ಹೊಸಬರಾದರೂ, ಚಿತ್ರದ ಕತೆ ಮೇಲಿದೆ ಅಪಾರ ನಂಬಿಕೆ
ಕಿರುತೆರೆಯಲ್ಲಿ ಫೇಮಸ್ ಆದ ನಟ-ನಟಿಯರು ಹಿರಿತೆರೆಗೆ ಬರುವುದೇನು ಹೊಸದಲ್ಲ. ಸದ್ಯದ ಅನೇಕ ಜನಪ್ರಿಯ ತಾರೆಯರು ಅಲ್ಲಿಂದಲೇ ಬಂದವರು ಎನ್ನುವುದು ನಿಮಗೂ ಗೊತ್ತು. ಅ ಸಾಲಿಗೆ ಈಗ ಹೊಸ ಸೇರ್ಪಡೆ ಯುವ ನಟ ಅಭಿಲಾಷ್ ಅಲಿಯಾಸ್ ಮಧುಕರ್.
ಅಭಿಲಾಷ್ ಎನ್ನುವುದು ಅವರ ಒರಿಜಿನಲ್ ಹೆಸರು. ಆದರೆ ಮಧುಕರ್ ಎನ್ನುವ ಪಾತ್ರದ ಮೂಲಕವೇ
ಜನಪ್ರಿಯತೆ ಪಡೆದ ನಟ ಅವರು. ಅಂದ ಹಾಗೆ, ಮಧುಕರ್ ಎನ್ನುವುದು ‘ ಮಗಳು ಜಾನಕಿ’ ಧಾರಾವಾಹಿ ಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ. ಆ ಪಾತ್ರದೊಂದಿಗೆ ಮನೆಮಾತಾದ ಅಭಿಲಾಷ್ ಈಗ ‘ಮಹಾ ಕರ್ಮ’ ಹೆಸರಿನ ಚಿತ್ರದೊಂದಿಗೆ ಹೀರೋ ಆಗಿ ಬೆಳ್ಳಿತೆರೆಗೆ ಜಿಗಿಯುತ್ತಿರುವುದು ವಿಶೇಷ.
‘ಮಹಾಕರ್ಮ’. ಶುದ್ದ ಹೊಸಬರ ಚಿತ್ರ. ಯಶಸ್ವಿ ಬಾಲಾಧಿತ್ಯ ಇದರ ನಿರ್ದೇಶಕ. ಈ ಹಿಂದೆ ಇವರು ಒಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಅದು ಅಷ್ಟೇನು ಸಕ್ಸಸ್ ಕಾಣಲಿಲ್ಲ .ಆದರೆ ಮತ್ತೊಂದು ಸಿನಿಮಾ ಮಾಡಿ ಗೆಲ್ಲಲೇ ಬೇಕೆನ್ನುವ ಛಲದೊಂದಿಗೆ ಮಹಾ ಕರ್ಮಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರಂತೆ. ಇನ್ನು ಈ ಚಿತ್ರಕ್ಕೆ ವಿದ್ಯಾಶ್ರೀ ಕ್ರಿಯೇಷನ್ಸ್ ಮೂಲಕ ವಿ.ಮಂಜುನಾಥ್ ಬಂಡವಾಳ ಹಾಕುತ್ತಿದ್ದು, ಕಿರಣ್ ಛಾಯಾಗ್ರಹಣ, ಮಧು ತುಂಬೆಕೆರೆ ಸಂಕಲನ ಚಿತ್ರಕ್ಕಿದೆ.
ಸದ್ದಿಲ್ಲದೆ ಸುದ್ದಿ ಮಾಡದೆ ‘ ಮಹಾ ಕರ್ಮ ‘ ಚಿತ್ರಕ್ಕೆ ಮುಹೂರ್ತವು ಮುಗಿದಿದೆ. ಇತ್ತೀಚೆಗಷ್ಟೇ ನಗರದಲ್ಲಿ ಮುಹೂರ್ತ ಮುಗಿಸಿಕೊಂಡ ಚಿತ್ರ ತಂಡವೀಗ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದೆ. ನಟ ಅಭಿಲಾಷ್ ಪ್ರಕಾರ ಮಹಾಕರ್ಮ ಒಂದು ವಿಶೇಷವಾದ ಸಿನಿಮಾ. ಇದೊಂದು ಕ್ರೇಮ್ ಥ್ಲಿಲ್ಕರ್ ಕತೆ. ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಸಿನಿಮಾವೂ ಹೌದು. ಸಾಕಷ್ಟು ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆ. ಹೊಸಬರಾದರೂ, ಚಿತ್ರದ ಕತೆ ಪ್ರೇಕ್ಷಕ ರಿಗೆ ಹೆಚ್ಚು ಇಷ್ಟವಾಗಲಿದೆ. ಅದರ ಜತೆಗೆ ನಿರ್ಮಾಪಕ ಮಂಜುನಾಥ್ ಅವರು ಕೂಡ ಚಿತ್ರವನ್ನು ಅದ್ದೂರಿಯಾಗಿಯೇ ತೆರೆಗೆ ತರಲು ಮುಂದಾಗಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬರುವ ನಂಬಿಕೆಯಿದೆ ಎನ್ನುತ್ತಾರೆ ಯುವನಟ ಅಭಿಲಾಷ್.