನಡುವೆಯೇ ನಾವು ಆಕಸ್ಮಿಕವಾಗಿ ಇಲ್ಲಿಗೆ ಬಂದಿದ್ದೇವೆ. ಆದಕ್ಕೆ ಸಿನಿಮಾದ ಮೇಲಿದ್ದ ಆಸಕ್ತಿ. ಮೊದಲು ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡೋಣ ಆನ್ನೋದಷ್ಟೆ ಇತ್ತು. ಆ ನಂತರ ನಿರ್ದೇಶಕ ಮಹೇಶ್ ಆಭಿಪ್ರಾಯಕ್ಕೆ ಬೇಡ ಎನ್ನದೇ ಇಬ್ಬರು ಪಾತ್ರಗಳಿಗೆ ಬಣ್ಣ ಹಚ್ಚಬೇಕಾಗಿ ಬಂತು ಎನ್ನುವ ಮೂಲಕ ನಿರ್ಮಾಣದ ಜತೆಗೆ ನಟನೆಗೆ ತೊಡಗಿಸಿಕೊಂಡಿದ್ದನ್ನು ಹರ್ಷ್ ಹೇಳಿಕೊಂಡರು. ಸೋಮಶೇಖರ್ ಕೂಡ ಇದೇ ಮಾತುಗಳನ್ನು ಹೇಳಿದರು. ನಾಯಕಿ ಚಿತ್ರಾ ಗ್ಲಾಮಸರ್ ಲುಕ್ ನಲ್ಲಿ ಮಿಂಚುತ್ತಿದ್ದರು. ಕನ್ನಡದವರೇ ಆದ ಚಿತ್ರಾಗೆ ಇದು ಎರಡನೇ ಚಿತ್ರ. ದರ್ಪಣ ನಂತರ ‘R H 100’ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಮಹೇಶ್. ಸಿನಿಮಾದ ಕತೆ, ಚಿತ್ರಕತೆ ಹಾಗೂ ತಾಂತ್ರಿಕ ವಿಶೇಷತೆ ಬಿಚ್ಚಿಟ್ಟರು.
ಸಿನಿಮಾ ಶುರುವಾಗಿ ವರ್ಷವೇ ಉರುಳಿ ಹೋಗಿದೆ. ಲಾಕ್ ಡೌನ್ ಕಾರಣಕ್ಕೆ ಚಿತ್ರ ಕೊಂಚ ತಡವಾಗಿ ತೆರೆಗೆ ಬರುತ್ತಿದೆ, ಸದ್ಯದ ಪರಿಸ್ಥಿತಿ ನೋಡಿದರೆ ಇದೇನು ತಡವಾಗಿ ಅಲ್ಲ. ಹಾಗೆ ನೋಡಿದರೆ ಸ್ಟಾರ್ ಸಿನಿಮಾಗಳೇ ರಿಲೀಸ್ ಆಗಲು ಹಿಂದು ಮುಂದು ನೋಡುತ್ತಿರುವಾಗ ಈ ಚಿತ್ರ ಈಗಲೇ ರಿಲೀಸ್ ಆಗುತ್ತಿರುವುದು ಸಾಹಸ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಚಿತ್ರ ತಂಡ ಥ್ರಿಲ್ ಹುಟ್ಟಿಸುವ ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದೆ. ಜೀವನಲ್ಲಿ ಭಯ ಇರಬೇಕು, ಆದ್ರೆ ಭಯವೇ ಜೀವನವಲ್ಲ ಎನ್ನುವ ಸಂಭಾಷಣೆಯೇ ಹೇಳುತ್ತೆ ಇದೊಂದು ಪಕ್ಕಾ ಹಾರರ್ ಸಿನಿಮಾ ಅಂತ. ಅದು ಹೇಗೆ ಅಂತ ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ.