ಸಿನಿಮಾ ನೋಡಿ ಎಂಜಾಯ್ ಮಾಡಿ
ಈಗಂತೂ ಎಲ್ಲವೂ ಡಿಜಿಟಲ್‌ಮಯ. ಇದು ಚಿತ್ರರಂಗಕ್ಕೂ ಅನ್ವಯ. ಹಾಗಂತ, ಈ ಡಿಜಿಟಲ್ ಸ್ಪರ್ಶ ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. ಕಾಲ ಬದಲಾದಂತೆ ನೋಡುಗನ ನೋಟವೂ ಬದಲಾಗುತ್ತಾ ಹೋಗುತ್ತಿದೆ. ವಿಶೇಷವೆಂದರೆ, ಈಗಾಗಲೇ ಅಮೆಜಾನ್, ನೆಟ್‌ಫ್ಲಿಕ್ಸ್ ಸೇರಿದಂತೆ ಅನೇಕ ಓಟಿಟಿ ಫ್ಲಾಟ್‌ಫಾರಂ ಇದೆ. ಆ ಮೂಲಕ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಈಗ ಕನ್ನಡದವರೇ ಅಂಥದ್ದೊಂದು ಹೊಸ ವೇದಿಕೆ ಕಲ್ಪಿಸುವ ಮೂಲಕ ಕನ್ನಡ ನಿರ್ಮಾಪಕರ ನೋವು ಆಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಕೊರೊನಾ ಹಾವಳಿಯಿಂದ ಚಿತ್ರರಂಗವಂತೂ ಸಂಪೂರ್ಣ ಸೊರಗಿದ್ದು ಎಲ್ಲರಿಗೂ ಗೊತ್ತೇ ಇದೆ. ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ಬಾಗಿಲು ತೆರೆದರೂ, ಜನರು ಮಾತ್ರ ಚಿತ್ರಮಂದಿರದತ್ತೆ ಮುಖ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ನಿರ್ಮಾಪಕರು ಒಂದಷ್ಟು ಗೊಂದಲದಲ್ಲಿರುವುದಂತೂ ನಿಜ. ಹಾಗಂತ, ಸಿನಿಮಾ ಮಾಡುವ ಉತ್ಸಾಹ ಕುಂದಿಲ್ಲ. ಜನರೂ ಕೂಡ ಹೊಸತನದ ಸಿನಿಮಾ ಬಂದರೆ, ಖಂಡಿತ ನೋಡುತ್ತಾರೆ ಎಂಬ ಭರವಸೆ ನಿರ್ಮಾಪಕರಿಗಿದೆ. ಅದು ಚಿತ್ರಮಂದಿರವೇ ಇರಲಿ, ಓಟಿಟಿ ಫ್ಲಾಟ್‌ಫಾರಂ ಇರಲಿ, ಅಲ್ಲಿ ಜನ ತಮ್ಮ ಇಷ್ಟದ ಸಿನಿಮಾವನ್ನು ಹುಡುಕಿ ನೋಡುತ್ತಾರೆ.
ಅದೇ ನಂಬಿಕೆಯಲ್ಲೇ ಈಗ ಕನ್ನಡಿಗರೇ ಸೇರಿಕೊಂಡು “ಸಿನಿಮಾ ನೋಡಿ ಡಾಟ್ ಇನ್” ಹೆಸರಿನೊಂದಿಗೆ ಒಂದೊಳ್ಳೆಯ ಉತ್ಸಾಹಿ ಯುವಕರ ತಂಡವನ್ನು ಕಟ್ಟಿಕೊಂಡಿದ್ದಾರೆ. ಈ ತಂಡದಲ್ಲಿ ಡೆವಲಪರ್ ಮತ್ತು ಸಿನಿಪ್ರಿಯರು ಸೇರಿಕೊಂಡಿರುವುದ ವಿಶೇಷ. ಅವರ ಈ “ಸಿನಿಮಾ ನೋಡಿ ಡಾಟ್ ಇನ್” ಫ್ಲಾಟ್ ಫಾರಂ ಇತರೆ ಓಟಿಟಿ ಫ್ಲಾಟ್‌ಫಾರಂಗಿಂತಲೂ ಭಿನ್ನ ಎಂಬುದು ಅವರ ಹೇಳಿಕೆ.
ಅವರ ಈ ಹೊಸ ವೇದಿಕೆಯಲ್ಲಿ ಆಧುನಿಕ ತಾಂತ್ರಿಕತೆಯ ಸ್ಪರ್ಶವಿದೆ. ಇಲ್ಲಿ ವೀಕ್ಷಕರು ಚಂದಾದಾರರಾಗಬೇಕಿಲ್ಲ. ಜಾಹಿರಾತು ಕೂಡ ಮುಕ್ತವಾಗಿದೆ. ವೀಕ್ಷಕರು ಇಷ್ಟದ ಸಿನಿಮಾ ನೋಡುವ ವೇದಿಕೆ ಇದಾಗಿರಲಿದೆ. ಆಧುನಿಕ ತಂತ್ರಜ್ಞಾನದ ಸವಲತ್ತುಗಳೊಂದಿಗೆ ವೇದಿಕೆ ರೂಪುಗೊಂಡಿದೆ. ವೆಬ್, ಪ್ಲೇ ಸ್ಟೋರ್, ಆಪ್‌ಸ್ಟೋರ್, ಫೈರ್‌ಟಿವಿ ಮತ್ತು ರೋಕು ಈ ಐದು ವೇದಿಕೆಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಸದ್ಯಕ್ಕೆ “cinemanod.in” ಲಭ್ಯವಿದ್ದು ಮುಂದಿನ ಒಂದು ವಾರದಲ್ಲಿ ಆಪ್ ಪ್ಲೇಸ್ಟೋರ್ ಆಪ್ ಸ್ಟೋರ್ ಫೈರ್ ಟಿವಿ ಮತ್ತು ರೋಕುನಲ್ಲೂ ಲಭ್ಯವಾಗಲಿದೆ.
ಕೇಂದ್ರ ಸೆನ್ಸಾರ್ ಬೋರ್ಡ್‌ನ ನಿವೃತ್ತ ಅಧಿಕಾರಿ ನಾಗೇಂದ್ರ ಸ್ವಾಮಿ, ಶಾಂತಾಕುಮಾರಿ ಹಾಗೂ ಇತರರ ಸಾರಥ್ಯದಲ್ಲಿ ಈ ಫ್ಲಾಟ್ ಫಾರಂ ಸಿದ್ಧಗೊಂಡಿದೆ. ಈಗಾಗಲೇ ಹಳೆಯ ಮತ್ತು ಹೊಸ ನೂರು ಚಿತ್ರಗಳು, ೨೦೦ ಹಾಡುಗಳು ಸ್ಟೋರ್ ವೇದಿಕೆಯಲ್ಲಿದೆ. ನಿರ್ಮಾಪಕರು ಹಾಗೂ ಕಂಟೆಂಟ್ ಮಾಲೀಕರು ತಮ್ಮ ಚಿತ್ರಗಳ ಕುರಿತಂತೆ ಸಂಪರ್ಕಿಸಿದಲ್ಲಿ, ಅವರಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ವೀಕ್ಷಕರಿಗೆ ಹೊರೆಯಾಗದ ದರದಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸುವ ಭರವಸೆಯನ್ನು ತಂಡ ನೀಡುತ್ತಿದೆ. ದರವು ಕನಿಷ್ಟ ರೂ.30 ರಿಂದ 100ರವರೆಗೆ ಇರಲಿದೆ.
ಅಂದಹಾಗೆ, ಈ ಹೊಸ ಡಿಜಿಟಲ್ ಫ್ಲಾಟ್‌ಫಾರಂಗೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡಿದ್ದಾರೆ. ಕಲರ್ ನಲ್ಲಿ ಮೂಡಿ ಬಂದಿರುವ “ಕಸ್ತೂರಿ ನಿವಾಸ” ಚಿತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಹೊಸ ವೇದಿಕೆಗೆ ಚಾಲನೆ ನೀಡಿದ್ದಾರೆ. “ಕನ್ನಡದವರೇ ಸೇರಿಕೊಂಡು ಮಾಡಿರುವ ಈ ಡಿಜಿಟಲ್ ಹೊಸ ಪ್ಲಾಟ್‌ಫಾರ್ಮ್, ಇತರೆ ವೇದಿಕೆಗಳಿಗಿಂತಲೂ ಭಿನ್ನ ಎನಿಸಿದೆ ಎಂಬುದು ಗೊತ್ತಾಗಿದೆ. ಈ ಮೂಲಕವಾದರೂ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಲಿ. ನಮ್ಮ ಕನ್ನಡ ನಿರ್ಮಾಪಕರುಗಳಿಗೆ ಹೆಚ್ಚು ಅನುಕೂಲವಾಗಲಿ ಎಂದು ಶುಭ ಹಾರೈಸಿದ್ದಾರೆ.