ಅಭಿಮನ್‌ರಾಯ್‌ ಬಿಚ್ಚಿಡದ ಆರರ ಗುಟ್ಟು! ಸಿಕ್ಸ್‌‌ ಎಂಬ ಸ್ಪೆಷಲಿಸ್ಟ್…‌‌

ಫಸ್ಟ್‌ ಟೀಸರ್‌ ಹುಟ್ಟಿಸಿದ ಹೊಸ ನಿರೀಕ್ಷೆ…

 

“ಆಕೆ ಟೀ ಟೇಸ್ಟರ್. ಅದಕ್ಕೆ ಅವಳು ಟೀ ಮಾತ್ರ ಕುಡಿತಾಳೆ. ಆಕೆಯ ಪ್ರಕಾರ, ಅವಳ ಬಾಯ್‌ಫ್ರೆಂಡ್‌ ಆಗೋನು ಕೂಡ ಟೀ ಕುಡಿಬಾರ್ದು…!
– ಅರೇ ಇದೇನಪ್ಪಾ, ಯಾರವಳು ಟೀ ಟೇಸ್ಟರ್‌, ಏನದು ಎಂಬ ಪ್ರಶ್ನೆ ಎದುರಾದರೆ, ಇದೇ ಮೊದಲ ಸಲ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವ ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರ “ಸಿಕ್ಸ್‌”‌ ಚಿತ್ರದ ಟೀಸರ್ ನೋಡಬೇಕು. ಹಲವು ಚಿತ್ರಗಳ ಟೀಸರ್‌, ಟ್ರೇಲರ್‌ ಬಿಡುಗಡೆಯಾಗುತ್ತವೆ. ಕೆಲ ಚಿತ್ರಗಳ ಟೀಸರ್‌, ಟ್ರೇಲರ್‌ಗಳು ಮೊದಲ ಸಲವೇ ನಿರೀಕ್ಷೆ ಹುಟ್ಟಿಸಿಬಿಡುತ್ತವೆ. ಆ ಸಾಲಿಗೆ “ಸಿಕ್ಸ್‌” ಚಿತ್ರದ ಟೀಸರ್‌ ಕೂಡ ಸೇರಿದೆ ಅನ್ನೋದು ವಿಶೇಷ. ಹೌದು, “ಸಿಕ್ಸ್‌” ಟೀಸರ್‌ ಈಗ ಜೋರು ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ, ಒಳ್ಳೆಯ ಮೆಚ್ಚುಗೆಗೂ ಕಾರಣವಾಗುತ್ತಿದೆ.

ಪಾಯಲ್‌ ಚೆಂಗಪ್ಪ

ಟೀಸರ್‌ ನೋಡಿದವರಿಗೆ ಹೊಸ ಭರವಸೆ ಮೂಡಿಸುವುದಷ್ಟೇ ಅಲ್ಲ, ಅಲ್ಲಲ್ಲಿ ಥ್ರಿಲ್‌ ಎನಿಸುವ ಅಂಶಗಳೂ ಇವೆ. ಲವ್‌ ಇದೆ, ಹಾಸ್ಯವೂ ಇದೆ, ರಗಡ್‌ ಲುಕ್ಕೂ ಇದೆ, ಭಯ ಹುಟ್ಟಿಸುವ ಫೀಲೂ ಇದೆ. ಟೀಸರ್‌ನಲ್ಲಿ “ಏ.. ಏನ್‌ ಮುಖ ನೋಡ್ತಾ ಇದೀಯಾ ಹಿಂದೆನಾ, ಮುಂದೆನಾ…? ಹೀಗೆ ಆ ಹುಡುಗಿ ಕೇಳಿದಾಕ್ಷಣ, ಆ ಹುಡುಗ, “ಯೆಸ್,‌ ಫಸ್ಟ್‌ ಟೈಮ್‌ ಅಲ್ವಾ, ಅದಕ್ಕೆ ಸ್ವಲ್ಪ ನಾಚಿಕೆ ಆಗ್ತಾ ಇದೆ” ಅಂತಾನೆ, ಆ ಮಾತಿಗೆ ಆಕೆ, “ಏನ್‌ ಫಸ್ಟ್‌ ಟೈಮ್‌, ಬದನೆಕಾಯಿ… ಮೂರು ವರ್ಷದಿಂದಲೂ ಓಡಿಸ್ತಾನೆ ಇದೀಯಾʼ ಅನ್ನೋ ಡೈಲಾಗ್‌ ಹರಿಬಿಡುತ್ತಾಳೆ. ಅವನು ತನ್ನ ಮನಸ್ಸಲ್ಲಿ, “ತಾಜ್‌ ಮಹಲ್‌ ತೋರಿಸ್ತಾಳೆ, ಅಂದರೆ, ತಾರ್‌ ರೋಡ್‌ ತೋರಿಸ್ತಾಳೆ..ʼ ಅಂತಾನೆ. ಹಾಗಾದರೆ, ಆ ಹುಡುಗ, ಹುಡುಗಿ ನಡುವೆ ನಡೆಯೋ ಸಂಭಾಷಣೆ ಎಂಥದ್ದು? ಈ ಮಾತುಗಳನ್ನು ಕೇಳಿದರೆ, ಡಬಲ್‌ ಮೀನಿಂಗ್‌ ಎನಿಸುತ್ತೆ, ಆದರೆ, ಆ ದೃಶ್ಯ ನೋಡಿದವರಿಗಷ್ಟೇ, ಅಲ್ಲಿ ಇರೋದ್‌ ಏನು, ನಡೆಯೋದ್‌ ಏನು ಅಂತ. ಸಿಕ್ಸ್‌ ಟೀಸರ್‌ ಕುರಿತು ಅದೇನೆ ಹೇಳಿದರೂ, ಹೆಚ್ಚು ಅರ್ಥ ಆಗಲ್ಲ. ಹಾಗಾಗಿ ಒಮ್ಮೆ “ಸಿಕ್ಸ್‌” ಟೀಸರ್‌ ನೋಡಿದರಷ್ಟೇ, ಎಲ್ಲವೂ ಸ್ಪಷ್ಟವಾಗುತ್ತೆ.

ಆದರೂ, ಟೀಸರ್‌ ಒಂದಷ್ಟ ಕುತೂಹಲದೊಂದಿಗೆ ಸಾಗುತ್ತೆ. ಒಂದು ಬೆಟ್ಟ, ಅಲ್ಲಿರುವ ಕಡಿದಾದ ದಾರಿ, ಕತ್ತಲಲ್ಲಿ ನಡೆದು ಹೋಗುವ ಅಪರಿಚಿತ. ಅವನ ಕೈಲ್ಲೊಂದು ಕಬ್ಬಿಣದ ರಾಡು, ಮುಖವಾಡ ಧರಿಸಿದ ಅಪರಿಚಿತನ ರಗಡ್‌ ಲುಕ್ಕು… ಆಗಾಗ ಬಂಡೆ ಹೊಡೆಯುವ ರಾಡಿನಲ್ಲಿ, ವ್ಯಕ್ತಿಯೊಬ್ಬನ ಹೃದಯಕ್ಕೆ ಚುಚ್ಚುತ್ತಾನೆ….” ಆ ಅಪರಿಚಿತ ಯಾರು, ಯಾರನ್ನು ಕೊಲೆಗೈದ, ಬಂಡೆ ಹೊಡೆಯೋ ಕಾಯಕ ಮಾಡುವ ಆ ವ್ಯಕ್ತಿಗೂ, ಕೊಲೆಯಾದ ವ್ಯಕ್ತಿಗೂ ಇರುವ ಸಂಬಂಧವೇನು ಇತ್ಯಾದಿ ವಿಷಯಗಳು ಇಲ್ಲಿ ಒಂದಷ್ಟು ಸಸ್ಪೆನ್ಸ್‌ ಎನಿಸುತ್ತದೆ. ತುಂಬಾನೇ ಕ್ರಿಯೇಟಿವ್‌ ಎನಿಸುವ ಈ ಟೀಸರ್‌ಗೆ ಅಷ್ಟೇ ಎಫೆಕ್ಟ್‌ ಎನಿಸುವ ಹಿನ್ನೆಲೆ ಸಂಗೀತ ಕೂಡ ಪೂರಕವೆನಿಸಿದೆ. ಒಟ್ಟಾರೆ, ಟೀಸರ್‌ ಹೊಸದೊಂದು ನಿರೀಕ್ಷೆ ಮೂಡಿಸಿರುವುದಂತೂ ಸುಳ್ಳಲ್ಲ. ಅಂಥದ್ದೊಂದು ನಿರೀಕ್ಷೆಗೆ ಝೇಂಕಾರ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ “ಸಿಕ್ಸ್‌” ಟ್ರೇಲರ್‌ ನೋಡಬೇಕು.

ಅಭಿಮನ್‌ ರಾಯ್‌, ನಿರ್ದೇಶಕ

ಕನ್ನಡದಲ್ಲಿ ಹಲವು ಹಿಟ್‌ ಸಾಂಗ್‌ ಕೊಟ್ಟಿರುವ ಅಭಿಮನ್‌ರಾಯ್‌ ಅವರ ಮೊದಲ ನಿರ್ದೇಶನದ ಚಿತ್ರವಿದು. ಈಗಾಗಲೇ ಫಸ್ಟ್‌ ಲುಕ್‌ನಲ್ಲೇ “ಸಿಕ್ಸ್‌” ಗಮನಸೆಳೆದಿತ್ತು. ಈ ಟೀಸರ್‌ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ, ಇದು ಶ್ರೇಯ ಸಿಲ್ವರ್‌ ಸ್ಕ್ರೀನ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ನಳಿನಿ ಗೌಡ ಹಾಗೂ ರವಿಕುಮಾರ್‌, ಸೋಮಶೇಖರ್‌ ರಾಜವಂಶಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮನ್‌ ರಾಯ್‌ ಅವರ ಈ “ಸಿಕ್ಸ್”‌ ಚಿತ್ರದಲ್ಲಿ ಸಂದೇಶವಿದೆ. ಲವ್‌ಸ್ಟೋರಿ, ಕಾಮಿಡಿಯ ಜೊತೆಗೆ ಥ್ರಿಲ್ಲರ್‌ ಅಂಶಗಳೂ ಇಲ್ಲಿ ಹೈಲೈಟ್.‌ ಅಭಿಮನ್‌ ಬರೀ ಕೀ ಬೋರ್ಡ್‌ ಮೇಲೆ ಕೈಯಾಡಿಸುವುದಷ್ಟೇ ಅಲ್ಲ, ಒಳ್ಳೆಯ ಗೀತರಚನೆಕಾರರೂ ಹೌದು. ಅವರೇ ತಮ್ಮ ಚೊಚ್ಚಲ ಚಿತ್ರ “ಸಿಕ್ಸ್‌”ಗೆ ಕಥೆ ಹೆಣೆದು, ಚಿತ್ರಕಥೆ ಬರೆದು, ಮಾತುಗಳನ್ನೂ ಪೋಣಿಸಿ ನಿರ್ದೇಶಿಸಿದ್ದಾರೆ.

ಒಂದು ಸಣ್ಣ ತಪ್ಪಿನಿಂದ ದೊಡ್ಡ ತಪ್ಪುಗಳು ಹೇಗಾಗುತ್ತವೆ. ದೊಡ್ಡ ಸಮಸ್ಯೆಯನ್ನೂ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರವಿದು. ನೈಜತೆಗೆ ಹತ್ತಿರವಾಗಿರುವ ಚಿತ್ರವಿದು ಎನ್ನುವ ಚಿತ್ರತಂಡ, ಇಲ್ಲಿ ಯಾವ ಕಲಾವಿದರಿಗೂ ಮೇಕಪ್‌ ಮಾಡಿಸಿಲ್ಲ ಎಂಬುದು ವಿಶೇಷ. ಬಹುತೇಕ ಬೆಂಗಳೂರು, ಕೋಲಾರ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿರಲಿವೆ. ಸದ್ಯಕ್ಕೆ ಈಗ ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ “ಸಿಕ್ಸ್‌ʼ ಟೀಸರ್‌ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ “ಅಮೃತಾಂಜನ್‌” ಕಿರುಚಿತ್ರದ ನಾಯಕಿ ಪಾಯಲ್‌ ಚೆಂಗಪ್ಪ ಈ ಚಿತ್ರದ ನಾಯಕಿ. ಅವರೊಂದಿಗೆ ರವಿಚಂದ್ರ, ಪ್ರಣವ್‌ರಾಯ್‌, ಪೂರ್ವ ಯೋಗಾನಂದ್‌ ಸೇರಿದಂತೆ ಹಲವು ಕಲಾವಿದರು ಇರಲಿದ್ದಾರೆ. ಈ ಸಿದ್ಧಾರ್ಥ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ.

ನಳಿನಿಗೌಡ, ನಿರ್ಮಾಪಕರು

ಒಳ್ಳೇ ಸಿನ್ಮಾ ಕೊಡುವ ಉದ್ದೇಶ
ಇನ್ನು, ಈ ಚಿತ್ರದ ಬಗ್ಗೆ ನಿರ್ಮಾಪಕಿ ನಳಿನಿ ಗೌಡ ಹೇಳುವುದಿಷ್ಟು, “ಇದು ನನ್ನ ಮೊದಲ ನಿರ್ಮಾಣದ ಸಿನಿಮಾ. ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಇತ್ತು. ಅದಕ್ಕಾಗಿ ಹೊಸತನ ಇರುವಂತಹ ಕಥೆ ಹುಡುಕಾಟ ನಡೆಸುತ್ತಿದ್ದೆ. ಅಭಿಮನ್‌ ರಾಯ್‌ ಅವರ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಿದ್ದೆ. ಹಾಗೆ, ಒಮ್ಮೆ ಭೇಟಿಯಾಗಿ, ನಿರ್ಮಾಣ ಮಾಡುವ ಕುರಿತು ಹೇಳಿಕೊಂಡಿದ್ದೆ. ಆಗ ಅವರು “ಸಿಕ್ಸ್‌” ಚಿತ್ರದ ಒನ್‌ಲೈನ್‌ ಸ್ಟೋರಿ ಹೇಳಿದರು. ನನಗೂ ಅದು ಇಷ್ಟವಾಯ್ತು. ಸಿನಿಮಾ ಶುರುವಾಯ್ತು. ನಾನು ಮೂಲತಃ ಬೆಂಗಳೂರಿನವಳು. ರೈತ ಮತ್ತು ಕಾರ್ಮಿಕರ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯಕ್ಕೆ ಚಿತ್ರದ ಟೀಸರ್‌ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದೇವೆ. ಕನ್ನಡಕ್ಕೊಂದು ಹೊಸತನದ ಸಿನಿಮಾ ಕೊಡುವ ಉದ್ದೇಶ ನನ್ನದುʼ ಎಂಬುದು ನಳಿನಿ ಗೌಡ ಅವರ ಮಾತು.

ಚಾಲೆಂಜಿಂಗ್‌ ಪಾತ್ರ
ಈ ಚಿತ್ರಕ್ಕೆ ಪಾಯಲ್‌ ಚೆಂಗಪ್ಪ ನಾಯಕಿ. “ಅಮೃತಾಂಜನ್‌” ಎಂಬ ಕಿರುಚಿತ್ರದ ಮೂಲಕ ಸುದ್ದಿಯಾದವರು. ಇವರಿಗೆ ಯಾವ ನಟನೆಯ ಅನುಭವ ಇಲ್ಲ. “ಅಮೃತಾಂಜನ್‌” ಮೂಲಕ ತಾನೊಬ್ಬ ನಟಿ ಅನ್ನುವುದನ್ನು ಜನರು ಗುರುತಿಸುತ್ತಿದ್ದಾರೆ. ನನಗೂ ಧೈರ್ಯ ಬಂದಿದೆ. “ಅಮೃತಾಂಜನ್‌” ನಂತರ ಸಿಕ್ಕ ಮೊದಲ ಚಿತ್ರವೇ “ಸಿಕ್ಸ್‌” ಅಭಿಮನ್‌ ರಾಯ್‌ ಸರ್‌ ಸ್ಟೇಟ್‌ ಅವಾರ್ಡ್‌ ವಿನ್ನರ್‌ ಆಗಿದ್ದರೂ, ಅವರು ತುಂಬಾನೇ ಸಿಂಪಲ್.‌ ಅವರನ್ನು ಭೇಟಿ ಮಾಡಿದಾಗ ಅವರು ಕಥೆ ಹೇಳಿದ ರೀತಿ, ನನ್ನ ಪಾತ್ರ ಕಟ್ಟಿಕೊಟ್ಟಿರುವ ರೀತಿ ತುಂಬಾ ಚೆನ್ನಾಗಿತ್ತು. ಅದೊಂದು ಹೊಸ ರೀತಿಯ ಪಾತ್ರ. ಚಾಲೆಂಜಿಂಗ್‌ ಎನಿಸಿದೆ. ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನ್ನದು ಒಬ್ಬ ಟೀ ಟೇಸ್ಟರ್‌ ಪಾತ್ರ. ಹಾಗಂತ ಕಡಿಮೆ ಜನರಿಗೆ ಗೊತ್ತಿರುತ್ತೆ. ಅಂಥದ್ದೊಂದು ಹೊಸಬಗೆಯ ಪಾತ್ರ ಹೆಣೆದು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಹಾಗೆ ನೋಡಿದರೆ, ಈ ಪಾತ್ರಕ್ಕೆ ಸಾಕಷ್ಟು ನಾಯಕಿಯರ ಹುಡುಕಾಟ ನಡೆಸಿದ್ದಾರೆ ಎಂಬುದು ಗೊತ್ತಾಯ್ತು. ನನಗೆ ಆ ಅವಕಾಶ ಸಿಕ್ಕಿದೆ. ಸಾಧ್ಯವಾದಷ್ಟು ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂಬ ವಿಶ್ವಾಸವಿದೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಹೆಮ್ಮೆ ನನಗಿದೆ” ಎಂಬುದು ಪಾಯಲ್‌ ಚೆಂಗಪ್ಪ ಅವರ ಮಾತು.

ರವಿಚಂದ್ರ, ನಟ

ವಿಲನ್‌ ಅಂದರೆ ಸ್ಪೆಷಲ್!
ಈ “ಸಿಕ್ಸ್‌”ನ ಮತ್ತೊಂದು ಕೇಂದ್ರ ಬಿಂದು ಅಂದರೆ, ಅದು ರವಿಚಂದ್ರ. ಯಾರು ಈ ರವಿಚಂದ್ರ ಅಂದರೆ, ಇಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲ. ಆದರೆ, “ಸಿಕ್ಸ್‌” ಸಿನಿಮಾ ರಿಲೀಸ್‌ ನಂತರ ಖಂಡಿತವಾಗಿಯೂ ಈ ರವಿಚಂದ್ರ ಒಂದಷ್ಟು ಮಂದಿಗೆ ಗೊತ್ತಾಗುತ್ತಾರೆ. ಅದಕ್ಕೆ ಕಾರಣ, “ಸಿಕ್ಸ್‌” ಚಿತ್ರದಲ್ಲಿರುವ ಇವರ ಪಾತ್ರ. ಹೌದು, ತಮ್ಮ “ಸಿಕ್ಸ್‌” ಸಿನಿಮಾ ಕುರಿತು ಹೇಳುವ ರವಿಚಂದ್ರ, “ಇದು ನನ್ನ ಮೂರನೇ ಹೆಜ್ಜೆ. ಇದಕ್ಕೂ ಮೊದಲು ನಾನು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆ. ಕಿರುತೆರೆ ಬಳಿಕ ಒಂದು ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿತು. ಅದಾದ ಬಳಿಕ ನಾನೀಗ “ಸಿಕ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ವಿಲನ್‌ ಪಾತ್ರ ಏನೆಲ್ಲಾ ಮಾಡುತ್ತೆ ಅನ್ನೋದೇ ಸಸ್ಪೆನ್ಸ್.‌ ನನಗೂ ಈ ಚಿತ್ರದ ಪಾತ್ರ ಚಾಲೆಂಜಿಂಗ್‌ ಎನಿಸಿದೆ. ಸದಾ ಕ್ಲೀನ್‌ ಶೇವ್‌ ಮಾಡ್ಕೊಂಡ್‌ ಇರುತ್ತಿದ್ದೆ. ನಿರ್ದೇಶಕರು ನೋಡಿ, ದಾಡಿ, ಕೂದಲು ಬಿಡಿ ಅಂತ ಹೇಳಿ ನಂತರ, ಫೋಟೋ ಶೂಟ್‌ ಮಾಡಿಸಿ, ಒಂದು ಲುಕ್‌ ಬಂದ ನಂತರ, ಸಿನಿಮಾದಲ್ಲಿ ಮಾಡಿಸಿದ್ದಾರೆ. ಪಾತ್ರಕ್ಕಾಗಿಯೇ ನನಗೆ ಮಾಡಿಸಿದ್ದಾರೆ.ʼ ಎನ್ನುತ್ತಾರೆ ರವಿಚಂದ್ರ.

Related Posts

error: Content is protected !!