ಡಿಸೆಂಬರ್ 4 ರಂದು ಓಟಿಟಿಯಲ್ಲಿ ಬಿಡುಗಡೆ
ಹಲವು ದಶಕಗಳ ಹಿಂದೆ “ಪುಷ್ಪಕ ವಿಮಾನ” ಎಂಬ ಮೂಕಿ ಚಿತ್ರ ಬಂದಿದ್ದು ಬಹುತೇಕರಿಗೆ ಗೊತ್ತೇ ಇದೆ. ಆ ನಂತರವೂ ಕನ್ನಡದಲ್ಲಿ ಮೂಕಿ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಪುಷ್ಪಕ್” ಎಂಬ ಮತ್ತೊಂದು ಮೂಕಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪುಷ್ಪಕ್” ಸಿನಿಮಾವನ್ನು ಓಂ ಪ್ರಕಾಶ್ ನಾಯಕ್ ನಿರ್ದೇಶಿಸಿದ್ದಾರೆ. ಇಲ್ಲಿ ಬರೀ ಹಾವ-ಭಾವಗಳಲ್ಲೇ ಅರ್ಥವಾಗುವಂತಹ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ ನಿರ್ದೇಶಕರು. ಕಥೆಯ ಬಗ್ಗೆ ಹೇಳುವುದಾದರೆ, ಚಿತ್ರದ ಹೀರೋ ಒಬ್ಬ ಫೋಟೋಗ್ರಾಫರ್, ಬೇರೆ ಊರಿನಿಂದ ಬಂದ ಒಬ್ಬ ಶ್ರೀಮಂತ ಯುವತಿಯನ್ನು ನೋಡಿದ ಮರುಕ್ಷಣ ತನ್ನ ಮನದಲ್ಲೇ ಪ್ರೀತಿಸಲು ತೊಡಗುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ. ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ಮುಂದಾಗುತ್ತಾನೆ. ನಂತರ ದಿನಗಳಲ್ಲಿ ದಾರಿಗೆ ನಾಯಕ ಅಡ್ಡಿಯಾದಂತೆ ಭಾವಿಸಿ ನಾಯಕನನ್ನೇ ಕೊಲ್ಲಲು ಆತ ಸಂಚು ಹೂಡುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ.
ಇನ್ನು, ಈ ಚಿತ್ರ ಮಹದೇಶ್ವರ ಎಂಟರ್ಪ್ರೈಸಸ್ ಬ್ಯಾನರಡಿಯಲ್ಲಿ ನಿರ್ಮಾಣವಾಗಿದೆ. ಓಂಪ್ರಕಾಶ್ನಾಯಕ್ ಕಥೆ, ಚಿತ್ರಕಥೆ ಬರೆದು, ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸಿದ್ದಾರೆ. ವಿಶ್ವನಾಥ್ ಅವರ ಛಾಯಾಗ್ರಹಣವಿದೆ. ಶಂಕರ್ ಹಾಗೂ ರಾವಣ ಅವರ ಸಹ ನಿರ್ದೇಶನವಿದೆ. ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಕೃತಿಕಾ, ಚಂದ್ರು, ಅವಿನಾಶ್ ಭಾರಧ್ವಜ್, ನಾಗೇಂದ್ರರಾವ್ ಆರ್.ಎಂ, ಸವಿತಾ ಇತರರು ನಟಿಸಿದ್ದಾರೆ. ಡಿಸೆಂಬರ್ 4 ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.